ಅಮರನ್ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್; ಬಂಪರ್ ಓಪನಿಂಗ್ ಪಡೆದ ಶಿವಕಾರ್ತಿಕೇಯನ್, ಸಾಯಿ ಪಲ್ಲವಿ ಸಿನಿಮಾ
Amaran Box office Collection Day 1: ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದಲ್ಲಿ ಶಿವಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅಮರನ್ ಸಿನಿಮಾ ಮೊದಲ ದಿನ ವಿಶ್ವಾದ್ಯಂತ 34 ಕೋಟಿ ರೂ. ಗಳಿಸಿದೆ. ಭಾರತದಲ್ಲಿ 24 ಕೋಟಿ ರೂ ಗ್ರಾಸ್ ಕಲೆಕ್ಷನ್ ಮಾಡಿದೆ.
Amaran Box office Collection Day 1: ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದಲ್ಲಿ ಶಿವಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅಮರನ್ ಸಿನಿಮಾ ಅಕ್ಟೋಬರ್ 31ಕ್ಕೆ ದೇಶಾದ್ಯಂತ ಬಿಡುಗಡೆ ಆಗಿದೆ. ಸಿನಿಮಾ ತಮಿಳು ಸೇರಿದಂತೆ ಕನ್ನಡ, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲೂ ರಿಲೀಸ್ ಆಗಿತ್ತು. ಸಿನಿಮಾ ಮೊದಲ ದಿನ ಗಳಿಸಿದ್ದು ಎಷ್ಟು? ಯಾವ ರಾಜ್ಯದ ಪಾಲು ಎಷ್ಟು? ಇಲ್ಲಿದೆ ಮಾಹಿತಿ.
ಅಮರನ್ ಮೊದಲ ದಿನ ವಿಶ್ವಾದ್ಯಂತ ಗಳಿಸಿದ್ದು ಎಷ್ಟು?
Sacnilk ನೀಡಿರುವ ವರದಿ ಪ್ರಕಾರ ಸಿನಿಮಾ ಮೊದಲ ದಿನ 21.4 ಕೋಟಿ ರೂ ಕಲೆಕ್ಷನ್ ಮಾಡಿದೆ. ಅದರಲ್ಲಿ ತಮಿಳುನಾಡಿನ ಪಾಲು ಹೆಚ್ಚಾಗಿದೆ. ತಮಿಳುನಾಡಿನಲ್ಲಿ ಸಿನಿಮಾ 17.45 ಕೋಟಿ ರೂ ಕಲೆಕ್ಷನ್ ಮಾಡಿದೆ. ವಿದೇಶಗಳಿಂದ 10 ಕೋಟಿ ರೂ ಕಲೆಕ್ಷನ್ ಮಾಡಿದ್ದು ಮೊದಲ ದಿನ ಸಿನಿಮಾ ಒಟ್ಟು 34.70 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದೆ. ಅಮರನ್ ಸಿನಿಮಾ ಜೊತೆ ಗುರುವಾರ ಕನ್ನಡದ ಬಘೀರ ಸಿನಿಮಾ ಕೂಡಾ ರಿಲೀಸ್ ಆಗಿದ್ದು ಎರಡೂ ಸಿನಿಮಾಗಳು ಕಲೆಕ್ಷನ್‌ನಲ್ಲಿ ಪೈಪೋಟಿ ನಡೆಸಿವೆ. ಬಘೀರ ಸಿನಿಮಾ ಮೊದಲ ದಿನ 2.8 ಕೋಟಿ ರೂ ಗಳಿಸಿದೆ. ತಮಿಳುನಾಡಿನಲ್ಲಿ ಅಮರನ್ ಸಿನಿಮಾ ಮೊದಲ ದಿನ ಮಾರ್ನಿಂಗ್ ಶೋ 63.63%, ಮಧ್ಯಾಹ್ನದ ಶೋ 81.74%, ಸಂಜೆ ಶೋ 82.36% ಹಾಗೂ ನೈಟ್ ಶೋ 84.01% ಆಕ್ಯುಪೆನ್ಸಿ ಇತ್ತು. ಕರ್ನಾಟಕದಲ್ಲಿ ತುಮಕೂರಿನಲ್ಲಿ ಹೆಚ್ಚಿನ ಜನರು ಈ ಸಿನಿಮಾ ನೋಡಿದ್ದಾರೆ. ಮೊದಲ ದಿನ ತುಮಕೂರಿನಲ್ಲಿ 65.25% ಆಕ್ಯುಪೆನ್ಸಿ ಇತ್ತು, ನಂತರ ಮೈಸೂರು ಹಾಗೂ ಬೆಂಗಳೂರಿನಲ್ಲಿ ಹೆಚ್ಚಿನ ಜನರು ಈ ಸಿನಿಮಾ ನೋಡಿದ್ದಾರೆ.
ಮೇಜರ್ ಮುಕುಂದ್ ವರದರಾಜನ್ ಬಯೋಪಿಕ್
ಅಮರನ್, ಭಯೋತ್ಪಾದಕರ ವಿರುದ್ಧ ಹೋರಾಟದಲ್ಲಿ ವೀರ ಮರಣವನ್ನಪ್ಪಿದ ಮೇಜರ್ ಮುಕುಂದ್ ವರದರಾಜನ್ ಅವರ ಜೀವನಧಾರಿತ ಸಿನಿಮಾ. ಶಿವ ಅರೂರ್ ಮತ್ತು ರಾಹುಲ್ ಸಿಂಗ್ ಅವರ ಇಂಡಿಯಾಸ್ ಮೋಸ್ಟ್ ಫಿಯರ್‌ಲೆಸ್: ಟ್ರೂ ಸ್ಟೋರೀಸ್ ಆಫ್ ಮಾಡರ್ನ್ ಮಿಲಿಟರಿ ಹೀರೋಸ್ ಎಂಬ ಪುಸ್ತಕ ಸರಣಿಯಲ್ಲಿ ಮೇಜರ್ ಮುಕುಂದ್ ವರದರಾಜನ್ ಅವರ ಬಗ್ಗೆ ಉಲ್ಲೇಖಿಸಲಾಗಿದೆ. ಮೇಜರ್ ಮುಕುಂದ್ ವರದರಾಜನ್ ಭಾರತೀಯ ಸೇನೆಯ ರಜಪೂತ್ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ಅಶೋಕ ಚಕ್ರ ಪದಕ ಪಡೆದ ಹೆಮ್ಮೆಯ ಸೈನಿಕ ಇವರು. 25 ಏಪ್ರಿಲ್ 2014 ರಂದು ವರದರಾಜನ್ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವ ಕಾರ್ಯಾಚರಣೆಯಲ್ಲಿ ಮರಣವನ್ನಪ್ಪಿದರು.
ಮೇಜರ್ ಮುಕುಂದ್ ವರದರಾಜನ್ ಪಾತ್ರದಲ್ಲಿ ಶಿವಕಾರ್ತಿಕೇಯನ್
ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್, ಸೋನಿ ಪಿಕ್ಚರ್ಸ್ ಫಿಲ್ಮ್ಸ್ ಜಂಟಿಯಾಗಿ ಸೇರಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಶಿವಕಾರ್ತಿಕೇಯನ್ ಮೇಜರ್ ಮುಕುಂದ್ ವರದರಾಜನ್ ಪಾತ್ರದಲ್ಲಿ, ಸಾಯಿ ಪಲ್ಲವಿ ವರದರಾಜನ್ ಪತ್ನಿ ಇಂದೂ ರೆಬೆಕಾ ವರ್ಗೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಚಿತ್ರೀಕರಣಕ್ಕೂ ಮುಂಚೆ ಇಂದು ರೆಬೆಕಾ ಅವರನ್ನು ಭೇಟಿಯಾಗಿ ಅವರೊಂದಿಗೆ ಕೆಲವು ಸಮಯ ಕಳೆದಿದ್ದಾಗಿ ಸಾಯಿ ಪಲ್ಲವಿ ಇಂಟರ್‌ವ್ಯೂ ಒಂದರಲ್ಲಿ ಹೇಳಿಕೊಂಡಿದ್ದರು.