ಸೂರ್ಯ ಅಭಿನಯದ ಕಂಗುವಾ ರಿಲೀಸ್ ದಿನಾಂಕ ಫಿಕ್ಸ್; 10 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಫ್ಯಾಂಟಸಿ ಆಕ್ಷನ್ ಸಿನಿಮಾ
ಸೂರ್ಯ, ಬಾಬಿ ಡಿಯೋಲ್, ದಿಶಾ ಪಟಾನಿ ಅಭಿನಯದ ಕಂಗುವಾ ಸಿನಿಮಾ ಹೊಸ ರಿಲೀಸ್ ದಿನಾಂಕ ಫಿಕ್ಸ್ ಆಗಿದೆ. ನವೆಂಬರ್ 14 ರಂದು ಸಿನಿಮಾ ಬಿಡುಗಡೆ ಆಗುತ್ತಿರುವುದಾಗಿ ಚಿತ್ರತಂಡ ಅಧಿಕೃತವಾಗಿ ಅನೌನ್ಸ್ ಮಾಡಿದೆ. ಚಿತ್ರವನ್ನು ಸಿರುತೈ ಶಿವ ನಿರ್ದೇಶನ ಮಾಡುತ್ತಿದ್ದಾರೆ.
ತಮಿಳು ನಟ ಸೂರ್ಯ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕಂಗುವಾ ಬಿಡುಗಡೆಗೆ ಕೊನೆಗೂ ರಿಲೀಸ್ ದಿನಾಂಕ ಫಿಕ್ಸ್ ಅಗಿದೆ. ಇದಕ್ಕೂ ಮುನ್ನ ಚಿತ್ರತಂಡ ಅಕ್ಟೋಬರ್ 10 ರಂದು ಸಿನಿಮಾ ರಿಲೀಸ್‌ಗೆ ಪ್ಲ್ಯಾನ್ ಮಾಡಿತ್ತು. ಆದರೆ ಇದೀಗ ಮತ್ತೆ ದಿನಾಂಕ ಬದಲಾಗಿದ್ದು ಹೊಸ ರಿಲೀಸ್ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.
ವೆಟ್ಟಾಯನ್‌ಗಾಗಿ ರಿಲೀಸ್ ಡೇಟ್ ಮುಂದೂಡಿದ ಕಂಗುವಾ ತಂಡ
ರಜನಿಕಾಂತ್ ಅಭಿನಯದ 170ನೇ ಸಿನಿಮಾ ವೆಟ್ಟಾಯನ್ , ಅಕ್ಟೋಬರ್ 10 ರಂದು ತೆರೆ ಕಾಣುತ್ತಿದೆ. ಅದೇ ದಿನ ತಮ್ಮ ಸಿನಿಮಾ ತೆರೆ ಕಂಡರೆ ಬಾಕ್ಸ್ ಆಫೀಸ್‌ನಲ್ಲಿ ಕ್ಲಾಶ್ ಆಗಬಹುದು ಎಂಬ ಕಾರಣಕ್ಕೆ ಕಂಗುವಾ ಚಿತ್ರತಂಡ ರಿಲೀಸ್ ದಿನಾಂಕವನ್ನು ಮುಂದೂಡಿದೆ. ಕಂಗುವಾ ಫ್ಯಾಂಟಸಿ ಆಕ್ಷನ್ ಸಿನಿಮಾವಾಗಿದ್ದು ಚಿತ್ರವನ್ನು ಸ್ಟುಡಿಯೋ ಗ್ರೀನ್, ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿದೆ. ಈ ಚಿತ್ರಕ್ಕೆ ಸಿರುತೈ ಶಿವ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಸೂರ್ಯ, ಬಾಬಿ ಡಿಯೋಲ್, ದಿಶಾ ಪಟಾನಿ, ಕಿಚ್ಚ ಸುದೀಪ್, ಜಗಪತಿ ಬಾಬು, ಯೋಗಿ ಬಾಬು ಹಾಗೂ ಇನ್ನಿತರರು ನಟಿಸಿದ್ದಾರೆ.
10 ಭಾಷೆಗಳಲ್ಲಿ ಸಿನಿಮಾ ರಿಲೀಸ್
ಕಂಗುವಾ ಸಿನಿಮಾ 2D, 3D and IMAX ಫಾರ್ಮಾಟ್‌ಗಳಲ್ಲಿ ಸುಮಾರು 10 ಭಾಷೆಗಳಲ್ಲಿ ತೆರೆ ಕಾಣಲಿದೆ. ಚಿತ್ರಕ್ಕೆ 350 ಕೋಟಿ ರೂ. ಖರ್ಚು ಮಾಡಲಾಗಿದ್ದು ಇದು ಈ ವರ್ಷ ತೆರೆ ಕಾಣುತ್ತಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ನವೆಂಬರ್ 14 ರಂದು ಸಿನಿಮಾ ತೆರೆಗೆ ಬರಲಿದೆ. ಕಳೆದ ವರ್ಷ ಜುಲೈ 23 ರಂದು ಚಿತ್ರದ ಮೊದಲ ಟೀಸರ್ ರಿಲೀಸ್ ಮಾಡಲಾಗಿತ್ತು. ಟೀಸರ್ ರಿಲೀಸ್ ಆಗಿ 24 ಗಂಟೆಗಳ ಅವಧಿಯಲ್ಲಿ 30 ಮಿಲಿಯನ್ ವೀಕ್ಷಣೆ ಕಂಡು ದಾಖಲೆ ಬರೆದಿತ್ತು. ಇದೇ ವರ್ಷ ಆಗಸ್ಟ್ 12 ರಂದು ಬಿಡುಗಡೆಯಾಗಿದ್ದ ಥಿಯೇಟ್ರಿಕಲ್ ಟ್ರೈಲರ್ ಕೂಡಾ ಉತ್ತಮ ಪ್ರಶಂಸೆ ಗಳಿಸಿತ್ತು.
ಎರಡು ಭಾಗಗಳಲ್ಲಿ ತಯಾರಾಗುತ್ತಿರುವ ಕಂಗುವಾ
ಕನ್ನಡದಲ್ಲಿ ಕಂಗುವಾ ಸಿನಿಮಾ ಹಕ್ಕುಗಳನ್ನು ಕೆವಿಎನ್ ಪ್ರೊಡಕ್ಷನ್ಸ್ ಖರೀದಿಸಿದೆ. ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ದಕ್ಷಿಣದಲ್ಲಿ ಅಮೆಜಾನ್ ಪ್ರೈಂ ಪಡೆದುಕೊಂಡಿದೆ. ಕಂಗುವಾ ಕೂಡಾ 2 ಭಾಗಗಳಲ್ಲಿ ತಯಾರಾಗುತ್ತಿದ್ದು ಎರಡನೇ ಭಾಗವು 2017 ಬೇಸಿಗೆಯಲ್ಲಿ ತೆರೆ ಕಾಣಲಿದೆ. ಇದನ್ನು ಹೊರತುಪಡಿಸಿ ಸೂರ್ಯ, ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.