3 ಸೆಕೆಂಡ್ ವಿಡಿಯೋ ಬಳಸಿದ್ದಕ್ಕೆ 10 ಕೋಟಿಗೆ ಧನುಷ್ ಡಿಮಾಂಡ್; ಪತ್ರದ ಮೂಲಕ ನಟನ ಮುಖಕ್ಕೆ ಹೊಡೆದ ನಯನತಾರಾ
Nayanthara vs Dhanush: ನೆಟ್ಫ್ಲಿಕ್ಸ್ ಒಟಿಟಿ ಸಾಕ್ಷ್ಯಚಿತ್ರ ನಯನತಾರಾ ಬಿಯಾಂಡ್ ದಿ ಫೇರಿ ಟೇಲ್ಗೆ ಸಂಬಂಧಿಸಿದಂತೆ ಹತ್ತು ಕೋಟಿಯ ಲೀಗಲ್ ನೋಟಿಸ್ ನೀಡಿದ್ದಾರೆ ನಟ, ನಿರ್ಮಾಪಕ ಧನುಷ್. ಈಗ ಇದೇ ನೋಟಿಸ್ಗೆ ಲೇಡಿ ಸೂಪರ್ಸ್ಟಾರ್ ನಯನತಾರಾ, ಧನುಷ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Nayanthara Comments On Dhanush: ಕಾಲಿವುಡ್ನ ಇಬ್ಬರು ದೊಡ್ಡ ಸ್ಟಾರ್ಗಳ ನಡುವಿನ ಶೀತಲ ಸಮರ ಇದೀಗ ಸಾರ್ವಜನಿಕ ವೇದಿಕೆಗೆ ಆಗಮಿಸಿದೆ. ಇಷ್ಟು ದಿನ ಅವರವರ ಮಧ್ಯ ಇದ್ದ ಮುನಿಸು ಈಗ ಬಟಾಬಯಲಾಗಿದೆ! ಕಾಲಿವುಡ್ ನಟ ಧನುಷ್ ವಿರುದ್ಧ ನಟಿ, ನಯನತಾರಾ ಸಿಡಿಮಿಡಿಗೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಮೂರು ಪುಟಗಳ ವಿವರವನ್ನು ಬರೆದು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ಕಾರಣವಾಗಿದ್ದು, ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್ ಡಾಕ್ಯುಮೆಂಟರಿಯಲ್ಲಿ ಬಳಸಲಾದ ನಾನುಮ್ ರೌಡಿದಾನ್ ಸಿನಿಮಾದ ತುಣುಕು.
ನಯನತಾರಾ ಮತ್ತು ಧನುಷ್ ನಡುವೆ ಈಗ ಕಾಪಿ ರೈಟ್ ವಿಚಾರಕ್ಕೆ ಮುನಿಸು ಜೋರಾಗಿದೆ. ನಯನತಾರಾ ಅವರ ಬಯೋಗ್ರಾಫಿ "ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್" ಡಾಕ್ಯುಮೆಂಟರಿ ಇದೇ ನವೆಂಬರ್ 18ರಿಂದ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಆಗಲಿದೆ. ಈ ಸಿರೀಸ್ನ ಟ್ರೇಲರ್ ಸಹ ಮೂರ್ನಾಲ್ಕು ದಿನಗಳ ಹಿಂದಷ್ಟೇ ಬಿಡುಗಡೆ ಆಗಿದೆ. ಈ ಟ್ರೇಲರ್ನಲ್ಲಿ ನಾನುಮ್ ರೌಡಿ ದಾನ್ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿನ 3 ಸೆಕೆಂಡ್ನ ವಿಡಿಯೋ ಬಳಕೆಯಾಗಿದೆ. ಆ ತುಣುಕನ್ನು ತೆಗೆಯಬೇಕು ಎಂದು ಆ ಚಿತ್ರದ ನಿರ್ಮಾಪಕ ಧನುಷ್, ನಯನತಾರಾಗೆ ನೋಟಿಸ್ ಕಳುಹಿಸಿದ್ದರು. ಈಗ ಅದಕ್ಕೆ ಪ್ರತಿಯಾಗಿ ನಯನತಾರಾ ಪತ್ರದ ಮೂಲಕ ಆಗಮಿಸಿದ್ದಾರೆ.
ನಾನುಮ್ ರೌಡಿ ದಾನ್ ಸಿನಿಮಾ 2015ರಲ್ಲಿ ತೆರೆಗೆ ಬಂದಿತ್ತು. ನಯನತಾರಾ ಮತ್ತು ವಿಜಯ್ ಸೇತುಪತಿ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿದ್ದರು. ನಯನತಾರಾ ಪತಿ ವಿಘ್ನೇಶ್ ಶಿವನ್ ಈ ಸಿನಿಮಾ ನಿರ್ದೇಶಿಸಿದರೆ, ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು ನಟ ಧನುಷ್. ಹೀಗಿರುವಾಗಲೇ "ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್" ಡಾಕ್ಯುಮೆಂಟರಿಯಲ್ಲಿ ಬಳಕೆಯಾದ ದೃಶ್ಯ ತೆಗೆಯುವಂತೆ, ನೇರವಾಗಿ ನಯನತಾರಾಗೆ, 10 ಕೋಟಿ ಪರಿಹಾರದ ಜತೆಗೆ ಲೀಗಲ್ ನೋಟೀಸ್ ಕಳಿಸಿದ್ದರು ಧನುಷ್. ಈ ಸ್ಟಾರ್ ನಡುವಿನ ಈ ಮುಸುಕಿನ ಗುದ್ದಾಟಕ್ಕೆ ಈಗ ತೆರೆಬಿದ್ದಿದೆ. ಈ ಆಟದಿಂದ ನಯನತಾರಾ ಹಿಂದೆ ಸರಿದಿದ್ದಾರೆ. ಆ ದೃಶ್ಯವನ್ನು ತೆಗೆಯುವುದಾಗಿ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್..
ಧನುಷ್ ವಿರುದ್ಧ ನಯನತಾರಾ ಇನ್ಸ್ಟಾಗ್ರಾಮ್ನಲ್ಲಿ ಮೂರು ಪುಟಗಳ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ, "ಅಪ್ಪ ಮತ್ತು ಅಣ್ಣನ ಆಶೀರ್ವಾದದಿಂದ ಈ ಹಂತಕ್ಕೆ ಬಂದ ನೀವು, ಈ ಪತ್ರವನ್ನು ಅರ್ಥೈಸಿಕೊಳ್ಳಬಲ್ಲಿರೆಂದು ನಾನು ಭಾವಿಸುತ್ತೇನೆ. ಸಿನಿಮಾ ಎಂದರೆ ಕದನ ಇದ್ದಂತೆ. ಯಾವ ಇಂಡಸ್ಟ್ರಿಯ ಹಿನ್ನೆಲೆಯಿಂದ ಬಾರದ ನಾನು, ಇದೀಗ ನನ್ನದೇ ಆದ ಒಂದು ಸ್ಥಾನದಲ್ಲಿ ಬಂದು ನಿಂತಿದ್ದೇನೆ. ಇದರ ಹಿಂದೆ ನನ್ನ ಶ್ರಮ ಇದೆಯೇ ಹೊರತು ಮತ್ತೇನಿಲ್ಲ.
"ನನ್ನ ನೆಟ್ಫ್ಲಿಕ್ಸ್ ಒಟಿಟಿ ಸಾಕ್ಷ್ಯಚಿತ್ರಕ್ಕಾಗಿ ಕೆಲವು ಸೆಲೆಬ್ರಿಟಿಗಳು ನನಗೆ ಸಹಾಯ ಮಾಡಿದರು. ಆದರೆ, ನಿಮಗೆ ನಮ್ಮ ಮೇಲೆ ದ್ವೇಷವಿದೆ. ಆದರೆ ಈ ಸಾಕ್ಷ್ಯಚಿತ್ರಕ್ಕಾಗಿ ಶ್ರಮಿಸಿದವರ ಜೀವನದ ಮೇಲೆ ನಿಮ್ಮ ಈ ನಡೆ ಪರಿಣಾಮ ಬೀರುತ್ತದೆ. ಅದಾಗ್ಯೂ ಈ ಡಾಕ್ಯುಮೆಂಟರಿಯಲ್ಲಿ ನಾನು ನನ್ನ ಸಿನಿಮಾ ತುಣುಕುಗಳನ್ನು ಆಪ್ತರ ಮಾತು ಕೇಳಿ ಸೇರಿಸಿದ್ದೇನೆ. ಆದರೆ, ನನಗೆ ತುಂಬಾ ವಿಶೇಷವಾದ ಕ್ಲಿಪ್ ಎಂದರೆ ನಾನುಮ್ ರೌಡಿ ದಾನ್ ಸಿನಿಮಾದ್ದು. ಅದು ಈ ಡಾಕ್ಯುಮೆಂಟರಿಗೆ ಹೇಳಿಮಾಡಿಸಿದಂತಿದೆ.
10 ಕೋಟಿಗೆ ಬೇಡಿಕೆ ಇಟ್ಟಿದ್ದು ಸರಿಯಲ್ಲ
“ಹಕ್ಕುಸ್ವಾಮ್ಯ ವಿಚಾರದಲ್ಲಿ ಸಮಸ್ಯೆ ಬರಬಹುದು ಎಂಬ ಕಾರಣಕ್ಕೆ ನೀವು ಹೀಗೆ ಮಾಡಬಹುದು. ಆದರೆ, ನಮ್ಮ ವಿರುದ್ಧ ನೀವು ಬಹುಕಾಲದಿಂದ ಕಟ್ಟಿಕೊಂಡಿರುವ ದ್ವೇಷವನ್ನು ಇದು ತೋರಿಸುತ್ತಿದೆ. ನಾನುಮ್ ರೌಡಿ ದಾನ್ ಸಿನಿಮಾದ ಶೂಟಿಂಗ್ ವೇಳೆ, ನಮ್ಮ ವಯಕ್ತಿಕ ಡಿವೈಸ್ನಿಂದ ಶೂಟ್ ಮಾಡಲಾದ 3 ಸೆಕೆಂಡ್ನ ಬಿಟಿಎಸ್ ವಿಡಿಯೋ ತುಣುಕನ್ನು ಟ್ರೇಲರ್ನಲ್ಲಿ ಬಳಸಿದ್ದಕ್ಕೆ 10 ಕೋಟಿಗೆ ಬೇಡಿಕೆ ಇಟ್ಟಿದ್ದು ಸರಿಯಲ್ಲ"
ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದಿತ್ತು..
"ನೀವು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತೀರಿ ಎಂದು ನಾನು ಭಾವಿಸಿರಲಿಲ್ಲ. ಇದು ನಿಮ್ಮ ಸ್ವಭಾವ ಹೇಗೆ ಎಂಬುದನ್ನು ತೋರಿಸುತ್ತದೆ. ಸಿನಿಮಾ ಬಿಡುಗಡೆಯಾಗಿ ಹತ್ತು ವರ್ಷಗಳು ಕಳೆದಿವೆ. ಅದು ಹಿಟ್ ಆದಾಗ ಅದು ನಿಮ್ಮ ಅಹಂಕಾರಕ್ಕೆ ನೋವುಂಟುಮಾಡಿದೆ ಎಂದು ನನಗೆ ತಿಳಿದಿದೆ. ನೀವು ನಿಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದೀರಿ" ಎಂದು ಸುದೀರ್ಘವಾದ ಬರಹದ ಮೂಲಕ ಧನುಷ್ ಬಗ್ಗೆ ತಮ್ಮ ನೋವನ್ನು ಪತ್ರದ ಮೂಲಕ ಹೊರಹಾಕಿದ್ದಾರೆ ನಯನತಾರಾ.