2021ರಲ್ಲಿ ಸಾಧ್ಯವಾಗದ್ದನ್ನು ಕೊನೆಗೂ ಸಾಧಿಸಿದ ವೆಂಕಟೇಶ್ ಅಯ್ಯರ್; ಕೆಕೆಆರ್ ಆಪದ್ಬಾಂಧವನ ಕ್ರಿಕೆಟ್ ಜರ್ನಿ ಹೇಗಿದೆ?
Who is Venkatesh Iyer: 2021ರ ಐಪಿಎಲ್ ಫೈನಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ಟ್ರೋಫಿ ಜಯಿಸಲು ಸಾಧ್ಯವಾಗದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಎಡಗೈ ಬ್ಯಾಟರ್ ವೆಂಕಟೇಶ್ ಅಯ್ಯರ್, ಕೊನೆಗೂ 2024ರಲ್ಲಿ ಸಾಧಿಸಿದ್ದಾರೆ.
Venkatesh Iyer: 17ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯವನ್ನು ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ವೆಂಕಟೇಶ್ ಅಯ್ಯರ್ ಪ್ರಮುಖ ಪಾತ್ರವಹಿಸಿದರು. ಕೆಕೆಆರ್ ಟ್ರೋಫಿ ಗೆಲುವಿನ ಹೀರೋ ಹಾಗೂ ಯುವ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಯಾರು? ಟೀಮ್ ಇಂಡಿಯಾ ಪರ ಎಷ್ಟು ಪಂದ್ಯ ಆಡಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಆತನ ಸಾಧನೆ ಹೇಗಿದೆ? ಇಲ್ಲಿದೆ ವಿವರ.
ಈ ನಿರ್ಣಾಯಕ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದು ಮಾತ್ರವಲ್ಲ, ಈ ಹಿಂದೆಯೂ ಪ್ಲೇಆಫ್ ಪಂದ್ಯಗಳಲ್ಲಿ ಅತ್ಯಮೋಘ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಅವರನ್ನು ಪ್ಲೇಆಫ್ ಹೀರೋ ಎಂದರೂ ತಪ್ಪಾಗಲ್ಲ. ಒಟ್ಟು 5 ಪ್ಲೇಆಫ್ ಪಂದ್ಯಗಳಲ್ಲಿ 4 ಫಿಫ್ಟಿ ಬಾರಿಸಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುವ ವೆಂಕಿ, ಐಪಿಎಲ್ ಪ್ಲೇಆಫ್ ಇತಿಹಾಸಲ್ಲಿ ಸತತ 4ನೇ ಅರ್ಧಶತಕ ದಾಖಲಿಸಿದ ಮೊದಲ ಆಟಗಾರ.
ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಫೈಟ್ನಲ್ಲಿ ಎಸ್ಆರ್ಹೆಚ್ ಅನ್ನು 8 ವಿಕೆಟ್ಗಳಿಂದ ಮಣಿಸಿದ ಕೆಕೆಆರ್, 3ನೇ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿತು. ಮೊದಲು ಬ್ಯಾಟಿಂಗ್ ಮಾಡಿದ ಆರೆಂಜ್ ಆರ್ಮಿ, 18.3 ಓವರ್ಗಳಲ್ಲಿ 113 ರನ್ಗಳಿಸಿ ಆಲೌಟ್ ಆಯಿತು. ಸಾಧಾರಣ ಬೆನ್ನಟ್ಟಿದ ಪರ್ಪಲ್ ಆರ್ಮಿ, ವೆಂಕಟೇಶ್ ಅವರ ಅದ್ಭುತ ಪ್ರದರ್ಶನದಿಂದ 57 ಎಸೆತಗಳು ಬಾಕಿ ಇರುವಂತೆಯೇ ಗೆದ್ದು ಬೀಗಿತು. ಕೆಕೆಆರ್ 2014ರ ನಂತರ ಅಂದರೆ, 10 ವರ್ಷಗಳ ಚಾಂಪಿಯನ್ ಆಯಿತು.
ಐಪಿಎಲ್ ಪ್ಲೇಆಫ್ಗಳಲ್ಲಿ ವೆಂಕಟೇಶ್ ಅಯ್ಯರ್ ಪ್ರದರ್ಶನ
ಐಪಿಎಲ್ ಪ್ಲೇಆಫ್ ಪಂದ್ಯಗಳಲ್ಲಿ ಎಡಗೈ ಬ್ಯಾಟರ್ ವೆಂಕಟೇಶ್ ಅಯ್ಯರ್, ಅದ್ಭುತ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. 2021ರ ಐಪಿಎಲ್‌ನಲ್ಲಿ ಕೆಕೆಆರ್ ಫೈನಲ್ ಪ್ರವೇಶಿಸಿದಾಗಲೂ ಗಮನಾರ್ಹ ಪ್ರದರ್ಶನ ನೀಡಿದ್ದರು. ಅಂದು ಎಲಿಮಿನೇಟರ್ನಲ್ಲಿ ಆರ್ಸಿಬಿ ವಿರುದ್ಧ 26 ರನ್ ಗಳಿಸಿದ್ದ ವೆಂಕಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ 2ನೇ ಕ್ವಾಲಿಫೈಯರ್ನಲ್ಲಿ 55 ರನ್ ಸಿಡಿಸಿ ತಂಡವನ್ನು ಫೈನಲ್ಗೇರಿಸಿದ್ದರು. ಫೈನಲ್ನಲ್ಲೂ ಸಿಎಸ್ಕೆ ವಿರುದ್ಧ 50 ರನ್ ಬಾರಿಸಿದ್ದರೂ ಕೆಕೆಆರ್ ರನ್ನರ್ಅಪ್ಗೆ ತೃಪ್ತಿಯಾಗಿತ್ತು. ಇದೀಗ ಆ ಲೋಪದೋಷ ಸರಿಪಡಿಸಿ ಇದೀಗ ಕೆಕೆಆರ್ಗೆ ಟ್ರೋಫಿ ಗೆದ್ದುಕೊಟ್ಟಿದ್ದಾರೆ.
ಅಂದು ತಾನು ಉತ್ತಮ ಪ್ರದರ್ಶನ ನೀಡಿದರೂ ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ. 2024ರ ಐಪಿಎಲ್ ಪ್ಲೇಆಫ್ಗಳನ್ನೂ ಅತ್ಯುತ್ತಮ ಪ್ರದರ್ಶನ ತೋರಿರುವ ಮಧ್ಯ ಪ್ರವೇಶದ ಆಟಗಾರ, ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಎಸ್ಆರ್ಹೆಚ್ ವಿರುದ್ಧ ಅಜೇಯ 51 ರನ್ ಬಾರಿಸಿದ್ದರು. ಇದೀಗ ಫೈನಲ್ ಪಂದ್ಯದಲ್ಲೂ ಅದೇ ತಂಡದ ಎದುರು ಅಜೇಯ 52 ರನ್ ಗಳಿಸಿದ್ದಾರೆ. ತಾನು ಎದುರಿಸಿದ 26 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 52 ಚಚ್ಚಿದ್ದಾರೆ. ಅವರ ಸ್ಟ್ರೈಕ್ರೇಟ್ 200.
ಫೈನಲ್‌ನಲ್ಲಿ ಅತಿವೇಗದ ಅರ್ಧಶತಕ
ವೆಂಕಟೇಶ್ ಅಯ್ಯರ್ ಐಪಿಎಲ್ ಫೈನಲ್‌ನಲ್ಲಿ ಜಂಟಿ-ವೇಗದ ಅರ್ಧಶತಕ ಗಳಿಸಿ ದಾಖಲೆ ಬರೆದರು. ಎದುರಿಸಿದ 24ನೇ ಎಸೆತದಲ್ಲಿ ಎಸ್ಆರ್ಹೆಚ್ ವಿರುದ್ಧ ಅರ್ಧಶತಕ ಪೂರ್ಣಗೊಳಿಸಿದರು. ಈ ಹಿಂದೆ ಸುರೇಶ್ ರೈನಾ (CSK) ಮತ್ತು ಡೇವಿಡ್ ವಾರ್ನರ್ (SRH) ಜಂಟಿಯಾಗಿ ಹೊಂದಿದ್ದ 24-ಬಾಲ್ ಮಾರ್ಕ್ ಅನ್ನು ಸಮಗೊಳಿಸಿದರು. ಅಲ್ಲದೆ, ಪ್ಲೇಆಫ್ನಲ್ಲಿ ದಾಖಲಿಸಿದ ಸತತ ನಾಲ್ಕನೇ ಅರ್ಧಶತಕ ಇದಾಗಿದೆ.
2024ರ ಐಪಿಎಲ್‌ನಲ್ಲಿ ವೆಂಕಟೇಶ್ ಅಯ್ಯರ್ ಪ್ರದರ್ಶನ
ಪ್ರಸಕ್ತ ಐಪಿಎಲ್‌ನಲ್ಲಿ ವೆಂಕಟೇಶ್ ಅಯ್ಯರ್ ಅಮೇಜಿಂಕ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಆಡಿದ 14 ಪಂದ್ಯಗಳ ಪೈಕಿ 13 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದು, 46.25ರ ಬ್ಯಾಟಿಂಗ್ ಸರಾಸರಿಯಲ್ಲಿ 370 ರನ್ ಚಚ್ಚಿದ್ದಾರೆ.
ಮಧ್ಯಪ್ರದೇಶದ ಇಂದೋರ್ ಮೂಲದ ಆಲ್‌ರೌಂಡರ್
29 ವರ್ಷದ ಎಡಗೈ ಬ್ಯಾಟ್ಸ್‌ಮನ್ ಮತ್ತು ಬಲಗೈ ಮಧ್ಯಮ ವೇಗಿ ವೆಂಕಟೇಶ್ ರಾಜಶೇಖರನ್ ಅಯ್ಯರ್ ಜನಿಸಿದ್ದು ಡಿಸೆಂಬರ್ 25, 1994ರಲ್ಲಿ ಮಧ್ಯಪ್ರದೇಶದ ಇಂದೋರ್‌ನಲ್ಲಿ. ಬಾಲ್ಯದಿಂದಲೂ ಕ್ರಿಕೆಟ್ ಹುಚ್ಚು ಹೆಚ್ಚಿಸಿಕೊಂಡಿದ್ದ ವೆಂಕಿ, ತಂದೆ-ತಾಯಿ ಅವರ ಬೆಂಬಲದಿಂದ ಓದಿನೊಂದಿಗೆ ಕ್ರಿಕೆಟ್ ಕಡೆಯೂ ಹೆಚ್ಚಿನ ಗಮನ ಹರಿಸಿದರು. ಕ್ರಿಕೆಟ್ನಲ್ಲಿ ಸತತ ಪರಿಶ್ರಮ ಹಾಕಿದ ವೆಂಕಿ, ಮಧ್ಯಪ್ರದೇಶ ಅಂಡರ್-16 ತಂಡದಲ್ಲಿ ಸ್ಥಾನ ಪಡೆದರು.
ಆ ಬಳಿಕ ತಿರುಗಿ ನೋಡಿದ್ದೇ ಇಲ್ಲ. ಪವರ್‌ಫುಲ್ ಬ್ಯಾಟಿಂಗ್ ಮತ್ತು ಖಡಕ್ ಬೌಲಿಂಗ್ ಕೌಶಲ್ಯದಿಂದ ಐಪಿಎಲ್‌ನಲ್ಲಿ ಕೆಕೆಆರ್ ಫ್ರಾಂಚೈಸಿ ಸೇರಿದ ಎಡಗೈ ಬ್ಯಾಟರ್, ಸಿಕ್ಕ ಅವಕಾಶವನ್ನ ಎರಡೂ ಕೈಗಳಲ್ಲಿ ಬಾಚಿಕೊಂಡರು. ಆರಂಭಿಕನಾಗಿ ಬೆಂಕಿ-ಬಿರುಗಾಳಿ ಪ್ರದರ್ಶನ ನೀಡಿದರು. 2018ರ ಡಿಸೆಂಬರ್ 6 ರಂದು ಹೈದ್ರಾಬಾದ್ ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಾಲಿಟ್ಟ ಅಯ್ಯರ್, ಸೌರಾಷ್ಟ್ರ ವಿರುದ್ಧ 2015ರಲ್ಲೇ ದೇಶೀಯ ಏಕದಿನ ಕ್ರಿಕೆಟ್ ಆಡಿದರು. ಅದೇ ವರ್ಷ ರೈಲ್ವೇಸ್ ವಿರುದ್ಧ ಟಿ20ಗೂ ಕಾಲಿಟ್ಟರು.
ಟೀಮ್ ಇಂಡಿಯಾ ಪರ 2 ಏಕದಿನ, 9 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ 157 ರನ್ ಗಳಿಸಿದ್ದಾರೆ. ಬೌಲಿಂಗ್ನಲ್ಲಿ 5 ವಿಕೆಟ್ ಉರುಳಿಸಿದ್ದಾರೆ. 20 ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 1132 ರನ್, 43 ಲೀಸ್ಟ್ ಎ ಪಂದ್ಯಗಳಲ್ಲಿ 1458 ರನ್ ಕಲೆ ಹಾಕಿದ್ದಾರೆ. 50 ಐಪಿಎಲ್ ಪಂದ್ಯಗಳಲ್ಲಿ 1326 ರನ್ ಗಳಿಸಿದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)