ತುಳಸಿ ಗರ್ಭಿಣಿಯಾದ ವಿಚಾರಕ್ಕೆ ಅಚ್ಚರಿ,ಕಾಮೆಂಟ್ ಬಾಕ್ಸ್‌ನಲ್ಲಿ ವೀಕ್ಷಕರ ಬೈಗುಳಗಳ ಸುರಿಮಳೆ:ಶ್ರೀರಸ್ತು ಶುಭಮಸ್ತು ನಿರ್ದೇಶಕರ ಉದ್ದೇಶವೇನು?
ಆರಂಭದಿಂದಲೂ ವೀಕ್ಷಕರಿಗೆ ಮನರಂಜನೆ ನೀಡುತ್ತಾ ಬಂದಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿ ಈಗ ಟ್ವಿಸ್ಟ್ ಪಡೆದಿದೆ. ಪ್ರಮುಖ ಪಾತ್ರಧಾರಿ ತುಳಸಿ ಗರ್ಭಿಣಿಯಾಗಿದ್ದು ಪತಿ ಮಾಧವನ ಬಳಿ ಹೇಳಿಕೊಂಡಿದ್ದಾಳೆ. ಅದರೆ ಕಥೆಯ ಟ್ವಿಸ್ಟ್ ನೋಡಿ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರೋಮೋ ಕಾಮೆಂಟ್ ಬೈದು ಕಾಮೆಂಟ್ ಮಾಡುತ್ತಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳು ವೀಕ್ಷಕರ ಮೆಚ್ಚುಗೆ ಗಳಿಸುತ್ತಾ ಬಂದಿದೆ. ಆ ಸಾಲಿನಲ್ಲಿ ಶ್ರೀರಸ್ತು ಶುಭಮಸ್ತು ಧಾರಾವಾಹಿ ಕೂಡಾ ಒಂದು. ಆರಂಭವಾದಾಗಿನಿಂದ ಇಲ್ಲಿವರೆಗೂ ಒಂದು ದಿನವೂ ಎಲ್ಲಿಯೂ ಬೇಸರ ಆಗದಂತೆ ನಿರ್ದೇಶಕರು ಕಥೆ ಹೆಣೆಯುತ್ತಾ ಬಂದಿದ್ದಾರೆ. ಆದರೆ ಈಗ ಕಥೆ ಬದಲಿಸುವಂತೆ ವೀಕ್ಷಕರು ಒತ್ತಾಯ ಮಾಡುತ್ತಿದ್ದಾರೆ.
ಮರಾಠಿಯ ಅಗ್ಗಾಬಾಯಿ ಸಾಸುಭಾಯಿ ರೀಮೇಕ್
ಶ್ರೀರಸ್ತು ಶುಭಮಸ್ತು ಮರಾಠಿಯ ಅಗ್ಗಾಬಾಯಿ ಸಾಸುಭಾಯಿ ರೀಮೇಕ್ ಆಗಿದೆ. ಧಾರಾವಾಹಿ ತಮಿಳು, ಮಲಯಾಳಂ, ಪಂಜಾಬಿ ಭಾಷೆಗಳಿಗೂ ರೀಮೇಕ್ ಆಗಿ ಪ್ರಸಾರವಾಗುತ್ತಿದೆ. ಮದುವೆಗೆ ಬಂದ ಮಕ್ಕಳಿದ್ದರೂ ಜೀವನಕ್ಕೆ ಆಸರೆಯಾಗಿರಲಿ ಎಂದು ಮಾಧವ ಹಾಗು ತುಳಸಿ ಮದುವೆ ಆಗುತ್ತಾರೆ. ಮಾಧವನ ಮಕ್ಕಳು ತುಳಸಿಯನ್ನು, ತುಳಸಿ ಮಕ್ಕಳು ಮಾಧವನನ್ನು ತಾಯಿ ತಂದೆಯಾಗಿ ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ತಂದೆ ಮೇಲೆ ಮುನಿಸಿಕೊಂಡಿದ್ದ ಅವಿನಾಶ್ ಈಗ ಅಪ್ಪನೊಂದಿಗೆ ಚೆನ್ನಾಗಿದ್ದಾನೆ. ಸಮರ್ಥ್‌ಗೆ ಅಮ್ಮನನ್ನು ಮಾಧವನ ಮನೆಯಲ್ಲಿ ಬಿಡಲು ಇಷ್ಟವಿರುವುದಿಲ್ಲ. ಹಾಗೇ ತುಳಸಿಗೂ ಗಂಡನನ್ನು ಬಿಟ್ಟು ಹೋಗಲು ಇಷ್ಟವಿರುವುದಿಲ್ಲ. ಆದರೆ ಇದೀಗ ತುಳಸಿ ಗರ್ಭಿಣಿ ಆಗಿದ್ದಾಳೆ.
ಮಕ್ಕಳಿಗೆ ಮದುವೆ ಆದ ನಂತರ ಮದುವೆ ಆಗುವ ತುಳಸಿ ಹಾಗೂ ಮಾಧವ , ಮೊಮ್ಮಕ್ಕಳನ್ನು ನೋಡುವ ವಯಸ್ಸಿನಲ್ಲಿ ಮಕ್ಕಳಿಗೆ ಜನ್ಮ ಕೊಡಲು ಹೊರಟಿದ್ದಾರೆ. ತುಳಸಿ ಈಗ ಗರ್ಭಿಣಿ ಆಗಿದ್ದಾಳೆ. ತುಳಸಿ ತಲೆ ತಿರುಗಿ ಬಿದ್ದಾಗ ಸಮರ್ಥ್, ಅಮ್ಮನನ್ನು ಆಸ್ಪತ್ರೆಗೆ ಕರೆ ತರುತ್ತಾನೆ. ಅಲ್ಲಿ ಡಾಕ್ಟರ್ ತುಳಸಿ ಪ್ರೆಗ್ನೆಂಟ್ ಅಂತ ಹೇಳಿದ್ದಾರೆ. ಈ ವಿಚಾರವನ್ನು ಈಗ ತುಳಸಿ, ಮಾಧವನಿಗೆ ತಿಳಿಸಿದ್ದಾಳೆ. ಮಾಧವ ಈ ಸಿಹಿಸುದ್ದಿ ಕೇಳಿ ಖುಷಿಯಾದರೆ ತುಳಸಿ ಗಾಬರಿಯಾಗಿದ್ದಾಳೆ. ಈ ವಯಸ್ಸಿನಲ್ಲಿ ಈ ವಿಚಾರವನ್ನು ತಿಳಿದರೆ ಮಕ್ಕಳು ತಪ್ಪು ತಿಳಿಯಬಹುದು ಎಂಬ ಭಯ ಅವಳನ್ನು ಕಾಡುತ್ತಿದೆ.
ಧಾರಾವಾಹಿ ಕಥೆ ಬದಲಿಸಿ ಎಂದು ಒತ್ತಾಯಿಸುತ್ತಿರುವ ವೀಕ್ಷಕರು
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಈ ಎಪಿಸೋಡ್ ಬರುತ್ತಿದ್ದಂತೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದರು. ಈ ಧಾರಾವಾಹಿಯನ್ನು ನಾವು ಬಹಳ ಇಷ್ಟಪಟ್ಟು ನೋಡುತ್ತಿದ್ದೇವೆ. ದಯವಿಟ್ಟು ಇಲ್ಲ ಸಲ್ಲದ ಸ್ಟ್ರಿಪ್ಟನ್ನು ತಂದು ಸೇರಿಸಬೇಡಿ. ಧಾರಾವಾಹಿಯ ಕಥೆ ಎತ್ತಲೋ ಸಾಗುತ್ತಿದೆ. ನಮಗೆ ಇದೆನ್ನೆಲ್ಲಾ ನೋಡಲಾಗುತ್ತಿಲ್ಲ ಎಂದು ಗರಂ ಆಗಿದ್ದಾರೆ. ಈ ಧಾರಾವಾಹಿ ಸಮಾಜಕ್ಕೆ ತಪ್ಪು ಸಂದೇಶ ಕೊಡ್ತಿದೆ, ದಯವಿಟ್ಟು ನೋಡೋಕೆ ಆಗ್ತಿಲ್ಲ, ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಾ? ಮದುವೆ ಆದ ಮಕ್ಕಳಿದ್ದರೂ ನೀವು ಅಪ್ಪ-ಅಮ್ಮ ಆಗಬೇಕಾ? ನಮಗಂತೂ ಈ ಧಾರಾವಾಹಿ ನೋಡಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಟ್ವಿಸ್ಟ್ ಕೊಡಿ, ಧಾರಾವಾಹಿ ಕಥೆಯನ್ನು ಬದಲಿಸಿ. ನಿರ್ದೇಶಕರ ಉದ್ದೇಶವೇನು? ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ.
ಧಾರಾವಾಹಿಯಲ್ಲಿ ಸುಧಾರಾಣಿ, ಅಜಿತ್ ಹಂದೆ, ದೀಪಕ್, ಚಂದನಾ ರಾಘವೇಂದ್ರ, ವೆಂಕಟ್ ರಾವ್, ಲಾವಣ್ಯ, ನೇತ್ರಾ ಜಾಧವ್, ಅನನ್ಯಾ ಮೋಹನ್ ಹಾಗೂ ಇನ್ನಿತರರು ನಟಿಸಿದ್ದಾರೆ. ಧಾರಾವಾಹಿ, ಜೀ ಕನ್ನಡದಲ್ಲಿ ಪ್ರತಿದಿನ ಸಂಜೆ 6 ಕ್ಕೆ ಪ್ರಸಾರವಾಗುತ್ತಿದೆ.