ಕನ್ನಡ ಸುದ್ದಿ  /  ಕ್ರಿಕೆಟ್  /  ಅವಮಾನ ಎದುರಿಸಿದ್ದ ಜಾಗದಲ್ಲೇ ತಲೆ ಎತ್ತಿನಿಂತ ದ್ರಾವಿಡ್; ನಾಯಕನಾಗಿ ಸೋತರೂ ಕೋಚ್‌ ಆಗಿ ಕೊನೆಗೂ ಸಿಕ್ಕಿತು ಯಶಸ್ಸು

ಅವಮಾನ ಎದುರಿಸಿದ್ದ ಜಾಗದಲ್ಲೇ ತಲೆ ಎತ್ತಿನಿಂತ ದ್ರಾವಿಡ್; ನಾಯಕನಾಗಿ ಸೋತರೂ ಕೋಚ್‌ ಆಗಿ ಕೊನೆಗೂ ಸಿಕ್ಕಿತು ಯಶಸ್ಸು

ಟೀಮ್‌ ಇಂಡಿಯಾ ಕೋಚ್‌ ಆಗಿ ತಮ್ಮ ಕೊನೆಯ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ವಿಶ್ವಕಪ್ ಟ್ರೋಫಿ ಗೆದ್ದಿದ್ದಾರೆ. ದಶಕದ ಹಿಂದೆ ವೆಸ್ಟ್‌ ಇಂಡೀಸ್‌ ನೆಲದಲ್ಲಿ ನಾಯಕನಾಗಿ ಆಡಿದ್ದ ದ್ರಾವಿಡ್‌, ಏಕದಿನ ವಿಶ್ವಕಪ್‌ ಸೋತಿದ್ದರು. ಇದೀಗ ಅಲ್ಲೇ ಟ್ರೋಫಿ ಜಯಿಸಿದ್ದಾರೆ.

ನಾಯಕನಾಗಿ ಸೋತರೂ ಕೋಚ್‌ ಆಗಿ ಕೊನೆಗೂ ಸಿಕ್ಕಿತು ಯಶಸ್ಸು
ನಾಯಕನಾಗಿ ಸೋತರೂ ಕೋಚ್‌ ಆಗಿ ಕೊನೆಗೂ ಸಿಕ್ಕಿತು ಯಶಸ್ಸು (ANI, X)

ಟಿ20 ವಿಶ್ವಕಪ್ ಗೆಲುವಿನೊಂದಿಗೆ ಭಾರತ ಕ್ರಿಕೆಟ್ ತಂಡದ ಕೂಲ್ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಖುಷಿಯ ವಿದಾಯ ಸಿಕ್ಕಿದೆ. ನಿಮಗೆ ನೆನಪಿರಬಹುದು. ಕಳೆದ ವರ್ಷ, ಅಂದರೆ 2019ರಲ್ಲಿ ಭಾರತದಲ್ಲೇ ನಡೆದ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದ ಬಳಿಕ ಕೋಚ್‌ ಆಗಿ ದ್ರಾವಿಡ್‌ ಅವರ ಒಪ್ಪಂದ ಅಂತ್ಯವಾಗಿತ್ತು. ಆದರೆ, ತವರಿನಲ್ಲಿ ವಿಶ್ವಕಪ್‌ ಗೆಲ್ಲುವ ಕನಸು ಕಂಡಿದ್ದ ಭಾರತೀಯರ ಆಸೆ ಈಡೇರಿರಲಿಲ್ಲ. ಹೀಗಾಗಿ ಈ ಬಾರಿಯ ಟಿ20 ವಿಶ್ವಕಪ್‌ ಪಂದ್ಯಾವಳಿಯವರೆಗೂ ದಿ ವಾಲ್‌ ಅವರನ್ನು ಮುಖ್ಯ ತರಬೇತುದಾರರಾಗಿ ಮುಂದುವರೆಸಲು ಬಿಸಿಸಿಐ ನಿರ್ಧರಿಸಿತು. ಕೊನೆಗೂ ಇಲ್ಲಿ ದ್ರಾವಿಡ್‌ ಹಾಗೂ ಭಾರತ ತಂಡಕ್ಕೆ ಯಶಸ್ಸು‌ ಸಿಕ್ಕಿದೆ.

ಸದಾ ಶಾಂತ ಸ್ವಭಾವದಿಂದ ಗಮನ ಸೆಳೆಯುವ ರಾಹುಲ್ ದ್ರಾವಿಡ್, ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ರೋಚಕ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಏಳು ರನ್‌ಗಳಿಂದ ಭಾರತ ಮಣಿಸುತ್ತಿದ್ದಂತೆ, ದ್ರಾವಿಡ್‌ ಆಕ್ರೋಶದಿಂದ ಸಂಭ್ರಮಿಸಿದರು. ಟ್ರೋಫಿಯನ್ನು ಎತ್ತಿ ಸಂಭ್ರಮಿಸುವ ಸಂದರ್ಭದಲ್ಲಿಯೂ ದ್ರಾವಿಡ್ ತಮ್ಮ ಭಾವನೆಗಳನ್ನು ಹೊರಹಾಕಿದರು. ಪೋಡಿಯಂ ಮೇಲೆ ಜೋರಾಗಿ ಹರ್ಷೋದ್ಗಾರ ಮಾಡಿದರು.

ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಭಾರತವು ಕಳೆದ ವರ್ಷ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್ ಫೈನಲ್‌ ಪಂದ್ಯ ಆಡಿತ್ತು. ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಬಳಿಕ ಏಕದಿನ ವಿಶ್ವಕಪ್‌ನಲ್ಲಿಯೂ ಭಾರತ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತು. ಆದರೆ, ಕೊನೆಗೆ ಬಾರ್ಬಡೋಸ್‌ನಲ್ಲಿ ಐಸಿಸಿ ಟ್ರೋಫಿ ಸಂಭ್ರಮ ಪಡೆಯಿತು.

ಟ್ರೆಂಡಿಂಗ್​ ಸುದ್ದಿ

ಗೆಲುವಿನ ಬಳಿಕ ಮಾತನಾಡಿದ ದ್ರಾವಿಡ್‌, “ಮೊದಲ ಆರು ಓವರ್‌ಗಳಲ್ಲಿ ತಂಡವು ಮೂರು ವಿಕೆಟ್‌ ಕಳೆದುಕೊಂಡಿತ್ತು.‌ ಆದರೂ ನಮ್ಮ ಹುಡುಗರು ಕೊನೆಯವರೆಗೂ ಹೋರಾಡುತ್ತಲೇ ಇದ್ದರು. ಅವರಿಗೆ ಗೆಲ್ಲುವ ನಂಬಿಕೆ ಇತ್ತು. ನಿಮಗೆಲ್ಲಾ ಗೊತ್ತಿರುವ ಹಾಗೆ ಒಬ್ಬ ಆಟಗಾರನಾಗಿ ನಾನು ಟ್ರೋಫಿಯನ್ನು ಗೆಲ್ಲುವಷ್ಟು ಅದೃಷ್ಟಶಾಲಿಯಾಗಿರಲಿಲ್ಲ. ಆದರೆ ನಾನು ಆಡಿದಾಗಲೆಲ್ಲಾ ನನ್ನಿಂದ ಸಾಧ್ಯವಾದ ಎಲ್ಲಾ ಪ್ರಯತ್ನ ಮಾಡಿದ್ದೇನೆ. ಇವೆಲ್ಲಾ ಕ್ರೀಡೆಯ ಭಾಗ” ಎಂದು 51 ವರ್ಷದ ಆಟಗಾರ ಹೇಳಿದ್ದಾರೆ.

ಸೋತಲ್ಲೇ ಗೆದ್ದ ವಾಲ್

ಕೆರಿಬಿಯನ್ ನಾಡಲ್ಲಿ ಭಾರತಕ್ಕೆ ವಿಶ್ವಕಪ್‌ ಗೆಲುವು ದ್ರಾವಿಡ್ ಪಾಲಿಗೆ ಒಂದು ರೀತಿಯ ವಿಮೋಚನೆಯಾಗಿದೆ. ದಿ ವಾಲ್‌ ನಾಯಕತ್ವದಲ್ಲಿ ವೆಸ್ಟ್‌ ಇಂಡೀಸ್‌ನಲ್ಲಿ ಭಾರತ ತಂಡವು 2007ರ ಏಕದಿನ ವಿಶ್ವಕಪ್ ಆಡಿತ್ತು. ಆದರೆ, ಗ್ರೂಪ್‌ ಹಂತದಲ್ಲೇ ಸೋತು ನಿರ್ಗಮಿಸಿತ್ತು. ಅದರಲ್ಲೂ ಕ್ರಿಕೆಟ್‌ ಶಿಶು ಬಾಂಗ್ಲಾದೇಶ ವಿರುದ್ಧದ ಸೋಲು ದ್ರಾವಿಡ್‌ ಅವರಿಗೆ ತೀರಾ ನೋವು ಕೊಟ್ಟಿತ್ತು. ಕನ್ನಡಿಗನ ನಾಯಕತ್ವಕ್ಕೂ ವಿಪರೀತ ಟೀಕೆ-ಟಿಪ್ಪಣಿಗಳು ಕೇಳಿಬಂದವು. ವಿಶ್ವಕಪ್‌ ಇತಿಹಾಸದಲ್ಲಿಯೇ ಅದು ಭಾರತ ತಂಡದ ತೀರಾ ಕಳಪೆ ಪ್ರದರ್ಶನವಾಗಿತ್ತು. ನಾಯಕನಾಗಿ ದ್ರಾವಿಡ್‌ಗೆ ಯಶಸ್ಸು ಒಲಿಯಲಿಲ್ಲ. ಅವರ ಪ್ರಯತ್ನಕ್ಕೆ ಪ್ರತಿಫಲವಾಗಿ ಸಿಕ್ಕಿದ್ದು ಬರೀ ಟೀಕೆಗಳು ಮಾತ್ರ. ಟೂರ್ನಿಯ ಬೆನ್ನಲ್ಲೇ ನಾಯಕ ಸ್ಥಾನದಿಂದ ಕನ್ನಡಿಗ ಕೆಳಗಿಳಿಯಬೇಕಾಯ್ತು. ಬಳಿಕ ಎಂಎಸ್‌ ಧೋನಿ ಟೀಮ್‌ ಇಂಡಿಯಾ ನಾಯಕರಾದರು. ಮಾಹಿ ನಾಯಕತ್ವದಲ್ಲಿ ಭಾರತ ಅದೇ ವರ್ಷ ಟಿ20 ವಿಶ್ವಕಪ್‌ ಗೆದ್ದು ಬೀಗಿತು.

ಅಂದು ವಿಂಡೀಸ್‌ ನೆಲದಲ್ಲಿ ಎದುರಾದ ಸೋಲು ಹಾಗೂ ಅವಮಾನಕ್ಕೆ ಇಂದು ದ್ರಾವಿಡ್ ಉತ್ತರ ಕೊಟ್ಟಿದ್ದಾರೆ. ಆಟಗಾರನಾಗಿ ಹಾಗೂ ನಾಯಕನಾಗಿ ಸಿಗದ ಯಶಸ್ಸು ಕೋಚ್‌ ಆಗಿ ಸಿಕ್ಕಿದೆ. ಕಳೆದುಕೊಂಡ ಸ್ಥಳದಲ್ಲೇ ಮತ್ತೆ ಪಡೆದಿದ್ದಾರೆ.

ಕೋಚ್ ಆಗಿ ತಮ್ಮ ಕೊನೆಯ ಪಂದ್ಯದ ಬಳಿಕ ಮಾತನಾಡಿದ ಅವರು, “ತರಬೇತುದಾರನಾಗುವ ಅವಕಾಶ ಪಡೆದಿರುವುದು ನನ್ನ ಅದೃಷ್ಟ. ಈ ಹುಡುಗರ ಗುಂಪು ನಾವು ಟ್ರೋಫಿ ಗೆಲ್ಲುವಂತೆ ಮಾಡಿದ್ದು ನನ್ನ ಅದೃಷ್ಟ. ಇದೊಂದು ಒಳ್ಳೆಯ ಭಾವನೆ. ರೋಹಿತ್ ಮತ್ತು ಈ ತಂಡದೊಂದಿಗೆ ಕೆಲಸ ಮಾಡಲು ನಾನು ತುಂಬಾ ಇಷ್ಟಪಡುತ್ತೇನೆ. ಇದೊಂದು ಉತ್ತಮ ಪ್ರಯಾಣವಾಗಿದೆ. ಅದನ್ನು ನಾನು ನಿಜವಾಗಿಯೂ ಆನಂದಿಸಿದ್ದೇನೆ. ಈ ರೀತಿಯ ಡ್ರೆಸ್ಸಿಂಗ್ ರೂಮ್ ಭಾಗವಾಗಿರಲು ಖುಷಿಯಾಗಿದೆ. ಇದು ನನಗೆ ಜೀವನದುದ್ದಕ್ಕೂ ಉಳಿಯುವ ನೆನಪು. ಇದನ್ನು ಸಾಧ್ಯವಾಗಿಸಿದ ತಂಡ ಮತ್ತು ಸಹಾಯಕ ಸಿಬ್ಬಂದಿಗೆ ನಾನು ಕೃತಜ್ಞನಾಗಿದ್ದೇನೆ,” ಎಂದು ಅವರು ಹೇಳಿದ್ದಾರೆ.

ಕ್ರಿಕೆಟ್ ಇತಿಹಾಸದ ಅತ್ಯುತ್ತಮ ಬ್ಯಾಟ್ಸ್ಮನ್ ಮತ್ತು ರಾಯಭಾರಿಗಳಲ್ಲಿ ಒಬ್ಬರಾದ ದ್ರಾವಿಡ್, ಅವರು ಪರಂಪರೆಯಂಥ ವಿಷಯಗಳಲ್ಲಿ ಹೆಚ್ಚು ಆಸಕ್ತಿ ಹೊಂದಿಲ್ಲ ಎಂದು ಹೇಳಿದರು.

ದ್ರಾವಿಡ್‌ಗೂ ಶಾರುಖ್‌ ಖಾನ್‌ಗೂ ಸಾಮ್ಯತೆ

ರಾಹುಲ್ ದ್ರಾವಿಡ್‌ಗೂ ಚಕ್‌ದೇ ಇಂಡಿಯಾ ಸಿನಿಮಾದಲ್ಲಿ ಶಾರೂಖ್ ಖಾನ್‌ ಸ್ಟೋರಿಗೂ ಸಾಮ್ಯತೆ ಇದೆ. ಈ ಎರಡೂ ಸೇಮ್ ಟು ಸೇಮ್. ಸಿನಿಮಾದಲ್ಲಿ ಅವನು ಪ್ಲೇಯರ್ ಆಗಿ ಅವಮಾನ ಎದುರಿಸಿ ಮತ್ತೆ ಕೋಚ್ ಆಗುವ ಶಾರುಖ್‌ ತಮ್ಮ ತಂಡ ಟ್ರೋಫಿ ಗೆಲ್ಲಿಸುವಲ್ಲಿ ಯಶಸ್ವಿಯಾಗುತ್ತಾರೆ. ಇಲ್ಲಿ ದ್ರಾವಿಡ್ ಅವರ ಕತೆಯೂ ಅಷ್ಟೇ. 2007ರ ಏಕದಿನ ವಿಶ್ವಕಪ್‌ನಲ್ಲಿ ನಾಯಕನಾಗಿ ಸೋತು ಅವಮಾನ ಎದುರಿಸ್ತಾರೆ. ಆದರೆ, ಈಗ ಅದೇ ತಂಡದ ಕೋಚ್ ಆಗಿ ವೆಸ್ಟ್ ಇಂಡೀಸ್ ನೆಲದಲ್ಲಿ ಟ್ರೋಫಿ ಗೆದ್ದು ಕೊಟ್ಟಿದ್ದಾರೆ.