ವಿಶ್ವಕಪ್ ಕನಸು ನನಸು; ಬೆಚ್ಚನೆ ಅಪ್ಪುಗೆಯೊಂದಿಗೆ ರೋಹಿತ್- ಕೊಹ್ಲಿ ಭಾವುಕ, ಐಕಾನ್‌ಗಳ ನೋಡಿ ಫ್ಯಾನ್ಸ್ ಹೃದಯ ಭಾರ
ಭಾರತ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಭಾವುಕರಾಗಿ ಅಪ್ಪಿಕೊಂಡಿದ್ದಾರೆ. ಈ ಇಬ್ಬರು ಇನ್ನು ಮುಂದೆ ಚುಟುಕು ಸ್ವರೂಪದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇದು ಅಭಿಮಾನಿಗಳ ಹೃದಯ ಭಾರವಾಗಿಸಿದೆ.
ವಿಶ್ವದಾದ್ಯಂತ ಭಾರತೀಯ ಅಭಿಮಾನಿಗಳ ಸಂಭ್ರಮಾಚರಣೆಗೆ ಮಿತಿಯೇ ಇಲ್ಲ. ದಕ್ಷಿಣ ಆಫ್ರಿಕಾ ಮಣಿಸಿ ಅಜೇಯವಾಗಿ ಟಿ20 ವಿಶ್ವಕಪ್ ಪಂದ್ಯಾವಳಿ ಗೆದ್ದ ಭಾರತ ಕ್ರಿಕೆಟ್ ತಂಡದ ಆಟಗಾರರ ಕಣ್ಣಲ್ಲಿ ನೀರು ಜಿನುಗಿತು. ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಮೈದಾನವು ತ್ರಿವರ್ಣಗಳಿಂದ ತುಂಬಿತ್ತು. ಸುಮಾರು 13 ವರ್ಷಗಳ ಬಳಿಕ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದು ಬೀಗಿತು. ಇದು ಭಾರತ ತಂಡದ ಆಟಗಾರರು, ಕೋಚಿಂಗ್ ಸಿಬ್ಬಂದಿ ಹಾಗೂ ಅಭಿಮಾನಿಗಳಿಗೆ ಭಾವನಾತ್ಮಕ ಕ್ಷಣ. ಟೀಮ್ ಇಂಡಿಯಾ ಟ್ರೋಫಿ ಗೆಲ್ಲುತ್ತಿದ್ದಂತೆಯೇ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಚುಟುಕು ಸ್ವರೂಪಕ್ಕೆ ವಿದಾಯ ಹೇಳಿದರು. ಕೊನೆಗೂ ವಿಶ್ವಕಪ್ ಗೆಲುವಿನ ರುಚಿ ನೋಡಿದ ಇಬ್ಬರು ದಿಗ್ಗಜರು, ಅಭಿಮಾನಿಗಳ ಮನಸ್ಸನ್ನು ಭಾರತವಾಗಿಸಿದರು.
ಕೊಹ್ಲಿ ಮತ್ತು ರೋಹಿತ್, ಭಾರತ ತಂಡದ ಇಬ್ಬರು ಹಿರಿಯ ಹಾಗೂ ಅನುಭವಿ ಆಟಗಾರರು. ಸುದೀರ್ಘ ವರ್ಷಗಳಿಂದ ಇವರಿಬ್ಬರೂ ಜೊತೆಗೆ ಆಡಿದ್ದಾರೆ. ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಭಾರತವನ್ನು ನಂಬರ್ ವನ್ ತಂಡವಾಗಿಸುವಲ್ಲಿ ಇವರಿಬ್ಬರ ಪಾತ್ರ ನಿರ್ಣಾಯಕ. ತಂಡವನ್ನು ಮುಂದೆ ನಿಂತು ಮುನ್ನಡೆಸಿ, ಭಾರತದ ಯಶಸ್ಸಿನ ವಾಸ್ತುಶಿಲ್ಪಿಗಳಾಗಿದ್ದಾರೆ. ಮುಂದಿನ ಪೀಳಿಗೆಯಲ್ಲಿ ಕ್ರಿಕೆಟ್ ಬೆಳೆಯಲು, ಯುವ ಆಟಗಾರರಿಗೆ ಅವಕಾಶ ನೀಡುವ ಸಲುವಾಗಿ ಚುಟುಕು ಸ್ವರೂಪಕ್ಕೆ ಇಬ್ಬರೂ ಗುಡ್ ಬಾಯ್ ಹೇಳಿದ್ದಾರೆ.
ಸರಿಸುಮಾರು ಒಂದು ವರ್ಷದ ಅವಧಿಯಲ್ಲಿ ಮೂರನೇ ಐಸಿಸಿ ಈವೆಂಟ್ ಫೈನಲ್‌ನಲ್ಲಿ ಆಡಿದ ಭಾರತ, ಕೊನೆಗೂ ಕಪ್ ಗೆದ್ದಿದೆ. ದಕ್ಷಿಣ ಆಫ್ರಿಕಾ ತಂಡವನ್ನು ಏಳು ರನ್‌ಗಳಿಂದ ಸೋಲಿಸುವ ಮೂಲಕ ಭಾರತೀಯರ ಕನಸನ್ನು ಆಟಗಾರರು ನನಸಾಗಿಸಿದರು. ರೋಹಿತ್ ಮತ್ತು ಕೊಹ್ಲಿ ತಮ್ಮ ಭಾವನೆಗಳನ್ನು ಹತೋಟಿಗೆ ತರಲು ಪ್ರಯತ್ನಿಸಿದರು.
ಸಂಭ್ರಮಾಚರಣೆ ವೇಳೆ ಪಿಚ್ ಬಳಿ ಪರಸ್ಪರ ಅಪ್ಪಿಕೊಂಡ 'ರೋಹ್ಲಿ', ಡಗೌಟ್‌ನಲ್ಲಿ ಮತ್ತೊಮ್ಮೆ ಭಾವನಾತ್ಮಕವಾಗಿ ಅಪ್ಪಿಕೊಂಡರು. 15 ವರ್ಷಗಳಿಗಿಂತ ಹೆಚ್ಚು ಕಾಲ ಜೊತೆಗೆ ಆಡಿದ ಆಟಗಾರರು, ಯಶಸ್ಸಿನ ಸಂಭ್ರಮದಲ್ಲಿ ಭಾವುಕರಾದರು. ಕೆಲಕ್ಷಣ ಅಪ್ಪಿಕೊಂಡಿದ್ದ ರೋಹಿತ್ ನಗುತ್ತಾ ಮುಂದುವರೆದರು.
ವಿಶ್ವಕಪ್ ಹಸ್ತಾಂತರಿಸಿದ ಬಳಿಕ ರೋಹಿತ್ ಮತ್ತು ಕೊಹ್ಲಿ ಒಂದು ಕೈಯಲ್ಲಿ ಭಾರತೀಯ ತ್ರಿವರ್ಣ ಧ್ವಜ ಮತ್ತು ಒಂದು ಕೈಯಲ್ಲಿ ವಿಶ್ವಕಪ್ ಟ್ರೋಫಿಯೊಂದಿಗೆ ಫೋಟೋಗಳಿಗೆ ಪೋಸ್ ನೀಡಿದರು.
ಈ ನಡುವೆ ರಾಹುಲ್ ದ್ರಾವಿಡ್‌ಗೆ ಕೃತಜ್ಞತೆ ಸಲ್ಲಿಸುವುದನ್ನು ಇವರಿಬ್ಬರು ಮರೆಯಲಿಲ್ಲ. ಕೋಚ್ ಆಗಿ ದ್ರಾವಿಡ್ ಅವರ ಕೊನೆಯ ಪಂದ್ಯ ಇದಾಗಿತ್ತು. ಕೊಹ್ಲಿ ಟ್ರೋಫಿಯನ್ನು ದ್ರಾವಿಡ್ ಅವರಿಗೆ ಹಸ್ತಾಂತರಿಸಿದರು. ಅವರನ್ನು ಮೇಲಕ್ಕೆತ್ತಿ ಸಂಭ್ರಮಿಸಿದರು. ದ್ರಾವಿಡ್ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವಂತೆ ಕೊಹ್ಲಿ ತಮ್ಮ ತಂಡದ ಆಟಗಾರರನ್ನು ಒತ್ತಾಯಿಸಿದರು.
ಟಿ20 ವಿಶ್ವಕಪ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಟಿ20 ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತ್ಯಧಿಕ ವಿಕೆಟ್; ವಿಶ್ವದಾಖಲೆ ನಿರ್ಮಿಸಿದ ಅರ್ಷದೀಪ್ ಸಿಂಗ್