ಕನ್ನಡ ಸುದ್ದಿ  /  Entertainment  /  Kannada Television News Colors Kannada Bhagyalakshmi Serial 2nd March 2024 Episode Bhagya Tandave Stays Together Rsm

Bhagyalakshmi Serial: ಅಪ್ಪ ಅಮ್ಮನನ್ನು ಒಂದು ಮಾಡಿದ ಮಕ್ಕಳು, ರೆಸಾರ್ಟ್‌ನಿಂದ ಭಾಗ್ಯಾ ಹೋಗ್ತಿರೋದು ಎಲ್ಲಿಗೆ? ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial Today Episode: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 2ರ ಸಂಚಿಕೆ ಹೀಗಿದೆ. ಗುಂಡಣ್ಣನಿಗಾಗಿ ತಾಂಡವ್‌ ಇಷ್ಟವಿಲ್ಲದಿದ್ದರೂ, ನಾನು ಡಿವೋರ್ಸ್‌ ಕೊಡುವುದಿಲ್ಲ ಎಂದು ಭಾಷೆ ಕೊಡುತ್ತಾನೆ. ಇದರಿಂದ ಗುಂಡಣ್ಣ ಬಹಳ ಖುಷಿಯಾಗುತ್ತಾನೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 2ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 2ರ ಎಪಿಸೋಡ್‌ (PC: Colors Kannada)

Bhagyalakshmi Kannada Serial: ಯಾವಾಗಲೂ ಅಮ್ಮ ಅಮ್ಮ ಎಂದು ಕನವರಿಸುವ ಗುಂಡಣ್ಣ ನನಗೆ ಇಂದು ಅಮ್ಮ ಬೇಕೇ ಬೇಕು ಎಂದು ಹಟ ಮಾಡುತ್ತಾನೆ. ಅವರನ್ನು ಬೆದರಿಸಲು ತಾಂಡವ್‌ ಕೈ ಎತ್ತಿದಾಗ ತನ್ಮಯ್‌ ಭಯದಿಂದ ತಲೆ ಸುತ್ತಿ ಬೀಳುತ್ತಾನೆ. ರೆಸಾರ್ಟ್‌ಗೆ ಬರುವ ವೈದ್ಯರು ಗುಂಡಣ್ಣನಿಗೆ ಚಿಕಿತ್ಸೆ ನೀಡಿ ಹೋಗುತ್ತಾರೆ.

ಎಚ್ಚರಗೊಂಡಾಗ ಗುಂಡಣ್ಣ ಮತ್ತೆ ಅಮ್ಮನನ್ನು ಕೇಳುತ್ತಾನೆ. ಕುಸುಮಾ ಬಲವಂತಕ್ಕೆ ತಾಂಡವ್‌, ಭಾಗ್ಯಾಗೆ ಕರೆ ಮಾಡಿ ರೆಸಾರ್ಟ್‌ಗೆ ಬರಲು ಹೇಳುತ್ತಾನೆ. ಜೊತೆಗೆ ಸುನಂದಾ ಕೂಡಾ ಬರುತ್ತಾಳೆ. ಅಮ್ಮನನ್ನು ನೋಡುವ ಗುಂಡಣ್ಣ ಬಹಳ ಖುಷಿಯಾಗುತ್ತಾನೆ. ಇನ್ಮುಂದೆ ನಾವೆಲ್ಲಾ ಜೊತೆಯಾಗಿರಬೇಕು. ಅಪ್ಪ, ನೀವು ಅಮ್ಮನಿಗೆ ಡಿವೋರ್ಸ್‌ ಕೊಡುವುದಿಲ್ಲ ಅಂತ ನನಗೆ ಪ್ರಾಮಿಸ್‌ ಮಾಡಿ ಎಂದು ಗುಂಡ ತಾಂಡವ್‌ ಬಳಿ ಮನವಿ ಮಾಡುತ್ತಾನೆ.

ಮಕ್ಕಳ ಮನಸ್ಸು ಬಹಳ ಸೂಕ್ಷ್ಮ, ಇನ್ನೊಮ್ಮೆ ನಿಮ್ಮ ಮಗನಿಗೆ ಹೀಗೆಲ್ಲಾ ಬೆದರಿಸಿದರೆ ಅವನ ಆರೋಗ್ಯಕ್ಕೆ ಇದೇ ರೀತಿ ಸಮಸ್ಯೆ ಆಗಲಿದೆ ಎಂದು ವೈದ್ಯರು ಹೇಳುವುದನ್ನು ತಾಂಡವ್‌ ನೆನಪಿಸಿಕೊಳ್ಳುತ್ತಾನೆ. ಭಾಗ್ಯಾ ಜೊತೆ ಇರಲು ಇಷ್ಟವಿಲ್ಲದಿದ್ದರೂ ಮಗನಿಗಾಗಿ ತಾಂಡವ್‌ ಭಾಷೆ ಕೊಡುತ್ತಾನೆ.

ತಾಂಡವ್‌ ಫ್ಯಾಮಿಲಿ ಫೋಟೋ ಕ್ಲಿಕ್‌ ಮಾಡಿದ ಶ್ರೇಷ್ಠಾ

ನಂತರ ಎಲ್ಲರೂ ಒಟ್ಟಿಗೆ ಊಟ ಆರ್ಡರ್‌ ಮಾಡುತ್ತಾರೆ. ಗುಂಡಣ್ಣನಿಗೆ ಹೀಗೆ ಎಲ್ಲರೂ ಒಟ್ಟಿಗೆ ಇರುವುದು ಹೇಳಿಕೊಳ್ಳಲಾಗದ ಖುಷಿ ಆಗುತ್ತದೆ. ದೂರದಲ್ಲಿ ಉಯ್ಯಾಲೆ ನೋಡಿ ಅದರಲ್ಲಿ ಅಪ್ಪ ಅಮ್ಮ ಇಬ್ಬರೂ ಬಂದು ನನ್ನನ್ನು ಕೂರಿಸುವಂತೆ ಗುಂಡಣ್ಣ ಬೇಡಿಕೆ ಇಡುತ್ತಾನೆ. ಮಗ ಕೇಳಿದ್ದನ್ನು ಇಲ್ಲ ಎನ್ನಲಾಗದೆ ತಾಂಡವ್‌, ಭಾಗ್ಯಾ ಜೊತೆ ಹೋಗಿ ಗುಂಡಣ್ಣನನ್ನು ಉಯ್ಯಾಲೆ ಮೇಲೆ ಕೂರಿಸುತ್ತಾನೆ. ಇದೆಲ್ಲವನ್ನೂ ದೂರದಿಂದ ನೋಡುವ ಶ್ರೇಷ್ಠಾ ತಾಂಡವ್‌ ವಿರುದ್ಧ ಕೋಪಗೊಳ್ಳುತ್ತಾಳೆ. ಶ್ರೇಷ್ಠಾಳನ್ನು ಗಮನಿಸುವ ಪೂಜಾ ಅವಳನ್ನು ಬಳಿಗೆ ಕರೆದು ಫ್ಯಾಮಿಲಿ ಫೋಟೋ ತೆಗೆಯಲು ಹೇಳುತ್ತಾಳೆ. ಶ್ರೇಷ್ಠಾಗೆ ಬೇಕಂತಲೇ ಪೂಜಾ ಕಾಲೆಳೆಯುತ್ತಾಳೆ.

ನೀನು ಏನು ಮಾಡಿದರೂ ತಾಂಡವ್‌ ನಿನ್ನೊಂದಿಗೆ ಬರುವುದಿಲ್ಲ. ನನ್ನ ಅಕ್ಕನ ಜೀವನ ಹಾಳಾಗಲು ನಾವೂ ಬಿಡುವುದಿಲ್ಲ ಎಂದು ಪೂಜಾ, ಶ್ರೇಷ್ಠಾಗೆ ಚಾಲೆಂಜ್‌ ಮಾಡುತ್ತಾಳೆ. ನಾನು ತಾಂಡವ್‌ನನ್ನು ಮದುವೆ ಆಗೇ ಆಗುತ್ತೇನೆ. ಆದಷ್ಟು ಬೇಗ ನಿನ್ನ ಅಕ್ಕನ ಜಾಗದಲ್ಲಿ ನಾನಿರುತ್ತೇನೆ ಎಂದು ಶ್ರೇಷ್ಠಾ ಕೂಡಾ ಪೂಜಾಗೆ ಚಾಲೆಂಜ್‌ ಮಾಡುತ್ತಾಳೆ. ಇಷ್ಟಾದರೂ ಶ್ರೇಷ್ಠಾಳನ್ನು ಹೋಗಲು ಬಿಡದ ಪೂಜಾ, ನೀನು ನನ್ನ ಅಕ್ಕ ಭಾವ ಎಷ್ಟು ಖುಷಿಯಾಗಿರುತ್ತಾರೆ ಎಂಬುದನ್ನು ನೋಡಲೇಬೇಕು ಎಂದು ಬಲವಂತದಿಂದ ಕರೆ ತರುತ್ತಾಳೆ.

ರೆಸಾರ್ಟ್‌ನಲ್ಲಿ ಎಲ್ಲರೂ ಒಂದು ದಿನ ತಂಗುವಂತೆ ಪೂಜಾ ಎಲ್ಲವನ್ನೂ ಅರೇಂಜ್‌ ಮಾಡಿರುತ್ತಾಳೆ. ಪೂಜಾ ಹೇಳಿದಂತೆ ಮಕ್ಕಳು, ಭಾಗ್ಯಾಳನ್ನು ತಾಂಡವ್‌ ರೂಮ್‌ಗೆ ಕರೆ ತರುತ್ತಾರೆ. ಇತ್ತ ತಾಂಡವ್‌ ತನ್ನ ಸೋಲಿನ ಬಗ್ಗೆಯೇ ಚಿಂತಿಸುತ್ತಾನೆ. 7 ದಿನ ನಾನು ಎಲ್ಲವನ್ನೂ ನಿಭಾಯಿಸಿದ್ದರೆ ಡಿವೋರ್ಸ್‌ ಸಿಗುತ್ತಿತ್ತು. ಆದರೆ ಈ ಮಕ್ಕಳಿಂದ ಎಲ್ಲವೂ ಹಾಳಾಯ್ತು ಎಂದು ಕೋಪಗೊಳ್ಳುತ್ತಾನೆ. ಮಕ್ಕಳ ದೆಸೆಯಿಂದ ಕೊನೆಗೂ ಭಾಗ್ಯಾ ತಾಂಡವ್‌ ಒಂದಾಗಿದ್ದಾರೆ. ಆದರೆ ರೆಸಾರ್ಟ್‌ನಿಂದ ಭಾಗ್ಯಾ ಮತ್ತೆ ತವರು ಮನೆಗೆ ಹೋಗಲಿದ್ದಾಳಾ? ಅಥವಾ ಮತ್ತೆ ಗಂಡನ ಮನೆಗೆ ವಾಪಸ್‌ ಆಗಲಿದ್ದಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.