Shruti Haasan: ನನ್ನ ಮದುವೆ ವಿಚಾರದಲ್ಲಿ ಮುಚ್ಚಿಡುವುದೇನಿದೆ? ಸತ್ಯ ಬಿಚ್ಚಿಟ್ಟ ಸಲಾರ್ ನಟಿ ಶೃತಿ ಹಾಸನ್
ಸಲಾರ್ ಸಿನಿಮಾದಲ್ಲಿ ನಟಿಸಿರುವ ಶೃತಿ ಹಾಸನ್‌ಗೆ ಶಾಂತನೂ ಹಝಾರಿಕಾ ಜತೆ ಈಗಾಗಲೇ ಮದುವೆಯಾಗಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿತ್ತು. ಬಾಲಿವುಡ್ ನಟನಟಿಯರ ಬೆಸ್ಟ್ ಫ್ರೆಂಡ್ ಓರಿ ಹೇಳಿದ ಮಾತಿನಿಂದ ಇಂತಹ ಅನುಮಾನ ಎಲ್ಲರಲ್ಲೂ ಕಾಡಿತ್ತು. ಇದೀಗ ಈ ವಿಷಯಕ್ಕೆ ಸಂಬಂಧಪಟ್ಟಂತೆ ಶೃತಿ ಹಾಸನ್ ವಿವರಣೆ ನೀಡಿದ್ದಾರೆ.
ಬಾಲಿವುಡ್ ನಟಿ ಶೃತಿ ಹಾಸನ್‌ಗೂ ಆಕೆಯ ಬಾಯ್‌ಫ್ರೆಂಡ್ ಶಂತನು ಹಝರಿಕಾನಿಗೂ ಈಗಾಗಲೇ ಗುಟ್ಟಾಗಿ ಮದುವೆಯಾಗಿದೆಯಂತೆ. ಅವರು ಇಷ್ಟು ದಿನ ಈ ವಿಚಾರವನ್ನು ಗುಟ್ಟಾಗಿಟ್ಟಿದ್ದರಂತೆ ಎಂದೆಲ್ಲ ಕಳೆದ ಕೆಲವು ದಿನಗಳಿಂದ ಸುದ್ದಿಯಾಗಿತ್ತು. ಬಾಲಿವುಡ್ ನಟನಟಿಯರ ಬೆಸ್ಟ್ ಫ್ರೆಂಡ್ ಖ್ಯಾತಿಯ ಓರಿ ಇತ್ತೀಚೆಗೆ ಬಾಯ್ಪಪ್ಪಿ ಹೇಳಿದ ಮಾತೊಂದು ಇಂತಹ ವದಂತಿಗೆ ಕಾರಣವಾಗಿತ್ತು. ಶಾಂತನುವನ್ನು ಪರಿಚಯಿಸುವಾಗ ಓರಿ ಅವರು ಇವರು ಶೃತಿ ಗಂಡ ಎಂದಿದ್ದರು. ಶೃತಿ ಹಾಸನ್ ಮತ್ತು ಶಾಂತನು ಅವರು ಬಹುಕಾಲದಿಂದ ಡೇಟಿಂಗ್‌ನಲ್ಲಿದ್ದಾರೆ. ಇದೇ ಕಾರಣಕ್ಕೆ ಇವರಿಬ್ಬರು ವಿವಾಹವಾಗಿದ್ದಾರೆಯೇ ಎಂಬ ಸಂದೇಹ ಎಲ್ಲರಲ್ಲಿಯೂ ಮೂಡಿತ್ತು
ಮದುವೆ ಕುರಿತು ಮಾತನಾಡಿದ ಶೃತಿ ಹಾಸನ್
ಇಂದು ಇನ್‌ಸ್ಟಾಗ್ರಾಂನಲ್ಲಿಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ತನ್ನ ಮದುವೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಪೋಸ್ಟ್ ಮಾಡಿದ್ದಾರೆ. "ನನಗೆ ಮದುವೆಯಾಗಿಲ್ಲ. ಪ್ರತಿಯೊಂದು ವಿಚಾರವನ್ನು ಮುಕ್ತವಾಗಿ ಹೇಳುವಂತಹ ವ್ಯಕ್ತಿಯು ಇಂತಹ ವಿಚಾರವನ್ನು ಮುಚ್ಚಿಡುತ್ತಾರೆಯೇ? ನಾನು ಮದುವೆಯ ವಿಚಾರವನ್ನು ಏಕೆ ಅಡಗಿಸಿಡಲಿ? ನನ್ನ ಕುರಿತು ತಿಳಿಯದೆ ಇರುವವರು ಸುಮ್ಮನಿರಿ" ಎಂದು ಶೃತಿ ಹಾಸನ್ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಓರಿ ಏನು ಹೇಳಿದ್ದರು?
ರೆಡಿಟ್‌ನಲ್ಲಿ ಓರಿ ಅವರು ಆಸ್ಕ್ ಮಿ ಅನಿಥಿಂಗ್ ಚರ್ಚೆ ಆಯೋಜಿಸಿದ್ದರು. ಸೋಷಿಯಲ್ ಮೀಡಿಯಾದ ಬಳಕೆದಾರರು ಕೇಳಿದ ಬಹುತೇಕ ಪ್ರಶ್ನೆಗಳಿಗೆ ಓರಿ ಉತ್ತರಿಸಿದರು. "ನಿಮ್ಮ ಜತೆ ಫೋಟೋಗೆ ಪೋಸ್ ನೀಡುವಾಗ ಯಾರಾದರೂ ಸೆಲೆಬ್ರಿಟಿಗಳು ಅನಗತ್ಯ ಆಟಿಟ್ಯೂಡ್ ತೋರಿದ್ದಾರೆಯೇ?" ಎಂಬ ಪ್ರಶ್ನೆಯನ್ನು ರೆಡಿಟ್ ಬಳಕೆದಾರರೊಬ್ಬರು ಕೇಳಿದ್ದರು. ಅದಕ್ಕೆ ಉತ್ತರಿಸುವಾಗ ಶೃತಿ ಹಾಸನ್ ವಿಚಾರ ಮುನ್ನಲೆಗೆ ಬಂದಿತ್ತು.
"ಯಾವುದೋ ಒಂದು ಕಾರ್ಯಕ್ರಮದಲ್ಲಿ ಫೋಟೋ ತೆಗೆಸಿಕೊಳ್ಳಲು ಶೃತಿ ಹಾಸನ್ ಕೊಂಚ ರೂಡ್ ಆಗಿ ವರ್ತಿಸಿದರು" ಎಂದು ಓರಿ ಉತ್ತರಿಸಿದ್ದರು. "ಶೃತಿ ಹಾಸನ್ ಅವರ ಜತೆ ನಾನು ಪೋಸ್ ನೀಡಲು ಬಯಸಿದಾಗ ಅವರು ತುಂಬಾ ಕಠಿಣವಾಗಿ ವರ್ತಿಸಿದರು. ನನಗೆ ಆಕೆಯ ಬಗ್ಗೆ ಗೊತ್ತಿರಲಿಲ್ಲ" ಎಂದು ಓರಿ ಹೇಳಿದ್ದರು.
"ಇದು ನನಗೆ ತುಂಬಾ ಬೇಸರತರಿಸಿತು. ಬಹುಶಃ ನಾನು ಆಕೆಯ ಪತಿಯ ಜತೆ ಕ್ಲೋಸ್ ಆಗಿ ಇರುವುದು ಈ ತಪ್ಪು ಕಲ್ಪನೆಗೆ ಕಾರಣವಾಗಿರಬಹುದು. ಈ ವಿಷಯ ಬಗೆಹರಿಯಿತು. ಆದರೆ, ಆಕೆ ನನ್ನನ್ನು ಪಿಯೋನ್ (ಜವಾನ) ಎಂದು ಕರೆದಿದ್ದಾರೆ ಎಂಬ ವದಂತಿಗಳು ಇವೆ" ಎಂದು ಓರಿ ಹೇಳಿದ್ದರು.
ಶೃತಿ ಮದುವೆ ಯಾವಾಗ?
ಇತ್ತೀಚಿಗೆ ಹಿಂದೂಸ್ತಾನ್ ಟೈಮ್ಸ್ ಜತೆ ಮಾತನಾಡುವಾಗ ಶೃತಿ ತನ್ನ ಮದುವೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ್ದರು. "ಮದುವೆ ಎಂಬ ಪದ ನನಗೆ ತುಂಬಾ ಭಯ ಹುಟ್ಟಿಸುತ್ತದೆ. ನಾನು ನಿಜಕ್ಕೂ ಅದರ ಕುರಿತು ಯೋಚಿಸಲು ಹೋಗುವುದಿಲ್ಲ್. ನಾನು ಆತನೊಂದಿಗೆ ಖುಷಿಯಾಗಿದ್ದೇನೆ. ಆತನ ಜತೆ ಕೆಲಸ ಮಾಡುವುದು, ಆತನ ಜತೆ ಸಮಯ ಕಳೆಯುವುದು ನನಗೆ ಖುಷಿ ನೀಡುತ್ತದೆ. ಇತರೆ ಬಹುತೇಕ ಮದುವೆಗಿಂತ ಇದು ಉತ್ತಮವಲ್ಲವೇ?" ಎಂದು ಅವರು ಹೇಳಿದ್ದರು.
ಸಲಾರ್ ಪಾರ್ಟ್ 1ನಲ್ಲಿ ನಟನೆ
ಈಗಾಗಲೇ ಹತ್ತು ಹಲವು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿರುವ ಶೃತಿ ಹಾಸನ್ ಇತ್ತೀಚಿಗೆ ಬಿಡುಗಡೆಯಾದ ಸಲಾರ್ ಸಿನಿಮಾದಲ್ಲೂ ನಟಿಸಿದ್ದಾರೆ. "ಸಲಾರ್‌ನಲ್ಲಿ ಪ್ರಭಾಸ್ ಜತೆ ನಟಿಸಿರುವುದು ಉತ್ತಮ ಅನುಭವ. ಆತ ತುಂಬಾ ಸ್ನೇಹಮಯ ವ್ಯಕ್ತಿ. ಪರದೆ ಹೊರಗಡೆ ಅವರದ್ದು ತುಂಬಾ ನಯವಾದ ವ್ಯಕ್ತಿತ್ವ. ಎಲ್ಲಾದರೂ ಪ್ರಶಾಂತ್ ನೀಲ್ ಆಕ್ಷನ್ ಎಂದಾಕ್ಷಣ ಸಂಪೂರ್ಣ ಭಿನ್ನವಾದ ಪ್ರಭಾಸ್ ಕಾಣಿಸುತ್ತಿದ್ದರು" ಎಂದು ಹಿಂದೂಸ್ತಾನ್ ಟೈಮ್ಸ್ ಸಂದರ್ಶನದಲ್ಲಿ ಶೃತಿ ಹಾಸನ್ ಹೇಳಿದ್ದರು.