ವಿಜಯ್ ಹಜಾರೆ ಟ್ರೋಫಿ ನಾಕೌಟ್ ಪಂದ್ಯಗಳ ವೇಳಾಪಟ್ಟಿ; ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕಕ್ಕೆ ವಿದರ್ಭ ಎದುರಾಳಿ
ಕನ್ನಡ ಸುದ್ದಿ  /  ಕ್ರೀಡೆ  /  ವಿಜಯ್ ಹಜಾರೆ ಟ್ರೋಫಿ ನಾಕೌಟ್ ಪಂದ್ಯಗಳ ವೇಳಾಪಟ್ಟಿ; ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕಕ್ಕೆ ವಿದರ್ಭ ಎದುರಾಳಿ

ವಿಜಯ್ ಹಜಾರೆ ಟ್ರೋಫಿ ನಾಕೌಟ್ ಪಂದ್ಯಗಳ ವೇಳಾಪಟ್ಟಿ; ಕ್ವಾರ್ಟರ್‌ ಫೈನಲ್‌ನಲ್ಲಿ ಕರ್ನಾಟಕಕ್ಕೆ ವಿದರ್ಭ ಎದುರಾಳಿ

Vijay Hazare Trophy 2023: ಡಿಸೆಂಬರ್‌ 11ರಂದು ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ 2023ರ ಮೂರನೇ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮಯಾಂಕ್‌ ಅಗರ್ವಾಲ್‌ ನೇತೃತ್ವದ ಕರ್ನಾಟಕ ತಂಡವು ವಿದರ್ಭ ತಂಡವನ್ನು ಎದುರಿಸಲಿದೆ.

ವಿಜಯ್ ಹಜಾರೆ ಟ್ರೋಫಿ 2023 ನಾಕೌಟ್‌ ಹಂತದ ವೇಳಾಪಟ್ಟಿ
ವಿಜಯ್ ಹಜಾರೆ ಟ್ರೋಫಿ 2023 ನಾಕೌಟ್‌ ಹಂತದ ವೇಳಾಪಟ್ಟಿ

ವಿಜಯ್ ಹಜಾರೆ ಟ್ರೋಫಿ 2023 (Vijay Hazare Trophy 2023) ಬಹುತೇಕ ಅಂತಿಮ ಹಂತದತ್ತ ಬಂದಿದೆ. ಡಿಸೆಂಬರ್‌ 11ರಂದು ಕ್ವಾರ್ಟರ್‌ ಫೈನಲ್‌ ಪಂದ್ಯಗಳು ನಡೆಯಲಿದ್ದು, ಅದಕ್ಕೂ ಮುನ್ನ ಡಿಸೆಂಬರ್‌ 9ರಂದು ಪ್ರಿ ಕಾರ್ಟರ್‌ ಹಂತದ ಎರಡು ಪಂದ್ಯಗಳು ನಡೆಯಲಿವೆ.

ಅಹಮದಾಬಾದ್‌ನಲ್ಲಿ ಮಂಗಳವಾರ ನಡೆದ ವಿಜಯ್ ಹಜಾರೆ ಟ್ರೋಫಿಯ ಅಂತಿಮ ಲೀಗ್ ಪಂದ್ಯದಲ್ಲಿ ಮಿಜೋರಾಂ ವಿರುದ್ಧ 6 ವಿಕೆಟ್‌ಗಳ ಅಂತರದಿಂದ ಗೆಲ್ಲುವುದರೊಂದಿಗೆ ಕರ್ನಾಟಕ ತಂಡ ನಾಕೌಟ್‌ ಹಂತಕ್ಕೆ ಅರ್ಹತೆ ಪಡೆದಿದೆ. ಸದ್ಯ ಸಿ ಗುಂಪಿನಲ್ಲಿರುವ ರಾಜ್ಯ ತಂಡವು ಆಡಿದ 7 ಪಂದ್ಯಗಳಲ್ಲಿ 6ರಲ್ಲಿ ಗೆದ್ದು ಒಟ್ಟು 24 ಅಂಕಗಳನ್ನು ಸಂಪಾದಿಸಿದೆ. ಆ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಆಡಿದ ಎಲ್ಲಾ ಏಳು ಪಂದ್ಯಗಳಲ್ಲಿ ಗೆದ್ದಿರುವ ಹರಿಯಾಣ ಅಗ್ರಸ್ಥಾನದಲ್ಲಿದೆ.

ಮುಂದೆ ಡಿಸೆಂಬರ್‌ 11ರಂದು ನಡೆಯಲಿರುವ ಮೂರನೇ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮಯಾಂಕ್‌ ಅಗರ್ವಾಲ್‌ ನೇತೃತ್ವದ ಕರ್ನಾಟಕ ತಂಡವು ವಿದರ್ಭ ತಂಡವನ್ನು ಎದುರಿಸಲಿದೆ. ಅತ್ತ ಗ್ರೂಪ್‌ ಬಿಯಲ್ಲಿರುವ ವಿದರ್ಭ ತಂಡವು ಆಡಿದ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಹಾಕಿದೆ.

ಡಿಸೆಂಬರ್ 9 ರಿಂದ ನಾಕೌಟ್‌ ಪಂದ್ಯಗಳು

ವಿಜಯ್ ಹಜಾರೆ ಟ್ರೋಫಿಯ ನಾಕೌಟ್ ಹಂತದ ಪಂದ್ಯಗಳು ಡಿಸೆಂಬರ್ 9 ರಿಂದ 16ರವರೆಗೆ ನಡೆಯಲಿದೆ. ಎಲ್ಲಾ ಪಂದ್ಯಗಳಿಗೆ ರಾಜ್‌ಕೋಟ್‌ ಆತಿಥ್ಯ ವಹಿಸಲಿದೆ. ಡಿಸೆಂಬರ್ 5ರಂದು ಗುಂಪು ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು, ಸದ್ಯ 10 ತಂಡಗಳು ಮಾತ್ರ ನಾಕೌಟ್ ಹಂತವನ್ನು ಪ್ರವೇಶಿಸಿದೆ. ಇದರಲ್ಲಿ 8 ತಂಡಗಳು ಕ್ವಾರ್ಟರ್‌ ಫೈನಲ್‌ ಆಡುತ್ತಿವೆ. ಇದರಲ್ಲಿ ಕರ್ನಾಟಕ ತಂಡ ಕೂಡಾ ಒಂದು.

ಕ್ವಾರ್ಟರ್‌ ಫೈನಲ್‌ ಆಡಲಿರುವ ಒಟ್ಟು 8 ತಂಡಗಳಲ್ಲಿ ಆರು ತಂಡಗಳು ಈಗಾಗಲೇ ಅಂತಿಮವಾಗಿವೆ. ಉಳಿದ ಎರಡು ಸ್ಥಾನಗಳಿಗಾಗಿ ಕೇರಳ ಮತ್ತು ಮಹಾರಾಷ್ಟ್ರ, ಗುಜರಾತ್ ಮತ್ತು ಬಂಗಾಳ ತಂಡಗಳು ಪ್ರಿ ಕ್ವಾರ್ಟರ್‌ಫೈನಲ್‌ನಲ್ಲಿ ಹೋರಾಡಲಿದೆ. ಇಲ್ಲಿ ಗೆಲ್ಲುವ ತಂಡಗಳು ನೇರವಾಗಿ ಕ್ವಾರ್ಟರ್‌ ಫೈನಲ್‌ ಅಡಲಿವೆ. ಮುಂಬೈ, ತಮಿಳುನಾಡು, ಹರಿಯಾಣ, ರಾಜಸ್ಥಾನ, ವಿದರ್ಭ ಮತ್ತು ಕರ್ನಾಟಕ ಈಗಾಗಲೇ ಡಿಸೆಂಬರ್ 11ರಿಂದ ಪ್ರಾರಂಭವಾಗುವ ಕ್ವಾರ್ಟರ್‌ಫೈನಲ್‌ನಲ್ಲಿ ತಮ್ಮ ಸ್ಥಾನ ಕಾಯ್ದಿರಿಸಿವೆ.

ಡಿಸೆಂಬರ್ 13 ಮತ್ತು 14ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಡಿಸೆಂಬರ್ 16ರಂದು ಫೈನಲ್‌ ಪಂದ್ಯ ನಡೆಯಲಿದೆ.

ನಾಕೌಟ್ ಹಂತದ ಸಂಪೂರ್ಣ ವೇಳಾಪಟ್ಟಿ ಹೀಗಿದೆ

  • ಡಿಸೆಂಬರ್ 9, ಪ್ರಿ ಕ್ವಾರ್ಟರ್‌ ಫೈನಲ್‌ 1: ಬಂಗಾಳ vs ಗುಜರಾತ್ (ರಾಜ್‌ಕೋಟ್)
  • ಡಿಸೆಂಬರ್ 9, ಪ್ರಿ ಕ್ವಾರ್ಟರ್‌ ಫೈನಲ್‌ 2: ಕೇರಳ vs ಮಹಾರಾಷ್ಟ್ರ (ರಾಜ್‌ಕೋಟ್)
  • ಡಿಸೆಂಬರ್ 11, ಕ್ವಾರ್ಟರ್‌ ಫೈನಲ್‌ 1: ಹರಿಯಾಣ vs PQF 2ರ ವಿಜೇತ (ರಾಜ್‌ಕೋಟ್)
  • ಡಿಸೆಂಬರ್ 11, ಕ್ವಾರ್ಟರ್‌ಫೈನಲ್‌ 2: ರಾಜಸ್ಥಾನ vs PQF 1ರ ವಿಜೇತ (ರಾಜ್‌ಕೋಟ್)
  • ಡಿಸೆಂಬರ್ 11, ಕ್ವಾರ್ಟರ್‌ಫೈನಲ್‌ 3: ವಿದರ್ಭ vs ಕರ್ನಾಟಕ (ರಾಜ್‌ಕೋಟ್),
  • ಡಿಸೆಂಬರ್ 11, ಕ್ವಾರ್ಟರ್‌ಫೈನಲ್‌ 4: ಮುಂಬೈ vs ತಮಿಳುನಾಡು -(ರಾಜ್‌ಕೋಟ್)
  • ಡಿಸೆಂಬರ್ 13 ಸೆಮಿಫೈನಲ್‌ 1: QF 1ರ ವಿಜೇತರು vs QF 4ರ ವಿಜೇತರು (ರಾಜ್‌ಕೋಟ್)
  • ಡಿಸೆಂಬರ್ 14 ಸೆಮಿಫೈನಲ್‌ 2: QF 2 ವಿಜೇತ vs QF 3 ವಿಜೇತ -(ರಾಜ್‌ಕೋಟ್)
  • ಡಿಸೆಂಬರ್ 16, ಫೈನಲ್: SF 1 ವಿಜೇತ vs SF 2 ವಿಜೇತ - SCA ಕ್ರೀಡಾಂಗಣ (ರಾಜ್‌ಕೋಟ್)

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.