ಬಿಸಿಸಿಐನಷ್ಟು ಐಸಿಸಿ ಪ್ರಭಾವಿ ಅಲ್ಲ ಎಂದ ಸ್ಟೀವ್ ಸ್ಮಿತ್; ಕ್ರಿಕೆಟ್ ದೊಡ್ಡಣ್ಣನ ಕುರಿತು ಆಸೀಸ್ ಆಟಗಾರರು ಏನಂತಾರೆ ನೋಡಿ
ಐಸಿಸಿ ಮತ್ತು ಬಿಸಿಸಿಐ ಕುರಿತು ಒಂದೇ ಪದದಲ್ಲಿ ವರ್ಣಿಸಿದ ಸ್ಟೀವ್ ಸ್ಮಿತ್, ತಕ್ಷಣವೇ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ. ಇದೇ ವೇಳೆ ಟ್ರಾವಿಸ್ ಹೆಡ್ ನೇರವಾಗಿ ಬಿಸಿಸಿಐ ಪ್ರಭಾವಿ ಕ್ರಿಕೆಟ್ ಮಂಡಳಿ ಎಂದಿದ್ದಾರೆ.
ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗರ ಬಳಿ ವಿಭಿನ್ನ ಆಟವೊಂದನ್ನು ಆಡಿಸಲಾಯ್ತು. ಇದರಲ್ಲಿ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್, ಸ್ಟೀವ್ ಸ್ಮಿತ್, ನಾಥನ್ ಲಿಯಾನ್, ಟ್ರಾವಿಸ್ ಹೆಡ್ ಸೇರಿದಂತೆ ಸ್ಟಾರ್ ಆಟಗಾರರು ಭಾಗಿಯಾದರು. ಎಬಿಸಿ ಸ್ಪೋರ್ಟ್ ಆಯೋಜಿಸಿದ್ದ ಆಟದಲ್ಲಿ ಆಸ್ಟ್ರೇಲಿಯಾದ ಏಳು ಕ್ರಿಕೆಟಿಗರು ಭಾಗವಹಿಸಿದ್ದರು. ಅವರ ಬಳಿ ಒಂದು ಪ್ರಶ್ನೆ ಕೇಳಲಾಯ್ತು. ‘ಐಸಿಸಿ, ಬಿಸಿಸಿಐ ಮತ್ತು ಭಾರತೀಯ ಕ್ರಿಕೆಟ್’, ಈ ಮೂರನ್ನೂ ಒಂದೇ ಪದದಲ್ಲಿ ವರ್ಣಿಸುವ ಸವಾಲು ನೀಡಲಾಯ್ತು. ಈ ಪ್ರಶ್ನೆಗೆ ಪ್ರತಿಯೊಬ್ಬರ ಉತ್ತರ ಕೂಡಾ ಆಸಕ್ತಿದಾಯಕವಾಗಿದೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಬಿಸಿಸಿಐ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎಂಬುದು ಗೊತ್ತಿರುವ ವಿಚಾರ. ಆದರೆ ಎಲ್ಲಾ ಕ್ರಿಕೆಟ್ ಮಂಡಳಿಗೂ ಐಸಿಸಿ ಬಾಸ್ ಇದ್ದಂತೆ. ಆದರೆ, ಬಿಸಿಸಿಐ ವಿಶ್ವದಲ್ಲಿ ಐಸಿಸಿಯಷ್ಟೇ ಪ್ರಭಾವ ಹೊಂದಿದೆ ಎಂಬ ಮಾತು ಆಗಾಗ ಕೇಳಿಬರುತ್ತಿದೆ. ಭಾರತ ಕ್ರಿಕೆಟ್ ತಂಡ ಕೂಡಾ ತುಂಬಾ ಬಲಿಷ್ಠವಾಗಿದ್ದು, ಅಭಿಮಾನಿಗಳ ಸಂಖ್ಯೆ ಹೆಚ್ಚಿರುವುದರಿಂದ ಬಿಸಿಸಿಐ ಕೂಡಾ ಭಾರಿ ಲಾಭ ಗಳಿಸುತ್ತದೆ. ಈಗ ಜಯ್ ಶಾ ಐಸಿಸಿ ಅಧ್ಯಕ್ಷರಾಗಿರುವುದು ಬಿಸಿಸಿಐಯನ್ನು ಕೂಡಾ ಮತ್ತಷ್ಟು ಬಲಶಾಲಿಯಾಗಿದೆ.
ಆಸ್ಟ್ರೇಲಿಯಾದ ಬಹುತೇಕ ಎಲ್ಲಾ ಕ್ರಿಕೆಟಿಗರು ಬಿಸಿಸಿಐ ಪ್ರಭಾವಿ ಮಂಡಳಿ ಎಂದು ಹೇಳಿದ್ದಾರೆ. ಐಸಿಸಿಗಿಂತ ಬಿಸಿಸಿಐ ಪ್ರಭಾವಿ ಎಂದ ಸ್ಟೀವ್ ಸ್ಮಿತ್, ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ. ಆದರೆ ಸ್ಫೋಟಕ ಆಟಗಾರ ಟ್ರಾವಿಸ್ ಹೆಡ್ ಮಾತ್ರ ಬಿಸಿಸಿಐಯನ್ನು ಆಡಳಿತಗಾರರು ಎಂದಿದ್ದಾರೆ. ಇದೇ ವೇಳೆ ಐಸಿಸಿ ಎರಡನೇ ಸ್ಥಾನದಲ್ಲಿದ್ದಾರೆ ಎಂದಿದ್ದಾರೆ.
ಟೆಸ್ಟ್ ನಾಯಕ ಪ್ಯಾಟ್ ಕಮಿನ್ಸ್ ಜಾಣ ಉತ್ತರ ನೀಡಿದ್ದಾರೆ. ಬಿಸಿಸಿಐ, ಐಸಿಸಿ ಹಾಗೂ ಭಾರತ ಕ್ರಿಕೆಟ್ ಮೂರನ್ನೂ 'ದೊಡ್ಡದು' ಎಂದು ಒಂದೇ ಪದದಲ್ಲಿ ಉತ್ತರಿಸಿದ್ದಾರೆ.
ಗ್ಲೆನ್ ಮ್ಯಾಕ್ಸ್‌ವೆಲ್, ಅಲೆಕ್ಸ್ ಕ್ಯಾರಿ ಮತ್ತು ಸ್ಟೀವ್ ಸ್ಮಿತ್ ಅವರು ಭಾರತೀಯ ಕ್ರಿಕೆಟ್ ಮಂಡಳಿಯನ್ನು "ಶಕ್ತಿಶಾಲಿ" ಎಂದು ಬಣ್ಣಿಸಿದ್ದಾರೆ. ನಾಥನ್ ಲಿಯಾನ್ ಜೊತೆಗೆ ಮ್ಯಾಕ್ಸ್‌ವೆಲ್ ಮತ್ತು ಕ್ಯಾರಿ ಐಸಿಸಿಯನ್ನು "ಬಾಸ್" ಎಂದು ಕರೆದಿದ್ದಾರೆ. ಇದೇ ವೇಳೆ ವಿಶ್ವದ ಮಾಜಿ ನಂ.1 ಟೆಸ್ಟ್ ಬ್ಯಾಟರ್ ಐಸಿಸಿಯನ್ನು "ಅಷ್ಟು ಶಕ್ತಿಶಾಲಿ ಅಲ್ಲ" ಎಂದು ಹೇಳಿದ್ದಾರೆ.
ತನ್ನ ಹೇಳಿಕೆ ನಂತರ ಜೋರಾಗಿ ನಕ್ಕ ಸ್ಮಿತ್, ತಮ್ಮ ಪ್ರತಿಕ್ರಿಯೆಯಿಂದ ಬೇಗನೆ ಹಿಂದೆ ಸರಿದಿದ್ದಾರೆ. “ಇಲ್ಲ ಇಲ್ಲ ನಾನು ಹಾಗೆ ಹೇಳಲು ಸಾಧ್ಯವಿಲ್ಲ. ತಮಾಷೆ ಮಾಡಿದೆ ಅಷ್ಟೇ,” ಎಂದರು. ಕೊನೆಗೆ ಐಸಿಸಿಯನ್ನು “ನಾಯಕರು” ಎಂದು ಕರೆದರು.
ಪಾಸ್ ಎಂದ ಉಸ್ಮಾನ್ ಖವಾಜಾ
ಆಸ್ಟ್ರೇಲಿಯಾದ ಹಿರಿಯ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಕೂಡಾ ಈ ಆಟದಲ್ಲಿದ್ದರು. ಅವರಲ್ಲಿ ಐಸಿಸಿ ಬಗ್ಗೆ ಕೇಳಿದಾಗ ಮೌನವಾಗಿದ್ದರು. ಆ ನಂತರ ಮುಗುಳ್ನಗುತ್ತಾ "ಪಾಸ್" ಎಂದು ಹೇಳಿದರು.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲೂ ಸ್ಟೀವ್ ಸ್ಮಿತ್ ಪ್ರತಿಕ್ರಿಯೆ ನೆಟ್ಟಿಗರ ಗಮನ ಸೆಳೆದಿದೆ. ಐಸಿಸಿಗಿಂತ ಬಿಸಿಸಿಐ ಹೆಚ್ಚು ಪ್ರಭಾವಿ ಎಂಬುದು ಅವರ ಮನದಲ್ಲಿ ಇರುವುದು ಖಚಿತವಾಗಿದೆ. ಆದರೆ, ಬಹಿರಂಗವಾಗಿ ಹೇಳುವುದು ಬೇಡ ಎಂದುಕೊಂಡು ಹೇಳಿಕೆಯನ್ನು ಹಿಂಪಡೆದಿದ್ದಾರೆ.