New Year 2025: ಅಡುಗೆ ಕಲಿಯುವ ರೆಸಲ್ಯೂಷನ್ ನಿಮ್ಮದಾಗಿದ್ದರೆ ಮೊದಲು ಅಡುಗೆ ಮನೆಯನ್ನು ಹೀಗೆ ರೆಡಿ ಮಾಡಿಕೊಳ್ಳಿ
New Year 2025: ಹೊಸ ವರ್ಷಕ್ಕೆ ಬಹಳಷ್ಟು ಜನರು ರೆಸಲ್ಯೂಷನ್ ಮಾಡುತ್ತಾರೆ. ಅದರಲ್ಲಿ ಅಡುಗೆ ಕಲಿಯಬೇಕು ಎಂಬ ಆಸೆಯೂ ಕೆಲವರಿಗೆ ಇರುತ್ತದೆ. ಆದರೆ ಅದಕ್ಕೂ ಮುನ್ನ ತಯಾರಿ ಅಗತ್ಯ. ಅಡುಗೆ ಕಲಿಯುವ ರೆಸಲ್ಯೂಷನ್ ನಿಮ್ಮದಾಗಿದ್ದರೆ ಮೊದಲು ಅಡುಗೆ ಮನೆಯನ್ನು ಹೀಗೆ ರೆಡಿ ಮಾಡಿಕೊಳ್ಳಿ.
Cooking Tips: ಪ್ರತಿದಿನ ಬೆಳಗ್ಗೆ ಆಗುತ್ತಿದ್ದಂತೆ ಇವತ್ತು ಏನು ತಿಂಡಿ ಮಾಡುವುದು, ಮಧ್ಯಾಹ್ನಕ್ಕೆ ಏನು ಅಡುಗೆ ಮಾಡುವುದು ಅನ್ನೋದು ಕೆಲವರಿಗೆ ಚಿಂತೆ ಆಗಿರುತ್ತದೆ. ಆದರೆ ಎಷ್ಟೋ ಮನೆಗಳಲ್ಲಿ ಅಮ್ಮನೋ, ಅಕ್ಕನೋ, ಅಜ್ಜಿಯೋ ಮಾಡುವ ಅಡುಗೆಯನ್ನು ತಿಂದು ಅದನ್ನು ಹೊಗಳಿ ಕೆಲಸಕ್ಕೆ ಹೋಗುವವರನ್ನು ನೋಡಿದ್ದೇವೆ. ತಾವೂ ಅಡುಗೆ ಕಲಿಯಬೇಕು ಎಂದು ಎಷ್ಟು ಪ್ರಯತ್ನಿಸಿದರೂ ಕೆಲವರಿಗೆ ಅದು ಸಾಧ್ಯವಾಗಿರುವುದಿಲ್ಲ.
ಹೊಸ ವರ್ಷ ಹತ್ತಿರ ಬಂತು. ಸಾಮಾನ್ಯವಾಗಿ ಹೊಸ ವರ್ಷ ಬರುತ್ತಿದ್ದರೆ ಬಹಳಷ್ಟು ಜನರು ನ್ಯೂ ಇಯರ್ ರೆಸಲ್ಯೂಷನ್ ಮಾಡುತ್ತಾರೆ. ಜಿಮ್‌ಗೆ ಹೋಗಬೇಕು, ಫಿಟ್ ಆಗಬೇಕು, ತೂಕ ಇಳಿಸಿಕೊಳ್ಳಬೇಕು. ಕೋಪ ಬಿಡಬೇಕು, ಧೂಮಪಾನ ತ್ಯಜಿಸಬೇಕು, ಬೆಳಗ್ಗೆ ಬೇಗ ಎದ್ದೇಳಬೇಕು, ನಮ್ಮವರಿಗೆ ಹೆಚ್ಚು ಸಮಯ ಕೊಡಬೇಕು. ಹೀಗೆ ಹೊಸ ವರ್ಷದಿಂದ ಹೊಸ ಜೀವನ ಕ್ರಮ ಅನುಸರಿಸಬೇಕು ಎಂದುಕೊಳ್ಳುತ್ತಾರೆ. ಇನ್ನೂ ಕೆಲವರು ನಾನು ಅಡುಗೆ ಕಲಿಯಬೇಕು, ರುಚಿ ರುಚಿಯಾದ ಅಡುಗೆ ಮಾಡಿ ನಮ್ಮವರಿಗೆ ಬಡಿಸಿ ಅವರನ್ನು ಇಂಪ್ರೆಸ್ ಮಾಡಬೇಕು ಎಂದುಕೊಳ್ಳುತ್ತಾರೆ. ಅಡುಗೆ ಕಲಿಯಬೇಕು ಎಂದುಕೊಂಡರೆ ಸಾಕೇ? ಅದಕ್ಕೆ ತಕ್ಕಂತೆ ತಯಾರಿ ಬೇಡವೇ? ಒಂದು ವೇಳೆ ಅಡುಗೆ ಕಲಿಯುವ ರೆಸಲ್ಯೂಷನ್ ನಿಮ್ಮದಾಗಿದ್ದರೆ ಇಲ್ಲಿ ನಿಮಗಾಗಿ ಕೆಲವೊಂದು ಟಿಪ್ಸ್ ಇದೆ, ಫಾಲೋ ಮಾಡಿ.
ಅಡುಗೆ ಆರಂಭಿಸುವ ಮುನ್ನ ತಯಾರಿ ಈ ರೀತಿ ಇರಲಿ
- ನಿಮಗೆ ಅಡುಗೆ ಬರಲಿ, ಬರದಿರಲಿ ಮೊದಲು ಅಡುಗೆ ಮನೆ ಸ್ವಚ್ಛವಾಗಿಡುವುದು ಬಹಳ ಮುಖ್ಯ, ಆದ್ದರಿಂದ ಮೊದಲು ಅಡುಗೆ ಮನೆಯನ್ನು ಶುಚಿಗೊಳಿಸಿ
- ನೀವು ಮೊದಲು ಯಾವ ರೆಸಿಪಿಯನ್ನು ಕಲಿಯಬೇಕು ಎನ್ನುವುದನ್ನು ನಿರ್ಧರಿಸಿ
- ಮೊದಲು ಬಹಳ ಸಿಂಪಲ್ ಅಡುಗೆಯಿಂದ ಅಡುಗೆ ಕಲಿಯಲು ಪ್ರಾರಂಭಿಸುವುದು ಒಳ್ಳೆಯದು. ಉದಾಹರಣೆಗೆ ಒಮ್ಮೆಲೇ ವೆಜ್ ಪಲಾವ್, ಬಿರಿಯಾನಿ ತಯಾರಿಸುವ ಮುನ್ನ ಕಾಫಿ, ಟೀ, ಅನ್ನ ಮಾಡುವುದನ್ನು ಕಲಿಯಿರಿ.
- ಯಾವ ಅಡುಗೆಯನ್ನು ಮಾಡಬೇಕೆಂದು ನಿರ್ಧರಿಸಿದ ನಂತರ ಅದಕ್ಕೆ ಬೇಕಾಗಿರುವ ಸಾಮಗ್ರಿಗಳನ್ನು ಒಂದು ಕಡೆ ಜೋಡಿಸಿಕೊಳ್ಳಿ, ಮನೆಯಲ್ಲಿ ಇಲ್ಲದಿದ್ದರೆ ಅಂಗಡಿಯಿಂದ ಕೊಂಡು ತನ್ನಿ.
- ನೀವು ಮಾಡಬೇಕೆಂದುಕೊಂಡಿರುವ ರೆಸಿಪಿಯನ್ನು ತಿಳಿದಿರುವವರಿಂದ ಕೇಳಿ ಹಂತಹಂತವಾಗಿ ಬರೆದುಕೊಳ್ಳಿ.
- ಒಂದೇ ಬಾರಿ 5-6 ಮಂದಿಗೆ ಅಡುಗೆ ಮಾಡುವ ಬದಲಿಗೆ ಒದಲು ಒಬ್ಬರಿಗೆ ಅಥವಾ ಇಬ್ಬರಿಗೆ ಮಾತ್ರ ಅಡುಗೆ ತಯಾರಿಸಿ, ಹೆಚ್ಚು ಪ್ರಮಾಣದಲ್ಲಿ ತಯಾರಿಸಿ ಅಡುಗೆ ಚೆನ್ನಾಗಿಲ್ಲದಿದ್ದರೆ ವ್ಯರ್ಥವಾಗುತ್ತದೆ.
- ನೀವು ಮಾಡುವ ಅಡುಗೆಗೆ ತಕ್ಕಂತೆ ಪಾತ್ರೆಯನ್ನು ಆರಿಸಿಕೊಳ್ಳಿ. ಕಡಿಮೆ ಅಡುಗೆ ಮಾಡುವಾಗ ದೊಡ್ಡ ಪಾತ್ರೆಯ ಅಗತ್ಯವಿರುವುದಿಲ್ಲ.
ಇದನ್ನೂ ಓದಿ: ಎಳೆ ರಂಗೋಲಿ, ನವಿಲು ರಂಗೋಲಿ; ಹೊಸ ವರ್ಷಕ್ಕೆ ಮನೆ ಮುಂದೆ ಸುಂದರ ರಂಗೋಲಿ ಬಿಡಿಸಲು ಇಲ್ಲಿವೆ ಐಡಿಯಾಗಳು
- ಸ್ಟೌವ್ ಹಚ್ಚುವಾಗ ಎಚ್ಚರಿಕೆಯಿಂದಿರಿ, ನಿಮಗೆ ಹಚ್ಚಲು ಬಾರದಿದ್ದರೆ ಮೊದಲು ನಿಮ್ಮ ತಾಯಿಯಿಂದಲೋ, ತಿಳಿದವರಿಂದಲೋ ಕೇಳಿ ಕಲಿತುಕೊಳ್ಳಿ.
- ಚೆನ್ನಾಗಿ ಅಡುಗೆ ಮಾಡುವವರು ನಿಮ್ಮ ಜೊತೆ ಇದ್ದರೆ ಅನುಕೂಲ, ನೀವು ತಪ್ಪು ಮಾಡಿದರೆ ಅವರಿಂದ ಕೇಳಿ ತಿಳಿದುಕೊಳ್ಳಬಹುದು.
- ಪಾತ್ರೆಯನ್ನು ಹಿಡಿದುಕೊಳ್ಳಲು ಸೂಕ್ತವಾದ ಬಟ್ಟೆ ಅಥವಾ ಹಿಕ್ಕಳವನ್ನು ಪಕ್ಕದಲ್ಲೇ ಇಡುವುದನ್ನು ಮರೆಯಬೇಡಿ.
- ಒಗ್ಗರಣೆ ಅಥವಾ ಕರಿಯುವ ಅಡುಗೆ ಮಾಡುತ್ತಿದ್ದರೆ ಆದಷ್ಟು ಸ್ಟೌವ್‌ನಿಂದ ದೂರವೇ ಇರಿ.
- ನಿಮಗೆ ಖುಷಿ ಎನಿಸಿದರೆ ಅಡುಗೆ ಮನೆಯಲ್ಲಿ ನಿಮಗಿಷ್ಟವಾದ ಲಘು ಸಂಗೀತವನ್ನು ಟ್ಯೂನ್ ಮಾಡಿ ಇಡಿ.
- ಒಮ್ಮೆ ಮಾಡಿದ ಅಡುಗೆಯನ್ನು ನಿಮಗೆ ಪರ್ಫೆಕ್ಟ್ ಆಗುವವರೆಗೂ ಪದೇ ಪದೆ ತಯಾರಿಸಿ ಅಭ್ಯಾಸ ಮಾಡಿ.
ಇವಿಷ್ಟೂ ಕ್ರಮ ಅನುಸರಿಸಿದರೆ 2026, ಮತ್ತೊಂದು ಹೊಸ ವರ್ಷ ಬರುವಷ್ಟರಲ್ಲಿ ನೀವು ಕುಕಿಂಗ್ ಎಕ್ಸ್‌ಪರ್ಟ್ ಆಗುವುದರಲ್ಲಿ ಅನುಮಾನವೇ ಇಲ್ಲ.