OTT Movie Review: ಆತ್ಮ ರೂಪದಲ್ಲಿ ತಮನ್ನಾ ಭಾಟಿಯಾ, ಮಂತ್ರವಾದಿಯಾದ ಕೆಜಿಎಫ್‌ ಗರುಡ; ಅರಮನೈ 4 ಸಿನಿಮಾ ನೋಡಬಹುದಾ? ಓದಿ ರಿವ್ಯೂ
ಕನ್ನಡ ಸುದ್ದಿ  /  ಮನರಂಜನೆ  /  Ott Movie Review: ಆತ್ಮ ರೂಪದಲ್ಲಿ ತಮನ್ನಾ ಭಾಟಿಯಾ, ಮಂತ್ರವಾದಿಯಾದ ಕೆಜಿಎಫ್‌ ಗರುಡ; ಅರಮನೈ 4 ಸಿನಿಮಾ ನೋಡಬಹುದಾ? ಓದಿ ರಿವ್ಯೂ

OTT Movie Review: ಆತ್ಮ ರೂಪದಲ್ಲಿ ತಮನ್ನಾ ಭಾಟಿಯಾ, ಮಂತ್ರವಾದಿಯಾದ ಕೆಜಿಎಫ್‌ ಗರುಡ; ಅರಮನೈ 4 ಸಿನಿಮಾ ನೋಡಬಹುದಾ? ಓದಿ ರಿವ್ಯೂ

Aranmanai 4 ott Movie Review: ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಒಟಿಟಿಯಲ್ಲಿರುವ ತಮನ್ನಾ ಭಾಟಿಯಾ ನಾಯಕಿ ಪಾತ್ರದಲ್ಲಿ ನಟಿಸಿರುವ ಅರಣ್ಮನೈ ಸಿನಿಮಾ ಹೇಗಿದೆ? ರಾಶಿ ಖನ್ನ, ತಮನ್ನಾ ಭಾಟಿಯಾ, ಸುಂದರ್‌, ಗರುಡ ರಾಮ್‌, ದೇವಾ ನಂದ, ಕೋವೈ ಸರಳ, ಯೋಗಿ ಬಾಬು ಮುಂತಾದವರು ನಟಿಸಿರುವ ಅರಮನೈ 4 ಸಿನಿಮಾದ ವಿಮರ್ಶೆ ಇಲ್ಲಿದೆ.

ಅರಮನೈ ಸಿನಿಮಾ ವಿಮರ್ಶೆ
ಅರಮನೈ ಸಿನಿಮಾ ವಿಮರ್ಶೆ

ಒಟಿಟಿಯಲ್ಲಿ ಈಗ ಸಿನಿಮಾಗಳ ಹಬ್ಬ. ಎರಡು ಮೂರು ಗಂಟೆ ಬಿಡುವು ಮಾಡಿಕೊಂಡು ಯಾವುದಾದರೂ ಒಳ್ಳೆಯ ಸಿನಿಮಾ ನೋಡಬೇಕೆಂದು ನೀವು ಬಯಸಬಹುದು. ಇಂತಹ ಸಮಯದಲ್ಲಿ ಅಲ್ಲಿರುವ ನೂರಾರು ಸಿನಿಮಾಗಳಲ್ಲಿ ಯಾವುದನ್ನೂ ನೋಡುವುದು? ಯಾವುದಕ್ಕೆ ನಮ್ಮ ಅಮೂಲ್ಯ ಸಮಯ ವಿನಿಯೋಗಿಸುವುದು ಎಂಬ ಸಂದೇಹ ನಿಮ್ಮಲ್ಲಿ ಇರಬಹುದು. ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿರುವ ಅರಣ್ಮನೈ ಸಿನಿಮಾ ನೋಡಲು ನೀವು ಬಯಸಿದರೆ ಅದಕ್ಕೂ ಮೊದಲು ಆ ಸಿನಿಮಾ ಹೇಗಿದೆ? ಎಂದು ತಿಳಿದುಕೊಳ್ಳುವುದು ಉತ್ತಮ.

ಸಿನಿಮಾದ ಹೆಸರು: ಅರಣ್ಮನೈ

ಯಾವ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ?: ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌

ಸಿನಿಮಾ ವಿಧ: ಹಾರರ್‌ ಮತ್ತು ಕಾಮಿಡಿ

ಪಾತ್ರವರ್ಗ: ರಾಶಿ ಖನ್ನ, ತಮನ್ನಾ ಭಾಟಿಯಾ, ಸುಂದರ್‌, ಗರುಡ ರಾಮ್‌, ದೇವಾ ನಂದ, ಕೋವೈ ಸರಳ, ಯೋಗಿ ಬಾಬು

ಎಚ್‌ಟಿ ಕನ್ನಡ ರೇಟಿಂಗ್‌: ***

Aranmanai 4 ott Movie Review: ಸಹೋದರನೊಬ್ಬ ತನ್ನ ಪ್ರೀತಿಯ ಸಹೋದರಿಯ ಸಾವಿನ ರಹಸ್ಯ ಕಂಡುಹಿಡಿಯಲು ಪ್ರಯತ್ನಿಸುವ ಕಥೆ. ಆತನ ಪ್ರಕಾರ ತನ್ನ ತಂಗಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಹಾಗಾದರೆ, ಆಕೆಯ ಸಾವಿನ ಹಿಂದೆ ಅತಿಮಾನುಷ ಶಕ್ತಿಗಳಿವೆಯೇ? ಇದನ್ನು ತಿಳಿದುಕೊಳ್ಳಲು ಸಾಧ್ಯವಿದೆಯೇ? ಈ ಸಿನಿಮಾದಲ್ಲಿರುವ ದೆವ್ವಗಳು ಪ್ರೇಕ್ಷಕರನ್ನು ಭಯಪಡಿಸಬಹುದೇ? ಯೋಗಿ ಬಾಬುನಂತಹ ಹಾಸ್ಯಗಾರರು ಪ್ರೇಕ್ಷಕರಿಗೆ ನಗೆ ಉಕ್ಕಿಸಬಲ್ಲರೇ?

ಈ ಹಿಂದೆ ಅರಣ್ಮನೈ  3 ರಿಲೀಸ್‌ ಆಗಿತ್ತು. ಈ ಸಿನಿಮಾ ನೆಗೆಟಿವ್‌ ವಿಮರ್ಶೆಗಳ ನಡುವೆಯೂ ನಿರ್ಮಾಪಕರ ಕಿಸೆ ತುಂಬಿತ್ತು. ಇದೇ ಕಾರಣಕ್ಕೆ ಚಿತ್ರತಂಡವು ಅರಮನೈ 4 ಬಿಡುಗಡೆ ಮಾಡಿದೆ. ಅರಮನೈ 1ರಿಂದ ಆರಂಭಿಸಿದ ಫಾರ್ಮುಲಾವನ್ನೇ ಅರಮನೈ 4ನಲ್ಲಿ ಬಳಸಲಾಗಿದೆ. ಕಥೆ ಒಂಚೂರು ಬದಲಾಯಿಸಲಾಗಿದೆ. ತಮನ್ನಾ ಭಾಟಿಯಾ, ರಾಶಿ ಖನ್ನರಂತಹ ಸುಂದರಿಯರ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನವನ್ನೂ ನಿರ್ದೇಶಕರು ಮಾಡಿದ್ದಾರೆ. ಇದರ ಜತೆಗೆ ಹಾರರ್‌ ಪ್ಲಸ್‌ ಹಾಸ್ಯದ ಮೊರೆ ಹೋಗಲಾಗಿದೆ. ಯೋಗಿ ಬಾಬು ಸೇರಿದಂತೆ ಹಲವು ಹಾಸ್ಯ ಕಲಾವಿದರು ಚಿತ್ರವನ್ನು ಆವರಿಸಿದ್ದಾರೆ.

ಈ ಸಿನಿಮಾದಲ್ಲಿ ಸಾಕಷ್ಟು ಹಾರರ್‌ ಅಂಶಗಳು ಇವೆ. ಹಾರರ್‌ ಸಿನಿಮಾದ ಸಿದ್ಧ ಸೂತ್ರಗಳಿಗೆ ಕಟ್ಟು ಬಿದ್ದ ನಿರ್ದೇಶಕರು ಕೆಲವೊಂದು ದೃಷ್ಯಗಳಿಗೆ ಹಾಲಿವುಡ್‌ನ ಮಲ್ಟಿವರ್ಸ್‌ ಆಫ್‌ ಮ್ಯಾಡ್‌ನೆಸ್‌ನಂತಹ ಸಿನಿಮಾಗಳ ದೃಶ್ಯಗಳನ್ನು ಕಾಪಿ ಮಾಡಲು ಹಿಂಜರಿದಿಲ್ಲ. ಇದೇ ವಿಷಯ ಸೋಷಿಯಲ್‌ ಮೀಡಿಯಾದಲ್ಲೂ ಟ್ರೋಲ್‌ ಆಗಿದೆ. ದೆವ್ವದ ಅಸ್ತಿತ್ವವನ್ನು ಕಾಣುವ ಮಕ್ಕಳು, ಕ್ರೂರ ಹತ್ಯೆಗಳು, ಜನಪ್ರಿಯ ಹಾಸ್ಯ ಕಲಾವಿದರ ಸಾಧಾರಣ ಹಾಸ್ಯಗಳು, ದುರಂತ ಫ್ಲಾಷ್‌ಬ್ಯಾಕ್‌, ಭೀತಗೊಳಿಸುವಂತಹ ವಿಷುಯಲ್‌ ಇಫೆಕ್ಟ್ಸ್‌, ದೆವ್ವದ ತೊಂದರೆಯನ್ನು ಸರಿಪಡಿಸಲು ದೇವರ ನೆರವು, ಹೀಗೆ ಅನೇಕ ಅಂಶಗಳ ಮಿಶ್ರಣ ಈ ಅರಮನೈ 4.

ಹಾರರ್‌ ಸಿದ್ಧಸೂತ್ರಗಳ ನಡುವೆ ನಿರ್ದೇಶಕರು ಕೆಲವೊಂದು ಅಂಶಗಳ ಮೂಲಕ ಪ್ರೇಕ್ಷಕರನ್ನು ಸೆಳೆಯಲು ಹತ್ನಿಸಿದ್ದಾರೆ. ತನ್ನ ಮಕ್ಕಳನ್ನು ದೆವ್ವದಿಂದ ರಕ್ಷಿಸಲು ಪ್ರಯತ್ನಿಸುವ ತಾಯಿಯ ಪ್ರೀತಿ, ಬ್ಯಾಕ್‌ ಎಂಬ ಅಸ್ಸಾಮಿ ಜನಪದ ಕಥೆಯಲ್ಲಿರುವ ದೆವ್ವ, ಈ ಬ್ಯಾಕ್‌ ದೆವ್ವವು ಬೇರೆ ಮನುಷ್ಯರನ್ನು ಕೊಂದು ಅವರ ರೂಪವನ್ನು ತನ್ನದಾಗಿಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿರುತ್ತದೆ. ಈ ಹಿಂದಿನ ಅರಮನೈ ಸರಣಿಗಳಲ್ಲೂ ಇದೇ ಅಂಶ ಇತ್ತು. ಈ ಸಿನಿಮಾದಲ್ಲಿ ಮಂತ್ರವಾದಿ ರೂಪದಲ್ಲಿ ಕೆಜಿಎಫ್‌ ಸಿನಿಮಾದ ಗರುಡ ರಾಮ್‌ ನಟಿಸಿದ್ದಾರೆ.

ಈ ಹಿಂದಿನ ಅರಣ್ಮನೈ  ಸಿನಿಮಾಗಳಿಗಿಂತ ಭಿನ್ನವಾಗಿರುವ ಅಂಶವೇನೆಂದರೆ ಸಿನಿಮಾದ ಮೊದಲಾರ್ಧ. ಈ ದೃಶ್ಯಗಳನ್ನು ಕಿಚ್ಚ ಸುದೀಪ್‌ ನಟನೆಯ ವಿಕ್ರಾಂತ್‌ ರೋಣದಿಂದ ಎರವಲು ಪಡೆದಂತೆ ಇದೆ. ಜಾಹೀರಾತುಗಳಲ್ಲಿ ಕಾಣಿಸುವಂತಹ ಕಾಡುಗಳು, ಹಾರರ್‌ ಅಂಶಗಳನ್ನು ಕಾಣಬಹುದು. ಕೆಲವೊಂದು ಕಡೆ ಸಿನಿಮಾದಲ್ಲಿ ಮುಂದೇನು ಆಗಬಹುದು ಎಂದು ಊಹಿಸುವಂತೆ ಇದೆ. ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ರಾವಣಾಕೃತಿಯ ಒಳಗಿನ ಕಟ್ಟಡದಲ್ಲಿ ನಡೆಯುವ ಫೈಟಿಂಗ್‌ ಇಷ್ಟವಾಗಬಹುದು. ಒಟಿಟಿಯಲ್ಲಿರುವ ಅರಮನೈ 4 ತುಂಬಾ ಅದ್ಭುತವಾದ ಸಿನಿಮಾವಲ್ಲ. ತುಸು ನಗು, ತುಸು ಹಾರರ್‌ ಇರುವ ಮತ್ತು ತಮನ್ನಾ ಭಾಟಿಯಾರನ್ನು ಆತ್ಮದ ರೂಪದಲ್ಲಿ ನೋಡಲು ಬಯಸುವವರು ಈ ಸಿನಿಮಾ ನೋಡಬಹುದು.

Whats_app_banner