Darshan: ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಿದ್ದಂತೆ, ದೊಡ್ಡ ನಿರ್ಧಾರಕ್ಕೆ ಮುಂದಾದ ದಾಸ ದರ್ಶನ್ ಅಭಿಮಾನಿಗಳು
ನಟ ದರ್ಶನ್ ಬಳ್ಳಾರಿ ಜೈಲು ಸೇರುತ್ತಿದ್ದಂತೆ, ಅವರ ಅಪಾರ ಅಭಿಮಾನಿಗಳು ಇದೀಗ ದೊಡ್ಡ ನಿರ್ಧಾರಕ್ಕೆ ಬಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಡಿ ಟೀಮ್, ಇನ್ಮೇಲೆ ಬೇರಾವ ಕಲಾವಿದರ ಬಗ್ಗೆ ಮಾತನಾಡದಂತೆ ತೀರ್ಮಾನಿಸಿದ್ದಾರೆ.
Darshan Thoogudeepa: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ 17 ಮಂದಿ ಜೈಲಿನಲ್ಲಿದ್ದೇ ಎರಡು ತಿಂಗಳ ಮೇಲಾಯಿತು. ಹೈ ಪ್ರೋಫೈಲ್ ಕೇಸ್ ಆಗಿರುವುದರಿಂದ ಇಡೀ ರಾಜ್ಯವೇ ಈ ಕೇಸ್ ಮೇಲೆ ಕಣ್ಣಿರಿಸಿದೆ. ಈ ನಡುವೆ ಇತ್ತೀಚೆಗಷ್ಟೇ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್ ಅವರ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಒಂದು ಕೈಯಲ್ಲಿ ಸಿಗರೇಟ್, ಮತ್ತೊಂದು ಕೈಯಲ್ಲಿ ಕಾಫಿ ಕಪ್ ಹಿಡಿದ ಭಂಗಿಯಲ್ಲಿ ದರ್ಶನ್ ಕಂಡಿದ್ದರು. ಹೀಗೆ ಫೋಟೋ ಎಲ್ಲೆಡೆ ಹರಿದಾಡುತ್ತಿದ್ದಂತೆ, ಎಚ್ಚೆತ್ತ ಪೊಲೀಸ್ ಇಲಾಖೆ, ದೂರದ ಬಳ್ಳಾರಿ ಜೈಲಿಗೆ ದರ್ಶನ್ ಅವರನ್ನು ಶಿಫ್ಟ್ ಮಾಡಲಾಗಿದೆ.
ಗುರುವಾರ ಬೆಂಗಳೂರಿನಿಂದ ಭಾರಿ ಬಿಗಿ ಭದ್ರತೆ ನಡುವೆ ಬೆಳಗಿನ ಜಾವ ದರ್ಶನ್ ಅವರನ್ನು ಆಂಧ್ರ ಪ್ರದೇಶದ ಮಾರ್ಗವಾಗಿ ಬಳ್ಳಾರಿ ಜೈಲಿಗೆ ಕರೆತರಲಾಗಿದೆ. ಬರೀ ದರ್ಶನ್ ಮಾತ್ರವಲ್ಲದೆ, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ಇತರೆ ಹತ್ತು ಆರೋಪಿಗಳನ್ನು ಮೈಸೂರು, ವಿಜಯಪುರ, ಕಲಬುರಗಿ, ಬೆಳಗಾವಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಆದರೆ, ನಟ ದರ್ಶನ್ ಅವರೊಬ್ಬರನ್ನು ಹೊರತುಪಡಿಸಿ ಇನ್ನುಳಿದ ಆರೋಪಿಗಳ ಪೈಕಿ ನಿಖರವಾಗಿ ಯಾರು, ಯಾವ ಜೈಲು ಸೇರಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಇನ್ನೊಂದು ಕಡೆ ನಟ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗುತ್ತದೆ ಎಂಬ ಸುದ್ದಿ ಹರಡುತ್ತಿದ್ದಂತೆ ಮಂಗಳವಾರ ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಬಳ್ಳಾರಿ ಜೈಲಿನ ಬಳಿ ಜಮಾಯಿಸಿದ್ದರು. ದರ್ಶನ್ ದರ್ಶನಕ್ಕೆ ಕಾಯುತ್ತಿದ್ದರು. ಬಳ್ಳಾರಿ ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ತಾಲೂಕುಗಳಿಂದಲೂ ಬಂದಿದ್ದ ಅಭಿಮಾನಿಗಳ ದಂಡು ನೆರೆದಿತ್ತು. ಇದೀಗ ಇದೇ ದರ್ಶನ್ ಅಭಿಮಾನಿಗಳು, ತಮ್ಮ ನೆಚ್ಚಿನ ನಟನ ಬಗ್ಗೆ ವಿಶೇಷ ಪೋಸ್ಟ್‌ವೊಂದನ್ನು ಶೇರ್ ಮಾಡಿ, ದೊಡ್ಡ ನಿರ್ಧಾರಕ್ಕೆ ಮುಂದಾಗಿದ್ದಾರೆ.
ಡಿ ಕಂಪನಿ ಟೀಮ್‌ನಿಂದ ಪೋಸ್ಟ್
"ಸಮಸ್ತ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಭಿಮಾನಿಗಳಲ್ಲಿ ವಿನಂತಿ. ನಮ್ಮ ಪ್ರೀತಿಯ ಡಿ ಬಾಸ್ ರವರು ಆರೋಪ ಮುಕ್ತರಾಗಿ ಬರುವವರೆಗೂ ಯಾವುದೇ ಮಾಧ್ಯಮ ಹಾಗೂ ಬೇರೆ ನಟರುಗಳ ಅಭಿಮಾನಿಗಳ ಕ್ರಿಯೆಗಳಿಗೆ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಬೇಕಾಗಿ ವಿನಂತಿ. ನಮ್ಮಿಂದ ಬಾಸ್ ಗೆ ಯಾವುದೇ ತೊಂದರೆಯಾಗದಿರಲಿ. ಅಭಿಮಾನಿಗಳ ನಂದಾದೀಪ ನಮ್ಮ ಈ ತೂಗುದೀಪ" ಎಂದು ಪೋಸ್ಟ್ ಹಾಕಲಾಗಿದೆ.