ಅಲ್ಜಾರಿ ಜೋಸೆಫ್ ಔಟ್, ಮತ್ತೊಬ್ಬ ವೇಗಿಗೆ ಅವಕಾಶ; ಕೆಕೆಆರ್ ಪಂದ್ಯಕ್ಕೆ ಆರ್ಸಿಬಿ ಪ್ಲೇಯಿಂಗ್ ಇಲೆವೆನ್ XI
Royal Challengers Bangalore Playing XI : ಐಪಿಎಲ್ 10ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಬಹುತೇಕ ಒಂದು ಬದಲಾವಣೆಯಾಗುವ ಸಾಧ್ಯತೆ ಇದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ 3ನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ತವರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸವಾಲಿಗೆ ಸಿದ್ಧವಾಗಿರುವ ಆರ್ಸಿಬಿ, ಸತತ ಎರಡನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಮತ್ತೊಂದೆಡೆ, ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಗೆದ್ದಿದ್ದ ಕೋಲ್ಕತ್ತಾ, ವಿಜಯಯಾತ್ರೆ ಮುಂದುವರೆಸಲು ಸಿದ್ಧಗೊಂಡಿದೆ. ಈ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ, ತನ್ನ ಆಡುವ 11ರ ಬಳಗದಲ್ಲಿ ಒಂದು ಬದಲಾವಣೆ ಮಾಡುವುದು ಖಚಿತ.
ಬೆಂಗಳೂರು ಆಡಿರುವ ಮೊದಲ 2 ಪಂದ್ಯಗಳಲ್ಲಿ ಅವಕಾಶ ಪಡೆದಿದ್ದ ವೇಗದ ಬೌಲರ್ ಅಲ್ಜಾರಿ ಜೋಸೆಫ್ ಅವರು ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 3.4 ಓವರ್ಗಳಲ್ಲಿ 38 ರನ್ ಚಚ್ಚಿಸಿಕೊಂಡಿದ್ದ ಜೋಸೆಫ್, ಪಂಜಾಬ್ ಕಿಂಗ್ಸ್ ಎದುರು 43 ರನ್ ನೀಡಿದ್ದರು. ಆದರೆ ವಿಕೆಟ್ ಪಡೆದಿದ್ದು 1 ಮಾತ್ರ. ಬೌಲಿಂಗ್ನಲ್ಲಿ ಪ್ರದರ್ಶನ ನೀಡದ ಕಾರಣ ಕೆಕೆಆರ್ ವಿರುದ್ಧ ಕೈಬಿಡಲು ಆರ್ಸಿಬಿ ನಿರ್ಧರಿಸಿದೆ.
ಜೋಸೆಫ್ ಬದಲಿಗೆ ರೀಸ್ ಟೋಪ್ಲಿ ಅಥವಾ ಲಾಕಿ ಫರ್ಗ್ಯುಸನ್ ಅವರನ್ನು ಆಡುವ 11ರ ಬಳಗಕ್ಕೆ ಕರೆ ತರುವ ಸಾಧ್ಯತೆ ಇದೆ. ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಆರಂಭಿಕರಾಗಿ ಕಣಕ್ಕಿಳಿದಿದ್ದು, ಇದರ ಜೊತೆಗೆ ಆರಂಭಿಕನಾಗಿ ಬ್ಯಾಟ್ ಬೀಸಲಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ಕ್ಯಾಮರೂನ್ ಗ್ರೀನ್, ರಜತ್ ಪಾಟೀದಾರ್ ಮತ್ತು ಗ್ಲೇನ್ ಮ್ಯಾಕ್ಸ್ವೆಲ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಫಿನಿಷರ್ ಆಗಿ ದಿನೇಶ್ ಕಾರ್ತಿಕ್ ಮತ್ತು ಅನೂಜ್ ರಾವತ್ ತಮ್ಮ ಸೇವೆ ಸಲ್ಲಿಸಲಿದ್ದಾರೆ. ಮಹಿಪಾಲ್ ಲೊಮ್ರೊರ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಉಳಿದಂತೆ ಮಯಾಂಕ್ ಡಾಗರ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್ ಬೌಲರ್ಗಳಾಗಲಿದ್ದಾರೆ.
ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಆರ್ಸಿಬಿ ಪ್ಲೇಯಿಂಗ್ XI
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಕ್ಯಾಮರೂನ್ ಗ್ರೀನ್, ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್ವೆಲ್, ಅನೂಜ್ ರಾವತ್, ದಿನೇಶ್ ಕಾರ್ತಿಕ್, ರೀಸ್ ಟೋಪ್ಲಿ/ಲಾಕಿ ಫರ್ಗ್ಯುಸನ್, ಮಯಾಂಕ್ ಡಾಗರ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್.
ಕೋಲ್ಕತ್ತಾ ನೈಟ್ ರೈಡರ್ಸ್ ಸಂಭಾವ್ಯ XI ತಂಡ
ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಸುನಿಲ್ ನರೈನ್, ನಿತೀಶ್ ರಾಣಾ, ಶ್ರೇಯಸ್ ಅಯ್ಯರ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಆಂಡ್ರೆ ರಸೆಲ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಸುಯಶ್ ಶರ್ಮಾ.
ಆರ್ಸಿಬಿ vs ಕೆಕೆಆರ್ ಹೆಡ್-ಟು-ಹೆಡ್ ದಾಖಲೆಗಳು
ಬೆಂಗಳೂರು ಮತ್ತು ಕೋಲ್ಕತ್ತಾ ಇದುವರೆಗೆ 32 ಐಪಿಎಲ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಆರ್ಸಿಬಿ 14 ಗೆದ್ದಿದೆ. ಕೋಲ್ಕತ್ತಾ 18ರಲ್ಲಿ ಜಯಿಸಿದೆ. ಕೆಕೆಆರ್ ವಿರುದ್ಧ ಇದುವರೆಗೆ ಬೆಂಗಳೂರಿನ ಗರಿಷ್ಠ ಮೊತ್ತ 213. ಬೆಂಗಳೂರಿನ ವಿರುದ್ಧ ಕೆಕೆಆರ್ ಗರಿಷ್ಠ ಸ್ಕೋರ್ 222 ಆಗಿದೆ.
ಪಿಚ್ ಮತ್ತು ಹವಾಮಾನ ವರದಿ
ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯಕ್ಕೆ ಚಿನ್ನಸ್ವಾಮಿ ಮೈದಾನ ವೇದಿಕೆ ಕಲ್ಪಿಸುತ್ತಿದ್ದು, ಸಣ್ಣ ಬೌಂಡರಿ ಕಾರಣ ಹೈಸ್ಕೋರಿಂಗ್ ಗೇಮ್ ನಿರೀಕ್ಷಿಸಲಾಗುದೆ. ಇದು ನಿಧಾನಗತಿಯ ಬೌಲರ್‌ಗಳಿಗೆ ಸಹಾಯ ಮಾಡುವುದಿಲ್ಲ. ಪಂದ್ಯ ಆರಂಭವಾದಾಗ ಬೆಂಗಳೂರಿನ ತಾಪಮಾನ ಸುಮಾರು 32 ಡಿಗ್ರಿ ಇರುತ್ತದೆ. ಪಂದ್ಯದ ನಂತರ ಅದು ಸ್ವಲ್ಪಮಟ್ಟಿಗೆ 26 ಡಿಗ್ರಿಗಳಿಗೆ ತಣ್ಣಗಾಗುತ್ತದೆ. ಮಳೆಯಾಗುವ ಸಾಧ್ಯತೆಯಿಲ್ಲ.