ಮೈಸೂರು ಯುವ ದಸರಾ ಅಕ್ಟೋಬರ್ 6ರಿಂದ ಆರಂಭ; ಶ್ರೇಯಾ ಘೋಷಾಲ್, ಎಆರ್ ರೆಹಮಾನ್ರಿಂದ ಕಾರ್ಯಕ್ರಮ, ಇಲ್ಲಿದೆ ವೇಳಾಪಟ್ಟಿ
Mysore Yuva Dasara 2024: ಮೈಸೂರು ಯುವ ದಸರಾ ಕಾರ್ಯಕ್ರಮ ಅಕ್ಟೋಬರ್ 6ರಂದು ಆರಂಭವಾಗಲಿದ್ದು, ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ. ಮತ್ತು ಈ ಕಾರ್ಯಕ್ರಮಕ್ಕೆ ಭದ್ರತೆ ಹೇಗಿರಲಿದೆ ಎಂಬುದರ ವಿವರ ಇಲ್ಲಿದೆ ನೋಡಿ.
ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಅಕ್ಟೋಬರ್ 6ರಿಂದ ಯುವ ದಸರಾ ಆರಂಭವಾಗಲಿದ್ದು, ದಿನಕ್ಕೊಂದು ಕಾರ್ಯಕ್ರಮ ನಡೆಯಲಿದೆ. ಮೈಸೂರು ಹೊರವಲಯದ ಉತ್ತನಹಳ್ಳಿ ಬಳಿಯ ಮೈದಾನದಲ್ಲಿ ಯುವ ದಸರಾ ಆಯೋಜನೆ ಮಾಡಲಾಗಿದೆ. ಪ್ರತಿ ದಿನ ಯಾರೆಲ್ಲ ಕಾರ್ಯಕ್ರಮ ನಡೆಸಲಿದ್ದಾರೆ? ಯಾವ ರೀತಿ ಬಂದೋಬಸ್ತ್ ಏರ್ಪಡಿಸಲಾಗಿದೆ ಸೇರಿದಂತೆ ಪ್ರಮುಖ ಅಂಶಗಳ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 6: ಬಾಲಿವುಡ್ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಮತ್ತು ತಂಡದಿಂದ ಸಂಗೀತ ಮನರಂಜನೆ ಕಾರ್ಯಕ್ರಮ
ಅಕ್ಟೋಬರ್ 7: ಸಂಗೀತ ನಿರ್ದೇಶಕ ರವಿ ಬಸ್ರೂರ್ ಮತ್ತು ತಂಡದವರಿಂದ ಸಂಗೀತ ಮನರಂಜನೆ ಕಾರ್ಯಕ್ರಮ
ಅಕ್ಟೋಬರ್ 8: ಬಾಲಿಹುಡ್ ಖ್ಯಾತಿಯ ರ್ಯಾಪರ್ ಬಾದ್ ಷಾ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ
ಅಕ್ಟೋಬರ್ 9: ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ
ಅಕ್ಟೋಬರ್ 10: ಹಿರಿಯ ಸಂಗೀತ ನಿರ್ದೇಶಕ ಇಳಯರಾಜ ಮತ್ತು ತಂಡದವರಿಂದ ಸಂಗೀತ ಮನರಂಜನೆ ಕಾರ್ಯಕ್ರಮ ಆಯೋಜನೆ
ಯುವ ದಸರಾ ವೀಕ್ಷಣೆಗೆ ವ್ಯಾಪಕ ಬಂದೋಬಸ್ತ್
ಯುವ ದಸರಾ ವೀಕ್ಷಣೆಗೆ ಪ್ರತಿನಿತ್ಯ ಸುಮಾರು 50 ರಿಂದ 70 ಸಾವಿರ ಜನರು ಸೇರುವ ನಿರೀಕ್ಷೆ ಇರುವ ಕಾರಣ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಹೀಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಮೈಸೂರು ಜಿಲ್ಲೆ ಹಾಗೂ ಹೊರ ಜಿಲ್ಲೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಬಂದೋಬಸ್ತ್ಗೆ ನಿಯೋಜನೆ ಮಾಡಲಾಗಿದೆ. 4 ಎಸ್ಪಿ, 12 ಡಿಎಸ್ಪಿ, 37 ಸಿಪಿಐ, 76 ಪಿಎಸ್ಐ, 110ಎ ಎಸ್ಐ, 600 ಪೊಲೀಸರು, 100 ಮಹಿಳಾ ಪೊಲೀಸ್ ಸಿಬ್ಬಂದಿ, 300 ಹೋಂ ಗಾರ್ಡ್ಗಳು ಸೇರಿದಂತೆ 1239 ಮಂದಿ ಬಂದೋಬಸ್ತ್ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ.
ಇವರ ಜೊತೆಗೆ 6 ಕೆಎಸ್ಆರ್ಪಿ, 10 ಡಿಎಆರ್, 10 ಎಎಸ್ಸಿ, 4 ಕ್ಯುಆರ್ಟಿ, 2 ಆಂಬ್ಯುಲೆನ್ಸ್, 2 ಅಗ್ನಿಶಾಮಕ ದಳದ ವಾಹನ, 1 ಒಂದು ಮೊಬೈಲ್ ಕಮಾಂಡೋ ವಾಹನ ನಿಯೋಜನೆ ಮಾಡಲಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ವನ್ಯಜೀವಿ ಹಾವಳಿ ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಕ್ರಮ ವೀಕ್ಷಣೆಗೆ ಆಗಮಿಸುವ ವಿವಿಐಪಿ, ಗಣ್ಯರು ಹಾಗು ಸಾರ್ವಜನಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಎಲ್ಲಾ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಸಿ ಸಿ ಕ್ಯಾಮರಾಗಳು ಅಳವಡಿಕೆ, ಪ್ರತಿ ಕಾರ್ಯಕ್ರಮಕ್ಕೂ 5 ಸಾವಿರ ಟಿಕೆಟ್ ಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಯುವ ದಸರಾ ವಿಶೇಷಾಧಿಕಾರಿ ಹಾಗು ಮೈಸೂರು ಜಿಲ್ಲಾ ಎಸ್ಪಿ ಎನ್ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.