ಕನ್ನಡ ಸುದ್ದಿ  /  ಚುನಾವಣೆಗಳು  /  Lok Sabha Elections2024:ಸತತ 9 ಬಾರಿ ಒಬ್ಬರನ್ನೇ ಗೆಲ್ಲಿಸಿ ದಾಖಲೆ ನಿರ್ಮಿಸಿದ ಗಡಿ ಕ್ಷೇತ್ರ ಚಿಕ್ಕೋಡಿ

Lok Sabha Elections2024:ಸತತ 9 ಬಾರಿ ಒಬ್ಬರನ್ನೇ ಗೆಲ್ಲಿಸಿ ದಾಖಲೆ ನಿರ್ಮಿಸಿದ ಗಡಿ ಕ್ಷೇತ್ರ ಚಿಕ್ಕೋಡಿ

ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರ ವಿಭಿನ್ನ ಹಿನ್ನೆಲೆ ಹೊಂದಿದೆ. ಸಮಸ್ಯೆಗಳು ಕೂಡ ಅಧಿಕವಾಗಿಯೇ ಇವೆ.

ಚಿಕ್ಕೋಡಿ ಲೋಕಸಭಾ ಕ್ಷೇತ್ರ ಹಲವು ವಿಶೇಷಗಳ ಸಂಗಮ
ಚಿಕ್ಕೋಡಿ ಲೋಕಸಭಾ ಕ್ಷೇತ್ರ ಹಲವು ವಿಶೇಷಗಳ ಸಂಗಮ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಉತ್ತರ ಭಾಗವನ್ನು ಒಳಗೊಂಡ, ಮಹಾರಾಷ್ಟ್ರದೊಂದಿಗೆ ಹೆಚ್ಚಿನ ಭಾಗ ಹಂಚಿಕೊಂಡ ಚಿಕ್ಕೋಡಿ ಕ್ಷೇತ್ರ ಘಟಾನುಘಟಿ ನಾಯಕರನ್ನು ಗೆಲ್ಲಿಸಿದ ಹಿರಿಮೆ ಹೊಂದಿದೆ. ಮರಾಠಿ ಪ್ರಭಾವದ ಜತೆಗೆ ಸಕ್ಕರೆ, ಸಹಕಾರ ವಲಯದ ಗಟ್ಟಿ ಭಾಗವೂ ಆಗಿರುವ ಚಿಕ್ಕೋಡಿ ರಾಜಕಾರಣ ವಿಭಿನ್ನ. ಇಲ್ಲಿ ಸತತವಾಗಿ ಗೆದ್ದು ಗಿನ್ನಿಸ್‌ ದಾಖಲೆ ನಿರ್ಮಿಸಿದವರ ಹೆಸರೂ ಇದೆ, ಅವರನ್ನು ಸೋಲಿಸಿ ರಾಜಕಾರಣದಲ್ಲಿ ಗುರುತಿಸಿಕೊಂಡು ಹಾಗೆಯೇ ಮರೆಯಾದವರೂ ಇದ್ದಾರೆ. ಈಗ ಕುಟುಂಬಗಳ ರಾಜಕಾರಣದ ಸ್ಪರ್ಧೆಯ ನೆಲವೂ ಆಗಿ ಬದಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆಯೇ ಇಲ್ಲಿ ಹೆಚ್ಚಿನ ಸ್ಪರ್ಧೆ

ಟ್ರೆಂಡಿಂಗ್​ ಸುದ್ದಿ

ಚಿಕ್ಕೋಡಿ-ಸದಲಗಾ, ನಿಪ್ಪಾಣಿ, ರಾಯಭಾಗ, ಯಮಕನಮರಡಿ, ಅಥಣಿ, ಹುಕ್ಕೇರಿ, ಕಾಗವಾಡ ಹಾಗೂ ಕುಡುಚಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಚಿಕ್ಕೋಡಿ ಲೋಕಸಭಾ ಕ್ಷೇತ್ರ ಮೊದಲು ಬೆಳಗಾವಿ ಉತ್ತರವಾಗಿತ್ತು. ಆನಂತರ ಚಿಕ್ಕೋಡಿ ಕ್ಷೇತ್ರವಾಗಿ ಬದಲಾಯಿತು. ಈವರೆಗೂ ಇಲ್ಲಿಂದ ಎಂಟು ಸಂಸದರು ಆಯ್ಕೆಯಾಗಿದ್ದರೆ, ಬಿ.ಶಂಕರಾನಂದ ಅವರು ದಾಖಲೆಯ ಸಂಖ್ಯೆಯಲ್ಲಿ ಗೆದ್ದಿದ್ದಾರೆ.

ರಾಯಭಾಗ ಹುಲಿ ವಿಎಲ್‌ ಪಾಟೀಲ್‌

ರಾಯಭಾಗದ ಹುಲಿ ಎಂದೇ ಕರೆಯಿಸಿಕೊಳ್ಳುತ್ತಿದ್ದ ಹಿರಿಯ ನಾಯಕ ವಿ.ಎಲ್.ಪಾಟೀಲ್‌ ಕೂಡ ಈ ಕ್ಷೇತ್ರವನ್ನು ಒಮ್ಮೆ ಪ್ರತಿನಿಧಿಸಿದ್ದವರು. ಆನಂತರ ರಾಜ್ಯ ರಾಜಕಾರಣದಲ್ಲೇ ಮುಂದುವರೆದ ವಿ.ಎಲ್‌.ಪಾಟೀಲರು ಸಚಿವರಾಗಿ ಕೆಲಸ ಮಾಡಿದವರು. ಪ್ರಭಾವಿ ನಾಯಕರಾಗಿದ್ದ ವಿ.ಎಲ್‌.ಪಾಟೀಲ್‌ ಅವರು ಇದು ಸಾಮಾನ್ಯ ಕ್ಷೇತ್ರವಾಗಿದ್ದರೆ ಇಲ್ಲಿಯೇ ಉಳಿಯುತ್ತಿದ್ದರು. ಮೀಸಲು ಬದಲಾವಣೆ ನಂತರ ಚಿಕ್ಕೋಡಿಯಿಂದ ಸ್ಪರ್ಧೆ ಅಸಾಧ್ಯವಾಯಿತು.

ಶಂಕರಾನಂದ ದಾಖಲೆ

ಈ ಕ್ಷೇತ್ರದಿಂದ ಸತತ 9 ಬಾರಿ ಗೆದ್ದು ಇತಿಹಾಸ ನಿರ್ಮಿಸಿದವರು ಹಿರಿಯ ಕಾಂಗ್ರೆಸ್‌ ನಾಯಕರಾಗಿದ್ದ ಶಂಕರಾನಂದ. ಸತತ 29 ವರ್ಷ ಕಾಲ ಈ ಕ್ಷೇತ್ರವನ್ನು ಪ್ರತಿನಿಧಿಸಿದರು. ಇಂದಿರಾಗಾಂಧಿ, ರಾಜೀವ್‌ಗಾಂಧಿ ಹಾಗೂ ನರಸಿಂಹರಾವ್‌ ಅವರ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದರು. ಹತ್ತಕ್ಕೂ ಹೆಚ್ಚು ಖಾತೆಗಳನ್ನು ನಿಭಾಯಿಸಿದ ಹಿರಿಮೆ ಶಂಕರಾನಂದ ಅವರದ್ದಾಗಿತ್ತು. ಶಂಕರಾನಂದ ಅವರು ಅಭ್ಯರ್ಥಿಯಾಗಿದ್ಧಾರೆ ಎಂದರೆ ಬೇರೆ ಯಾರೂ ಗೆಲ್ಲಲು ಆಗುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಅವರ ಖ್ಯಾತಿ ಕ್ಷೇತ್ರದಲ್ಲಿತ್ತು. ಅದೇ ರೀತಿಯ ಹಿಡಿತವನ್ನು ಕ್ಷೇತ್ರದಲ್ಲಿ ಅವರು ಹೊಂದಿದ್ದರು.

ರತ್ನಮಾಲ ಸವಣೂರು

ಹಿರಿಯ ನಾಯಕ ಶಂಕರಾನಂದ ಅವರನ್ನು ಮಣಿಸಿ ಗೇಯಿಂಟ್‌ ಕಿಲ್ಲರ್‌ ಎನ್ನುವ ಹೆಸರು ಪಡೆದಿದ್ದರು ರತ್ನಮಾಲ ಸವಣೂರು. ಜನತಾದಳದಿಂದ 1996ರಲ್ಲಿ ಟಿಕೆಟ್‌ ಪಡೆದು ಆಶ್ಚರ್ಯಕರ ರೀತಿಯಲ್ಲಿ ಗೆದ್ದು ಬಂದರು. ಅಲ್ಲದೇ ಐಕೆ ಗುಜ್ರಾಲ್‌ ಸಂಪುಟದಲ್ಲಿ ಸಚಿವರಾಗಿಯೂ ಕೆಲಸ ಮಾಡಿದರು. ಆನಂತರ ರತ್ನಮಾಲ ಗೆಲ್ಲಲು ಆಗಲಿಲ್ಲ.

ಜಿಗಜಿಣಿಗಿಗೂ ಜೈ

ವಿಜಯಪುರದ ಹಿರಿಯ ರಾಜಕಾರಣಿ, ಕರ್ನಾಟಕದಲ್ಲಿ ಸಚಿವರಾಗಿ ಹೆಸರು ಮಾಡಿದ್ದ ಜಿಗಜಿಣಗಿ ಅವರು ಚಿಕ್ಕೋಡಿ ಕ್ಷೇತ್ರಕ್ಕೆ ವಲಸೆ ಬಂದರು. ಅದರಲ್ಲೂ ರಾಮಕೃಷ್ಣ ಹೆಗಡೆ ಅವರೊಂದಿಗೆ ಆತ್ಮೀಯರಾಗಿದ್ದ ಕಾರಣಕ್ಕೆ ಲೋಕಸಭೆ ಚುನಾವಣೆಗೆ ಸ್ಪರ್ಧೆಗೆ ಅಣಿಯಾಗಿ ಚಿಕ್ಕೋಡಿಯಿಂದ ಲೋಕಶಕ್ತಿ ಪಕ್ಷದಿಂದ ಗೆಲುವು ಸಾಧಿಸಿದರು. ಮರು ಚುನಾವಣೆಯಲ್ಲಿ ಸಂಯುಕ್ತ ಜನತಾದಳದಿಂದ ಗೆದ್ದರು. ಆನಂತರ ಬಿಜೆಪಿ ಸೇರಿದ ಜಿಗಜಿಣಗಿ ಆ ಪಕ್ಷದಿಂದಲೂ ಒಮ್ಮೆ ಆಯ್ಕೆಯಾದವರು. ವಿಭಿನ್ನ ಪಕ್ಷದಿಂದ ಮೂರು ಬಾರಿ ಚಿಕ್ಕೋಡಿಯಲ್ಲಿ ಗೆದ್ದವರು ಅವರು. ಆನಂತರ ಮೀಸಲು ಬದಲಾಗಿದ್ದರಿಂದ ವಿಜಯಪುರ ಕ್ಷೇತ್ರಕ್ಕೆ ವಾಪಾಸಾಗಿ ಅಲ್ಲಿಯೂ ಮೂರು ಬಾರಿ ಗೆದ್ದು, ಈ ಬಾರಿ ಮತ್ತೆ ಬಿಜೆಪಿ ಟಿಕೆಟ್‌ ಗಿಟ್ಟಿಸಿಕೊಂಡಿದ್ದಾರೆ.

ಕತ್ತಿ ಹುಕ್ಕೇರಿ ಸಮರ

ಸಾಮಾನ್ಯ ಕ್ಷೇತ್ರವಾದ ನಂತರ ಇಲ್ಲಿ ಪ್ರಕಾಶ್‌ ಹುಕ್ಕೇರಿ ಹಾಗೂ ರಮೇಶ್‌ ಕತ್ತಿ ನಡುವೆ ಸ್ಪರ್ಧೆ ನಡೆಯುತ್ತಲೇ ಬಂದಿದೆ. ಇಬ್ಬರೂ ಒಮ್ಮೊಮ್ಮೆಇಲ್ಲಿ ಗೆದ್ದಿದ್ದಾರೆ. ಎರಡೂ ಕುಟುಂಬಗಳು ಸಕ್ಕರೆ, ಸಹಕಾರ ವಲಯದಲ್ಲಿ ಚಿಕ್ಕೋಡಿಯಲ್ಲಿ ಪ್ರಬಲ ಹಿಡಿತವನ್ನು ಹೊಂದಿವೆ.

ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಅಣ್ಣಾಸಾಹೇಬ್‌ ಜೊಲ್ಲೆ ಅವರಿಗೆ ಹಿಂದಿನ ಅವಧಿಯಲ್ಲಿ ಅವಕಾಶ ದೊರೆತು ಗೆದ್ದು ಬಂದರು ಕೂಡ. ಈ ಬಾರಿಯೂ ಅವರೇ ಬಿಜೆಪಿ ಹುರಿಯಾಳಾಗಿದ್ದಾರೆ.

ಸಮಸ್ಯೆಗಳ ಸರಮಾಲೆ

ಚಿಕ್ಕೋಡಿ ಲೋಕಸಭಾ ಮತ ಕ್ಷೇತ್ರ ಮಹಾರಾಷ್ಟ್ರದೊಂದಿಗೆ ಹೆಚ್ಚಿನ ಒಡನಾಟ ಹೊಂದಿದೆ. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಗಳಿಗೆ ಮಹಾರಾಷ್ಟ್ರದ ಗಡಿ ಅಂಟಿಕೊಂಡಿದೆ. ಹೀಗಿದ್ದರೂ ಈ ಭಾಗ ಅಭಿವೃದ್ದಿ ಕಂಡಿಲ್ಲ ಎನ್ನುವ ಭಾವನೆ ಜನರಲ್ಲಿದೆ. ಆಗಾಗ ಪ್ರತ್ಯೇಕ ರಾಜ್ಯದ ಮಾತುಗಳು ಕೇಳಿ ಬಂದಾಗ ಚಿಕ್ಕೋಡಿ ಕ್ಷೇತ್ರದ ಪ್ರಭಾವವೇ ಹೆಚ್ಚುಇರುವುದು ಉಂಟು. ಶಿಕ್ಷಣಕ್ಕೂ ಬೆಳಗಾವಿಯನ್ನೇ ಅವಲಂಬಿಸುವ ಸ್ಥಿತಿ ಈಗಲೂ ಇದೆ. ರಸ್ತೆ, ಕುಡಿಯುವ ನೀರಿನಂತಹ ಮೂಲ ಬೇಡಿಕೆಗಳಿಗೂ ಸ್ಪಂದನೆ ದೊರೆತಿಲ್ಲ. ಕೃಷ್ಣಾ ನದಿ ಕ್ಷೇತ್ರದಲ್ಲಿ ಹರಿದು ಹೋಗಿದ್ದರೂ ನೀರಿನ ಬವಣೆ ತಪ್ಪಿಲ್ಲ. ಪ್ರಭಾವಿಗಳು ಇಲ್ಲಿಂದ ಗೆದ್ದರೂ ಕ್ಷೇತ್ರ ಮಾತ್ರ ಬಡವಾಗಿಯೇ ಉಳಿದಿದೆ ಎನ್ನುವುದು ಜನರ ಒಡಲಾಳದ ನುಡಿ.

ಈ ಬಾರಿ ಲೆಕ್ಕಾಚಾರ

ಚಿಕ್ಕೋಡಿ ಕ್ಷೇತ್ರದಲ್ಲಿ ಈ ಬಾರಿ ಜಿದ್ದಾಜಿದ್ದಿನ ಕಣ ಏರ್ಪಟ್ಟಿದೆ. ಏಕೆಂದರೆ ವಿಧಾನಸಭೆ ಚುನಾವಣೆಯಲ್ಲೂ ಹೆಚ್ಚಿನ ಕ್ಷೇತ್ರಗಳನ್ನೂ ಕಾಂಗ್ರೆಸ್‌ ಗೆದ್ದಿದೆ. ಮೂರು ಬಿಜೆಪಿ, ಐವರು ಕಾಂಗ್ರೆಸ್‌ ಶಾಸಕರು ಇದ್ಧಾರೆ. ಅದರಲ್ಲೂ ಸತೀಶ್‌ ಜಾರಕಿಹೊಳಿ, ಲಕ್ಷ್ಮಣ ಸವದಿಯಂತಹ ಹಿರಿಯ ನಾಯಕರು ಕಾಂಗ್ರೆಸ್‌ ಗೆ ಬಲ. ಅಣ್ಣಾಸಾಹೇಬ್‌ ಜೊಲ್ಲೆ ಪಕ್ಷದ ಜತೆಗೆ ತಮ್ಮದೇ ಜೊಲ್ಲೆ ಸಮೂಹದ ಸಹಕಾರಿ ಸಂಸ್ಥೆಗಳ ಸಂಪರ್ಕ ಜಾಲದ ಮೇಲೆಯೇ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಬಹುತೇಕ ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕ ಹೆಸರು ಮುಂಚೂಣಿಯಲ್ಲಿದ್ದು, ಪ್ರಬಲ ಸ್ಪರ್ಧೆ ನೀಡಬಹುದು.