ಒಟಿಟಿಗೆ ಬರಲಿದೆ ಅಮರನ್: ಕಮಲ್ ಹಾಸನ್ ನಿರ್ಮಾಣದ ಮಹತ್ವಾಕಾಂಕ್ಷಿ ಸಿನಿಮಾದ ಡಿಜಿಟಲ್ ಹಕ್ಕು ಮಾರಾಟ, ಡಿಸೆಂಬರ್‌ನಲ್ಲಿ ಸ್ಟ್ರೀಮ್ ಸಾಧ್ಯತೆ
ಶಿವಕಾರ್ತಿಕೇಯನ್, ಸಾಯಿಪಲ್ಲವಿ ನಟನೆಯ ಅಮರನ್ ಸಿನಿಮಾ ಇಂದು (ಅಕ್ಟೋಬರ್ 31) ಬಿಡುಗಡೆಯಾಗಿದೆ. ಕಮಲ್ ಹಾಸನ್ ನಿರ್ಮಾಣದ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಸಿನಿಮಾ ಡಿಸೆಂಬರ್‌ನಲ್ಲಿ ಒಟಿಟಿಗೆ ಬರುವ ಸಾಧ್ಯತೆ ಇದೆ. ಶಿವ ಆರೂರ್ ಮತ್ತು ರಾಹುಲ್ ಸಿಂಗ್ ಅವರ ‘ಇಂಡಿಯಾಸ್ ಮೋಸ್ಟ್ ಫಿಯರ್‌ಲೆಸ್‘ ಪುಸ್ತಕವನ್ನು ಆಧರಿಸಿದ ಸಿನಿಮಾ ಇದಾಗಿದೆ.
ಸಹಜ ಸುಂದರ ಸಾಯಿ ಪಲ್ಲವಿ, ಶಿವ ಕಾರ್ತಿಕೇಯನ್ ನಟನೆಯ ಅಮರನ್ ತಮಿಳು ಸಿನಿಮಾ ಇಂದು (ಅಕ್ಟೋಬರ್ 31) ಬಿಡುಗಡೆಯಾಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಕಥೆ, ನಿರ್ದೇಶನ, ಡೈಲಾಗ್‌ಗಳಿಗೆ ಜನರು ಚಪ್ಪಾಳೆ, ಸಿಳ್ಳೆ ಹೊಡೆಯತ್ತಿದ್ದಾರೆ. ಶಿವ ಆರೂರ್ ಮತ್ತು ರಾಹುಲ್ ಸಿಂಗ್ ಅವರ ‘ಇಂಡಿಯಾಸ್ ಮೋಸ್ಟ್ ಫಿಯರ್‌ಲೆಸ್: ಟ್ರೂ ಸ್ಟೋರೀಸ್ ಆಫ್ ಮಾಡರ್ನ್ ಮಿಲಿಟರಿ ಹೀರೋಸ್‘ ಎಂಬ ಪುಸ್ತಕ ಆಧಾರಿತ ಸಿನಿಮಾ ಇದಾಗಿದೆ. ಇದು ಮಿಲಿಟರಿ ಅಧಿಕಾರಿ ಮುಕುಂದ್‌ನ ಅವರ ಜೀವನದ ಕಥೆಯನ್ನು ಆಧರಿಸಿದೆ.
ತಮಿಳಿನ ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಥಿಯೇಟ್ರಿಕಲ್ ಬಿಡುಗಡೆಗೆ ಮುಂಚಿತವಾಗಿ, ಚಿತ್ರದ OTT ಹಕ್ಕುಗಳನ್ನು ಖರೀದಿಸಲಾಗಿತ್ತು ಎಂದು ವರದಿಗಳು ತಿಳಿಸುತ್ತವೆ.
ಅಮರನ್ ಯಾವ ಒಟಿಟಿಯಲ್ಲಿ ಬಿಡುಗಡೆಯಾಗುತ್ತೆ?
ವರದಿಗಳ ಪ್ರಕಾರ ಅಮರನ್ ಒಟಿಟಿ ಹಕ್ಕನ್ನು ನೆಟ್‌ಫ್ಲಿಕ್ಸ್ ಖರೀದಿಸಿದೆ ಎನ್ನಲಾಗುತ್ತಿದೆ. ಮಿಲಿಟರಿ ಕಥಾಹಿನ್ನೆಲೆ ಹೊಂದಿರುವ ಈ ಸಿನಿಮಾ ಯಾವ ದಿನಾಂಕಕ್ಕೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ ಎಂಬುದು ಇನ್ನೂ ನಿಖರವಾಗಿ ತಿಳಿದಿಲ್ಲವಾದರೂ ಈ ಸಿನಿಮಾವು ಡಿಸೆಂಬರ್‌ನಲ್ಲಿ ಒಟಿಟಿಗೆ ಬರುವ ಸಾಧ್ಯತೆ ಇದೆ.
ಈ ಸಿನಿಮಾಗೆ ಮೊದಲು ಶಿವಕಾರ್ತಿಕೇಯನ್ 21 ಎಂದು ಹೆಸರಿಡಲಾಗಿತ್ತು. ಈ ಬಹು ನಿರೀಕ್ಷಿತ ಚಲನಚಿತ್ರವನ್ನು 2022ರ ಜನವರಿಯಲ್ಲಿ ಔಪಚಾರಿಕವಾಗಿ ಘೋಷಿಸಲಾಯಿತು. ಅಧಿಕೃತ ಶೀರ್ಷಿಕೆಯನ್ನು ಫೆಬ್ರವರಿ 2024 ರಲ್ಲಿ ಬಹಿರಂಗಪಡಿಸಲಾಯಿತು. 2023 ರಿಂದ ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ಕಾಶ್ಮೀರ ಹಾಗೂ ಚೈನ್ನೈನಲ್ಲಿ ಬಹುತೇಕ ಭಾಗಗಳು ಶೂಟಿಂಗ್ ಆಗಿದ್ದವು.
ಈ ಸಿನಿಮಾಕ್ಕೆ ಜಿವಿ ಪ್ರಕಾಶ್ ಕುಮಾರ್ ಸಂಗೀತ ನಿರ್ದೇಶವಿದೆ. ಸಿ.ಎಚ್. ಸಾಯಿ ಸಿನಿಮಾಕ್ಕೆ ಛಾಯಾಗ್ರಾಹಣ ಮಾಡಿದ್ದು, ಸಿನಿಮಾಕ್ಕಾಗಿ ಅದ್ಭುತ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.
ಅಮರನ್ ಸಿನಿಮಾದ ಪಾತ್ರವರ್ಗ
ಮೇಜರ್ ಮುಕುಂದ್ "ಮಡ್ಡಿ" ವರದರಾಜನ್ ಪಾತ್ರದಲ್ಲಿ ಶಿವಕಾರ್ತಿಕೇಯನ್ ನಟಿಸಿದ್ದಾರೆ. ಮುಕುಂದ್ ಅವರ ಪತ್ನಿ ಇಂಧು ರೆಬೆಕಾ ವರ್ಗೀಸ್ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಿದ್ದರೆ, ಭುವನ್ ಅರೋರಾ ಸಿಪಾಯಿ ವಿಕ್ರಮ್ ಸಿಂಗ್ ಆಗಿ ಚಿತ್ರದಲ್ಲಿ ಕಾಣಿಸಿದ್ದಾರೆ. ರಾಹುಲ್ ಬೋಸ್ ಕರ್ನಲ್ ಅಮಿತ್ ಸಿಂಗ್ ದಾಬಾಸ್, ಮುಕುಂದ್ ಅವರ ಕಮಾಂಡಿಂಗ್ ಆಫೀಸರ್, ಲಲ್ಲು ಪಾತ್ರದಲ್ಲಿ ರವಿಶಂಕರ್, ಮೈಕಲ್ ಪಾತ್ರದಲ್ಲಿ ಶ್ರೀಕುಮಾರ್, ಮುಕುಂದ್ ಅವರ ತಾಯಿ ಗೀತಾ ವರದರಾಜನ್ ಪಾತ್ರದಲ್ಲಿ ಗೀತಾ ಕೈಲಾಸಂ, ಮೇಜರ್ ಶ್ರೀನಾಥ್ ಪಾತ್ರದಲ್ಲಿ ಅಭಿನವ್ ರಾಜ್ ಮೊದಲಾದವರು ನಟಿಸಿದ್ದಾರೆ.