Asia Cup 2023: ಟಿ20, ಏಕದಿನ ಮಾದರಿಯ ಏಷ್ಯಾಕಪ್ ಇತಿಹಾಸದಲ್ಲಿ ಭಾರತದ ಅತಿ ದೊಡ್ಡ ದಾಖಲೆಗಳು
ಏಷ್ಯಾಕಪ್ ಇತಿಹಾಸದಲ್ಲಿ ಭಾರತ ತಂಡವು ಅದ್ಭುತ ಇತಿಹಾಸ ಹೊಂದಿದೆ. ಅನೇಕ ಪ್ರಮುಖ ದಾಖಲೆಗಳಿಗೆ ಭಾರತವೇ ಹೆಚ್ಚು ಪ್ರಾಬಲ್ಯ ಸಾಧಿಸಿದೆ. ಹಾಗಾದರೆ, ಟೀಮ್ ಇಂಡಿಯಾ ದಾಖಲಿಸಿದ ಅತಿದೊಡ್ಡ 5 ದಾಖಲೆಗಳನ್ನು ಈ ಮುಂದೆ ತಿಳಿಯೋಣ.
ಪ್ರಸಕ್ತ ಸಾಲಿನ ಏಕದಿನ ಮಾದರಿಯ ಏಷ್ಯಾಕಪ್ ಪಾಕಿಸ್ತಾನ ಹಾಗೂ ಶ್ರೀಲಂಕಾ ಆತಿಥ್ಯದಲ್ಲಿ ನಡೆಯುತ್ತಿದೆ. ಟೂರ್ನಿ ಆರಂಭಕ್ಕೆ ಇನ್ನೇನು ಕೆಲವೇ ದಿನಗಳಿದ್ದು, ಟೀಮ್ ಇಂಡಿಯಾ ಸೇರಿದಂತೆ ಎಲ್ಲಾ ತಂಡಗಳು ಭರ್ಜರಿ ಸಿದ್ಧತೆ ನಡೆಸುತ್ತಿವೆ. ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ, ಬೆಂಗಳೂರಿನಲ್ಲಿ ಒಂದು ವಾರ ಪೂರ್ವ ಸಿದ್ದತಾ ಶಿಬಿರದಲ್ಲಿ ಪಾಲ್ಗೊಂಡಿದ್ದು, ನಿರಂತರ ಅಭ್ಯಾಸ ನಡೆಸುತ್ತಿದೆ.
ಏಳು ಬಾರಿ ಚಾಂಪಿಯನ್ ಆಗಿರುವ ಭಾರತ ತಂಡವು, ಕಳೆದ ಬಾರಿ ನಡೆದ ಟಿ20 ಮಾದರಿಯ ಏಷ್ಯಾಕಪ್ ಟೂರ್ನಿಯಲ್ಲಿ ಲೀಗ್ ಹಂತದಲ್ಲೇ ಹೊರ ಬಿದ್ದು ಮುಖಭಂಗಕ್ಕೆ ಒಳಗಾಗಿತ್ತು. ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋತು ಫೈನಲ್ಗೆ ಎಂಟ್ರಿ ನೀಡಲು ವಿಫಲವಾಗಿತ್ತು. ಈ ಸೋಲಿನಿಂದ ಭಾರಿ ಟೀಕೆಗೆ ಗುರಿಯಾಗಿತ್ತು. ಪ್ರಸ್ತುತ ಏಕದಿನ ಸ್ವರೂಪ ಜರುಗಲಿದ್ದು, ಪ್ರಶಸ್ತಿ ಜಯಿಸುವ ಫೇವರಿಟ್ ತಂಡವಾಗಿ ಶ್ರೀಲಂಕಾಗೆ ಭಾರತ ಪ್ರಯಾಣ ಕೈಗೊಳ್ಳಲಿದೆ.
ಅದ್ಭುತ ಇತಿಹಾಸ ಹೊಂದಿರುವ ಈ ಟೂರ್ನಿಯಲ್ಲಿ ಅನೇಕ ಪ್ರಮುಖ ದಾಖಲೆಗಳಿಗೆ ಭಾರತವೇ ಹೆಚ್ಚು ಪ್ರಾಬಲ್ಯ ಸಾಧಿಸಿದೆ. ಹಾಗಾದರೆ, ಏಷ್ಯಾಕಪ್ ಟೂರ್ನಿಯ ಇತಿಹಾಸದಲ್ಲಿ ಟೀಮ್ ಇಂಡಿಯಾ ದಾಖಲಿಸಿದ ಅತಿದೊಡ್ಡ 5 ದಾಖಲೆಗಳನ್ನು ಈ ಮುಂದೆ ತಿಳಿಯೋಣ.
- ಏಷ್ಯಾಕಪ್ ಇತಿಹಾಸದಲ್ಲಿ ಭಾರತದ 11 ಆಟಗಾರರು ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ಈ ಟೂರ್ನಿಯಲ್ಲಿ ಭಾರತದ ಪರ ಅಧಿಕ ಸೆಂಚುರಿ ಬಾರಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಭಾರತ ತಂಡದ ಮಾಜಿ ನಾಯಕ ಈ ಟೂರ್ನಿಯಲ್ಲಿ 3 ಶತಕ ದಾಖಲಿಸಿದ್ದಾರೆ. ಆದರೆ ಒಟ್ಟಾರೆ ಟೂರ್ನಿ ಇತಿಹಾಸದಲ್ಲಿ ಶ್ರೀಲಂಕಾದ ಸನತ್ ಜಯಸೂರ್ಯ 6 ಶತಕ ಬಾರಿಸಿದ್ದು, ಟೂರ್ನಿಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
- ಟಿ20 ಸ್ವರೂಪದ ಏಷ್ಯಾಕಪ್ನಲ್ಲಿ ಅತಿ ಹೆಚ್ಚು ಗರಿಷ್ಠ ಮೊತ್ತ ದಾಖಲಿಸಿದ ತಂಡವೆಂಬ ಹೆಗ್ಗಳಿಕೆಗೆ ಟೀಮ್ ಇಂಡಿಯಾ ಪಾತ್ರವಾಗಿದೆ. 2022ರಲ್ಲಿ ನಡೆದ ಟಿ20 ಸ್ವರೂಪದ ಏಷ್ಯಾಕಪ್ನಲ್ಲಿ ಅಫ್ಘನಿಸ್ತಾನ ಎದುರು ಭಾರತ ತಂಡ, 20 ಓವರ್‌ಗಳಿಗೆ 2 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಚೊಚ್ಚಲ ಟಿ20 ಶತಕ ಸಿಡಿಸಿದ್ದರು.
- 2012ರಲ್ಲಿ ಪಾಕಿಸ್ತಾನ ವಿರುದ್ಧ 330 ರನ್‌ಗಳ ಗುರಿಯನ್ನು ತಲುಪಿದ್ದ ಭಾರತ ತಂಡವು, ಇನ್ನೂ 13 ಎಸೆತಗಳು ಬಾಕಿ ಉಳಿಸಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಮೋಘ ಶತಕ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು.
- ಟಿ20 ಸ್ವರೂಪದ ಏಷ್ಯಾಕಪ್ನಲ್ಲಿ ಭಾರತ ತಂಡವು ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡದ ಹೆಗ್ಗಳಿಕೆಗೆ ಭಾರತವು ಪಾತ್ರವಾಗಿದೆ. ಒಟ್ಟು ಆಡಿರುವ 10 ಟಿ20 ಪಂದ್ಯಗಳಲ್ಲಿ 8ರಲ್ಲಿ ಜಯಿಸಿದೆ.
- ಏಷ್ಯಾಕಪ್ ಟೂರ್ನಿಯ ಇತಿಹಾಸದಲ್ಲಿ ಅಧಿಕ ಪ್ರಶಸ್ತಿ ಗೆದ್ದ ತಂಡ ಎಂಬ ದಾಖಲೆಯೂ ಭಾರತದ ಹೆಸರಿನಲ್ಲಿದೆ. ಇಲ್ಲಿಯವರೆಗೂ 7 ಬಾರಿ ಭಾರತ ಚಾಂಪಿಯನ್ ಆಗಿದೆ. ಇದರಲ್ಲಿ 6 ಬಾರಿ ಏಕದಿನ ಟೂರ್ನಿಯ ಪ್ರಶಸ್ತಿಗಳು ಹಾಗೂ ಒಂದು ಟಿ20 ಸ್ವರೂಪದ ಪ್ರಶಸ್ತಿ ಗೆದ್ದಿದೆ.
ಹೆಚ್ಚಿನ ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ