‘ಹಿಟ್ ಅಂತ ನಾನಿನ್ನೂ ನೋಡಿಯೇ ಇಲ್ಲ, ಧರ್ಮಾನ ಹಾಕ್ಕೊಂಡ್ರೆ ಸಿನಿಮಾ ಓಡಲ್ಲ ಎಂದವರೇ ಹೆಚ್ಚು’ ಅವಮಾನಗಳ ಬಗ್ಗೆ ಧರ್ಮ ಕೀರ್ತಿರಾಜ್ ಮಾತು
Bigg Boss Kannada 11: ಮನದೊಳಗೆ ಯಾರಿಗೂ ಹೇಳದೆ ಉಳಿದ ನೋವನ್ನು ಹಂಚಿಕೊಳ್ಳುವಂತೆ ಬಿಗ್ ಬಾಸ್ ಸೂಚಿಸಿದ್ದರು. ಅದರಂತೆ, ಧರ್ಮ ಕೀರ್ತಿರಾಜ್ ತಮ್ಮ ಸಿನಿಮಾ ಸೋಲು ಮತ್ತು ಬೆನ್ನ ಹಿಂದೆ ಆಡಿಕೊಂಡ ಜನರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಪಘಾತವೊಂದರ ಬಗ್ಗೆಯೂ ಹೇಳಿಕೊಂಡಿದ್ದಾರೆ.
Dharma Keerthiraj Struggle Life: ಬಿಗ್ ಬಾಸ್ ಕನ್ನಡ ಸೀಸನ್ 11 ಇಂದಿಗೆ ನಾಲ್ಕನೇ ವಾರಕ್ಕೆ ಕಾಲಿರಿಸಿದೆ. ಎರಡು ವಾರಗಳ ಕಾಲ ರೋಷಾವೇಷದಲ್ಲಿದ್ದ ಬಿಗ್ ಮನೆ, ಈಗ ಕೊಂಚ ತಿಳಿಯಾಗಿದೆ. ಅದರಂತೆ ಸೋಮವಾರ (ಅ. 28) ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ನಗಿಸಿದ್ದ ಅದೇ ಬಿಗ್‌ಬಾಸ್ ಎಲ್ಲರ ಕಣ್ಣಲ್ಲೂ ನೀರು ಹಾಕಿಸಿದ್ದಾರೆ. ಸ್ಪರ್ಧಿಗಳು ತಮ್ಮ ಜೀವನದ ಕಹಿ ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ. ಬೇಸರ ಹೊರಹಾಕಿದ್ದಾರೆ, ದುಃಖಿಸಿದ್ದಾರೆ, ಕಣ್ಣೀರಿಟ್ಟಿದ್ದಾರೆ. ಆ ಪೈಕಿ ಧರ್ಮ ಕೀರ್ತಿರಾಜ್ ತಮ್ಮ ಸಿನಿಮಾ ಕೆರಿಯರ್ ಬಗ್ಗೆ ಮಾತನಾಡಿದರು. ದಶಕಗಳು ಕಳೆದರೂ ಇಲ್ಲಿಯವರೆಗೂ ಒಂದೇ ಒಂದು ಹಿಟ್ ಸಿಕ್ಕಿಲ್ಲ ಎಂಬ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ.
"ಇದು ಬಿಗ್‌ಬಾಸ್.. ನಕ್ಕು ನಲಿದು ದೇಹ ಹಗುರಾಗಿದೆ. ಆದರೆ, ಮನಸ್ಸು ಇನ್ನೂ ಭಾರವಾಗಿದೆ. ಇದು ಮನೆಯ ವಾತಾವರಣದಿಂದ ಸ್ಪಷ್ಟವಾಗಿ ತಿಳಿಯುತ್ತಿದೆ. ಹೊರ ಜಗತ್ತಿನ ವಿಚಾರ ಏನೇ ಇದ್ದರೂ, ತೋಡಿಕೊಳ್ಳದೇ ಅದುಮಿಟ್ಟುಕೊಂಡ ಭಾವನೆಯ ಬವಣೆ ಸುಡುವುದು ನಮ್ಮನ್ನೇ. ಹಾಗಾಗಿ ಮುಂದಿನ ಸುತ್ತಿನಲ್ಲಿ, ಆಕ್ರೋಶ, ದುಗುಡ, ತಲ್ಲಣ, ಇನ್ಯಾವುದೇ ಭಾವನೆಗಳನ್ನು ನೀವು ಮುಕ್ತವಾಗಿ ವ್ಯಕ್ತಪಡಿಸಿ" ಎಂದು ಬಿಗ್ ಬಾಸ್ ಆದೇಶಿಸಿದ್ದರು. ಆ ಮಾತಿನಂತೆ ಎಲ್ಲರ ಮುಂದೆ ಬಂದ ಧರ್ಮ ಕೀರ್ತಿರಾಜ್, ಸೋಲಿನ ಸುಳಿಯಿಂದ ಇನ್ನೂ ಹೊರಬಂದಿಲ್ಲ ಎಂದಿದ್ದಾರೆ.
ಒಂದಲ್ಲ ಒಂದು ದಿನ ಮೇಲೆ ಬರ್ತಿನಿ..
"ಸಿನಿಮಾ ನಟ ಕೀರ್ತಿರಾಜ್ ಅವರ ಮಗ ಅಂದ ತಕ್ಷಣ ಕೆಲವರಿಗೆ ಒಂದು ಭಾವನೆ ಬಂದಿರುತ್ತದೆ. ಎಲ್ಲವೂ ಈಸಿಯಾಗಿ ಬಂದು ಬಿಡುತ್ತೆ. ತುಂಬ ಆರಾಮವಾಗಿ ಜೀವನ ನಡೆಸುತ್ತಿರುತ್ತಾರೆ ಎಂದು ಅಂದುಕೊಂಡಿರುತ್ತಾರೆ. ಆದರೆ ಚಿಕ್ಕ ವಯಸ್ಸಿನಲ್ಲಿಯೇ ನನಗೆ ಆಗ ಐದಾರು ವರ್ಷ ವಯಸ್ಸು. ಮದುವೆ ವಾರ್ಷಿಕೋತ್ಸವಕ್ಕೆ ತಿರುಪತಿಗೆ ಹೋದಾಗ, ದರ್ಶನ ಮುಗಿಸಿ ಬಸ್‌ನಲ್ಲಿ ಮನೆಗೆ ಬರುವಾಗ, ಅಮ್ಮನ ಕೈ ಕಿಟಕಿಯಿಂದ ಹೊರಗಿತ್ತು. ಅಪಘಾತದಲ್ಲಿ ಅರ್ಧ ಕೈ ಕಟ್ ಆಗಿತ್ತು. ಅಪ್ಪನ ಜುಬ್ಬಾ ಪೂರ್ತಿ ರಕ್ತಮಯವಾಗಿತ್ತು. ಅದಿನ್ನು ನನಗೆ ನೆನಪಿದೆ" ಎಂದು ಹಳೇ ಘಟನೆ ನೆನಪಿಸಿಕೊಂಡಿದ್ದಾರೆ.
ಸಿನಿಮಾ ಸೋಲು ಗೆಲುವಿನ ಬಗ್ಗೆಯೂ ಮಾತನಾಡಿದ ಧರ್ಮ, "ದೇವರ ದಯೆಯಿಂದ ಲೆಕ್ಕ ಹಾಕಿದರೆ 20 ಸಿನಿಮಾಗಳನ್ನು ಮಾಡಿದ್ದೇನೆ. ನಾಲ್ಕೈದು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಸಿನಿಮಾ ಜರ್ನಿ ಶುರುವಾದಾಗ, ಅಲ್ಲಿಂದ ಇಲ್ಲಿಯವರೆಗೂ ನಾನು ಹಿಟ್ ಅನ್ನೋದನ್ನ ಕಂಡಿಲ್ಲ. ಎಲ್ಲೋ ಒಂದು ಕಡೆ ಮಾತು ಬಂತು. ಇವರ ತಂದೆಯವರಿಗೆ ಕಥೆ ಒಪ್ಪಿಸಬೇಕು, ಸಂಭಾವನೆ ವಿಷ್ಯ ಮಾತನಾಡಬೇಕು ಎಂದು. ಈ ವಿಚಾರ ಅಪ್ಪನಿಗೂ ಗೊತ್ತಾಗಿ, ನೀನೆ ಮುಂದಿನದನ್ನು ನೋಡಿಕೋ ಎಂದು ಕೈಬಿಟ್ರು"
ಬೆನ್ನ ಹಿಂದೆ ಮಾತನಾಡಬೇಡಿ…
"ಆ ಹಂತದಲ್ಲಿ ಕೆಲವರು, ಹೇ ಧರ್ಮಾನಾ ಹಾಕ್ಕೊಂಡ್ರೆ, ಸಿನಿಮಾ ಓಡಲ್ಲ. ಧರ್ಮಾನಾ ಹಾಕೊಂಡ್ರೆ ಇದಾಗಲ್ಲ.. ಏನಕ್ಕೆ ಬೇಕು? ಎಂದು ಕೆಲವರು ಹಿಂದೆ ಮಾತನಾಡಿದ್ರು. ಅವರಿಗೆ ನಾನು ಒಂದು ವಿಚಾರ ಹೇಳಲು ಇಷ್ಟಪಡ್ತಿನಿ. ದಯವಿಟ್ಟು ನಿಮ್ಮ ಕೈಲಿ ಆಗಲಿಲ್ಲ ಎಂದರೆ ಮುಂದೆ ಬರಬೇಡಿ. ಪ್ಲೀಸ್ ಬರುವವರನ್ನು ಮಾತ್ರ ತಡೀಬೇಡಿ. ನನಗೂ ಒಂದು ಕಾನ್ಫಿಡೆನ್ಸ್ ಇದೆ. ಎಲ್ಲೂ ಸಹ ನಾನು ಹೆಸರು ಕೆಡಿಸಿಕೊಂಡಿಲ್ಲ. ನಮ್ಮ ತಂದೆ ಹೆಸರಿಗೆ ಕಳಂಕ ತಂದಿಲ್ಲ. ಸಾಫ್ಟ್ ನೇಚರ್ ಇದೆ.. ನಾನು ಬೆಳೆದಿದ್ದೇ ಹಾಗೆ. ಬಿಗ್ ಬಾಸ್ ಮನೆಯಲ್ಲೂ ಹಾಗೇ ಇದ್ದೀನಿ"
ಅಮ್ಮನ ಆಸೆ ಈಡೇರಿಸುವೆ..
"ಬಿಗ್ ಬಾಸ್‌ನಲ್ಲಿ ಜನ ಎಷ್ಟು ದಿನ ಇಟ್ಟುಕೊಳ್ತಾರೋ ನೋಡ್ತಿನಿ. ಹೊರಗೆ ಬಂದ ಮೇಲೆ ಒಂದು ಹಿಟ್ ಸಿನಿಮಾ ಕೊಟ್ಟೇ ಕೊಡ್ತೀನಿ. ನಾನು ಏನೇ ಮಾಡಿದರೂ, ಒಂದು ದೊಡ್ಡ ಉಡುಗೊರೆ ಕೊಡಲು ಹೊರಟಿರುವುದು ನನ್ನ ತಾಯಿಗೆ. ಯಾವುದೇ ಫಿಲ್ಡ್‌ನಲ್ಲಿ ನನಗೆ ಯಶಸ್ಸು ಸಿಕ್ಕರೂ, ನಾನು ಅದನ್ನು ನನ್ನ ತಾಯಿಗೆ ಕೊಡ್ತಿನಿ" ಎಂದು ಹೇಳಿದ್ದಾರೆ ಧರ್ಮ.
ವಿಭಾಗ