ಶೋಲೆ ಖ್ಯಾತಿಯ ಬೀರಬಲ್ ಸತೀಂದರ್ ಕುಮಾರ್ ಖೋಸ್ಲಾ ಇನ್ನು ನೆನಪು ಮಾತ್ರ
ಸತೀಂದರ್ ಕುಮಾರ್ ಅವರು ಹಾಸ್ಯಪಾತ್ರಕ್ಕೆ ಹೆಸರಾಗಿದ್ದರು. ಉಪ್‌ಕಾರ್, ರೋಟಿ ಕಪ್ಡಾ ಔರ್ ಮಕಾನ್, ಕ್ರಾಂತಿ, ನಸೀಬ್, ಯಾರಾನಾ, ಹಮ್ ಹೈ ರಹಿ ಪ್ಯಾರ್ ಕೆ, ಅಂಜಾಮ್ ಸೇರಿ ಅನೇಕ ಸಿಇಮಾಗಳಲ್ಲಿ ಸತೀಂದರ್ ಕುಮಾರ್ ನಟಿಸಿದ್ದಾರೆ.
ಬಾಲಿವುಡ್ ಚಿತ್ರರಂಗದ ಹಿರಿಯ ನಟ, 'ಶೋಲೆ' ಖ್ಯಾತಿಯ ಸತೀಂದರ್ ಕುಮಾರ್ ಖೋಸ್ಲಾ ಮಂಗಳವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸತೀಂದರ್ ಕುಮಾರ್ ಬೀರಬಲ್ ಎಂದೇ ಹೆಸರಾಗಿದ್ದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಕಾರ್ಡಿಯಾಕ್ ಅರೆಸ್ಟ್‌ನಿಂದ ನಿಧನ
ಸ್ನೇಹಿತ ಜುಗ್ನು, ಸತೀಂದರ್ ಕುಮಾರ್ ಅವರ ನಿಧನದ ಸುದ್ದಿಯನ್ನು ದೃಢಪಡಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸತೀಂದರ್ ಕುಮಾರ್ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಮಂಗಳವಾರ ರಾತ್ರಿ ಅವರು ಕಾರ್ಡಿಯಾಕ್ ಅರೆಸ್ಟ್‌ನಿಂದ ಮೃತಪಟ್ಟಿದ್ದಾರೆ. ಬುಧವಾರ ಸತೀಂದರ್ ಅವರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ.
ಹಾಸ್ಯಪಾತ್ರಕ್ಕೆ ಹೆಸರಾಗಿದ್ದ ನಟ
ಸತೀಂದರ್ ಕುಮಾರ್ ಅವರು ಹಾಸ್ಯಪಾತ್ರಕ್ಕೆ ಹೆಸರಾಗಿದ್ದರು. ಉಪ್‌ಕಾರ್, ರೋಟಿ ಕಪ್ಡಾ ಔರ್ ಮಕಾನ್, ಕ್ರಾಂತಿ, ನಸೀಬ್, ಯಾರಾನಾ, ಹಮ್ ಹೈ ರಹಿ ಪ್ಯಾರ್ ಕೆ, ಅಂಜಾಮ್ ಸೇರಿ ಅನೇಕ ಸಿಇಮಾಗಳಲ್ಲಿ ಸತೀಂದರ್ ಕುಮಾರ್ ನಟಿಸಿದ್ದಾರೆ. 'ಶೋಲೆ' ಚಿತ್ರದ ಕೈದಿ ಪಾತ್ರದಲ್ಲಿ ಕೂಡಾ ಸತೀಂದರ್ ಗಮನ ಸೆಳೆದಿದ್ದರು. ಹಿಂದಿ ಮಾತ್ರವಲ್ಲದೆ ಪಂಜಾಬಿ, ಮರಾಠಿ, ಭೋಜ್‌ಪುರಿ ಭಾಷೆಗಳ ಸಿನಿಮಾಗಳಲ್ಲಿ ಕೂಡಾ ಸತೀಂದರ್ ಕುಮಾರ್ ಖೋಸ್ಲಾ ನಟಿಸಿದ್ದಾರೆ.
ಉಪ್ಕಾರ್ ಸಿನಿಮಾ ಮೂಲಕ ಬಾಲಿವುಡ್ ಎಂಟ್ರಿ
ಪಂಜಾಬ್ ಗುರುದಾಸ್‌ಪುರಕ್ಕೆ ಸೇರಿದ ಸತೀಂದರ್ ಕುಮಾರ್ ಖೋಸ್ಲಾ ಕಾಲೇಜು ದಿನಗಳಲ್ಲೇ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದವರು. 1967ರಲ್ಲಿ ತೆರೆ ಕಂಡ ಮನೋಜ್ ಕುಮಾರ್ ಅವರ 'ಉಪ್ಕಾರ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. ಚಿತ್ರರಂಗದಲ್ಲಿ ಸತೀಂದರ್ ಕುಮಾರ್ ಖೋಸ್ಲಾ, ಬೀರಬಲ್ ಎಂದೇ ಹೆಸರಾಗಿದ್ದರು. ಎಲ್ಲಾ ಭಾಷೆಗಳೂ ಸೇರಿ ಒಟ್ಟು 500 ಸಿನಿಮಾಗಳಲ್ಲಿ ಸತೀಂದರ್ ಕುಮಾರ್ ಖೋಸ್ಲಾ ನಟಿಸಿದ್ದಾರೆ. ಸತೀಂದರ್ ನಿಧನಕ್ಕೆ ಬಾಲಿವುಡ್ ಮಂದಿ ಸಂತಾಪ ಸೂಚಿಸಿದ್ದಾರೆ.