ವಿಶ್ವಕಪ್ ಗೆಲ್ಲಲು ವಿರಾಟ್ ಶಪಥ; ಭಾರತ ಫೈನಲ್ಗೆ ಬಂದರೂ ಸೋಷಿಯಲ್ ಮೀಡಿಯಾದಲ್ಲಿ ಒಂದೂ ಪೋಸ್ಟ್ ಹಾಕಿಲ್ಲ ಕೊಹ್ಲಿ
Virat Kohli: ವಿಶ್ವಕಪ್ ಪಂದ್ಯಾವಳಿ ಆರಂಭವಾಗಿ ತಿಂಗಳು ಕಳೆದಿದೆ. ಇನ್ನೇನು ಎರಡು ದಿನದೊಳಗೆ ನೂತನ ವಿಶ್ವಚಾಂಪಿಯನ್ನರು ಯಾರು ಎಂಬುದು ನಿರ್ಧಾರವಾಗುತ್ತದೆ. ಸುದೀರ್ಘ ಅವಧಿಯ ಪಂದ್ಯಾವಳಿ ನಡೆಯುತ್ತಿದ್ದರೂ, ವಿರಾಟ್ ಕೊಹ್ಲಿ ಮೌನಿಯಾಗಿದ್ದಾರೆ.
ನವೆಂಬರ್ 19, 2023. ಈ ದಿನ ಐತಿಹಾಸಿಕ ದಿನವಾಗಲಿ ಎಂಬುದು ಶತಕೋಟಿ ಭಾರತೀಯರ ಬಯಕೆ. 2011ರ ಏಪ್ರಿಲ್ 2ರಂದು ಮುಂಬೈನ ವಾಂಖೆಡೆ ಮೈದಾನದಲ್ಲಿ ಶ್ರೀಲಂಕಾವನ್ನು ಮಣಿಸಿ ಭಾರತವು ವಿಶ್ವಕಪ್ ಗೆದ್ದಂತೆ, ಈ ಬಾರಿ ಅಹಮದಾಬಾದ್‌ನಲ್ಲಿ ಮೂರನೇ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯಬೇಕೆಂಬುದು ಅಭಿಮಾನಿಗಳ ಆಸೆ. ಇದಕ್ಕಾಗಿ ಭಾರತದ ಕ್ರಿಕೆಟ್ ತಂಡವು ಎಲ್ಲಾ ರೀತಿಯ ಪ್ರಯತ್ನಗಳನ್ನು ಯಾವುದೇ ಸ್ವಾರ್ಥವಿಲ್ಲದೆ ಮಾಡುತ್ತಿದೆ.
ಏಕದಿನ ವಿಶ್ವಕಪ್ 2023ರ ಪಂದ್ಯಾವಳಿಯು ಭಾರತದ ಆತಿಥ್ಯದಲ್ಲೇ ನಡೆಯುತ್ತಿರುವುದರಿಂದ, ಟೂರ್ನಿಯಲ್ಲಿ ಭಾರತವೇ ಗೆಲ್ಲುವ ಫೇವರೆಟ್. ಅದಕ್ಕೆ ತಕ್ಕನಾಗಿ ಈವರೆಗೂ ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದು ರೋಹಿತ್ ಶರ್ಮಾ ಪಡೆ ಫೈನಲ್ ಪ್ರವೇಶಿಸಿದೆ. ಕಪ್ ಗೆಲುವಿಗೆ ಇನ್ನೊಂದೇ ಹೆಜ್ಜೆ ಬಾಕಿ ಇದೆ.
ಟೂರ್ನಿ ಆರಂಭಕ್ಕೂ ಮುನ್ನ ಹಲವು ದಿಗ್ಗಜ ಆಟಗಾರರಿಂದ ಕೆಲವೊಂದು ಹೇಳಿಕೆಗಳು ಹೊರಬಂದಿದ್ದವು. 2011ರ ವಿಶ್ವಕಪ್ ಅನ್ನು ಭಾರತ ತಂಡವು ಸಚಿನ್ ತೆಂಡೂಲ್ಕರ್ ಅವರಿಗಾಗಿ ಗೆದ್ದಿತ್ತು. ಈ ಬಾರಿಯ ವಿಶ್ವಕಪ್ ಅನ್ನು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಿಗಾಗಿ ಗೆಲ್ಲಬೇಕೆಂಬುದು ಅವರ ಅಭಿಪ್ರಾಯ. ಪ್ರಸಕ್ತ ವಿಶ್ವಕಪ್ ಪಂದ್ಯಾವಳಿಯು ವಿರಾಟ್, ರೋಹಿತ್, ಅಶ್ವಿನ್ ಸೇರಿದಂತೆ ಕೆಲವು ಆಟಗಾರರಿಗೆ ಅಂತಿಮ ವಿಶ್ವಕಪ್ ಪಂದ್ಯಾವಳಿಯೂ ಆಗಬಹುದು ಎನ್ನಲಾಗಿದೆ. ಹೀಗಾಗಿ ಈ ಬಾರಿ ಭಾರತದ ಶತಾಯ ಗತಾಯ ಪ್ರಯತ್ನ ವಿಶ್ವಕಪ್ ಗೆಲುವಿನ ಮೇಲಿದೆ.
ಸೈಲೆಂಟ್ ಆಗಿವೆ ಕಿಂಗ್ ಸೋಷಿಯಲ್ ಮೀಡಿಯಾ ಖಾತೆಗಳು
ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಗರ್ಜಿಸುತ್ತಿದೆ. ಸದ್ಯ 711 ರನ್‌ಗಳೊಂದಿಗೆ ಪ್ರಸಕ್ತ ವಿಶ್ವಕಪ್ ಆವೃತ್ತಿಯಲ್ಲಿ ಅಧಿಕ ರನ್ ಗಳಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. 101.57 ಸರಾಸರಿಯಲ್ಲಿ ಬ್ಯಾಟ್ ಬೀಸಿ 3 ಶತಕ ಹಾಗೂ 5 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಈ ನಡುವೆ ಹಲವು ದಾಖಲೆಗಳೂ ಆಗಿವೆ. ಆಡಿದ ಎಲ್ಲಾ ಪಂದ್ಯಗಳಲ್ಲಿ ಭಾರತ ಗೆದ್ದಿದೆ. ಆದರೆ, ವಿರಾಟ್ ಕೊಹ್ಲಿಯ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಭಾರತದ ಗೆಲುವಿನ ಕುರಿತಾಗಲಿ, ವಿಶ್ವಕಪ್ ಕುರಿತಾಗಲಿ ಒಂದೇ ಒಂದು ಪೋಸ್ಟ್ ಕೂಡಾ ಅಪ್ಡೇಟ್ ಆಗಿಲ್ಲ ಎನ್ನುವುದೇ ಅಚ್ಚರಿಯ ವಿಚಾರ.
ಈ ಹಿಂದೆ ಯಾವುದೇ ಸರಣಿಯಲ್ಲಿ ಭಾರತ ಗೆಲ್ಲಲಿ ಅಥವಾ ಸೋಲಲಿ, ಟೀಮ್ ಇಂಡಿಯಾ ಪ್ರದರ್ಶನ ಕುರಿತು ಕೊಹ್ಲಿ ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಅಪ್ಡೇಟ್ ಮಾಡುತ್ತಿದ್ದರು. ತಂಡದ ಆಟಗಾರರನ್ನು ಹುರಿದುಂಬಿಸುವುದರ ಜೊತೆಗೆ ಅಭಿಮಾನಿಗಳಿಗೆ ವಂದಿಸುತ್ತಿದ್ದರು. ಆದರೆ, ವಿಶ್ವಕಪ್ ಟೂರ್ನಿ ಆರಂಭವಾದಾಗಿನಿಂದ, ತಂಡದ ಪ್ರದರ್ಶನ ಕುರಿತು ಯಾವುದೇ ಪೋಸ್ಟ್‌ಗಳನ್ನು ಕೊಹ್ಲಿ ಹಂಚಿಕೊಂಡಿಲ್ಲ. ವಿಶ್ವಕಪ್‌ಗೂ ಮುನ್ನ ನಡೆದ ಏಷ್ಯಾಕಪ್ ವೇಳೆಯೂ ಕಿಂಗ್ ಸೈಲೆಂಟ್ ಆಗಿಯೇ ಇದ್ದಿದ್ದು ವಿಶೇಷ.
ಇನ್‌ಸ್ಟಾದಲ್ಲಿ 3 ತಿಂಗಳಿಂದ ಇಲ್ಲ ಅಪ್ಡೇಟ್
ವಿರಾಟ್ ಕೊಹ್ಲಿಗೆ ಅತಿ ಹೆಚ್ಚು ಫಾಲೋವರ್‌ಗಳು ಇರುವುದು ಇನ್‌ಸ್ಟಾಗ್ರಾಮ್‌ನಲ್ಲಿ. 263 ಮಿಲಿಯನ್ ಬೆಂಬಲಿಗರು ಇನ್‌ಸ್ಟಾಗ್ರಾಮ್‌ನಲ್ಲಿ ಅವರನ್ನು ಫಾಲೋ ಮಾಡುತ್ತಾರೆ. ಇದರಲ್ಲಿ ನವೆಂಬರ್ 17ವರೆಗಿನ ಪೋಸ್ಟ್‌ಗಳನ್ನು ನೋಡಿದರೆ, ಕೊನೆಯ ಪೋಸ್ಟ್ ಬರೋಬ್ಬರಿ 6 ವಾರ ಹಳೆಯದ್ದು. ಅದು ಕೂಡಾ ಜಾಹೀರಾತು ಒಪ್ಪಂದದ ಪೇಯ್ಡ್ ಪ್ರಮೋಷನ್ ಪೋಸ್ಟ್. ಅಂದರೆ, ವಿಶ್ವಕಪ್ ಆರಂಭವಾದ ಬಳಿಕ ಕೊಹ್ಲಿ ಒಂದೇ ಒಂದು ಪೋಸ್ಟ್ ಮಾಡಿಲ್ಲ. ಇನ್‌ಸ್ಟಾದಲ್ಲಿ ಕೊಹ್ಲಿ ಪೇಯ್ಡ್ ಪ್ರಮೋಷನ್ ಅಲ್ಲದ ತಮ್ಮದೇ ಫೋಟೋವನ್ನು ಹಂಚಿಕೊಂಡು ನಾಲ್ಕು ತಿಂಗಳುಗಳು ದಾಟಿವೆ. ಆಗಸ್ಟ್ 18ರಂದು ಕ್ರಿಕೆಟ್ ಕುರಿತಾದ ಪೋಸ್ಟ್ ಹಂಚಿಕೊಂಡಿದ್ದಾರೆ. ಅದು ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ವೇಳೆ ಪಾಕ್ ವಿರುದ್ಧ ಗೆದ್ದ ಬಳಿಕದ ವೈರಲ್ ಫೋಟೋ. ಆ ಬಳಿಕ, ಕ್ರಿಕೆಟ್ ಕುರಿತಾದ ಯಾವುದೇ ಪೋಸ್ಟ್ ಕೂಡಾ ಕೊಹ್ಲಿ ಹಂಚಿಕೊಂಡಿಲ್ಲ. ಏಷ್ಯಾಕಪ್ ಪಂದ್ಯಾವಳಿಯದ್ದೂ ಹಾಕಿಲ್ಲ.
ಖಾಲಿ ಹೊಡೀತಿದೆ ಟ್ವಿಟರ್ ಅಕೌಂಟ್
ಸಾಮಾನ್ಯವಾಗಿ ಕೊಹ್ಲಿ ಟ್ವಿಟರ್‌ನಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಆದರೆ, ಇಲ್ಲಿಯೂ ಭಾರತದ ವಿಶ್ವಕಪ್ ಪಂದ್ಯಗಳ ಗೆಲುವಿನ ಕುರಿತಾಗಿ ಒಂದೂ ಪೋಸ್ಟ್ ಹಾಕಿಲ್ಲ. ನವೆಂಬರ್ 5ರಂದು ಹುಟ್ಟುಹಬ್ಬ ಆಚರಿಸಿಕೊಂಡ ವಿರಾಟ್, ನವೆಂಬರ್ 6ರಂದು ತಮಗೆ ಶುಭಕೋರಿದ ಎಲ್ಲರಿಗೂ ಧನ್ಯವಾದ ತಿಳಿಸುವ ಪೋಸ್ಟ್ ಹಾಕಿದ್ದಾರೆ. ಅದು ಟ್ವಿಟರ್‌ನಲ್ಲಿ ಅವರ ಒಟ್ಟಾರೆ ಕೊನೆಯ ಅಪ್ಡೇಟ್. ಅದನ್ನು ಹೊರತುಪಡಿಸಿ ಏಷ್ಯಾಕಪ್ ಆರಂಭವಾದ ಬಳಿಕ ಟೀಮ್ ಇಂಡಿಯಾ ಸೋಲು ಗೆಲುವು ಅಥವಾ ತಮ್ಮ ರೆಕಾರ್ಡ್‌ಗಳ ಕುರಿತಾಗಿಯೂ ಯಾವುದೇ ಪೋಸ್ಟ್‌ಗಳನ್ನು ಕೊಹ್ಲಿ ಹಂಚಿಕೊಂಡಿಲ್ಲ. ಟ್ವಿಟರ್‌ನಲ್ಲಿಯೂ, ಆಗಸ್ಟ್ 18ರಂದು ಹಳೆಯ ಪೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಕೊನೆಯ ಟಿ20 ವಿಶ್ವಕಪ್ ವೇಳೆ ಪಾಕ್ ವಿರುದ್ಧ ಗೆದ್ದ ಬಳಿಕ ಆಕಾಶತ್ತ ನೋಡುವ ಫೋಟೋ ಇದಾಗಿದೆ. ಟ್ವಿಟರ್‌ನಲ್ಲಿ ಕೊಹ್ಲಿಗೆ 59 ಮಿಲಿಯನ್‌ಗೂ ಅಧಿಕ ಫಾಲೋವರ್‌ಗಳಿದ್ದಾರೆ.
ಫೇಸ್‌ಬುಕ್ ಮುಟ್ಟದೆ ದಾಟಿದವು 43 ದಿನಗಳು
51 ಮಿಲಿಯನ್ ಫಾಲೋವರ್‌ಳಿರುವ ಫೇಸ್‌ಬುಕ್ ಖಾತೆಯಲ್ಲೂ, ವಿಶ್ವಕಪ್ ಆರಂಭದ ಬಳಿಕ ಕ್ರಿಕೆಟ್ ಕುರಿತ ಅಪ್ಡೇಟ್‌ಗಳಿಲ್ಲ. ಕೊನೆಯದಾಗಿ ಅಕ್ಟೋಬರ್ 4ರಂದು ಪೇಯ್ಡ್ ಪ್ರಮೋಷನ್ ಪೋಸ್ಟ್ ಅಪ್ಡೇಟ್ ಮಾಡಲಾಗಿದೆ. ಅದು ವಿಶ್ವಕಪ್ ಟೂರ್ನಿ ಉದ್ಘಾಟನೆಗೊಂಡ ಹಿಂದಿನ ದಿನ. ಅದಾದ ಬಳಿಕ ಫೇಸ್‌ಬುಕ್‌ನಲ್ಲಿ ಕೊಹ್ಲಿ ಯಾವುದೇ ಪೋಸ್ಟ್ ಹಾಕದೆ ಇಂದಿಗೆ 43 ದಿನಗಳಾಗಿವೆ.
ವಿಶ್ವಕಪ್ ಪಂದ್ಯಾವಳಿ ಆರಂಭವಾಗಿ 43 ದಿನಗಳಾಗಿವೆ. ಈ ಅವಧಿಯಲ್ಲಿ ಭಾರತವು 10 ಪಂದ್ಯಗಳನ್ನಾಡಿದೆ. ಈ ಎಲ್ಲಾ ಪಂದ್ಯಗಳಲ್ಲಿಯೂ ಭಾರತ ಗೆದ್ದಿದೆ. ಅಲ್ಲದೆ ಕೊಹ್ಲಿ ದಾಖಲೆಯ ಪ್ರದರ್ಶನ ನೀಡಿದ್ದಾರೆ. ಹೀಗಿದ್ದರೂ ಕೊಹ್ಲಿ ಒಂದೇ ಒಂದು ಪೋಸ್ಟ್ ಕೂಡಾ ಅಪ್ಡೇಟ್ ಮಾಡಿಲ್ಲ. ಭಾರತ ವಿಶ್ವಕಪ್ ಗೆಲ್ಲಬೇಕೆಂಬುದು ದೇಶದ ಶತಕೋಟಿ ಅಭಿಮಾನಿಗಳ ಆಸೆ. ಅಲ್ಲದೆ ಭಾರತ ತಂಡಕ್ಕೆ ವಿದೇಶಗಳಿಂದಲೂ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರಲ್ಲಿ ಸೆಲೆಬ್ರಿಟಿಗಳ ದಂಡೇ ಇದೆ. ಆದರೆ, ಮೈದಾನಕ್ಕಿಳಿದು ಆಡುವವರು ಮಾತ್ರ ವಿರಾಟ್ ಸೇರಿದಂತೆ ಭಾರತ ತಂಡದ ಕ್ರಿಕೆಟಿಗರು. ಅಭಿಮಾನಿಗಳ ನಿರೀಕ್ಷೆಯ ಒತ್ತಡ ಅವರ ಮೇಲಿದೆ. ಹೀಗಾಗಿ ದೇಶಕ್ಕಾಗಿ ಕಪ್ ಗೆದ್ದು ಅಭಿಮಾನಿಗಳಿಗೆ ಉಡುಗೊರೆ ನೀಡುವ ಲೆಕ್ಕಾಚಾರ ಕೊಹ್ಲಿಯದ್ದು. ವಿಶ್ವಕಪ್ ಗೆದ್ದ ಬಳಿಕವೇ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಕಪ್ ಜೊತೆಗೆ ಫೋಟೋ ಹಂಚಿಕೊಳ್ಳುವ ಶಪಥವನ್ನು ಕಿಂಗ್ ಕೊಹ್ಲಿ ಮಾಡಿರುವಂತಿದೆ. ಆ ಕ್ಷಣಕ್ಕೆ ಇನ್ನೆರಡೇ ದಿನಗಳು ಬಾಕಿ ಉಳಿದಿವೆ.
ವಿಶ್ವಕಪ್ ಕುರಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ