Mahanati Grand Finale: ಮೈಸೂರಿನ ಪ್ರಿಯಾಂಕಾಗೆ ಒಲಿದ ಮಹಾನಟಿ ಕಿರೀಟ; ತರೀಕೆರೆಯ ಧನ್ಯಶ್ರೀಗೆ ಎರಡನೇ ಸ್ಥಾನ
ಜೀ ಕನ್ನಡದಲ್ಲಿ ಪ್ರತಿ ವಾರ ವೀಕ್ಷಕರ ಗಮನ ಸೆಳೆದ ಮಹಾನಟಿ ಶೋಗೆ ತೆರೆ ಬಿದ್ದಿದೆ. ಅಂದರೆ, ವಿಜೇತರ ಘೋಷಣೆಯಾಗಿದೆ. ಹಾಗಾದರೆ, ಮೈಸೂರಿನ ಪ್ರಿಯಾಂಕ, ತರೀಕೆರೆಯ ಧನ್ಯಶ್ರೀ ಪೈಕಿ ಯಾರಿಗೆ ಸಿಕ್ತು ಮಹಾನಟಿ ಪಟ್ಟ?
Mahanati Grand Finale: ಡ್ರಾಮಾ ಜೂನಿಯರ್ಸ್, ಕಾಮಿಡಿ ಕಿಲಾಡಿಗಳು, ಡಿಕೆಡಿ, ಭರ್ಜರಿ ಬ್ಯಾಚುಲರ್ಸ್ ಮತ್ತು ಸರಿಗಮಪ ಮೂಲಕ ಈಗಾಗಲೇ ಸಾಕಷ್ಟು ನಟ ನಟಿಯರು, ಗಾಯಕ ಗಾಯಕಿಯರು ಹಾಗೂ ಕೊರಿಯೋಗ್ರಾಫರ್‌ಗಳನ್ನು ಕರುನಾಡಿಗೆ ನೀಡಿರುವ ಜೀ ಕನ್ನಡ, ಇದೀಗ ಮಹಾನಟಿ ಶೋ ಮೂಲಕ ಹೊಸ ಪ್ರತಿಭೆಗಳನ್ನು ನೀಡಿದೆ. ಇದೀಗ ಮೂರುವರೆ ತಿಂಗಳಿಂದ ಎಲ್ಲರನ್ನು ರಂಜಿಸಿದ ಈ ಶೋ ಕೊನೆಗೊಂಡಿದೆ. ಅದ್ಧೂರಿ ಗ್ರ್ಯಾಂಡ್ ಫಿನಾಲೆಯಲ್ಲಿ ಮೈಸೂರಿನಲ್ಲಿ ಪ್ರಿಯಾಂಕಾ ಮಹಾನಟಿ ಸೀಸನ್ 1ರ ವಿಜೇತೆಯಾಗಿ ಹೊರಹೊಮ್ಮಿದ್ದಾರೆ. ತರೀಕೆರೆಯ ಧನ್ಯಶ್ರೀ ರನ್ನರ್ ಅಪ್ ಆಗಿದ್ದಾರೆ.
16 ಸ್ಪರ್ಧಿಗಳ ಶೋ
ರಾಜ್ಯಾದ್ಯಂತ ಆಡಿಷನ್ ಮೂಲಕ ಒಟ್ಟು 16 ನಟಿಯರು ಮಹಾನಟಿ ಶೋಗೆ ಆಯ್ಕೆಯಾಗಿದ್ದರು. ವಾರಗಳು ಉರುಳಿದಂತೆ, ಎಲಿಮಿನೇಟ್ ಆಗುತ್ತ ಫಿನಾಲೆ ಹಂತಕ್ಕೆ ಐವರು ಸ್ಪರ್ಧಿಗಳು ಎಂಟ್ರಿಕೊಟ್ಟಿದ್ದರು. ಆ ಪೈಕಿ ಗಗನ ಚಿತ್ರದುರ್ಗ, ಮೂಡುಬಿದಿರೆಯ ಆರಾಧನಾ ಭಟ್, ತರೀಕೆರೆಯ ಧನ್ಯಶ್ರೀ, ಕಾರವಾರದ ಶ್ವೇತಾ ಭಟ್, ಮೈಸೂರಿನ ಪ್ರಿಯಾಂಕಾ ಫಿನಾಲೆ ವೇದಿಕೆ ಏರಿದ್ದರು. ಈ ಐವರು ಮಹಾನಟಿಯರಿಗೆ ಫಿನಾಲೆ ರೌಂಡ್‌ನಲ್ಲಿ ಕನ್ನಡದ ಟಾಪ್ ಐವರು ನಿರ್ದೇಶಕರು ಕಿರು ಚಿತ್ರವನ್ನು ನಿರ್ದೇಶಿಸಿದ್ದರು.
ಮೊದಲಿಗೆ ಎಲ್ಲ ಐವರು ಸ್ಪರ್ಧಿಗಳನ್ನು ವೇದಿಕೆ ಮೇಲೆ ಕರೆತರಲಾಯ್ತು. ಐವರ ಪೈಕಿ ಶ್ವೇತಾ ಭಟ್ ಐದನೇ ಸ್ಥಾನ ಪಡೆದರು. ಅದಾದ ಬಳಿಕ ಆರಾಧನಾ ಭಟ್ ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡರು. ಮೂರನೇ ಸ್ಥಾನ ಚಿತ್ರದುರ್ಗದ ಗಗನ ಪಾಲಾಯಿತು. ವೇದಿಕೆಗೆ ಬಂದ ತೀರ್ಪುಗಾರರು ವಿಜೇತರನ್ನು ಘೋಷಣೆ ಮಾಡಿದರು. ಉಳಿದ ಪ್ರಿಯಾಂಕಾ ಮತ್ತು ಧನ್ಯಶ್ರೀ ಇಬ್ಬರ ಕೈಹಿಡಿದುಕೊಂಡ ರಮೇಶ್ ಅರವಿಂದ್, ಪ್ರಿಯಾಂಕಾಳ ಕೈ ಎತ್ತುವ ಮೂಲಕ ಮಹಾನಟಿ ಸೀಸನ್ 1ರ ವಿಜೇತರನ್ನು ಘೋಷಣೆ ಮಾಡಿದರು.
ವಿಜೇತರಿಗೆ 15 ಲಕ್ಷದ ಕಿರೀಟ
ವಿಜೇತರಿಗೆ 15 ಲಕ್ಷ ಮೌಲ್ಯದ ಚಿನ್ನದ ಕಿರೀಟ ಮುಡಿಗೇರಿದರೆ, ಎರಡನೇ ಸ್ಥಾನ ಪಡೆದ ಧನ್ಯಶ್ರೀಗೆ 10 ಲಕ್ಷ ನಗದು ಬಹುಮಾನ ಸಿಕ್ಕಿದೆ. ಮೂರನೇ ಸ್ಥಾನ ಪಡೆದ ಚಿತ್ರದುರ್ಗದ ಗಗನ, ನಾಲ್ಕನೇ ಸ್ಥಾನ ಪಡೆದ ಆರಾಧನಾ ಭಟ್, ಐದನೇ ಸ್ಥಾನ ಶ್ವೇತಾ ಭಟ್‌ಗೆ ತಲಾ ಒಂದು ಲಕ್ಷ ಬಹುಮಾನ ನೀಡಲಾಯಿತು.
ಇದು ನನ್ನೊಬ್ಬಳ ಗೆಲುವಲ್ಲ..
ವಿಜೇತೆಯಾದ ಬಳಿಕ ಮಾತನಾಡಿದ ಪ್ರಿಯಾಂಕ, ಇದು ನನ್ನ ಒಬ್ಬಳ ಗೆಲುವಲ್ಲ. ಎಲ್ಲರ ಗೆಲುವು, ತೆರೆ ಹಿಂದಿನ ಎಲ್ಲರ ಶ್ರಮದಿಂದ ನಾನು ಈ ಹಂತಕ್ಕೆ ತಲುಪಿದ್ದೇನೆ. ವೋಟ್ ಹಾಕಿಇಲ್ಲಿಯವರೆಗೂ ಕರೆತಂದಿದ್ದ ನಾಡಿನ ಜನರಿಗೆ ಧನ್ಯವಾದ. ಈ ವೇದಿಕೆಗೆ ದೊಡ್ಡ ಧನ್ಯವಾದ. ಇನ್ನು ಮುಂದೆ ನಾನು ಏನೇ ಮಾಡಿದರೂ, ಅದಕ್ಕೆ ಈ ವೇದಿಕೆ ಕಾರಣ ಎಂದಿದ್ದಾರೆ ಪ್ರಿಯಾಂಕ.
ಕನ್ನಡದ ನಿರ್ದೇಶಕರ ಕಿರುಚಿತ್ರಗಳಲ್ಲಿ ಮಹಾನಟಿಯರು..
- ಮನದ ಪ್ರೀತಿ ವ್ಯಕ್ತ ಮಾಡುವ ‘ಅನುರಾಗ’ದ ಹೆಣ್ಣಾಗಿ, ಜಯತೀರ್ಥ ನಿರ್ದೇಶನದಲ್ಲಿ ಮೈಸೂರಿನ ಪ್ರಿಯಾಂಕ ಅಭಿನಯಿಸಿ ಎಲ್ಲರ ಮನಗೆದ್ದರು.
- ‘ಸ್ತ್ರೀ’ ಸಂಕುಲದ ಹೋರಾಟವನ್ನು ಮಂಸೋರೆ ನಿರ್ದೇಶನದಲ್ಲಿ ಅದ್ಭುತವಾಗಿ ಅಭಿನಯಿಸಿದ ಕಾರವಾರದ ಶ್ವೇತಾ ಭಟ್‌ಗೂ ಎಲ್ಲರ ಮೆಚ್ಚುಗೆ ಸಿಕ್ಕಿದೆ
- ಹರಿ ಸಂತೋಷ್ ನಿರ್ದೇಶನದ ‘ಪಂಚಮಿ’ಯಲ್ಲಿ ವಿಕ್ಷಿಪ್ತ ಮನಸಿನ ಹೆಣ್ಣಾಗಿ ಮನೋಜ್ಞವಾಗಿ ಅಭಿನಯಿಸಿದ ಧನ್ಯಶ್ರೀ ಎಲ್ಲರ ಭಯಗೊಳಿಸಿದರು.
- ಶಶಾಂಕ್ ನಿರ್ದೇಶನದಲ್ಲಿ ‘ಮಾಯದ ಮಳೆ’ಗಾಗಿ ಅಭಿನಯ ಪರೀಕ್ಷೆ ಎದುರಿಸಿದ ಆರಾಧನಾ ಭಟ್‌ಗೂ ಚಪ್ಪಾಳೆ ಸಿಕ್ಕಿದೆ.
- ಫುಡ್ ಡೆಲಿವರಿ ಹೆಣ್ಮಕ್ಕಳ ಬದುಕು, ಬವಣೆಗೆ ಪನ್ನಗಾಭರಣ ಅವರ ನಿರ್ದೇಶನದಲ್ಲಿ ಸಮರ್ಥ ಪಾತ್ರವಾದ ಗಗನ ಎಲ್ಲರ ಪ್ರೀತಿಗೆ ಪಾತ್ರರಾದರು.