ಟ್ರಾವಿಸ್ ಹೆಡ್, ಕಮಿನ್ಸ್ ಅಲ್ಲ; 24 ವರ್ಷದ ಈತನನ್ನು ಖರೀದಿಸುವಂತೆ ಎಸ್ಆರ್ಎಚ್ಗೆ ಸಲಹೆ ನೀಡಿದ ಪಠಾಣ್
Irfan Pathan: ಐಪಿಎಲ್ ಹರಾಜು ಹತ್ತಿರಕ್ಕೆ ಬರುತ್ತಿದಂತೆ 2016ರ ಚಾಂಪಿಯನ್ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್, ವಿಶೇಷ ಸಲಹೆಯೊಂದನ್ನು ನೀಡಿದ್ದಾರೆ.
2024ರ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2024) ಮಿನಿ ಹರಾಜಿಗೆ ದಿನಗಣನೆ ಆರಂಭವಾಗಿದೆ. ಇದು ಮೆಗಾ ಹರಾಜು (IPL Mini Auction 2024) ಅಲ್ಲದಿದ್ದರೂ ಸ್ಟಾರ್ ಆಟಗಾರರು ದೊಡ್ಡ ಮೊತ್ತಕ್ಕೆ ಬಿಕರಿಯಾಗುವ ನಿರೀಕ್ಷೆ ಇದೆ. ಡಿ.19ರಂದು ದುಬೈನಲ್ಲಿ ನಡೆಯುವ ಈ ಹರಾಜಿನಲ್ಲಿ 10 ಫ್ರಾಂಚೈಸ್ಗಳು ಪ್ರಮುಖರನ್ನೇ ಖರೀದಿಸಲು ಯೋಜನೆ ಹಾಕಿಕೊಂಡಿವೆ.
ಹೆಚ್ಚು ಜನಪ್ರಿಯಗೊಂಡಿರುವ ಹೆಸರುಗಳಲ್ಲಿ ನಾಯಕ ಪ್ಯಾಟ್ ಕಮಿನ್ಸ್, ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್, ಸೆಮಿ-ಫೈನಲ್ ಮತ್ತು ಫೈನಲ್‌ನ ಹೀರೋ ಟ್ರಾವಿಸ್ ಹೆಡ್ ಸೇರಿದಂತೆ ಹಲವು ಆಸೀಸ್ ವಿಶ್ವಕಪ್ ತಾರೆಗಳು ಜೋಶ್ ಹೇಜಲ್ವುಡ್ ಹರಾಜಿನಲ್ಲಿದ್ದಾರೆ. ಇವರೆಲ್ಲರಿಗೂ ದೊಡ್ಡ ಮೊತ್ತ ಸಿಗುವ ಸಾಧ್ಯತೆ ಹೆಚ್ಚಿದೆ.
ಹೈದರಾಬಾದ್ಗೆ ಸಲಹೆ ನೀಡಿದ ಪಠಾಣ್
ಐಪಿಎಲ್ ಹರಾಜು ಹತ್ತಿರಕ್ಕೆ ಬರುತ್ತಿದಂತೆ 2016ರ ಚಾಂಪಿಯನ್ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ (Irfan Pathan), ವಿಶೇಷ ಸಲಹೆಯೊಂದನ್ನು ನೀಡಿದ್ದಾರೆ. 2023ರ ವಿಶ್ವಕಪ್ ಶೈನಿಂಗ್ ಸ್ಟಾರ್ ರಚಿನ್ ರವೀಂದ್ರ (Rachin Ravindra) ಖರೀದಿಸುವಂತೆ ಪಠಾಣ್ ಎಸ್ಆರ್ಎಚ್ಗೆ ಒತ್ತು ನೀಡಿದ್ದಾರೆ.
24 ವರ್ಷದ ನ್ಯೂಜಿಲೆಂಡ್ ಆಲ್‌ರೌಂಡರ್ ರಚಿನ್, ವಿಶ್ವಕಪ್ನಲ್ಲಿ ಮೂರು ಶತಕಗಳೊಂದಿಗೆ 10 ಪಂದ್ಯಗಳಲ್ಲಿ 64.22 ಸರಾಸರಿಯಲ್ಲಿ 578 ರನ್ ಗಳಿಸುವ ಮೂಲಕ 4ನೇ ಅಧಿಕ ರನ್ ಸಿಡಿಸಿದ ಆಟಗಾರ ಎನಿಸಿದರು. ರಚಿನ್ ಆಯ್ಕೆ ಕುರಿತು ಮಾತನಾಡಿದ ಪಠಾಣ್, ಹೈದರಾಬಾದ್ ತಂಡಕ್ಕೆ ವಿಕೆಟ್ ಟೇಕರ್ ಸ್ಪಿನ್ನರ್ ಅಗತ್ಯ ಇರುವ ಕಾರಣ ರಚಿನ್ಗೆ ಮಣೆ ಹಾಕಿದರೆ ಉತ್ತಮ ಎಂದು ಹೇಳಿದ್ದಾರೆ.
ರಚಿನ್ ಎಸ್ಆರ್ಎಚ್ಗೆ ಉತ್ತಮ ಆಯ್ಕೆ
ಈ ಹಿಂದೆ ಎಸ್ಆರ್ಎಚ್ ಸ್ಪಿನ್ನರ್ ಆದಿಲ್ ರಶೀದ್ ಅವರನ್ನು ಹೊಂದಿತ್ತು. ಈಗವರ ಸೇವೆ ಹೊಂದಿಲ್ಲ. ಸದ್ಯ ತಂಡದಲ್ಲಿ ಮಯಾಂಕ್ ಮಾರ್ಕಾಂಡೆ ಇದ್ದಾರೆ. ಆದರೆ, ತಂಡಕ್ಕೆ ಆತನಿಗಿಂತ ಹೆಚ್ಚಿನ ಬಲ ಹೊಂದಿರುವ ಸ್ಪಿನ್ನರ್ ಅವಶ್ಯಕತೆ ಇದೆ. ಅದರಂತೆ ಬ್ಯಾಟಿಂಗ್ನಲ್ಲೂ ಖಡಕ್ ಪ್ರದರ್ಶನ ನೀಡುವ ರಚಿನ್ ಸೇವೆ ಹೈದರಾಬಾದ್ ತಂಡಕ್ಕೆ ಬೇಕಿದೆ ಎಂದು ಸಲಹೆ ನೀಡಿದ್ದಾರೆ.
ಈಗಾಗಲೇ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಮತ್ತು ಮಾರ್ಕೊ ಜಾನ್ಸೆನ್ ತಂಡದಲ್ಲಿದ್ದು, ಆಡುವ 11ರ ಬಳಗದಲ್ಲೂ ಕಣಕ್ಕಿಳಿಯುವ ಸಾಧ್ಯತೆ ಇದೆ. ಆದರೆ, ಸನ್ರೈಸರ್ಸ್ಗೆ ಆರಂಭಿಕರ ಕೊರತೆ ಕಾಡುತ್ತಿದೆ. ಬ್ಯಾಕಪ್ ಓಪನರ್ ತುಂಬಾ ತುಂಬಾ ಮುಖ್ಯ. ಹಾಗಾಗಿ ಆರಂಭಿಕನಾಗಿ, ಸ್ಪಿನ್ನರ್ ಆಗಿ ತಂಡಕ್ಕೆ ನೆರವಾಗುವ ಕಾರಣ, ರಚಿನ್ ರವೀಂದ್ರರನ್ನು ಖರೀದಿಸಿದರೆ ತಂಡವು ಬಲಿಷ್ಠಗೊಳ್ಳಲಿದೆ ಎಂದು ಪಠಾಣ್ ತಿಳಿಸಿದ್ದಾರೆ.
ರಚಿನ್ ಮೊದಲ ಬಾರಿಗೆ ಐಪಿಎಲ್ ಒಪ್ಪಂದ ಪಡೆಯುವ ಗುರಿ ಹೊಂದಿದ್ದಾರೆ. ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್‌ಗೆ ಪದಾರ್ಪಣೆ ಮಾಡುವ ಬಯಕೆಯಲ್ಲಿರುವ ಬೌಲಿಂಗ್ ಮಾಡಬಲ್ಲ ಎಡಗೈ ಬ್ಯಾಟರ್ ಸುಮಾರು 10 ಕೋಟಿಗೂ ಅಧಿಕ ಮೊತ್ತಕ್ಕೆ ಖರೀದಿ ಆಗುವ ನಿರೀಕ್ಷೆ ಇದೆ. 2023ರ ಆವೃತ್ತಿಯಲ್ಲಿ ಹೈದರಾಬಾದ್ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಲೀಗ್ನಿಂದ ಹೊರ ಬಿತ್ತು.