Seetha Rama Serial: ಸೀತಾ ರಾಮನ ನಡುವೆ ಲಂಚ್ ಬಾಕ್ಸ್ ಕಿರಿಕ್; ಸೀತಾ ಈ ರಾಮನಿಗೇ ಸ್ವಂತ ಎಂದು ಮತ್ತೆ ಗುಡುಗಿದ ರುದ್ರಪ್ರತಾಪ್
ಸೀತಾ ರಾಮ ಧಾರಾವಾಹಿಯ 23ನೇ ಸಂಚಿಕೆಯಲ್ಲಿ ಸೀತಾ ಮತ್ತು ರಾಮನ ನಡುವೆ ಲಂಚ್ ಬಾಕ್ಸ್ ವಿಚಾರವಾಗಿ ಕ್ಯೂಟ್ ಕಿರಿಕ್ ಶುರುವಾಗಿದೆ. ಇನ್ನೊಂದು ಬದಿಯಲ್ಲಿ ಈ ಇಬ್ಬರನ್ನು ನೋಡಿ ರುದ್ರಪ್ರತಾಪ್ ಕೆಂಡವಾಗಿದ್ದಾನೆ.
Seetha Rama Serial 23rd Episode: ಲಾಯರ್ ರುದ್ರಪ್ರತಾಪ್ನಿಂದ ತಪ್ಪಿಸಿಕೊಂಡರೆ ಸಾಕಪ್ಪ ಎಂದು ಹೋಟೆಲ್ನಿಂದ ಆಚೆ ಬಂದ ಸೀತಾಗೆ ಅನಿರೀಕ್ಷಿತವಾಗಿ ರಾಮನ ದರ್ಶನವಾಗುತ್ತದೆ. ನಿಟ್ಟುಸಿರು ಬಿಟ್ಟ ಸೀತಾ, ರಾಮನ ಜತೆಯಲ್ಲಿಯೇ ಆಟೋದಲ್ಲಿ ಆಫೀಸ್ಗೂ ತೆರಳುತ್ತಾಳೆ. ತಡವಾಗಿ ಆಗಮಿಸಿದ್ದಕ್ಕೆ ಮ್ಯಾನೇಜರ್ ಚರಣ್ ಡಿ ಕಡೆಯಿಂದ ಇಬ್ಬರಿಗೂ ಮಂಗಳಾರತಿ ಆಗುತ್ತದೆ. ಮಧ್ಯಪ್ರವೇಶಿಸಿದ ಬಾಸ್ ಅಶೋಕ್ ರಾಮನನ್ನು ಒಳಗೆ ಕರೆದೊಯ್ಯುತ್ತಾನೆ.
ಇತ್ತ ರಾಮನ ಬಳಿ ಬಂದ ಸೀತಾ, ಟಿಫಿನ್ ಬಾಕ್ಸ್ ಕೊಡಿ ಎನ್ನುತ್ತಾಳೆ. "ಬಾಸ್ ಕರೆದಿದ್ದಾರೆ. ಅಲ್ಲಿಗೆ ಹೋಗಿ ಬಂದು ಕೊಡ್ತಿನಿ" ಎನ್ನುತ್ತಾನೆ ರಾಮ. ಇತ್ತ ಟಿಫಿನ್ ಬಾಸ್ ನನ್ನ ಬಳಿ ಇದೆ ಎಂದು ತಾತ ಸೂರ್ಯ ಪ್ರಕಾಶ್ ಕಡೆಯಿಂದ ವಾಟ್ಸಾಪ್ ಫೋಟೋ ರಾಮ್ಗೆ ಬರುತ್ತದೆ. ಅಶೋಕನನ್ನು ಕರೆದುಕೊಂಡು ನೇರವಾಗಿ ಮನೆಗೆ ಹೊರಡುತ್ತಾನೆ ರಾಮ. ಆಫೀಸ್ನಿಂದ ಹೊರಡುವುದಕ್ಕೂ ಮುನ್ನ ಲಂಚ್ ಬಾಕ್ಸ್ ಕೊಟ್ಟೇ ಹೋಗಬೇಕು ಎಂಬ ಸೀತಾ ಮಾತನ್ನು ರಾಮ ತುಂಬ ಸೀರಿಯಸ್ ಆಗಿ ತೆಗೆದುಕೊಂಡಿದ್ದಾನೆ.
ರಾಮನ ಈ ಆಟ ಅಶೋಕನಿಗೆ ನಗೆಪಾಟಲಿಗೀಡು ಮಾಡಿದೆ. ಸಾವಿರಾರು ಕೋಟಿ ಆಸ್ತಿ ಒಡೆಯ ಹೀಗೆ ಕಣ್ಣಾಮುಚ್ಚಾಲೆ ಆಟ ಆಡ್ತಿದ್ದಾನೆ ಎಂದು ಅಣಕಿಸುತ್ತಾನೆ ಅಶೋಕ. ಮನೆಗೆ ಬಂದು ಟಿಫಿನ್ ಬಾಕ್ಸ್ ಕೇಳಿದರೂ, ತಾತ ಮಾತ್ರ ಆ ವಿಚಾರವನ್ನು ಮರೆಸಲು ಯತ್ನಿಸುತ್ತಾನೆ. ಅತ್ತ ಸೀತಾಳಿಂದ ರಾಮನಿಗೆ ಕರೆ ಬರುತ್ತದೆ. ದಯಮಾಡಿ ಲಂಚ್ ಬಾಕ್ಸ್ ಕೊಟ್ಟು ಹೋಗಿ ಎನ್ನುತ್ತಾಳೆ. ಆಗ ಕೊಂಚ ತಡಬಡಾಯಿಸಿ ನಾಳೆ ಕೊಡುತ್ತೇನೆ ಎನ್ನುತ್ತಾನೆ. ಇಷ್ಟೊಂದು ಕೇರ್ಲೆಸ್ ಏಕೆ ಎಂದು ಫೋನ್ನಲ್ಲಿಯೇ ರಾಮನ ತಲೆ ತಿನ್ನುತ್ತಾಳೆ ಸೀತಾ.
ಇದೇ ವಿಚಾರ ತನ್ನ ಬುಡಕ್ಕೂ ಬರಬಹುದೆಂದು ಅಲ್ಲಿಂದ ಎದ್ದು ಹೊರನಡೆಯುತ್ತಾನೆ ಅಶೋಕ್, ಬಾಗಿಲು ಬಳಿ ನಿಂತಿದ್ದ ಸಾಧನಾಳನ್ನು ನೋಡಿ, "ಎಲ್ಲ ಕೇಳಿಸ್ಕೊಂಡು ಬಿಟ್ರಾ, ಅದನ್ನ ಮಿಸ್ ಮಾಡಿಕೊಂಡಿಲ್ಲ ತಾನೇ.." ಎಂದು ಆಕೆಯ ತಲೆಗೆ ಹುಳಬಿಡುತ್ತಾನೆ. ಇತ್ತ ಈ ವಿಚಾರ ಅಕ್ಕನಿಗೆ ಹೇಳಬೇಕೆಂದು ನೇರವಾಗಿ ಭಾರ್ಗವಿ ಬಳಿ ಹೋಗಿ ನಡೆದಿದ್ದನ್ನು ವಿವರಿಸುತ್ತಾಳೆ. ಫ್ಯಾಕ್ಟರಿ ಫೈರ್ ಆಯ್ತಲ್ಲ ಅದರ ಲಾಸ್ ವಿಚಾರ ಮಾತಾಡ್ತಿರಬಹುದೆಂದು ಹೇಳಿ ಆಕೆಯನ್ನು ಕಳಿಸುತ್ತಾಳೆ ಭಾರ್ಗವಿ.
ವಠಾರದ ಶ್ರೇಯಸ್ ಜತೆ ಮನೆ ವಿಚಾರದಲ್ಲಿ ಸಿಹಿ ಜಗಳಕ್ಕಿಳಿಯುತ್ತಾಳೆ. ಮಧ್ಯ ಪ್ರವೇಶಿಸಿದ ಸೀತಾ ಜಗಳ ಬಿಡಿಸುತ್ತಾಳೆ. ಸಿಹಿ ಬಾಯಲ್ಲಿಯೂ ಮನೆ ಎಷ್ಟು ಮುಖ್ಯ ಎಂಬ ವಿಚಾರ ಕೇಳಿಸಿ ಮನಸ್ಸಿಲ್ಲಿಯೇ ಮನೆ ಮಾರುವ ವಿಚಾರ ನೆನಪಿಸಿಕೊಳ್ಳುತ್ತಾಳೆ ಸೀತಾ. ಇತ್ತ ಸೀತಾಳ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ತಾತ ಸೂರ್ಯ ಪ್ರಕಾಶ್ ಜತೆಗೆ ಮತ್ತೆ ಮಾತಿಗಿಳಿಯುವ ರಾಮ, ನೌಕಕರಿಗೆ ನಮ್ಮ ಕಂಪನಿಯಿಂದ ಹಣಕಾಸಿನ ಸ್ಕೀಮ್ ಇವೆಯೇ ಎಂದು ಹೇಳುತ್ತಾನೆ. ರಾಮನ ಈ ನಡೆ ತಾತನಿಗೂ ಅಚ್ಚರಿ ಮೂಡಿಸುತ್ತದೆ. ನಿನ್ನ ಸಹಾಯ ಸರಿಯಾದ ವ್ಯಕ್ತಿಗೆ ತಲುಪಲಿದೆ ಎಂಭ ಭರವಸೆ ನನಗಿದೆ ಎನ್ನುತ್ತಾನೆ.
ಸೀತಾ ಜತೆ ರಾಮ ಕಾಣಿಸಿಕೊಂಡಿದ್ದಕ್ಕೆ ರುದ್ರಪ್ರತಾಪ್ ಗರಂ ಆಗಿದ್ದಾನೆ. ಸುಲೋಚನಾಗೆ ಕರೆ ಮಾಡಿದ ರುದ್ರಪ್ರತಾಪ್, ಸೀತಾ ಲೈಫ್ನಲ್ಲಿ ನಾನೇ ರಾಮ ಎಂದು ಗುಡುಗುತ್ತಾನೆ. ನನಗೆ ಸೀತಾ ಬೇಕಷ್ಟೇ, ನೀವಿಬ್ಬರೂ ಮಾತು ಕೊಟ್ಟಿದ್ದೀರಿ.. ಇಲ್ಲದಿದ್ದರೆ ನಿನ್ನ ಗಂಡನ ಕೇಸ್ ಮರೆತುಬಿಡು ಎಂದು ಹೆದರಿಸುತ್ತಾನೆ ರುದ್ರಪ್ರತಾಪ್. ಇತ್ತ ಸಿಹಿಯ ತಪ್ಪಿಗೆ ಪಾಠ ಕಲಿಸಲು ಮುಂದಾಗಿದ್ದಾಳೆ ಸೀತಾ. ಇನ್ಮೇಲೆ ಆಟಕ್ಕೆ ಹೋಗಂಗಿಲ್ಲ. ಮನೆಯಲ್ಲಿಯೇ ಹೋಮ್ ವರ್ಕ್ ಮಾಡಿ ಇಲ್ಲಿಯೇ ಇರುವುದಾಗಿ ಗದರುತ್ತಾಳೆ. ಬಳಿಕ ತಾತನ ಜತೆಗೆ ಮನೆ ವಿಚಾರವೂ ಮುನ್ನೆಲೆಗೆ ಬರುತ್ತದೆ.
ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ