Team India: ಗೌತಮ್ ಗಂಭೀರ್ ಎಲ್ಲಾ ಯೋಜನೆಗಳು ಫೇಲ್; ಭಾರತ ತಂಡದ ಮುಖ್ಯ ಕೋಚ್ ಎಡವುತ್ತಿರುವುದೆಲ್ಲಿ?
ಕನ್ನಡ ಸುದ್ದಿ  /  ಕ್ರಿಕೆಟ್  /  Team India: ಗೌತಮ್ ಗಂಭೀರ್ ಎಲ್ಲಾ ಯೋಜನೆಗಳು ಫೇಲ್; ಭಾರತ ತಂಡದ ಮುಖ್ಯ ಕೋಚ್ ಎಡವುತ್ತಿರುವುದೆಲ್ಲಿ?

Team India: ಗೌತಮ್ ಗಂಭೀರ್ ಎಲ್ಲಾ ಯೋಜನೆಗಳು ಫೇಲ್; ಭಾರತ ತಂಡದ ಮುಖ್ಯ ಕೋಚ್ ಎಡವುತ್ತಿರುವುದೆಲ್ಲಿ?

ಭಾರತ ತಂಡದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ಗೆ ಬಿಸಿಸಿಐ ಎಲ್ಲ ರೀತಿಯಲ್ಲೂ ಸ್ವಾತಂತ್ರ್ಯ ನೀಡಿತ್ತು. ಗಂಭೀರ್ ತಮ್ಮ ಆಯ್ಕೆಯ ಕೋಚಿಂಗ್ ಸಿಬ್ಬಂದಿಯನ್ನು ಆಯ್ಕೆ ಮಾಡಿದರು. ಆದರೆ ಏಕದಿನ ನಂತರ ಟೆಸ್ಟ್ ಸರಣಿಯಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ. ಇದೀಗ ಗಂಭೀರ್ ಅವರ ಕೆಲಸವನ್ನು ಪರಿಶೀಲಿಸಲಾಗುತ್ತದೆ.

ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌
ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಭಾರತ ತಂಡಕ್ಕೆ ತನ್ನದೇ ನೆಲದಲ್ಲಿ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಈ ಸೋಲಿನ ನಂತರ ಮುಖ್ಯ ಕೋಚ್ ಗೌತಮ್ ಗಂಭೀರ್ ಮೇಲೆ ಹಲವು ಪ್ರಶ್ನೆಗಳು ಎದ್ದಿವೆ. ವರದಿಯ ಪ್ರಕಾರ, ಗಂಭೀರ್ ಅವರ ಶ್ರೀಲಂಕಾ ಪ್ರವಾಸವನ್ನು ಪರಗಣಿಸಿ ಎಲ್ಲ ಸರಣಿಗಳ ಪ್ರದರ್ಶನದ ಕುರಿತು ಬಿಸಿಸಿಐ ಪರಿಶೀಲಿಸಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಗಂಭೀರ್‌ಗೆ ಮುಕ್ತ ಹಸ್ತ ನೀಡಿದರೂ ಟೆಸ್ಟ್ ಮತ್ತು ಏಕದಿನದಲ್ಲಿ ಯಶಸ್ವಿಯಾಗಲಿಲ್ಲ.

ಹೌದು, ಬಿಸಿಸಿಐ ಗಂಭೀರ್‌ಗೆ ಎಲ್ಲ ರೀತಿಯಲ್ಲೂ ಸ್ವಾತಂತ್ರ್ಯ ನೀಡಿತ್ತು. ಗಂಭೀರ್ ತಮ್ಮ ಆಯ್ಕೆಯ ಕೋಚಿಂಗ್ ಸಿಬ್ಬಂದಿಯನ್ನು ಮಾಡಿದರು. ಆದರೆ ಏಕದಿನ ನಂತರ ಟೆಸ್ಟ್ ಸರಣಿಯಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ. ಸುದ್ದಿಸಂಸ್ಥೆ ಪಿಟಿಐ ವರದಿ ಪ್ರಕಾರ, ಇದೀಗ ಗಂಭೀರ್ ಅವರ ಕೆಲಸವನ್ನು ಪರಿಶೀಲಿಸಲಾಗುತ್ತದೆ. ಟೀಮ್ ಇಂಡಿಯಾದ ಹೀನಾಯ ಸೋಲಿನ ನಂತರ ಅವರ ಮೇಲೆ ಪ್ರಶ್ನೆಗಳು ಮೂಡುತ್ತಿವೆ. ಹೀಗಾಗಿ ಕಳೆದ ಮೂರು ತಿಂಗಳ ಇವರ ಕೆಲಸಗಳ ಪರಿಶೀಲನೆ ನಡೆಯಲಿದೆ.

ದ್ರಾವಿಡ್-ಶಾಸ್ತ್ರಿಗೂ ಇಲ್ಲದ ಅವಕಾಶ ಗಂಭೀರ್​ಗೆ ನೀಡಲಾಗಿತ್ತು

ರಾಹುಲ್ ದ್ರಾವಿಡ್ ಮತ್ತು ರವಿಶಾಸ್ತ್ರಿ ಅವರಿಗೆ ಬಿಸಿಸಿಐ ಸಂಪೂರ್ಣ ಅಧಿಕಾರ ಕೊಟ್ಟಿರಲಿಲ್ಲ. ಆದರೆ ಈ ಸೌಲಭ್ಯವನ್ನು ಗಂಭೀರ್​ಗೆ ನೀಡಲಾಗಿದೆ. ಅವರು ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ತರಬೇತುದಾರರನ್ನು ತಮ್ಮ ಸ್ವಂತ ಇಚ್ಛೆಯ ಮೇರೆಗೆ ಆಯ್ಕೆ ಮಾಡಿದರು. ಬಿಸಿಸಿಐ ಕೂಡ ಗಂಭೀರ್ ಸಲಹೆಯನ್ನು ಒಪ್ಪಿಕೊಂಡಿತು. ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಮಂಡಳಿ ನಿರೀಕ್ಷಿಸಿತ್ತು. ಆದರೆ ಇಲ್ಲಿ ಆಗಿದ್ದು ಬರೀ ಸೋಲು.

ಬಿಸಿಸಿಐ ನಿಯಮ ಪುಸ್ತಕದ ಪ್ರಕಾರ, ಮುಖ್ಯ ಕೋಚ್ ಆಯ್ಕೆ ಸಮಿತಿ ಸಭೆಯ ಭಾಗವಾಗಿಲ್ಲ. ಆದರೆ ಆಸ್ಟ್ರೇಲಿಯಾ ಪ್ರವಾಸದ ಮಹತ್ವವನ್ನು ಪರಿಗಣಿಸಿ ಗಂಭೀರ್‌ಗೆ ನಿಯಮಗಳನ್ನು ಬದಿಗಿಟ್ಟು ಅದರಲ್ಲಿ ಭಾಗವಹಿಸಲು ಅವಕಾಶ ನೀಡಲಾಯಿತು. ಗಂಭೀರ್ ಕೋರಿಕೆಯ ಮೇರೆಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ತಂಡದಲ್ಲಿ ವೇಗದ ಬೌಲರ್ ಹರ್ಷಿತ್ ರಾಣಾ ಮತ್ತು ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಇಬ್ಬರು ಆಟಗಾರರನ್ನು ಸೇರಿಸಿಕೊಳ್ಳಲಾಗಿದೆ.

ಮೊದಲು ಶ್ರೀಲಂಕಾ ನಂತರ ನ್ಯೂಜಿಲೆಂಡ್

ಈ ವರ್ಷ ಜುಲೈನಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸಕ್ಕೆ ತೆರಳಿತ್ತು. ಇಲ್ಲಿ ಟಿ20 ಹಾಗೂ ಏಕದಿನ ಸರಣಿಗಳು ನಡೆದಿದ್ದವು. ಆದರೆ, 27 ವರ್ಷಗಳಲ್ಲಿ ಮೊದಲ ಬಾರಿಗೆ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ತಂಡ ಸೋತಿತು. ಇದರ ನಂತರ, ನವೆಂಬರ್ 3 ರಂದು ನ್ಯೂಜಿಲೆಂಡ್ ತವರು ನೆಲದಲ್ಲಿ ಟೀಮ್ ಇಂಡಿಯಾವನ್ನು 3-0 ಅಂತರದಿಂದ ಸೋಲಿಸಿತು. ಭಾರತ ತಂಡ ತನ್ನ ತವರು ನೆಲದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳ ಸರಣಿಯಲ್ಲಿ ಹಿಂದೆಂದೂ ಇಂತಹ ಕೆಟ್ಟ ಪ್ರದರ್ಶನ ತೋರಿಲ್ಲ.

ಒಂದು ತಂಡದ ಜೊತೆ ತರಬೇತುದಾರನ ಪಾತ್ರ ಏನೆಂದರೆ ತಂತ್ರಗಳನ್ನು ರೂಪಿಸುವುದು. ಆದರೆ, ಸ್ಪಿನ್ ಬೌಲಿಂಗ್ ವಿರುದ್ಧ ಭಾರತೀಯ ಬ್ಯಾಟರ್‌ಗಳ ದೌರ್ಬಲ್ಯ ತಿಳಿದಿದ್ದರೂ, ಮುಂಬೈನಲ್ಲಿ ಟರ್ನಿಂಗ್ ಪಿಚ್ ಆಯ್ಕೆಯ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಿವೆ. ಮುಂಬೈನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದ ಸಂಜೆ ಸಿರಾಜ್ ಅವರನ್ನು ನೈಟ್ ವಾಚ್ ಮ್ಯಾನ್ ಆಗಿ ಕಳುಹಿಸಲಾಗಿತ್ತು. ಸರ್ಫರಾಜ್ ಅವರನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಎಂಟನೇ ಸ್ಥಾನದಲ್ಲಿ ಕೈಬಿಡಲಾಯಿತು. ಗಂಭೀರ್ ಅವರ ಈ ಯಾವುದೇ ಕಾರ್ಯತಂತ್ರ ವರ್ಕ್ ಆಗಲಿಲ್ಲ.

ಗಂಭೀರ್ ಮೇಲಿತ್ತು ಬೆಟ್ಟದಷ್ಟು ನಿರೀಕ್ಷೆ

ರಾಹುಲ್ ದ್ರಾವಿಡ್ ತಮ್ಮ ಅಧಿಕಾರಾವಧಿಯನ್ನು ಕೊನೆಗೊಳಿಸಿದ ನಂತರ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ತಂಡವನ್ನು ಪ್ರವೇಶಿಸಿದರು. ಗೌತಮ್ ಅವರನ್ನು ಮುಖ್ಯ ಕೋಚ್ ಆಗಿ ನೋಡಲು ಎಲ್ಲರೂ ಉತ್ಸುಕರಾಗಿದ್ದರು. ಏಕೆಂದರೆ ಇದಕ್ಕೂ ಮುನ್ನ ಗಂಭೀರ್ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿದ್ದರು. 2024 ರಲ್ಲಿ ಕೆಕೆಆರ್ ಅನ್ನು ಚಾಂಪಿಯನ್ ಮಾಡುವಲ್ಲಿ ಅವರ ಕೊಡುಗೆ ಅಪಾರವಾಗಿದೆ. ಇದರಿಂದಾಗಿ ಭಾರತ ತಂಡದಲ್ಲಿ ಅವರ ಆಕ್ರಮಣಕಾರಿ ಮನಸ್ಥಿತಿಯನ್ನು ಎಲ್ಲರೂ ನೋಡಲು ಬಯಸಿದ್ದರು. ಆದರೆ ಗೌತಮ್ ಮುಖ್ಯ ಕೋಚ್ ಆದ ನಂತರ ಭಾರತದ ಪ್ರದರ್ಶನ ತೀರಾ ಕಳಪೆ ಆಯಿತು.

ಗಂಭೀರ್ ವೈಫಲ್ಯಕ್ಕೆ ಏನು ಕಾರಣ?

ರಾಹುಲ್ ದ್ರಾವಿಡ್ ಭಾರತದ ಕೋಚ್ ಆಗಿದ್ದಾಗ ತಂಡಕ್ಕೆ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಇದಲ್ಲದೇ ತಂಡದ ಪ್ರದರ್ಶನ ಅಮೋಘವಾಗಿತ್ತು. ಆದರೆ, ದ್ರಾವಿಡ್ ಅವಧಿ ಮುಗಿಯುವ ವೇಳೆಗೆ ಟೀಮ್ ಇಂಡಿಯಾ ಐಸಿಸಿ ಟ್ರೋಫಿಯನ್ನೂ ಗೆದ್ದುಕೊಂಡಿತ್ತು. ಆದರೆ ಗೌತಮ್ ಗಂಭೀರ್ ವಿಷಯದಲ್ಲಿ ಹಾಗಾಗುತ್ತಿಲ್ಲ. ದ್ವಿಪಕ್ಷೀಯ ಸರಣಿಯಲ್ಲೂ ಭಾರತ ತಂಡದ ಪ್ರದರ್ಶನ ಕಳಪೆಯಾಗಿದೆ.

ಗೌತಮ್ ಗಂಭೀರ್ ಕ್ರಿಕೆಟ್ ಆಡುವ ವಿಧಾನವನ್ನು ಇಲ್ಲಿಯವರೆಗೆ ಭಾರತದ ಆಟಗಾರರು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿರುವುದು ಇದಕ್ಕೆ ಕಾರಣವಾಗಿರಬಹುದು. ಅಥವಾ ಗಂಭೀರ್ ಮತ್ತು ಆಟಗಾರರ ನಡುವೆ ಸಮನ್ವಯ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಗಂಭೀರ್ ಮತ್ತು ಇಡೀ ತಂಡದಲ್ಲಿ ಇನ್ನೂ ಒಗ್ಗಟ್ಟು ಮೂಡಬೇಕಿದೆ. ಅದೇ ಸಮಯದಲ್ಲಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಪ್ರದರ್ಶನವು ಗಂಭೀರ್ ಅಡಿಯಲ್ಲಿ ನಿರಂತರವಾಗಿ ಕಳಪೆಯಾಗಿದೆ. ಇಬ್ಬರೂ ಹಿರಿಯ ಆಟಗಾರರ ಪ್ರದರ್ಶನ ಹೀಗೆಯೇ ಮುಂದುವರೆದರೆ ಈ ಬಗ್ಗೆಯೂ ಚರ್ಚೆ ನಡೆಸಬಹುದು.

Whats_app_banner