ಏಷ್ಯಾಕಪ್‌ನಲ್ಲಿ ಪಾಕಿಸ್ತಾನವೇ ಫೇವರೆಟ್; ಟೀಂ ಇಂಡಿಯಾ ಟಾರ್ಗೆಟ್ ಮಾಡಿದ ಪಾಕ್ ಮಾಜಿ ಆಟಗಾರ
ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೊರತುಪಡಿಸಿದರೆ ಹೇಳಿಕೊಳ್ಳುವಂತ ಆಟಗಾರರು ಇಲ್ಲ ಎಂದು ಪಾಕ್ ಮಾಜಿ ಆಟಗಾರ ಸಲ್ಮಾನ್ ಭಟ್ ಹೇಳಿದ್ದಾರೆ. ಪಾಕಿಸ್ತಾನ ತಂಡದಲ್ಲಿ ಅನೇಕ ಮ್ಯಾಚ್ ವಿನ್ನರ್‌ಗಳು ಇದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಬಲಿಷ್ಠವಾಗಿದೆ ಎಂದಿದ್ದಾರೆ.
ಮುಂಬೈ: ಇಂದಿನಿಂದ ಏಷ್ಯಾಕಪ್ ಆರಂಭವಾಗಿದ್ದು, ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನೇಪಾಳ (Pakistan vs Nepal) ತಂಡಗಳು ಇಂದು ಮಧ್ಯಾಹ್ನ ಆರಂಭಿಕ ಗೆಲುವಿಗಾಗಿ ಪೈಪೋಟಿ ನಡೆಸಲಿದ್ದು, ಸೆಪ್ಟೆಂಬರ್ 2ರ ಶನಿವಾರ ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯ ವೇದಿಕೆ ಸಿದ್ಧವಾಗಿದೆ.
ಭಾರತ-ಪಾಕಿಸ್ತಾನ (India vs Pakistan) ಪಂದ್ಯವನ್ನು ಗುರಿಯಾಗಿಸಿಕೊಂಡು ಪಾಕ್ ತಂಡದ ಮಾಜಿ ನಾಯಕ ಸಲ್ಮಾನ್ ಭಟ್ (Salman Butt) ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಇಡೀ ದಿನ ಐಪಿಎಲ್ ಆಡಿದರೂ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಟೀಂ ಇಂಡಿಯಾದಲ್ಲಿ ಕೊಹ್ಲಿ, ರೋಹಿತ್ ಬಲಿಷ್ಠ ಆಟಗಾರರು
ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬಿಟ್ಟರೆ ಬೇರೆ ಯಾರೂ ಕೂಡ ಹೇಳಿಕೊಳ್ಳುವಂತ ಆಟಗಾರರು ಇಲ್ಲ ಎಂದು ಹೇಳಿದ್ದಾರೆ. ಪಾಕಿಸ್ತಾನ ತಂಡದಲ್ಲಿ ಅನೇಕ ಮ್ಯಾಚ್ ವಿನ್ನರ್‌ಗಳು ಇದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಬಲಿಷ್ಠವಾಗಿದೆ ಎಂದು ತಿಳಿಸಿದ್ದಾರೆ.
ಟೀಂ ಇಂಡಿಯಾದ ವೇಗದ ಬೌಲಿಂಗ್ ವಿಭಾಗವನ್ನು ನೋಡಿದರೆ ಫಿಟ್‌ನೆಸ್ ಚಿಂತೆ ಕಾಡುತ್ತಿದೆ. ಆಟಗಾರರು ಹಲವು ದಿನಗಳಿಂದ ಫಿಟ್ ಆಗಿಲ್ಲ. ಅವರು ಸುಸ್ತಾಗಿದ್ದಾರೆಯೇ ಅಥವಾ ಪೂರ್ಣ ಸಾಮರ್ಥ್ಯದಿಂದ ಬೌಲಿಂಗ್ ಮಾಡಬಲ್ಲರೇ ಎಂದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ರೋಹಿತ್ ಮತ್ತು ಕೊಹ್ಲಿ ಬಿಟ್ಟರೆ ಉಳಿದವರೆಲ್ಲರೂ ಯುವಕರೇ. ಅವರು ಸಾಕಷ್ಟು ಕ್ರಿಕೆಟ್ ಆಡಿದ್ದರೂ, ಅವರಿಗೆ ಹೆಚ್ಚಿನ ಅನುಭವವಿಲ್ಲ. ರೋಹಿತ್ ಉತ್ತಮವಾಗಿ ಆಡಿದಾಗ ಕೊಹ್ಲಿ ಅಬ್ಬರಿಸಿದಾಗ ಭಾರತ ಗೆದ್ದಿದೆ. ಇತರರ ಮೇಲೆ ಹೊರೆ ಬಿದ್ದಾಗ ತಂಡ ಸಂಕಷ್ಟಕ್ಕೆ ಸಿಲುಕಿತ್ತು ಎಂದು ಸಲ್ಮಾನ್ ಭಟ್ ಹೇಳಿದ್ದಾರೆ.
ಭಾರತ ತಂಡದಲ್ಲಿ ಮ್ಯಾಚ್ ವಿನ್ನರ್‌ಗಳು ಯಾರು?
ಪಾಕಿಸ್ತಾನ ತಂಡವು ಬಾಬರ್, ರಿಜ್ವಾನ್, ಫಖಾರ್ ಶಾದಾಬ್, ಶಾಹೀನ್, ರ್ಯಾರಿಸ್ ರೌಫ್ ಒಳಗೊಂಡ ಬಲಿಷ್ಠ ತಂಡವಿದೆ. ನನ್ನ ಅಭಿಪ್ರಾಯದಲ್ಲಿ ಪಾಕಿಸ್ತಾನವು ಹೆಚ್ಚು ಕೋರ್ ಗ್ರೂಪ್ ಹೊಂದಿದೆ. ಭಾರತ ತಂಡದಲ್ಲಿ ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯಂತಹ ಮ್ಯಾಚ್ ವಿನ್ನರ್‌ಗಳನ್ನು ಹೊಂದಿದೆ. ಆದರೆ ಅವರ ಬ್ಯಾಟಿಂಗ್ ದುರ್ಬಲವಾಗಿದೆ.
ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಆರಂಭದಲ್ಲಿ ಎರಡು ವಿಕೆಟ್‌ಗಳನ್ನು ಪಡೆದರೆ ಸಾಕು ಇತರರ ಮೇಲೆ ಹೆಚ್ಚಿನ ಬೀಳುತ್ತದೆ. ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಗೆಲ್ಲಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದು ಭಟ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಅವರು ಐಪಿಎಲ್ ಬಗ್ಗೆಯೂ ಮಾತನಾಡಿದ್ದು, ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಎಷ್ಟೇ ಐಪಿಎಲ್ ಪಂದ್ಯಗಳನ್ನು ಆಡಿದರೂ ಪಾಕಿಸ್ತಾನ ವಿರುದ್ಧದ ಗೆಲುವು ಅಷ್ಟು ಸುಲಭವಲ್ಲ, ಐಪಿಎಲ್‌ನಲ್ಲಿ ಆಡಿದ ಅನುಭವ ಇಲ್ಲಿ ವರ್ಕೌಟ್ ಆಗುವುದಿಲ್ಲ. ಇಲ್ಲಿ ಪಾಕಿಸ್ತಾನವೇ ಮೇಲುಗೈ ಸಾಧಿಸುತ್ತೆ ಅಂತಲೂ ಸಲ್ಮಾನ್ ಭಟ್ ಭವಿಷ್ಯ ನುಡಿದಿದ್ದಾರೆ.
ನಮ್ಮಲ್ಲಿ ಗಂಟೆಗೆ 90 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಬೌಲರ್‌ಗಳು ಇದ್ದಾರೆ. ಒಬ್ಬರು ಅಥವಾ ಇಬ್ಬರು ಈ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಗಂಟೆಗೆ 140 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವವರೂ ಇದ್ದಾರೆ. ಇತರರಲ್ಲಿ ಅಷ್ಟು ವೇಗವಿಲ್ಲ. ಇದು ಪಾಕಿಸ್ತಾನಕ್ಕೆ ಹೆಚ್ಚುವರಿ ಶಕ್ತಿಯಾಗಿದೆ. ಎರಡು ರೀತಿಯ ಸ್ಪಿನ್ನರ್‌ಗಳಿದ್ದಾರೆ ಭಟ್ ವಿವರಿಸಿದ್ದಾರೆ.
ಭಾರತದ ಮೇಲೆ ಭಾರಿ ನಿರೀಕ್ಷೆಗಳಿವೆ. ಹೀಗಾಗಿ ಒತ್ತಡವೂ ಜಾಸ್ತಿಯಾಗಲಿದೆ. ಯಾವುದೋ ಕಾರಣಕ್ಕೆ ಭಾರತ-ಪಾಕಿಸ್ತಾನ ಪಂದ್ಯಗಳು ನಡೆದಿಲ್ಲ. ಐಪಿಎಲ್ ಅನುಭವ ವರ್ಕೌಟ್ ಆಗುವುದಿಲ್ಲ. ಏಷ್ಯಾಕಪ್‌ನಲ್ಲಿ ಪಾಕಿಸ್ತಾನವೇ ಫೇವರಿಟ್ ಎಂದಿದ್ದಾರೆ.