ಈ ಪ್ರದರ್ಶನ ನನ್ನ ಅಮ್ಮ ಮತ್ತು ಸಮೈರಾಗೆ ಅರ್ಪಣೆ; ಅರ್ಧಶತಕ ಸಿಡಿಸಿ ತಾಯಿ ನೆನೆದ ತಿಲಕ್ ವರ್ಮಾ
Asian Games 2023, Tilak Varma: ಏಷ್ಯನ್ ಗೇಮ್ಸ್ ಕ್ರಿಕೆಟ್ನ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಅರ್ಧಶತಕ ಸಿಡಿಸಿ, ಭಾರತ ತಂಡದ ಗೆಲುವಿಗೆ ಕಾಣಿಕೆ ನೀಡಿದ ತಿಲಕ್ ವರ್ಮಾ, ತನ್ನ ಅದ್ಬುತ ಪ್ರದರ್ಶನವನ್ನು ತಾಯಿಗೆ ಅರ್ಪಿಸಿದ್ದಾರೆ.
ಏಷ್ಯನ್ ಗೇಮ್ಸ್ ಕ್ರಿಕೆಟ್ನಲ್ಲಿ (Asian Games Cricket) ಇದೇ ಮೊದಲ ಬಾರಿಗೆ ಭಾಗವಹಿಸಿದ ಭಾರತ ತಂಡವು, ಚೊಚ್ಚಲ ಅವಕಾಶದಲ್ಲೇ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಅಬ್ಬರಿಸಿದ ಭಾರತ ತಂಡ (India vs Bangladesh), 9 ವಿಕೆಟ್ಗಳಿಂದ ಗೆದ್ದು ಚಿನ್ನದ ಪದಕ ಪಂದ್ಯಕ್ಕೆ ಅರ್ಹತೆ ಪಡೆದಿದೆ. ಇದರೊಂದಿಗೆ ಭಾರತಕ್ಕೆ ಪದಕವೊಂದನ್ನು ಖಚಿತಪಡಿಸಿದೆ.
ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಅಬ್ಬರದ ಪ್ರದರ್ಶನ ನೀಡಿದ ಋತುರಾಜ್ ಗಾಯಕ್ವಾಡ್ (Ruturaj Gaikwad) ಪಡೆ, ಅಧಿಕಾರಯುತ ಗೆಲುವು ಸಾಧಿಸಿತು. ಅದರಲ್ಲೂ ಆಲ್ರೌಂಡರ್ ತಿಲಕ್ ವರ್ಮಾ (Tilak Varma) ಆರ್ಭಟ ಎಲ್ಲರ ಗಮನ ಸೆಳೆಯಿತು. ಬೌಲಿಂಗ್ನಲ್ಲಿ 1 ವಿಕೆಟ್ ಉರುಳಿಸಿದ ತಿಲಕ್, ಬ್ಯಾಟಿಂಗ್ನಲ್ಲಿ ಅರ್ಧಶತಕ (55) ಸಿಡಿಸಿ ಮಿಂಚಿದರು. ತಂಡದ ಗೆಲುವಿಗೆ ಕಾಣಿಕೆ ನೀಡಿದ ತಿಲಕ್ ವರ್ಮಾ, ತನ್ನ ಅದ್ಬುತ ಪ್ರದರ್ಶನವನ್ನು ತಾಯಿಗೆ ಅರ್ಪಿಸಿದ್ದಾರೆ.
ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾ, ಭಾರತದ ಬೌಲರ್ಗಳ ಎದುರು ತತ್ತರಿಸಿತು. ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿತು. ಜಾಕರ್ ಅಲಿ (24), ಪರ್ವೈಜ್ ಹೊಸೈನ್ ಎಮೋನ್ (23) ತಂಡದ ಪರ ಗರಿಷ್ಠ ಸ್ಕೋರರ್. ಸಾಯಿ ಕಿಶೋರ್ 3 ವಿಕೆಟ್, ವಾಷಿಂಗ್ಟನ್ ಸುಂದರ್ 2 ವಿಕೆಟ್, ಆರ್ಷ್ದೀಪ್, ತಿಲಕ್ ವರ್ಮಾ, ರವಿ ಬಿಷ್ಣೋಯ್, ಶಹಬಾಜ್ ಅಹ್ಮದ್ ತಲಾ 1 ವಿಕೆಟ್ ಕಬಳಿಸಿದರು.
ತಿಲಕ್ ವರ್ಮಾ ಅರ್ಧಶತಕ
ಈ ಸಾಧಾರಣ ಗುರಿ ಬೆನ್ನತ್ತಿದ ಭಾರತ 9.2 ಓವರ್ಗಳಲ್ಲಿ ಜಯದ ನಗೆ ಬೀರಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಈ ಪಂದ್ಯದಲ್ಲಿ ಡಕೌಟ್ ಆದರು. ಬಳಿಕ ಕಣಕ್ಕಿಳಿದ ತಿಲಕ್ ವರ್ಮಾ ಆರ್ಭಟಿಸಿದರು. 26 ಎಸೆತಗಳಲ್ಲಿ 6 ಸಿಕ್ಸರ್, 2 ಬೌಂಡರಿ ಸಹಿತ ಅಜೇಯ 55 ರನ್ ಚಚ್ಚಿದರು. 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ತಿಲಕ್ ವರ್ಮಾ, ಸಂಭ್ರಮಿಸಿದರು. ಇದೇ ವೇಳೆ ತಾಯಿ ಗಾಯತ್ರಿ ದೇವಿ ಅವರಿಗೆ ಈ ಅರ್ಧಶತಕವನ್ನು ಅರ್ಪಿಸಿದರು.
ತಾಯಿಗೆ ಅರ್ಧಶತಕ ಅರ್ಪಿಸಿದ ತಿಲಕ್
ತಿಲಕ್ ವರ್ಮಾ ಅರ್ಧಶತಕ ಸಿಡಿಸಿದ ಬೆನ್ನಲ್ಲೇ ತಾಯಿಗೆ ಅರ್ಪಿಸಿದರು. ತಾಯಿ ಚಿತ್ರದ ಟ್ಯಾಟ್ಯೂವನ್ನು ತಮ್ಮ ದೇಹದಲ್ಲಿ ಹಾಕಿಸಿಕೊಂಡಿದ್ದಾರೆ. ಅರ್ಧಶತಕದ ಬೆನ್ನಲ್ಲೇ ತಿಲಕ್ ತನ್ನ ಜೆರ್ಸಿಯನ್ನು ಮೇಲೆತ್ತಿ ತಾಯಿಯ ಚಿತ್ರವನ್ನು ಮುಟ್ಟುವುದರ ಜೊತೆಗೆ ಆಕಾಶಕ್ಕೆ ತಲೆ ಎತ್ತಿಕೈ ಮುಗಿದರು. ಈ ಮೂಲಕ ತಿಲಕ್ ತಮ್ಮ ಅದ್ಭುತ ಪ್ರದರ್ಶನವನ್ನು ತಾಯಿಗೆ ಸಮರ್ಪಿಸಿದರು.
ರೋಹಿತ್ ಶರ್ಮಾ ಪುತ್ರಿಗೂ ಅರ್ಪಣೆ
ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ತಿಲಕ್ ವರ್ಮಾ, ಈ ಅತ್ಯುತ್ತಮ ಪ್ರದರ್ಶನವನ್ನು ನನ್ನ ತಾಯಿಗೆ ಅರ್ಪಿಸಿದ್ದೇನೆ ಎಂದಿದ್ದಾರೆ. ಹಲವು ದಿನಗಳಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಗಿರಲಿಲ್ಲ. ಈಗ ಉತ್ತಮ ಪ್ರದರ್ಶನ ನೀಡಿದ್ದೇನೆ. ನನ್ನ ತಾಯಿಯ ಬೆಂಬಲದಿಂದಲೇ ಇದೆಲ್ಲವೂ ಸಾಧ್ಯ. ಈ ಕಾರಣಕ್ಕೆ ಅವರಿಗೆ ಅರ್ಧಶತಕವನ್ನು ಅರ್ಪಿಸುತ್ತೇನೆ. ಇದೇ ವೇಳೆ ತಿಲಕ್ ವರ್ಮಾ ರೋಹಿತ್ ಶರ್ಮಾ ಅವರ ಮಗಳು ಸಮೈರಾಗೂ ಈ ಅರ್ಧಶತಕವನ್ನು ಅರ್ಪಿಸಿದ್ದಾರೆ.