ಇಂದು ಇರುವ ಹೊಟ್ಟೆಕಿಚ್ಚು ಅಮೃತವರ್ಷಿಣಿ ಧಾರಾವಾಹಿ ಟೈಮ್‌ನಲ್ಲಿ ಇರಲಿಲ್ಲ; ಅಮೃತಧಾರೆ ನಟಿ ಸ್ವಾತಿ ರಾಯಲ್ ಸಂದರ್ಶನ
Amruthdhaare Serial Actress: ಸಂದರ್ಶನ - ಪದ್ಮಶ್ರೀ ಭಟ್ ಹದಿಮೂರು ವರ್ಷಗಳ ಹಿಂದೆ ಕನ್ನಡ ಕಿರುತೆರೆಗೆ ಕಾಲಿಟ್ಟ ನಟಿ ಸ್ವಾತಿ ರಾಯಲ್ ಅವರು ಅಮೃತವರ್ಷಿಣಿ ಧಾರಾವಾಹಿಯ ವರ್ಷಾ ಎಂದೇ ಖ್ಯಾತಿ ಪಡೆದಿದ್ದಾರೆ. ಸ್ವಾತಿ ರಾಯಲ್ ಇಷ್ಟು ವರ್ಷದ ನಟನಾ ಜರ್ನಿ, ಅಮೃತವರ್ಷಿಣಿಯ ದಿನಗಳನ್ನು ಮೆಲುಕು ಹಾಕಿದ್ದಾರೆ.
Swathi Royal Interview: ಕನ್ನಡ ಕಿರುತೆರೆಯಲ್ಲಿ ಅಮೃತವರ್ಷಿಣಿ ಸೂಪರ್ ಹಿಟ್ ಮೆಗಾ ಸೀರಿಯಲ್ ಆಗಿ ಮನೆಮಾತಾಗಿದೆ. ಆ ಧಾರಾವಾಹಿಯಲ್ಲಿ ವರ್ಷಾ ಪಾತ್ರದಲ್ಲಿ ನಟಿ ಸ್ವಾತಿ ರಾಯಲ್ ಅವರು ಅಭಿನಯಿಸಿದ್ದರು. ಆ ಸೀರಿಯಲ್‌ನಲ್ಲಿ ವಿಲನ್ ಪಾತ್ರ ಮಾಡ್ತಿದ್ದ ಸ್ವಾತಿ ಇಂದು ಅಮೃತಧಾರೆ ಧಾರಾವಾಹಿಯಲ್ಲಿ ಅಪರ್ಣಾ ಪಾತ್ರ ಮಾಡುತ್ತಿದ್ದಾರೆ. ಸ್ವಾತಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.
ಪ್ರ: ಸ್ವಾತಿ ಅನ್ನೋ ಹೆಸರಿನ ಮುಂದೆ ರಾಯಲ್ ಅಂತಿದೆ, ಏನದು?
ಉ: ಒಳ್ಳೆಯ ಹೆಸರು ಇಟ್ಕೊಂಡರೆ ಕೊನೇವರೆಗೂ ಆ ಹೆಸರು ಇರುತ್ತದೆ ಅಂತ ಹೇಳ್ತಾರೆ. ನನ್ನ ಕಸಿನ್ಸ್ ಎಲ್ಲರೂ ಸೇರಿಕೊಂಡು ರಾಯಲ್ ಅಂತ ಇಟ್ಟುಕೊಂಡರು. ನಾನೂ ಹಾಗೆಯೇ ಇಟ್ಟುಕೊಂಡಿದ್ದೇನೆ. ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ರಾಯಲ್ ಇದೆ ಹೊರತು ಆಧಾರ್ ಕಾರ್ಡ್, ಪಾನ್ ಕಾರ್ಡ್ ಅಲ್ಲಿ ಇಲ್ಲ.
ಪ್ರ: ಮೂಲತಃ ಎಲ್ಲಿಯವರು?
ಉ: ನಾವು ಆಂಧ್ರಪ್ರದೇಶದವರು. ಒಂದಷ್ಟು ವರ್ಷಗಳ ಹಿಂದೆ ಅಪ್ಪ ಬೆಂಗಳೂರಿಗೆ ಬಂದು ನೆಲೆಸಿದರು, ನಾವು ಇಲ್ಲಿಯೇ ಬೆಳೆದೆವು, ನಮಗೆ ಕನ್ನಡ ಅಂದ್ರೆ ತುಂಬ ಇಷ್ಟ, ಹೀಗಾಗಿ ಕನ್ನಡ ಧಾರಾವಾಹಿಗಳಲ್ಲಿ ನಟಿಸುತ್ತಿದ್ದೇನೆ. ವರ್ಷಕ್ಕೊಮ್ಮೆ ಆಂಧ್ರದಲ್ಲಿ ಸೇರಿ ಅಲ್ಲಿ ಪೂಜೆ ಮಾಡುತ್ತೇವೆ. ಎಲ್ಲೇ ಹೋದರೂ ಕೂಡ ನಮ್ಮೂರು ನಮ್ಮೂರೇ ಅಲ್ವಾ? ಹಾಗಾಗಿ ಬೆಂಗಳೂರು ಮಿಸ್ ಮಾಡಿಕೊಳ್ತೀವಿ, ಮತ್ತೆ ಇಲ್ಲಿಗೆ ಬರ್ತೀವಿ.
ಪ್ರ: ಅಪ್ಪ ಹೇಗೆ, ಅಮ್ಮ ಏನ್ಮಾಡ್ತಾರೆ?
ಉ: ನನ್ನ ತಂದೆ ಬಿಜಿನೆಸ್‌ಮನ್. ತಾಯಿ ಟೀಚರ್. ತಂಗಿಗೆ ಮದುವೆಯಾಗಿ ವಿದೇಶದಲ್ಲಿದ್ದಾಳೆ. ತಂದೆ ತುಂಬ ಸಾಫ್ಟ್ ಸ್ವಭಾವದವರು, ಅವರಿಗೆ ಉದ್ಯಮ ಅಷ್ಟು ಕೈಹಿಡಿಯಲಿಲ್ಲ. ನಾನು ಜಾಸ್ತಿ ಮಾತನಾಡೋದಿಲ್ಲ, ನನ್ನ ತಂಗಿ ಇನ್ನೂ ಕಮ್ಮಿ ಮಾತಾಡ್ತಾಳೆ. ನನ್ನ ತಾಯಿ ತುಂಬ ಸ್ಟ್ರಿಕ್ಟ್, ಶಾಲೆಯಲ್ಲಿ ಟೀಚರ್ ಮಗಳು ಅನ್ನೋದು ನನಗೆ ವರದಾನ ಆಗಿದ್ದೂ ಇದೆ.
ಪ್ರ: ನಿಮ್ಮ ವಿದ್ಯಾರ್ಹತೆ ಏನು?
ಉ: ಬಿಬಿಎಂ ಮುಗಿಸಿ, ಕೆಲಸಕ್ಕೆ ಸೇರಿಕೊಂಡೆ, ದೂರಶಿಕ್ಷಣದ ಮೂಲಕ ಎಂಬಿಎ ಮಾಡಿದೆ. ಅಪ್ಪನ ಉದ್ಯಮ ನಷ್ಟದಲ್ಲಿತ್ತು, ನಾನು ಹಿರಿಯ ಮಗಳಾಗಿದ್ದೆ. ಹೀಗಾಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಲು ಆರಂಭಿಸಿದೆ. ಅದೇ ಟೈಮ್‌ನಲ್ಲಿ ಕ್ಲಾಸ್‌ಮೇಟ್ಸ್ ಸೀರಿಯಲ್‌ನಲ್ಲಿ ನಟಿಸಲು ಆರಂಭಿಸಿದೆ. ಡೈರೆಕ್ಟರ್ ಶಿವಮಣಿ ಅವರು ಚಿತ್ರರಂಗದಲ್ಲಿ ಎಲ್ಲ ಟೈಮ್‌ನಲ್ಲಿ ಕೆಲಸ ಸಿಗತ್ತೆ ಅಂತ ಹೇಳೋಕೆ ಆಗಲ್ಲ, ಕಂಪನಿ ಕೆಲಸ ಬಿಡಬೇಡಿ, ಆ ಕೆಲಸ ಮುಗಿಸಿ, ಶೂಟಿಂಗ್‌ಗೆ ಬನ್ನಿ ಅಂತ ಹೇಳಿದ್ದರು. ಅವರ ಸಹಕಾರದಿಂದ ಇಲ್ಲಿಯವರೆಗೆ ಒಂದಾದ ಮೇಲೆ ಒಂದರಂತೆ ಧಾರಾವಾಹಿಗಳು ಸಿಗುತ್ತಿವೆ.
ಪ್ರ: ಕೆಲಸ ಮತ್ತು ಸೀರಿಯಲ್ ಎರಡನ್ನೂ ಹೇಗೆ ನಿರ್ವಹಿಸಿದ್ರಿ
ಉ: ರಜೆಗಳು ಸಿಗೋದು ಕಷ್ಟ. ಸೀರಿಯಲ್ ಬ್ಯಾಂಕಿಂಗ್ ಇಲ್ಲದೆ ಇದ್ದಾಗ ನಿರಂತರವಾಗಿ ಶೂಟಿಂಗ್ ಮಾಡಬೇಕಾಗುತ್ತದೆ. ಮನೆಯೊಂದು ಮೂರು ಬಾಗಿಲು ಧಾರಾವಾಹಿಯಲ್ಲಿ ಸಣ್ಣ ಪಾತ್ರ ಸಿಕ್ಕಿತ್ತು. ಆಮೇಲೆ ಪಡುವಾರಳ್ಳಿ ಪಡ್ಡೆಗಳು ನಂತರ ತೆಲುಗಿನಲ್ಲಿಯೂ ನಟಿಸಿದೆ. ಆಮೇಲೆ ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಟಿಸಿದೆ.
ಪ್ರ: ಅಮೃತವರ್ಷಿಣಿ ಧಾರಾವಾಹಿ ಶೂಟಿಂಗ್ ದಿನಗಳು ಈಗಲೂ ನೆನಪಾಗುತ್ವಾ?
ಉ: ಹೇಮಾ ಚೌಧರಿ, ರಜನಿ, ರಕ್ಷಿತ್ ಅವರ ಜೊತೆ ʼಅಮೃತವರ್ಷಿಣಿʼ ಧಾರಾವಾಹಿಯಲ್ಲಿ ನಟಿಸಿದೆ. ಆ ಸೀರಿಯಲ್ ಪ್ರಸಾರ ನಿಲ್ಲಿಸಿ ಎಂಟು ವರ್ಷ ಆಗಿವೆ. ಆ ಧಾರಾವಾಹಿ ನೋಡಿದವರು ಇವತ್ತು ಕೂಡ ಸಿಕ್ಕಿದಾಗ ವರ್ಷಾ ಅಂತ ಕರೆಯುತ್ತಾರೆ. ಹಳ್ಳಿಯ ಕಡೆ ಶೂಟಿಂಗ್ ನಡೆಯುವಾಗ ಕೆಲವರಂತೂ ನನಗೆ, ನನ್ನ ತಾಯಿ ಪಾತ್ರ ಮಾಡಿದವರಿಗೆ ಬಾಯಿಗೆ ಬಂದಹಾಗೆ ಬೈಯ್ಯುತ್ತಿದ್ದರು. ನಿಜಕ್ಕೂ ಅಂದಿನ ಶೂಟಿಂಗ್ ದಿನಗಳು ತುಂಬ ಚೆನ್ನಾಗಿದ್ದವು.
ನಾವು ಕಿಶೋರಿ ಅಮ್ಮ ಅವರಿಂದ ತುಂಬ ಕಲಿತಿದ್ದೇವೆ, ಆ ವಯಸ್ಸಿನಲ್ಲಿಯೂ ಕೂಡ ಅವರು ಅವರ ಕೆಲಸವನ್ನೇ ಅವರೇ ಮಾಡಿಕೊಳ್ತಿದ್ದರು. ಸೆಟ್‌ನಲ್ಲಿದ್ದಾಗ ನಾವು ಸಹಾಯ ಮಾಡ್ತೀವಿ ಅಂದಾಗಲೂ ಕೂಡ ಅವರು ರೆಡಿ ಇರಲಿಲ್ಲ. ಹೇಮಾಚೌಧರಿ ಅಮ್ಮಂಗೆ ಅನಾರೋಗ್ಯ ಆದಾಗ ತುಂಬ ಬೇಸರ ಆಯ್ತು, ಆಮೇಲೆ ನಾವು ಅವರ ಮನೆಗೆ ಹೋಗಿ ಒಂದಷ್ಟು ಸಮಯ ಕಳೆದೆವು. ನನ್ನ ಪತಿ ಅನಿಲ್ ಕೂಡ ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇಂದು ಇರುವ ಹೊಟ್ಟೆಉರಿ, ಹೊಟ್ಟೆಕಿಚ್ಚು ಅಮೃತವರ್ಷಿಣಿ ಟೈಮ್‌ನಲ್ಲಿ ಇರುತ್ತಿರಲಿಲ್ಲ. ಅಂದು ಆರೋಗ್ಯಕರ ವಾತಾವರಣ ಇದ್ದು, ಎಲ್ಲರೂ ಮಾತಾಡುತ್ತ ನಗುತ್ತಿದ್ದರು. ಒಳ್ಳೆಯ ಬಾಂಧವ್ಯ ಇತ್ತು. ಈಗ ಒಬ್ಬೊಬ್ಬರು ಒಂದೊಂದು ಥರ ಇದ್ದಾರೆ, ಎಲ್ಲರ ವ್ಯಕ್ತಿತ್ವವೂ ವಿಭಿನ್ನವಾಗಿದೆ.
(ಸಂದರ್ಶನ: ಪದ್ಮಶ್ರಿ ಭಟ್, ಪಂಚಮಿ ಟಾಕ್ಸ್)