KRG Studios: ಕನ್ನಡ ಸಿನಿಮಾ ನಿರ್ಮಾಣದ ಜತೆಗೆ ಮಲಯಾಳಂ ಚಿತ್ರರಂಗಕ್ಕೆ ಹೊರಟು ನಿಂತ ಕೆಆರ್‌ಜಿ ಸ್ಟುಡಿಯೋಸ್
ಸ್ಯಾಂಡಲ್‌ವುಡ್‌ನಲ್ಲಿ ಹಲವು ಯಶಸ್ವಿ ಸಿನಿಮಾಗಳನ್ನು ನೀಡಿದ ಕೆಆರ್‌ಜಿ ಸ್ಟುಡಿಯೋಸ್ ಇದೀಗ ಪಕ್ಕದ ಮಲಯಾಳಂ ಸಿನಿಮಾ ಇಂಡಸ್ಟ್ರಿಗೆ ಹೊರಟು ನಿಂತಿದೆ. ಪಡಕ್ಕಲಂ ಎಂಬ ಸಿನಿಮಾವನ್ನೂ ಘೋಷಣೆ ಮಾಡಿದೆ.
KRG Studios: ಸ್ಯಾಂಡಲ್‌ವುಡ್ ಚಿತ್ರರಂಗ ಮೊದಲಿನಂತಿಲ್ಲ. ನೂರಾರು ಕೋಟಿ ಬಜೆಟ್‌ನ ಸಿನಿಮಾಗಳೂ ಇದೀಗ ಕನ್ನಡದಲ್ಲಿ ನಿರ್ಮಾಣವಾಗುತ್ತಿವೆ. ಅಷ್ಟೇ ಯಾಕೆ ಸಾವಿರ ಕೋಟಿ ಕಲೆಕ್ಷನ್ ಮಾಡಿದ ಸಿನಿಮಾಗಳೂ ಸ್ಯಾಂಡಲ್‌ವುಡ್‌ನಲ್ಲಿವೆ. ಅದೇ ರೀತಿ ಇಲ್ಲಿನ ಚಿತ್ರ ನಿರ್ಮಾಣ ಸಂಸ್ಥೆಗಳು ಪರಭಾಷೆಗೂ ಕಾಲಿಟ್ಟು ಅಲ್ಲಿಯೂ ಸಿನಿಮಾ ನಿರ್ಮಾಣ ಮಾಡುತ್ತಿವೆ. ಈಗಾಗಲೇ ಹೊಂಬಾಳೆ ಫಿಲಂಸ್ ಆ ಸಾಹಸ ಮಾಡಿ, ಯಶಸ್ವಿಯಾಗಿದೆ. ಈಗ ಕೆಆರ್‌ಜಿ ಸ್ಡುಡಿಯೋ ಸಹ ಮಾಲಿವುಡ್ ಮತ್ತು ಕಾಲಿವುಡ್‌ಗೆಹೊರಟು ನಿಂತಿದೆ.
ಈಗಾಗಲೇ ಮಲಯಾಳಂನಲ್ಲಿ ಸೂಫಿಯುಂ ಸುಜಾತಯುಂ, ಹೋಮ್, ಅಂಗಮಲೇ ಬಾಯ್ಸ್ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಫ್ರೈಡೇ ಫಿಲಂ ಹೌಸ್ ಜತೆಗೆ ಪಡಕ್ಕಲಂ ಎಂಬ ಮಲಯಾಳಂ ಚಿತ್ರಕ್ಕಾಗಿ ಕೆಆರ್‌ಜಿ ಕೈ ಜೋಡಿಸಿದೆ. ಈ ಚಿತ್ರಕಥೆಯನ್ನು ಮನು ಸ್ವರಾಜ್ ಬರೆದು ನಿರ್ದೇಶಿಸಲಿದ್ದಾರೆ. ಖ್ಯಾತ ನಿರ್ದೇಶಕ ಬೇಸಿಲ್ ಜೋಸೆಫ್ ಜತೆ ಸಹಾಯಕ ನಿರ್ದೇಶಕನಾಗಿ ಮನು ಕಾರ್ಯ ಕೆಲಸ ಮಾಡಿದ್ದರು.
ಈ ಮೊದಲು ‘ವಾಲಟಿ’ ಎಂಬ ಮಲಯಾಳಂ ಚಿತ್ರದ ಕನ್ನಡ ಡಬ್ಬಿಂಗ್ ಹಾಗೂ ವಿತರಣೆ ಹಕ್ಕುಗಳನ್ನು KRG ಸ್ಟುಡಿಯೋಸ್ ತನ್ನದಾಗಿಸಿಕೊಂಡಿತ್ತು. ಈಗ ನೇರವಾಗಿ ಮಲಯಾಳಂ ಸಿನಿಮಾ ನಿರ್ಮಾಣಕ್ಕಿಳಿದಿದೆ ಕೆಆರ್‌ಜಿ ಸಂಸ್ಥೆ. ಬೆಂಗಳೂರು ಡೇಸ್, ಉಸ್ತಾದ್ ಹೊಟೇಲ್ ಖ್ಯಾತಿಯ ಅಂಜಲಿ ಮೆನನ್ ನಿರ್ದೇಶನದಲ್ಲಿ ತಮಿಳು ಚಿತ್ರವೊಂದನ್ನು ನಿರ್ಮಿಸುವ ಮೂಲಕ ತಮಿಳು ಚಿತ್ರರಂಗಕ್ಕೂ ಕೆಆರ್‌ಜಿ ಕಾಲಿಡಲಿದೆ.
ಕಾಲಿವುಡ್ ಮತ್ತು ಮಾಲಿವುಡ್ ಸಿನಿಮಾಗಳು ಮಾತ್ರವಲ್ಲದೆ, ಕನ್ನಡದಲ್ಲೂ KRG ಸ್ಟುಡಿಯೋಸ್ ರತ್ನನ್ ಪ್ರಪಂಚ, ಆರ್ಕ್ರೆಸ್ಟ್ರಾ ಮೈಸೂರು, ಗುರುದೇವ್ ಹೊಯ್ಸಳ ಸಿನಿಮಾಗಳನ್ನು ಈಗಾಗಲೇ ನಿರ್ಮಾಣ ಮಾಡಿದೆ. ಇವುಗಳ ಜತೆಗೆ ‘ಪೌಡರ್’, ‘ಉತ್ತರಕಾಂಡ’, ‘ಕಿರಿಕೆಟ್ 11’ ಚಿತ್ರಗಳ ನಿರ್ಮಾಣಕ್ಕೂ ಇಳಿದಿದೆ. ಇದೀಗ ಇವುಗಳ ಜತೆಗೆ ಮಾಲಿವುಡ್‌ನ ಪಡಕ್ಕಳಂ ಸಿನಿಮಾಕ್ಕೂ ಬಂಡವಾಳ ಹೂಡುತ್ತಿದೆ.
ಕೆಆರ್‌ಜಿಯಿಂದ ಜಾಕಿ ರೀ ರಿಲೀಸ್
ದುನಿಯಾ ಸೂರಿ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕನಾಗಿ ನಟಿಸಿದ ಜಾಕಿ ಸಿನಿಮಾ ಸ್ಯಾಂಡಲ್‌ವುಡ್‌ನ ಬ್ಲಾಕ್ ಬಸ್ಟರ್ ಸಿನಿಮಾ. 2010ರ ಅಕ್ಟೋಬರ್ 14ರಂದು ಈ ಸಿನಿಮಾ ಬಿಡುಗಡೆ ಆಗಿ 100 ದಿನ ಪೂರೈಸಿತ್ತು. ವಿ. ಹರಿಕೃಷ್ಣ ಸಂಗೀತ, ಯೋಗರಾಜ್ ಭಟ್ ಸಾಹಿತ್ಯದ ಹಾಡುಗಳು ಮೋಡಿ ಮಾಡಿದ್ದವು. ಈಗ ಸುದೀರ್ಘ 14 ವರ್ಷಗಳ ಬಳಿಕ, ಪುನೀತ್ ಬರ್ತ್‌ಡೇ ನಿಮಿತ್ತ ಮರು ಬಿಡುಗಡೆ ಆಗುತ್ತಿದೆ. ಮಾರ್ಚ್ 15ರಂದು ರಾಜ್ಯಾದ್ಯಂತ ಈ ಚಿತ್ರವನ್ನು ಬಿಡುಗಡೆ ಮಾಡುವ ಹೊಣೆ ಹೊತ್ತಿದೆ ಕೆಆರ್‌ಜಿ ಸ್ಟುಡಿಯೋ.