ಮಹಿಳಾ ಏಷ್ಯಾಕಪ್​​ನಲ್ಲಿ ಭಾರತ ತಂಡಕ್ಕೆ ಹಿನ್ನಡೆ; ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಶ್ರೇಯಾಂಕಾ ಪಾಟೀಲ್
ಕನ್ನಡ ಸುದ್ದಿ  /  ಕ್ರಿಕೆಟ್  /  ಮಹಿಳಾ ಏಷ್ಯಾಕಪ್​​ನಲ್ಲಿ ಭಾರತ ತಂಡಕ್ಕೆ ಹಿನ್ನಡೆ; ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಶ್ರೇಯಾಂಕಾ ಪಾಟೀಲ್

ಮಹಿಳಾ ಏಷ್ಯಾಕಪ್​​ನಲ್ಲಿ ಭಾರತ ತಂಡಕ್ಕೆ ಹಿನ್ನಡೆ; ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಶ್ರೇಯಾಂಕಾ ಪಾಟೀಲ್

Shreyanka Patil ruled out of Women's Asia Cup: ಬೆರಳಿನ ಮುರಿತದಿಂದಾಗಿ ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರು ಮಹಿಳಾ ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಮಹಿಳಾ ಏಷ್ಯಾಕಪ್​​ನಲ್ಲಿ ಭಾರತ ತಂಡಕ್ಕೆ ಹಿನ್ನಡೆ; ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಶ್ರೇಯಾಂಕಾ ಪಾಟೀಲ್
ಮಹಿಳಾ ಏಷ್ಯಾಕಪ್​​ನಲ್ಲಿ ಭಾರತ ತಂಡಕ್ಕೆ ಹಿನ್ನಡೆ; ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಶ್ರೇಯಾಂಕಾ ಪಾಟೀಲ್

ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ನಡೆಯುತ್ತಿರುವ 2024ರ ಮಹಿಳಾ ಏಷ್ಯಾಕಪ್​​ನಲ್ಲಿ (Women's Asia Cup 2024) ಯುಎಇ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ಮಹಿಳಾ ತಂಡ ದೊಡ್ಡ ಹಿನ್ನಡೆ ಅನುಭವಿಸಿದೆ. ಸ್ಟಾರ್ ಸ್ಪಿನ್​ ಆಲ್​ರೌಂಡರ್ ಶ್ರೇಯಾಂಕಾ ಪಾಟೀಲ್ ಅವರು ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಜುಲೈ 19ರಂದು ಶುಕ್ರವಾರ ದಂಬುಲ್ಲಾ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದ ವೇಳೆ ಶ್ರೇಯಾಂಕಾ, ಬೆರಳಿಗೆ ಗಾಯ ಮಾಡಿಕೊಂಡಿದ್ದರು.

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿ ಶುಭಾರಂಭ ಮಾಡಿದ ಹಾಲಿ ಚಾಂಪಿಯನ್ ಭಾರತ ತಂಡ, ಇದೀಗ ಯುಎಇ ಸವಾಲಿಗೆ ಸಜ್ಜಾಗಿದೆ. ಆದರೆ ಪಂದ್ಯಕ್ಕೂ ಮುನ್ನವೇ ಆಫ್‌ಸ್ಪಿನ್ನರ್ ಶ್ರೇಯಾಂಕಾ ಅವರ ಬೆರಳಿನ ಮೂಳೆ ಮುರಿತದ ಕಾರಣ ಏಷ್ಯಾಕಪ್‌ನ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಕಟಣೆ ಹೊರಡಿಸಿದೆ. ಪಾಟೀಲ್ ಅವರ ಸ್ಥಾನವನ್ನು ತನುಜಾ ಕನ್ವರ್ ಅವರು ತುಂಬಲಿದ್ದಾರೆ.

ಏಷ್ಯಾಕಪ್‌ ಟೂರ್ನಿಯ ಎರಡನೇ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ಯತ್ನದಲ್ಲಿ ಕರ್ನಾಟಕದ ಆಟಗಾರ್ತಿ ಗಾಯಗೊಂಡಿದ್ದರು. ಆಕೆಯ ಎಡಗೈನ ನಾಲ್ಕನೇ ಬೆರಳು ಮುರಿದಿದೆ. ಆದಾಗ್ಯೂ, ಅವರು ಪಾಕ್​ ಇನ್ನಿಂಗ್ಸ್‌ನ ಕೊನೆವರೆಗೂ ಬೌಲಿಂಗ್ ಮಾಡುವಲ್ಲಿ ಯಶಸ್ವಿಯಾದರು. 3.2 ಓವರ್‌ಗಳನ್ನು ಬೌಲ್ ಮಾಡಿದ ಶ್ರೇಯಾಂಕಾ, ಕೇವಲ 14 ರನ್ ಬಿಟ್ಟುಕೊಟ್ಟು ಪ್ರಮುಖ 2 ವಿಕೆಟ್​ ಕಿತ್ತಿದ್ದರು. ಆ ಮೂಲಕ ಎದುರಾಳಿ ತಂಡವನ್ನು 108 ರನ್‌ಗಳಿಗೆ ಆಲೌಟ್ ಮಾಡಲು ನೆರವಾದರು.

ಡಬ್ಲ್ಯುಪಿಎಲ್​ನಲ್ಲೂ ಅದೇ ಬೆರಳಿಗೆ ಗಾಯ

ಈ ಹಿಂದೆ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲೂ ಶ್ರೇಯಾಂಕಾ ಅವರ ಅದೇ ಬೆರಳಿಗೆ ಗಾಯವಾಗಿತ್ತು. ಹೀಗಾಗಿ, ಅವರು ಹಲವು ಪಂದ್ಯಗಳಿಗೆ ಬೆಂಚ್ ಕಾದಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ವಿಕೆಟ್ ಕಬಳಿಸುವ ಮೂಲಕ ಶ್ರೇಯಾಂಕಾ ಬಲಿಷ್ಠವಾಗಿ ಕಂಬ್ಯಾಕ್ ಮಾಡಿದ್ದರು. ಪ್ಲೇಆಫ್​​ ಹಂತದಲ್ಲೂ ಮಿಂಚಿದ್ದರು. ಅತ್ಯುತ್ತಮ ಪ್ರದರ್ಶನ ನೀಡಿ ಆರ್​ಸಿಬಿ ತಂಡವನ್ನು ಚಾಂಪಿಯನ್ ಮಾಡಲು ನೆರವಾಗಿದ್ದ ಶ್ರೇಯಾಂಕಾ, ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗೆದ್ದರು. ಅಲ್ಲದೆ, ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ ಕೂಡ ಪಡೆದರು.

ಡಬ್ಲ್ಯುಪಿಎಲ್​ನಲ್ಲಿ ಮಿಂಚಿದ್ದ ಕನ್ವರ್​

ಶ್ರೇಯಾಂಕಾ ಬದಲಿಗೆ ಎಡಗೈ ಸ್ಪಿನ್ನರ್ ತನುಜಾ ಕನ್ವರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅವರು ಟೂರ್ನಿಗೆ ಆಯ್ಕೆಯಾಗಿದ್ದ ನಾಲ್ವರು ಮೀಸಲು ಆಟಗಾರರಲ್ಲಿ ಒಬ್ಬರು. ಪಾಟೀಲ್ ಬದಲಿಗೆ ಬಂದ ಕನ್ವರ್ ಮಹಿಳಾ ಪ್ರೀಮಿಯರ್ ಲೀಗ್​ನಲ್ಲೂ ಅಮೋಘ ಪ್ರದರ್ಶನ ನೀಡಿದ್ದರು. 8 ಪಂದ್ಯಗಳಲ್ಲಿ 10 ವಿಕೆಟ್ ಪಡೆದಿದ್ದರು. ಗುಜರಾತ್ ಜೈಂಟ್ಸ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

ಪ್ರಸ್ತುತ ಏಷ್ಯಾಕಪ್​​ನಲ್ಲಿ ಎ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ಮೊದಲ ಪಂದ್ಯದಲ್ಲಿ ಗೆದ್ದಿದ್ದು 2 ಅಂಕ ಸಂಪಾದಿಸಿದೆ. ನೆಟ್​​ರನ್​ರೇಟ್ +2.294 ಇದೆ. ಇಂದಿನ (ಜುಲೈ 21) ಪಂದ್ಯದಲ್ಲಿ ಯುಎಇ ಎದುರು ಜಯಿಸಿದರೆ 4 ಅಂಕಗಳೊಂದಿಗೆ ನೇರವಾಗಿ ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಳ್ಳಲಿದೆ. ಕಳೆದ ಪಂದ್ಯದಲ್ಲಿ ಪಾಕ್ ವಿರುದ್ಧ ಮಿಂಚಿದ್ದ ದೀಪ್ತಿ ಶರ್ಮಾ, ರೇಣುಕಾ ಸಿಂಗ್ ಮತ್ತು ಪೂಜಾ ವಸ್ತ್ರಾಕರ್​ ಈ ಪಂದ್ಯದಲ್ಲೂ ಮಿಂಚಿನ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.

Whats_app_banner