Korean Films: ಕೊರಿಯನ್ ಸಿನಿಮಾ ಇಷ್ಟಪಡುವಿರಾ, ಧೈರ್ಯವಂತರು ಒಟಿಟಿಯಲ್ಲಿ ನೋಡಬಹುದಾದ 5 ಹಾರರ್ ಸಿನಿಮಾಗಳ ಮಾಹಿತಿ ಇಲ್ಲಿದೆ
Top 5 Horror Films: ಕೊರಿಯನ್ ಡ್ರಾಮಾ, ಕೊರಿಯನ್ ಸಿನಿಮಾ ನೋಡವು ದೊಡ್ಡ ವರ್ಗವೇ ಭಾರತದಲ್ಲಿದೆ. ನೀವು ಕೊರಿಯನ್ ಸಿನಿಮಾ ಪ್ರಿಯರಾಗಿದ್ದರೆ, ನಿಮಗೆ ಹಾರರ್ ಸಿನಿಮಾಗಳು ಇಷ್ಟವಿದ್ದರೆ ಒಟಿಟಿಯಲ್ಲಿರುವ ಐದು ಪ್ರಮುಖ ಭಯಾನಕ ಸಿನಿಮಾಗಳ ಮಾಹಿತಿ ಇಲ್ಲಿದೆ.
ಭಾರತದ ಯುವಜನತೆಗೆ ಕೊರಿಯನ್ ಡ್ರಾಮಾಗಳೆಂದರೆ ಅಚ್ಚುಮೆಚ್ಚು. ಕೊರಿಯನ್ ಸಿನಿಮಾಗಳಿಗೂ ದೊಡ್ಡ ವೀಕ್ಷಕ ಬಳಗ ಭಾರತದಲ್ಲಿದೆ. ಕಾಲೇಜು ತರುಣ ತರುಣಿಯರಂತೂ ಕೊರಿಯನ್ ನಾಯಕ ನಾಯಕಿಯರಿಗೆ ಫಿದಾ ಆಗುತ್ತಾರೆ. ಸಿನಿಮಾದಲ್ಲಿ ಕಾಣಿಸುವ ಅಲ್ಲಿನ ಆಹಾರ ಸಂಸ್ಕೃತಿ, ವೈಭೋಗ ಇತ್ಯಾದಿಗಳಿಗೆ ಖುಷಿ ಪಡುತ್ತಾರೆ. ಕೊರಿಯಾ ಭಾಷೆ ಅರ್ಥವಾಗದೆ ಇದ್ದರೂ ಆ ಭಾಷೆಗೆ ಮಾರು ಹೋಗುತ್ತಾರೆ. ಎಲ್ಲಾದರೂ ನೀವು ಹಾರರ್ ಸಿನಿಮಾಗಳ ಅಭಿಮಾನಿಗಳಾಗಿದ್ದರೆ ಕೊರಿಯಾದ ಹಾರರ್ ಸಿನಿಮಾಗಳು ನೋಡಬಹುದು.
ಹೃದಯವೇ ಬಾಯಿಗೆ ಬರುವಂತಹ, ಅಲೌಖಿಕ, ಮಾನಸಿಕ ದುಸ್ವಪ್ನ, ಸಸ್ಪೆನ್ಸ್ ಇತ್ಯಾದಿ ಕಥಾ ಹಂದರವಿರುವ ಸಿನಿಮಾದ ಅಭಿಮಾನಿಯಾಗಿದ್ದರೆ ಕೊರಿಯಾ ಹಾರರ್ ಸಿನಿಮಾ ನೋಡಬಹುದು. ಒಟಿಟಿಯಲ್ಲಿ ಲಭ್ಯವಿರುವ ಪ್ರಮುಖ ಹಾರರ್ ಸಿನಿಮಾಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಅಂದಹಾಗೆ, ಈ ಸಿನಿಮಾ ನೋಡುವ ಮೊದಲು ಲೈಟ್ ಆಫ್ ಮಾಡಿ, ಸದ್ದುಗದ್ದಲ ಇಲ್ಲದೆ ಮನೆಯಲ್ಲಿ ಒಬ್ಬರೇ ಇರುವಾಗ ಅಥವಾ ಸಿನಿಮಾವನ್ನು ಇಷ್ಟಪಡುವ ಇತರರ ಜತೆ ನೋಡಿ.
ದಿ ವೈಲಿಂಗ್ (The Wailing)
ಒಂದು ಸಣ್ಣ ಹಳ್ಳಿಯಲ್ಲಿ ಇಡೀ ಸಮುದಾಯವು ಭಯದಲ್ಲಿರುತ್ತದೆ. ಅಲ್ಲಿನ ಕರಾಳ ಮತ್ತು ಅಶುಭ ಶಕ್ತಿಯ ರಹಸ್ಯವನ್ನು ಒಬ್ಬ ಮೂರ್ಖ ಪೋಲೀಸ್ ಅಧಿಕಾರಿ (ಕ್ವಾಕ್ ಡೊ-ವೊನ್) ಕಂಡುಹಿಡಿಯಲು ಪ್ರಯತ್ನಿಸುತ್ತಾನೆ. ನಾ ಹಾಂಗ್-ಜಿನ್ ನಿರ್ದೇಶಿಸಿದ ಈ ಅಲೌಕಿಕ ಭಯಾನಕ ಚಲನಚಿತ್ರದಲ್ಲಿ ಹ್ವಾಂಗ್ ಜಂಗ್-ಮಿನ್ ಮತ್ತು ಚುನ್ ವೂ-ಹೀ ಮನೋಜ್ಞವಾಗಿ ನಟಿಸಿದ್ದಾರೆ. ಈ ಸಿನಿಮಾವನ್ನು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಬಹುದು.
ದಿ ಹೋಸ್ಟ್ (The Host)
ಸಿಯೋಲ್‌ನ ಹಾನ್ ನದಿಯಿಂದ ಹೊರಕ್ಕೆ ಬಂದ ಭಯಾನಕ ಪ್ರಾಣಿಯೊಂದು ಯುವತಿಯೊಬ್ಬಳನ್ನು ಅಪಹರಣ ಮಾಡಿದಾಗ ಅವಳನ್ನು ಉಳಿಸಲು ಅವಳ ಕುಟುಂಬ ಅಪಾಯಕಾರಿ ದಂಡಯಾತ್ರೆ ಕೈಗೊಳ್ಳುತ್ತದೆ. ಈ ಸಿನಿಮಾವು ಹಾರರ್ ಜತೆಗೆ ಹಾಸ್ಯ, ವಿಡಂಬನೆಯನ್ನೂ ಹೊಂದಿದೆ. ಕುಟುಂಬ, ತ್ಯಾಗ, ಮತ್ತು ಅಗಾಧ ಕಷ್ಟ ಇತ್ಯಾದಿಗಳ ನಡುವೆ ಮಾನವೀಯತೆಯ ಪಾಠವನ್ನು ಹೇಳುತ್ತದೆ. ಈ ಸಿನಿಮಾವನ್ನು ಎಂಎಕ್ಸ್ ಪ್ಲೇಯರ್‌ನಲ್ಲಿ ವೀಕ್ಷಿಸಬಹುದು.
ಐ ಸಾ ದಿ ಡೆವಿಲ್ (I Saw the Devil)
ರಹಸ್ಯ ಏಜೆಂಟ್ ಒಬ್ಬ ಸರಣಿ ಕೊಲೆಗಾರನ ಹುಡುಕುವ ಸಿನಿಮಾವಿದು. ಇದು ಬೆಕ್ಕು ಮತ್ತು ಇಲಿಯ ಅತ್ಯಾಕರ್ಷಕ ಆಟ. ಒಳ್ಳೆಯದು ಮತ್ತು ಕೆಟ್ಟದರ ನಡುವಿನ ಸೆಣಸಾಟವೂ ಹೌದು. ಈ ಸಿನಿಮಾವನ್ನು ಅಮೆಜಾನ್ ಪ್ರೈಮ್‌ನಲ್ಲಿ ನೋಡಬಹುದು.
ದಿ ಸೈಲೆನ್ಸ್ಡ್ (The Silenced)
ದುರ್ಬಲ ಹುಡುಗಿಯೊಬ್ಬಳು ಬೋರ್ಡಿಂಗ್ ಶಾಲೆಗೆ ದಾಖಲಾಗುತ್ತಾಳೆ. ಅಲ್ಲಿ ಅವಳು ರಹಸ್ಯ ಪ್ರಯೋಗಗಳನ್ನು ಕಲಿಯುತ್ತಾಳೆ. ಈ ಸಿನಿಮಾದಲ್ಲಿ ಚಿತ್ರ ವಿಚಿತ್ರ ವಿದ್ಯಮಾನ ನಡೆಯುತ್ತದೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಹಾರರ್ ಸಿನಿಮಾವಿದೆ.
ದಿ ಟನಲ್ ( The Tunnel)
ಕುಸಿಯುತ್ತಿರುವ ಸುರಂಗದ ಕೆಳಗೆ ಸಿಕ್ಕಿಬಿದ್ದಿರುವ ವ್ಯಕ್ತಿಯು ಸಮಯ ಮತ್ತು ಹತಾಶತೆಯ ವಿರುದ್ಧ ಹೋರಾಡುತ್ತಾನೆ. ಹೊರಗಿನ ಪ್ರಪಂಚವು ಅವನನ್ನು ರಕ್ಷಿಸಲು ಪ್ರಯತ್ನಿಸುತ್ತದೆ. ಬದುಕಲು ಪ್ರಯತ್ನಿಸುವ ವ್ಯಕ್ತಿಯೊಬ್ಬರ ಈ ಸಿನಿಮಾ ಹಾರರ್ ಮತ್ತು ಭಾವನಾತ್ಮಕ ಸಂಕಟವನ್ನು ಹೊಂದಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಹಾರರ್ ಸಿನಿಮಾ ವೀಕ್ಷಿಸಬಹುದು.
ಒಟಿಟಿಯಲ್ಲಿ ಈ ಐದು ಸಿನಿಮಾಗಳನ್ನು ಮಾತ್ರವಲ್ಲದೆ ದಿ ಕಾಲ್ ಎಂಬ ಇನ್ನೊಂದು ಹಾರರ್ ಸಿನಿಮಾವೂ ಇದೆ. ನಿಮ್ಮ ಹೃದಯ ದುರ್ಬಲವಾಗಿದ್ದರೆ, ಭಯ ಪಡುವ ವ್ಯಕ್ತಿಯಾಗಿದ್ದರೆ ಹಾರರ್ ಸಿನಿಮಾ ನೋಡಬೇಡಿ.