ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೇಳಿಕೆ ಬದಲಿಸಿದರೆ ಹಾಸ್ಯ ನಟ ಚಿಕ್ಕಣ್ಣ ವಿರುದ್ಧ ಕಾನೂನಾತ್ಮಕ ಕ್ರಮದ ಎಚ್ಚರಿಕೆ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ಚಿಕ್ಕಣ್ಣಗೆ ಪೊಲೀಸ್ ಇಲಾಖೆಯಿಂದ ಎಚ್ಚರಿಕೆಯ ಸಂದೇಶ ರವಾನೆಯಾಗಿದೆ. ಈ ಗಂಭೀರ ಪ್ರಕರಣದಲ್ಲಿ ನ್ಯಾಯಾಧೀಶರ ಎದುರು ನಿಮ್ಮ ಹೇಳಿಕೆ ದಾಖಲಿಸಿ ಕೊಳ್ಳಲಾಗಿದೆ. ಒಂದು ವೇಳೆ ಹೇಳಿಕೆಯನ್ನು ತಿರುಚಿದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಾದೀತು ಎಂದು ಚಿಕ್ಕಣ್ಣಗೆ ಎಚ್ಚರಿಕೆ ನೀಡಿದ್ದಾರೆ ಪೊಲೀಸರು.
Renukaswamy murder case: ರೇಣುಕಾಸ್ವಾಮಿ ಹತ್ಯೆ ಕೊಲೆ ಪ್ರಕರಣದಲ್ಲಿ ಅತ್ತ ಬೆಳ್ಳಂಬೆಳಗ್ಗೆ ನಟ ದರ್ಶನ್ ತೂಗುದೀಪ ಬಳ್ಳಾರಿ ಜೈಲು ಪಾಲಾದರೆ, ಇತ್ತ ಬೆಂಗಳೂರಿನಲ್ಲಿ ನಟ ಚಿಕ್ಕಣ್ಣ ಅವರನ್ನು ತನಿಖಾಧಿಕಾರಿಗಳು ಮತ್ತೆ ವಿಚಾರಣೆಗೆ ಒಳಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆಯಾದ ದಿನದಂದು ರಾಜರಾಜೇಶ್ವರಿ ನಗರದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ದರ್ಶನ್ ಜತೆ ಚಿಕ್ಕಣ್ಣ ಪಾರ್ಟಿ ನಡೆಸಿದ್ದರು. ಫೋನ್ ಕರೆ ಬಂದ ನಂತರ ಇಲ್ಲಿಂದಲೇ ದರ್ಶನ್ ಪಟ್ಟಣಗೆರೆ ಶೆಡ್‌ಗೆ ತೆರಳಿದ್ದರು. ಹೀಗೆ ಭೇಟಿಯಾದ ಸುದ್ದಿ ಬಹಿರಂಗಗೊಳ್ಳುತ್ತಿದ್ದಂತೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ತನಿಖಾಧಿಕಾರಿಗಳು ಹೇಳಿದ್ದರು. ಅದರಂತೆ ಗುರುವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದರು.
ಹತ್ಯೆ ನಡೆಯುವುದಕ್ಕೂ ಮುನ್ನ ಮತ್ತೊಬ್ಬ ಆರೋಪಿ ವಿನಯ್ ಒಡೆತನದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಆರೋಪಿಗಳು ಪಾರ್ಟಿ ನಡೆಸಿದ್ದರು. ಇಲ್ಲಿ ದರ್ಶನ್, ಚಿಕ್ಕಣ್ಣ ಅವರ ಜತೆಗೆ ಪವಿತ್ರಾಗೌಡ ಕಾಣಿಸಿಕೊಂಡಿದ್ದರು. ಪೊಲೀಸರು, ಚಿಕ್ಕಣ್ಣ ಅವರನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದರು. ನ್ಯಾಯಾಧೀಶರ ಎದುರು ಸಿಆರ್‌ಪಿಸಿ ಸೆ. 164ರ ಅಡಿ ಹೇಳಿಕೆ ದಾಖಲಿಸಲಾಗಿತ್ತು. ಭೇಟಿ ವೇಳೆ ಏನೆಲ್ಲಾ ಚರ್ಚೆ ನಡೆಯಿತು? ಏನೆಲ್ಲ ಆಯ್ತು? ಅವರು ನಿಮಗೇನಾದರೂ ಆಮಿಷ ಅಥವಾ ಬೆದರಿಕೆ ಒಡ್ಡಿದ್ದಾರೆಯೇ ಎಂಬ ಪ್ರಶ್ನೆ ಸೇರಿದಂತೆ ಪೊಲೀಸರು ಸರಣಿ ಪ್ರಶ್ನೆಗಳನ್ನು ಕೇಳಿ ಚಿಕ್ಕಣ್ಣ ಅವರಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಹೇಳಿಕೆ ತಿರುಚಿದರೆ ಕಾನೂನಾತ್ಮಕ ಕ್ರಮ
ಈ ಗಂಭೀರ ಪ್ರಕರಣದಲ್ಲಿ ನ್ಯಾಯಾಧೀಶರ ಎದುರು ನಿಮ್ಮ ಹೇಳಿಕೆ ದಾಖಲಿಸಿ ಕೊಳ್ಳಲಾಗಿದೆ. ಒಂದು ವೇಳೆ ಹೇಳಿಕೆಯನ್ನು ತಿರುಚಿದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಾದೀತು ಎಂದೂ ಚಿಕ್ಕಣ್ಣ ಅವರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆಗ ಚಿಕ್ಕಣ್ಣ ಆರೋಪಿಯನ್ನು ಭೇಟಿಯಾಗಬಾರದು ಎಂಬ ಸಂಗತಿ ಗೊತ್ತಿರಲಿಲ್ಲ. ಇನ್ನು ಮುಂದೆ ಈ ರೀತಿ ಭೇಟಿ ಮಾಡುವುದಿಲ್ಲ ಎಂದು ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಳಗಾವಿ ಕತ್ತಲು ಕೋಣೆ ಕಾರಾಗೃಹದಲ್ಲಿ ಪ್ರದೋಷ್
ಇದೇ ಪ್ರಕರಣದಲ್ಲಿ 14ನೇ ಆರೋಪಿಯಾಗಿರುವ ಪ್ರದೋಷ್‌ನನ್ನು ಬೆಳಗಾವಿಯ ಕತ್ತಲು ಕೋಣೆಯಲ್ಲಿ ಬಂಧಿಸಲಾಗಿದೆ. ಈತನ ಮೇಲೆ 24 ಗಂಟೆಯೂ ನಿಗಾ ವಹಿಸಲಾಗುತ್ತದೆ. ಪ್ರದೋಷ್ ನನ್ನು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಕಾರಾಗೃಹಕ್ಕೆ ಕರೆ ತರಲಾಗಿದೆ. ಭದ್ರತಾ ಕಾರಣಕ್ಕೆ ಕತ್ತಲ ಕೋಣೆಯಲ್ಲಿ ಇರಿಸಲಾಗಿದೆ. ನಿಯಮಗಳ ಪ್ರಕಾರ ಆತನ ಕುಟುಂಬದ ಸದಸ್ಯರಿಗೆ ಮಾತ್ರ ಭೇಟಿಗೆ ಅವಕಾಶ ಇರುತ್ತದೆ. ಹೊರಗಡೆಯ ಊಟ, ಮಾದಕ ವಸ್ತು ಕೊಡಲು ಅವಕಾಶ ಇರುವುದಿಲ್ಲ. ಸಿಸಿಟಿವಿ ಅಳವಡಿಸುವ ಕಾರ್ಯ ನಡೆಯುತ್ತಿದೆ ಎಂದು ಜೈಲಿನ ಅಧೀಕ್ಷಕರು ತಿಳಿಸಿದ್ದಾರೆ.
ವರದಿ: ಮಾರುತಿ ಎಚ್, ಬೆಂಗಳೂರು
ವಿಭಾಗ