ಬಿಗ್‌ಬಾಸ್ ಕನ್ನಡ 11: ಕಾಮಿಡಿ ಪೀಸ್ ಅಂತ ಪದೇ ಪದೆ ಹೇಳಬೇಡಿ ಎಂದ ಮಾನಸಾಗೆ ಅಸಭ್ಯ ಪದ ಬಳಸಿದ ಲಾಯರ್ ಜಗದೀಶ್; ಸಹ ಸ್ಪರ್ಧಿಗಳು ಗರಂ
ಸ್ಪರ್ಧಿ ಧನರಾಜ್‌ಗೆ ಪದೇ ಪದೆ ಕಾಮಿಡಿ ಪೀಸ್ ಎಂದು ಪದ ಬಳಕೆ ಮಾಡಿದ್ದರಿಂದ ಕೋಪಗೊಳ್ಳುವ ಮಾನಸಾ, ಪದೇ ಪದೇ ಹಾಗೆ ಹೇಳಬೇಡಿ ಎನ್ನುತ್ತಾಳೆ. ಮಾನಸಾ ಮಾತಿಗೆ ಕೋಪಗೊಳ್ಳುವ ಲಾಯರ್ ಜಗದೀಶ್, ಯಾವ ಸೀಮೆ ಹೆಂಗಸು ಇವಳು ಎಂದು ಅಸಭ್ಯ ಪದ ಬಳಸುತ್ತಾರೆ. ಇದರಿಂದ ಸಹಸ್ಪರ್ಧಿಗಳು ಕೋಪಗೊಳ್ಳುತ್ತಾರೆ.
ಬಿಗ್‌ಬಾಸ್ ಪ್ರತಿ ಸೀಸನ್‌ನಲ್ಲಿ ಮುನಿಸು, ಜಗಳ ಇದ್ದೇ ಇರುತ್ತದೆ. ಕೆಲವು ಸ್ಪರ್ಧಿಗಳು ಸಹ ಸ್ಪರ್ಧಿಗಳಿಗೆ ಅಸಭ್ಯ ಪದ ಬಳಕೆ ಮಾಡಿದ್ದೂ ಉಂಟು. ಈ ಸೀಸನ್‌ನಲ್ಲಿ ಅದು ಮುಂದುವರೆದಿದೆ. ಬಿಗ್‌ಬಾಸ್ ಸೀಸನ್ 11 ಆರಂಭವಾಗಿ ಮೂರು ದಿನಗಳು ಕಳೆದಿವೆ. ಟಾಸ್ಕ್, ಊಟದ ವಿಚಾರವಾಗಿ ಸ್ಪರ್ಧಿಗಳ ನಡುವೆ ಜಗಳ ತಾರಕಕ್ಕೆ ಏರಿದೆ. ಬುಧವಾರದ ಟಾಸ್ಕ್‌ನಲ್ಲಿ ಲಾಯರ್ ಜಗದೀಶ್, ಮಾನಸಾಗೆ ಅಸಭ್ಯ ಪದ ಬಳಸಿ ಇತರ ಸ್ಪರ್ಧಿಗಳ ಕೋಪಕ್ಕೆ ಗುರಿಯಾಗಿದ್ದಾರೆ.
ತಕ್ಕಡಿ ಭಾಗ್ಯಾ ಟಾಸ್ಕ್‌ನಲ್ಲಿ ಜಗಳ
ಈ ವಾರ ನಾಮಿನೇಟ್ ಆದರವರಲ್ಲಿ ಒಬ್ಬ ಸ್ಪರ್ಧಿಯನ್ನು ನಾಮಿನೇಶನ್ ಲಿಸ್ಟ್‌ನಿಂದ ಹೊರ ಇಡಲು ಅವಕಾಶವಿದ್ದು ಅದಕ್ಕಾಗಿ ಬಿಗ್‌ಬಾಸ್ ಒಂದು ಟಾಸ್ಕ್ ನೀಡುತ್ತಾರೆ. ಅದರ ಪ್ರಕಾರ ತಕ್ಕಡಿ ಭಾಗ್ಯ ಎಂಬ ಟಾಸ್ಕ್ ನೀಡಲಾಗಿತ್ತು. ನಾಮಿನೇಟ್ ಆದ ಸ್ಪರ್ಧಿಗಳು ಇತರ ಸ್ಪರ್ಧಿಗಳ ಫೋಟೋ ಇರುವ ತಕ್ಕಡಿಗೆ ಮಣ್ಣನ್ನು ಹಾಕಬೇಕು. ಯಾರ ತಕ್ಕಡಿ ಮೊದಲು ಕೆಳಗೆ ಹೋಗುವುದೋ ಆ ಸ್ಪರ್ಧಿ ಟಾಸ್ಕ್‌ನಿಂದ ಹೊರ ಹೋಗಬೇಕು. ಆಟ ಆಡುವಾಗ ಲಾಯರ್ ಜಗದೀಶ್, ಯಮನಾ ಶ್ರೀನಿಧಿಯನ್ನು ತಳ್ಳುವುದರಿಂದ ಅವರು ಕೆಳಗೆ ಬೀಳುತ್ತಾರೆ. ಇದರಿಂದ ರೆಫ್ರಿ ಧನರಾಜ್ ಹಾಗೂ ಲಾಯರ್ ಜಗದೀಶ್ ನಡುವೆ ಮಾತಿನ ಜಕಮಕಿ ನಡೆಯುತ್ತದೆ. ಟಾಸ್ಕ್ ಮುಗಿದು ಮನೆ ಒಳಗೆ ಬಂದಾಗಲೂ ಲಾಯರ್ ಜಗದೀಶ್ ತಮ್ಮ ಮಾತನ್ನು ನಿಲ್ಲಿಸುವುದಿಲ್ಲ.
ಮಾನಸಾಗೆ ಅಸಭ್ಯ ಪದ ಬಳಕೆ
ಅಷ್ಟು ಉದ್ದ ಇದ್ದಾನೆ, ನನಗೆ ಸವಾಲು ಹಾಕುತ್ತಾನೆ ಎಂದು ಧನರಾಜ್ ಬಗ್ಗೆ ಮಾತನಾಡುತ್ತಾರೆ. ಬಾಡಿ ಶೇಮಿಂಗ್ ಬೇಡ ಸರ್ ಎಂದು ಸಹಸ್ಪರ್ಧಿಗಳು ಜಗದೀಶ್‌ಗೆ ಸಲಹೆ ನೀಡುತ್ತಾರೆ. ಅವನೊಬ್ಬ ಕಾಮಿಡಿ ಪೀಸ್ ಎಂದು ಮತ್ತೆ ಜಗದೀಶ್, ಧನರಾಜ್ ಬಗ್ಗೆ ಅಪಹಾಸ್ಯ ಮಾಡುತ್ತಾರೆ. ಕಾಮಿಡಿ ಪೀಸ್ ಎಂಬ ಮಾತು ಕೇಳಿ ಮಾನಸಾ ಬೇಸರಗೊಳ್ಳುತ್ತಾರೆ. ಹಾಗೆಲ್ಲಾ ಕೇವಲವಾಗಿ ನೋಡಬೇಡಿ ಸರ್, ಬೇಸರದಲ್ಲಿರುವ ಎಷ್ಟೊ ಜನರನ್ನು ಕಾಮಿಡಿ ಮಾಡಿ ನಗಿಸುವುದು ಸುಲಭವಲ್ಲ ಪದೇ ಪದೆ ಹಾಗೆ ಹೇಳಬೇಡಿ ಎನ್ನುತ್ತಾರೆ, ಆಗ ಜಗದೀಶ್ , ಮಾನಸ ವಿರುದ್ಧ ತಿರುಗಿ ಬೀಳುತ್ತಾರೆ. ಯಾವ ಸೀಮೆ ಹೆಂಗಸು ಇವಳು ಎನ್ನುತ್ತಾರೆ. ಇದನ್ನು ಕೇಳಿ ಮಾನಸ ಬೇಸರಗೊಳ್ಳುತ್ತಾರೆ. ಮಹಿಳೆಯರಿಗೆ ಮರ್ಯಾದೆ ಕೊಟ್ಟು ಮಾತನಾಡಿ ಎಂದು ಸಹ ಸ್ಪರ್ಧಿಗಳು ಜಗದೀಶ್‌ಗೆ ಬುದ್ಧಿ ಹೇಳುತ್ತಾರೆ. ತಮ್ಮ ಜೊತೆ ಮಾತನಾಡಲು ಬಂದ ಎಲ್ಲರಿಗೂ ಜಗದೀಶ್ ಎದುರುತ್ತರ ಕೊಟ್ಟು ಮಾತನಾಡುತ್ತಾರೆ.
ಮಾನಸಾಗೆ ಸಮಾಧಾನ ಮಾಡಿದ ಸಹಸ್ಪರ್ಧಿಗಳು
ಅಳುತ್ತಿದ್ದ ಮಾನಸಾಗೆ ಸಹಸ್ಪರ್ಧಿಗಳು ಸಮಾಧಾನ ಮಾಡುತ್ತಾರೆ. ಅವರು ಬೇಕಂತಲೇ ಹೀಗೆಲ್ಲಾ ಮಾಡುತ್ತಿದ್ದಾರೆ ನೀನು ತಲೆ ಕೆಡಿಸಿಕೊಳ್ಳಬೇಡ, ನೀನು ಏನಂತ ನಮಗೆ ಗೊತ್ತು ಎಂದು ಮಾನಸಾಗೆ ಸಪೋರ್ಟ್ ಮಾಡುತ್ತಾರೆ. ಈ ಬಾರಿಯ ನಾಮಿನೇಷನ್‌ನಿಂದ ಉಗ್ರಂ ಮಂಜು ಸೇಫ್ ಆಗಿದ್ದಾರೆ. ಚೈತ್ರಾ ಕುಂದಾಪುರ, ಭವ್ಯಾಗೌಡ, ಹಂಸ, ಗೌತಮಿ ಜಾದವ್, ಲಾಯರ್ ಜಗದೀಶ್, ಮಾನಸ, ಮೋಕ್ಷಿತಾ ಪೈ, ಶಿಶಿರ್ ಶಾಸ್ತ್ರಿ, ಯಮುನಾ ಶ್ರೀನಿಧಿ ಈ 9 ಮಂದಿಯಲ್ಲಿ ಈ ಬಾರಿ ಮನೆಯಿಂದ ಹೊರ ಹೋಗುವವರು ಯಾರು ಎಂಬುದು ಶೀಘ್ರದಲ್ಲೇ ತಿಳಿಯಲಿದೆ.