ಮತದಾನ ಜಾಗೃತಿಗೆ ಕ್ರಿಕೆಟ್ ದೇವರು; ಸಚಿನ್ ತೆಂಡೂಲ್ಕರ್ ಭಾರತ ಚುನಾವಣಾ ಆಯೋಗದ ನ್ಯಾಷನಲ್ ಐಕಾನ್
ಕನ್ನಡ ಸುದ್ದಿ  /  ಕ್ರಿಕೆಟ್  /  ಮತದಾನ ಜಾಗೃತಿಗೆ ಕ್ರಿಕೆಟ್ ದೇವರು; ಸಚಿನ್ ತೆಂಡೂಲ್ಕರ್ ಭಾರತ ಚುನಾವಣಾ ಆಯೋಗದ ನ್ಯಾಷನಲ್ ಐಕಾನ್

ಮತದಾನ ಜಾಗೃತಿಗೆ ಕ್ರಿಕೆಟ್ ದೇವರು; ಸಚಿನ್ ತೆಂಡೂಲ್ಕರ್ ಭಾರತ ಚುನಾವಣಾ ಆಯೋಗದ ನ್ಯಾಷನಲ್ ಐಕಾನ್

Sachin Tendulkar:‌ ಮತದಾನದ ಕಡೆಗೆ ಮತದಾರರ ಒಲವು ಹೆಚ್ಚಿಸಲು ಭಾರತೀಯ ಚುನಾವಣಾ ಆಯೋಗ ಮುಂದಾಗಿದೆ. ಮತದಾನಕ್ಕೆ ನಗರ ಭಾಗದ ಜನರ ನಿರಾಸಕ್ತಿ ಹಾಗೂ ಯುವಶಕ್ತಿಯ ಆಲಸ್ಯದ ಸವಾಲುಗಳನ್ನು ಪರಿಹರಿಸಲು ಈ ಕಾರ್ಯ ನೆರವಾಗಲಿದೆ.

ಸಚಿನ್‌ ತೆಂಡೂಲ್ಕರ್
ಸಚಿನ್‌ ತೆಂಡೂಲ್ಕರ್ (AFP)

ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಮತದಾರರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ದೇಶದ ಕ್ರಿಕೆಟ್ ದಂತಕಥೆಯಾದ ಸಚಿನ್ ತೆಂಡೂಲ್ಕರ್ (Sachin Tendulkar) ಅವರಿಗೆ ಉನ್ನತ ಸ್ಥಾನಮಾನವನ್ನು ನೀಡಲಾಗುತ್ತಿದೆ. ದೇಶದ ಚುನಾವಣಾ ಆಯೋಗವು (EC) ಕ್ರಿಕೆಟ್‌ ದೇವರನ್ನು ‘ರಾಷ್ಟ್ರೀಯ ಐಕಾನ್’ ಎಂದು ಗುರುತಿಸಿದೆ.

ಇಂದು (ಬುಧವಾರ) ಸಚಿನ್‌ ತೆಂಡೂಲ್ಕರ್ ಮತ್ತು ಚುನಾವಣಾ ಸಮಿತಿಯ ನಡುವೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ಮೂರು ವರ್ಷಗಳ ಒಪ್ಪಂದ ಇದಾಗಿದ್ದು, ದೇಶದಾದ್ಯಂತ ಸಚಿನ್ ತೆಂಡೂಲ್ಕರ್‌ ಮತದಾನದ ಕುರಿತು ಮತದಾರರಲ್ಲಿ ಜಾಗೃತಿ ಕಾರ್ಯ ಮಾಡಲಿದ್ದಾರೆ. ಮುಂದಿನ ವರ್ಷ ದೇಶದಲ್ಲಿ ಮಹತ್ವದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಅದಕ್ಕೂ ಮುನ್ನ ಮತದಾನದ ಜಾಗೃತಿ ಕಾರ್ಯಕ್ಕೆ ಸಚಿನ್‌ ಮುಂದಾಗಲಿದ್ದಾರೆ.

“ಈ ಸಹಯೋಗವು ಮುಂಬರುವ ಚುನಾವಣೆಗಳಲ್ಲಿ ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ನೆರವಾಗಲಿದೆ. ವಿಶೇಷವಾಗಿ 2024ರ ಸಾರ್ವತ್ರಿಕ ಚುನಾವಣೆಗಳಲ್ಲಿ (ಲೋಕಸಭೆ) ಯುವಕರೊಂದಿಗೆ ತೆಂಡೂಲ್ಕರ್ ಅವರ ಪ್ರಭಾವವನ್ನು ಹೆಚ್ಚಿಸುವಲ್ಲಿ ಮಹತ್ವದ ಹೆಜ್ಜೆ ಇಡಲಾಗುತ್ತದೆ” ಎಂದು ಚುನಾವಣಾ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.

ಕ್ರಿಕೆಟ್‌ನ ದಿಗ್ಗಜ ಆಟಗಾರನೊಂದಿಗೆ ಮಹತ್ವದ ಒಪ್ಪಂದ ಮಾಡುವ ಮೂಲಕ, ಮತದಾನದ ಕಡೆಗೆ ಮತದಾರರ ಒಲವು ಹೆಚ್ಚಿಸಲು ಭಾರತೀಯ ಚುನಾವಣಾ ಆಯೋಗ ಮುಂದಾಗಿದೆ. ವಿಶೇಷವಾಗಿ ಮತದಾನಕ್ಕೆ ನಗರಭಾಗಗಳ ಜನರ ನಿರಾಸಕ್ತಿ ಹಾಗೂ ಯುವಶಕ್ತಿಯ ಆಲಸ್ಯದ ಸವಾಲುಗಳನ್ನು ಪರಿಹರಿಸಲು ಈ ಕಾರ್ಯ ನೆರವಾಗಲಿದೆ.

ಕಳೆದ ವರ್ಷ ಚುನಾವಣಾ ಆಯೋಗವು ನಟ ಪಂಕಜ್ ತ್ರಿಪಾಠಿ ಅವರನ್ನು ರಾಷ್ಟ್ರೀಯ ಐಕಾನ್ ಎಂದು ಗುರುತಿಸಿತ್ತು. ಅದಕ್ಕೂ ಹಿಂದೆ, ಅಂದರೆ 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಎಂಎಸ್ ಧೋನಿ, ಅಮೀರ್ ಖಾನ್ ಮತ್ತು ಮೇರಿ ಕೋಮ್ ಅವರಂತಹ ದಿಗ್ಗಜರು ಚುನಾವಣಾ ಆಯೋಗದ ರಾಷ್ಟ್ರೀಯ ಐಕಾನ್‌ಗಳಾಗಿದ್ದರು. ಇದೀಗ ಸಚಿನ್‌ಗೆ ಈ ಗೌರವ ಹಾಗೂ ಜವಾಬ್ದಾರಿ ಸಿಕ್ಕಿದೆ.

Whats_app_banner