ಸಚಿನ್ ತೆಂಡೂಲ್ಕರ್-ವಿರಾಟ್ ಕೊಹ್ಲಿ ದಾಖಲೆ ಮುರಿದ ರಹಮಾನುಲ್ಲಾ ಗುರ್ಬಾಜ್; ಅಫ್ಘಾನಿಸ್ತಾನಕ್ಕೆ ಸರಣಿ ಜಯ
Afghanistan vs Bangladesh: ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯನ್ನು ಅಫ್ಘಾನಿಸ್ತಾನ ವಶಪಡಿಸಿಕೊಂಡಿದೆ. ಮೂರನೇ ಪಂದ್ಯದಲ್ಲಿ ರಹಮಾನುಲ್ಲಾ ಗುರ್ಬಾಜ್ ಶತಕ ಸಿಡಿಸುವ ಮೂಲಕ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ದಾಖಲೆ ಮುರಿದಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಐದು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಏಕದಿನ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ. ಇದೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್, ಏಕದಿನ ಕ್ರಿಕೆಟ್‌ನಲ್ಲಿ ಎಂಟನೇ ಶತಕವನ್ನು ಬಾರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಅವರನ್ನು ಕೂಡಾ ಹಿಂದಿಕ್ಕಿದ್ದಾರೆ.
ಸರಣಿಯ ನಿರ್ಣಾಯಕ ಪಂದ್ಯದಲ್ಲಿ 245 ರನ್‌ಗಳ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನಕ್ಕೆ ಗುರ್ಬಾಜ್ ನೆರವಾದರು. ಒಂದು ಹಂತದಲ್ಲಿ 20.1 ಓವರ್ ವೇಳೆಗೆ 81 ರನ್ ಗಳಿಸಿ ತಂಡ ಮೂರು ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಅಜ್ಮತುಲ್ಲಾ ಒಮರ್ಜೈ ಜೊತೆಗೂಡಿ ನಾಲ್ಕನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದರು.
ಜವಾಬ್ದಾರಿಯುತ ಆಟವಾಡಿದದ ಗುರ್ಬಾಜ್, 120 ಎಸೆತಗಳಲ್ಲಿ 101 ರನ್ ಗಳಿಸುವ ಮೂಲಕ ಅಫ್ಘಾನಿಸ್ತಾನದ ಗೆಲುವಿಗೆ ಅಡಿಪಾಯ ಹಾಕಿದರು. ಒಮರ್ಜೈ ಅಜೇಯ 70 ರನ್ ಕಲೆ ಹಾಕಿದರು. ಮೊಹಮ್ಮದ್ ನಬಿ 27 ಎಸೆತಗಳಲ್ಲಿ ಅಜೇಯ 34 ರನ್ ಗಳಿಸಿ ಉತ್ತಮ ಕೊಡುಗೆ ನೀಡಿದರು.
ಸಚಿನ್ - ಕೊಹ್ಲಿ ದಾಖಲೆ ಬ್ರೇಕ್
ಶತಕದೊಂದಿಗೆ ಗುರ್ಬಾಜ್ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಸಣ್ಣ ವಯಸ್ಸಿನಲ್ಲಿ 8 ಶತಕ ಪೂರೈಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ 22 ವರ್ಷ 312 ದಿನಗಳ ವಯಸ್ಸಿನಲ್ಲಿ 8 ಶತಕ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ. 22 ವರ್ಷ 349 ದಿನಗಳ ವಯಸ್ಸಿನಲ್ಲಿ ಗುರ್ಬಾಜ್ ಎಂಟು ಶತಕಗಳನ್ನು ಗಳಿಸಿದ ಎರಡನೇ ಕಿರಿಯ ಏಕದಿನ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅತ್ತ ಸಚಿನ್ ತೆಂಡೂಲ್ಕರ್ 22 ವರ್ಷ 357 ದಿನಗಳಲ್ಲಿ ಈ ಸಾಧನೆ ಮಾಡಿದ್ದರೆ, ವಿರಾಟ್ ಕೊಹ್ಲಿ 23 ವರ್ಷ ಹಾಗೂ 27 ದಿನಗಳನ್ನು ತೆಗೆದುಕೊಂಡಿದ್ದರು. ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಮ್ 23 ವರ್ಷ 280 ದಿನಗಳಲ್ಲಿ 8 ಶತಕ ಪೂರೈಸಿದ್ದರು.
ಇದೀಗ ಖಾತೆಯಲ್ಲಿ ಎಂಟು ಶತಕಗಳೊಂದಿಗೆ, ಗುರ್ಬಾಜ್ ಈಗ 23ನೇ ವರ್ಷಕ್ಕೆ ಕಾಲಿಡುವ ಮೊದಲು ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರರ ಪೈಕಿ ಸಚಿನ್ ಮತ್ತು ಡಿ ಕಾಕ್ ಅವರಿಗೆ ಸಮನಾಗಿ ನಿಂತಿದ್ದಾರೆ. ಆದರೆ 7 ಶತಕ ಗಳಿಸಿದ್ದ ಕೊಹ್ಲಿಅವರನ್ನು ಹಿಂದಿಕ್ಕಿದ್ದಾರೆ.
ಅಫ್ಘಾನಿಸ್ತಾನಕ್ಕೆ ಸತತ ಮೂರನೇ ಸರಣಿ ಗೆಲುವು
ಮೂರನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಮೊದಲು ಬ್ಯಾಟಿಂಗ್ ನಡೆಸಿತು. ಆರಂಭಿಕ ಆಟಗಾರರಾದ ತಂಜಿದ್ ಹಸನ್ ಮತ್ತು ಸೌಮ್ಯ ಸರ್ಕಾರ್ ಮೊದಲ ಪವರ್‌ಪ್ಲೇನಲ್ಲಿ 53 ರನ್‌ಗಳ ಜೊತೆಯಾಟ ಆಡಿದರು. ನಾಯಕ ಮೆಹಿದಿ ಹಸನ್ ಮಿರಾಜ್ ಮತ್ತು ಮಹಮುದುಲ್ಲಾ 188 ಎಸೆತಗಳಲ್ಲಿ 145 ರನ್‌ಗಳ ಜೊತೆಯಾಟವಾಡಿರು. ಕೊನೆಗೆ ತಂಡ 244 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ಅಫ್ಘಾನಿಸ್ತಾನ ತಂಡವು 48.2 ಓವರ್‌ಗಳಲ್ಲಿ 246 ರನ್ ಗಳಿಸಿ ಗುರಿ ತಲುಪಿತು.
ಇದರೊಂದಿಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ ಸತತ ಮೂರು ಸರಣಿಗಳನ್ನು ಅಫ್ಘಾನಿಸ್ತಾನ ವಶಪಡಿಸಿಕೊಂಡಿದೆ. ಇದಕ್ಕೂ ಹಿಂದೆ ದಕ್ಷಿಣ ಆಫ್ರಿಕಾವನ್ನು 2-1 ಹಾಗೂ ಐರ್ಲೆಂಡ್ ವಿರುದ್ಧ 2-0 ಅಂತರದಿಂದ ಸರಣಿ ವಶಪಡಿಸಿಕೊಂಡಿತ್ತು.