ಮಹಾಲಕ್ಷ್ಮೀ ಪತಿ ರವೀಂದರ್ ಚಂದ್ರಶೇಖರನ್ ಬಂಧನ; ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿದ್ದ ಜೋಡಿಗೆ ಶಾಕ್
ಮದುವೆ ವಾರ್ಷಿಕೋತ್ಸದ ಖುಷಿಯಲ್ಲಿದ್ದ ತಮಿಳು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರನ್ನು ವಂಚನೆ ಪ್ರಕರಣದಲ್ಲಿ ಚೆನ್ನೈ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
Ravindar Chandrasekaran: ಸೋಷಿಯಲ್ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ತಮಿಳು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಮತ್ತು ಮಹಾಲಕ್ಷ್ಮೀ ಜೋಡಿ, ಮೊನ್ನೆ ಮೊನ್ನೆಯಷ್ಟೇ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡು ಸಂಭ್ರಮಿಸಿತ್ತು. ಪತ್ನಿ ಮಹಾಲಕ್ಷ್ಮೀಗೆ ಸುದೀರ್ಘ ಪತ್ರವೊಂದನ್ನು ಬರೆದು ಉಡುಗೊರೆಯಾಗಿ ನೀಡಿದ್ದರು ರವೀಂದರ್. ಇದೀಗ ಇದೇ ಜೋಡಿಗೆ ಪೊಲೀಸರು ಶಾಕ್ ನೀಡಿದ್ದಾರೆ. ರವೀಂದರ್ ಚಂದ್ರಶೇಖರ್ ಪೊಲೀಸ್ ಅತಿಥಿಯಾಗಿದ್ದಾನೆ.
ಲಿಬ್ರಾ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಅಡಿಯಲ್ಲಿ ನಿರ್ಮಾಪಕ ರವೀಂದರ್, ಘನತ್ಯಾಜ್ಯವನ್ನು ಇಂಧನವನ್ನಾಗಿ ಪರಿವರ್ತಿಸುವ ಯೋಜನೆ ಆರಂಭಿಸುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅದನ್ನೇ ನಿಜವೆಂದು ನಂಬಿಸಿ ವಂಚಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ದೂರು ದಾಖಲಾದ ಬೆನ್ನಲ್ಲೇ ಈ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಬಂಧಿಸುವಂತೆ ಚೆನ್ನೈ ಮಹಾನಗರ ಪೊಲೀಸ್ ಆಯುಕ್ತ ಚಂಡಿಮಾಯಿ ರಾಥೋಡ್ ಆದೇಶ ಹೊರಡಿಸಿದ್ದರು. ಅವರ ಆದೇಶದ ಮೇರೆಗೆ ಕೇಂದ್ರ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಮೇನಕಾ ನೇತೃತ್ವದಲ್ಲಿ, ರವೀಂದರ್ ಅವರನ್ನು ಗುರುವಾರ ಬಂಧಿಸಲಾಗಿದೆ.
ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಗೆ ಹಣ ಹೂಡಿದರೆ ದುಪ್ಪಟ್ಟು ಲಾಭ ಸಿಗುತ್ತದೆ ಎಂದು ಚೆನ್ನೈನ ಬಾಲಾಜಿ ಗಾಬಾ ತಮ್ಮ ಮಾಧವ ಮೀಡಿಯಾ ಪ್ರೈ. ಲಿಮಿಟೆಡ್‌ನ ಬಾಲಾಜಿ ಎಂಬುವವರಿಂದ 16 ಕೋಟಿ ಹಣವನ್ನು ರವೀಂದರ್ ಹೂಡಿಕೆ ಮಾಡಿಸಿ ವಂಚಿಸಿದ್ದರು.
ರವೀಂದರ್ ಯೋಜನೆಯಲ್ಲಿ ಹೂಡಿಕೆ ಮಾಡುವಂತೆ ಹೇಳಿ ನಕಲಿ ದಾಖಲೆಗಳನ್ನು ಬಳಸಿ ವಂಚನೆಯಲ್ಲಿ ತೊಡಗಿದ್ದರು ಎಂದು ಉದ್ಯಮಿ ಬಾಲಾಜಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ರವೀಂದರ್ ಅವರನ್ನು ಬಂಧಿಸಲಾಗಿದೆ
ಬಂಧಿತ ರವೀಂದರ್ ಅವರನ್ನು ನ್ಯಾಯಾಲಕ್ಕೂ ಹಾಜರುಪಡಿಸಲಾಗಿತ್ತು. ಬಳಿಕ ನ್ಯಾಯಾಧೀಶರ ಆದೇಶದ ಮೇರೆಗೆ ಸದ್ಯ ರವೀಂದರ್ ಜೈಲಿನಲ್ಲಿದ್ದಾರೆ. ರವೀಂದರ್ ವಿರುದ್ಧ ಈಗಾಗಲೇ ಹಲವು ವಂಚನೆ ಪ್ರಕರಣಗಳು ದಾಖಲಾಗಿವೆ. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ