Bhagyalakshmi Serial: ತಾಂಡವ್ ತಂದಿದ್ದ ಬಟ್ಟೆಗಳನ್ನು ಮುಖದ ಮೇಲೆ ಎಸೆದು ಮಗನನ್ನು ಮನೆಯಿಂದ ಹೊರ ತಳ್ಳಿದ ಕುಸುಮಾ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮೀ' ಧಾರಾವಾಹಿ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ಅಕ್ಟೋಬರ್ 10 ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ. ಮಗ ತಂದಿದ್ದ ಬಟ್ಟೆಗಳನ್ನು ಅವನ ಮುಖದ ಮೇಲೆ ಎಸೆಯುವ ಕುಸುಮಾ ಆತನನ್ನು ಮನೆಯಿಂದ ಹೊರಗೆ ತಳ್ಳುತ್ತಾಳೆ.
Bhagyalakshmi Kannada Serial: ಪೂಜಾ ಬ್ಲಾಕ್‌ಮೇಲ್ ಮಾಡಿ ಮನೆಮಂದಿಗೆ ತನಗೆ ಬಟ್ಟೆಗಳನ್ನು ಶಾಪಿಂಗ್ ಮಾಡುತ್ತಾಳೆ. ಪೂಜಾಳಿಗೆ ಎಲ್ಲಾ ವಿಷಯ ತಿಳಿದಿದೆ. ಆಕೆ ನನ್ನ ಹಾಗೂ ಶ್ರೇಷ್ಠಾ ಮಾತುಗಳನ್ನು ರೆಕಾರ್ಡ್ ಮಾಡಿದ್ದಾಳೆ ಎಂಬ ವಿಚಾರ ತಾಂಡವ್‌ಗೆ ತಿಳಿದಿಲ್ಲ. ಆದರೆ ಅವಳಿಗೆ ಏನೋ ಗೊತ್ತಾಗಿದೆ ಎಂದು ಮಾತ್ರ ತಾಂಡವ್ ಹೆದರುತ್ತಾನೆ.
ತಾಂಡವ್‌ಗೆ ಎಚ್ಚರಿಕೆ ನೀಡಿದ ಪೂಜಾ
ಇಷ್ಟು ದಿನಗಳು ನನ್ನ ಮುಂದೆ ಬಾಲ ಮುದುಡಿದ ಬೆಕ್ಕಿನಂತೆ ಇದ್ದೆ, ಈಗ ನನ್ನನ್ನೇ ಬ್ಲಾಕ್‌ಮೇಲ್ ಮಾಡುತ್ತಿದ್ದೀಯ, ಅರ್ಧಬಂರ್ಧ ವಿಚಾರ ತಿಳಿದು ಹೀಗೆಲ್ಲಾ ಆಡಬೇಡ, ಇದು ಸರಿಯಿಲ್ಲ ಎಂದು ತಾಂಡವ್ ಪೂಜಾಗೆ ಆವಾಜ್ ಹಾಕುತ್ತಾನೆ. ಆದರೆ ತನ್ನ ಜುಟ್ಟು ಪೂಜಾ ಕೈಯ್ಯಲ್ಲಿ ಇದೆ ಎಂಬ ಸತ್ಯ ಅವನಿಗೆ ಗೊತ್ತಿಲ್ಲ. ನನ್ನ ಖುಷಿಗಾಗಿ ನಾನು ಏನು ಬೇಕಾದರೂ ಮಾಡುತ್ತೇನೆ. ಭಾವ, ನಾದಿನಿ ಎಂದರೆ ಅಣ್ಣ ತಂಗಿ ಇದ್ದಂತೆ ಇನ್ಮುಂದೆ ನೀವು ನನ್ನನ್ನು ಚೆನ್ನಾಗಿ ನೋಡಿಕೊಂಡರೆ ನಿಮಗೇ ಒಳ್ಳೆಯದು. ಹಾಗಂತ ನಾನು ಸ್ವಾರ್ಥಿ ಅಲ್ಲ, ನನಗೆ ಈ ದುಡ್ಡು, ಖುಷಿಗಿಂತ ನನ್ನ ಅಕ್ಕ, ರಕ್ತ ಸಂಬಂಧವೇ ಬಹಳ ಮುಖ್ಯ. ನನ್ನ ಅಕ್ಕನ ಜೀವನಕ್ಕೆ ತೊಂದರೆ ಆಗುತ್ತದೆ ಎನ್ನುವುದಾದರೆ ನಾನು ಸುಮ್ಮನೆ ಬಿಡುವುದಿಲ್ಲ ಎಂದು ಪೂಜಾ ತಾಂಡವ್‌ನನ್ನು ಎಚ್ಚರಿಸುತ್ತಾಳೆ.
ಇತ್ತ ಮನೆಯಲ್ಲಿ ಕುಸುಮಾ ಹಾಗೂ ಸುನಂದಾ ನಡುವೆ ತಾಂಡವ್ ವಿಚಾರಕ್ಕೆ ಮಾತಿನ ಚಕಮಕಿ ನಡೆಯುತ್ತದೆ. ಅಳಿಯನನ್ನು ಏಕ ವಚನದಲ್ಲಿ ಏಕೆ ಕರೆಯುತ್ತೀರಿ ಎಂದು ಕುಸುಮಾ ಕೇಳುತ್ತಾಳೆ. ಮೊನ್ನೆ ನಿಮ್ಮ ಮಗನ ಕಪಾಟಿನಲ್ಲಿ ಯಾವುದೋ ಹುಡುಗಿ ಪತ್ರ ಸಿಕ್ಕಿದಾಗಲೇ ನನಗೆ ಅಳಿಯನ ಮೇಲಿದ್ದ ಗೌರವ ಹೋಯ್ತು ಎಂದು ಸುನಂದಾ ಹೇಳುತ್ತಾಳೆ. ಸುನಂದಾ ಟೀಕಿಸುವುದಕ್ಕೂ, ಮಗನ ವರ್ತನೆಗೂ ಬೇಸತ್ತ ಕುಸುಮಾ, ಇವತ್ತು ಅವನು ಬರಲಿ ಸರಿಯಾಗಿ ವಿಚಾರಿಸಿಕೊಳ್ಳುತ್ತೇನೆ ಎಂದುಕೊಳ್ಳುತ್ತಾರೆ.
ಮಗನನ್ನು ಮನೆಯಿಂದ ಹೊರ ತಳ್ಳುವ ಕುಸುಮಾ
ಅಷ್ಟರಲ್ಲಿ ಕಾಲಿಂಗ್ ಬೆಲ್ ರಿಂಗ್ ಆಗುತ್ತದೆ. ಭಾಗ್ಯ ಬಾಗಿಲು ತೆಗೆಯಲು ಭಾಗ್ಯ ಹೋಗುತ್ತಾಳೆ, ಆದರೆ ಅವಳನ್ನು ತಡೆಯುವ ಕುಸುಮಾ ನಾನೇ ಬರುತ್ತೇನೆ ಕರೆದುಕೊಂಡು ಹೋಗು ಎನ್ನುತ್ತಾಳೆ. ಬಾಗಿಲಿನಲ್ಲಿ ಅಮ್ಮ ನಿಂತಿರುವುದನ್ನು ನೋಡಿ ತಾಂಡವ್ ಶಾಕ್ ಆಗುತ್ತಾನೆ. ಎಲ್ಲಿ ಹೋಗಿದ್ದೆ ಎಂದು ಕುಸುಮಾ ಪ್ರಶ್ನಿಸಿದಾಗ, ನನಗೆ ಅರ್ಜೆಂಟ್ ಮೀಟಿಂಗ್ ಇತ್ತು, ಅದನ್ನು ಮುಗಿಸಿಕೊಂಡು ಶಾಪಿಂಗ್ ಹೋಗಿದ್ದೆ ಎಂದು ತಾಂಡವ್ ಹೇಳುತ್ತಾನೆ. ಮನೆ ಒಳಗೆ ಬರುವ ತಾಂಡವ್‌ನನ್ನು ಕುಸುಮಾ ಹೊರಗೆ ತಳ್ಳುತ್ತಾಳೆ. ಆತ ತಂದಿದ್ದ ಬಟ್ಟೆಗಳನ್ನು ಮುಖದ ಮೇಲೆ ಎಸೆದು ಮನೆ ಬಿಟ್ಟು ಹೋಗುವಂತೆ ಹೇಳುತ್ತಾಳೆ. ಅಮ್ಮನ ವರ್ತನೆ ನೋಡಿ ತಾಂಡವ್ ಶಾಕ್ ಆಗುತ್ತಾನೆ.
ಮತ್ತೊಂದೆಡೆ, ಶ್ರೇಷ್ಠಾ ಮನೆಯಲ್ಲಿ ತಂದೆ ತಾಯಿ ಎಷ್ಟು ಬುದ್ಧಿ ಹೇಳಿದರೂ ಆಕೆ ಕೇಳಲು ತಯಾರಿಲ್ಲ. ನಾನು ಮದುವೆ ಆಗುವುದಾದರೆ ತಾಂಡವ್‌ನನ್ನೇ ಎಂದು ಪಟ್ಟು ಹಿಡಿಯುತ್ತಾಳೆ. ನಿನಗೆ ಒಳ್ಳೆ ಮಾತಿನಲ್ಲಿ ಹೇಳಿದರೆ ಆಗುವುದಿಲ್ಲ ಎಂದು ಕೋಪಗೊಳ್ಳುವ ಆಕೆಯ ತಂದೆ ಶ್ರೀವರ, ಎಲ್ಲರೂ ಲಗ್ಗೇಜ್ ಪ್ಯಾಕ್ ಮಾಡಿಕೊಳ್ಳಿ, ಇವಳು ಹೇಗೆ ಬರುವುದಿಲ್ಲವೋ ನೋಡುತ್ತೇನೆ ಎನ್ನುತ್ತಾರೆ. ನನ್ನನ್ನು ಊರಿಗೆ ಕರೆದೊಯ್ಯುತ್ತಾರೆ ಎಂದು ಶ್ರೇಷ್ಠಾ ಭಯಗೊಳ್ಳುತ್ತಾಳೆ.
ಕುಸುಮಾ, ಮಗನನ್ನು ಕ್ಷಮಿಸಿ ಮನೆಯೊಳಗೆ ಕರೆಯುತ್ತಾಳಾ, ಶ್ರೇಷ್ಠಾ, ಅಪ್ಪ ಅಮ್ಮನ ಜೊತೆ ಊರಿಗೆ ಹೋಗುತ್ತಾಳಾ ಎನ್ನುವುದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.