ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ಮನರಂಜನೆಯ ಮಹಾಪೂರ; ಯಾವ ಸಿನಿಮಾ ನೋಡಬೇಕು ಎಂಬ ಗೊಂದಲವೇ? ಇಲ್ಲಿದೆ ಲಿಸ್ಟ್
OTT Releases This Week: ಒಟಿಟಿ ವೀಕ್ಷಕರಿಗೆ ಈ ವಾರ ಮನರಂಜನೆಯ ಮಹಾಪೂರವೇ ಪ್ರಾಪ್ತವಾಗುತ್ತಿದೆ. ಅಂದರೆ, ಇತ್ತೀಚೆಗಷ್ಟೇ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡ ಗೋಟ್, ಸ್ತ್ರೀ 2, ಡಿಮೊಂಟೆ ಕಾಲೋನಿ 2 ಸೇರಿ ಹಲವು ಸಿನಿಮಾಗಳು ಒಟಿಟಿಗೂ ಎಂಟ್ರಿಕೊಟ್ಟಿವೆ.
OTT Releases This Week: ಮನೆಯಲ್ಲಿ ನವರಾತ್ರಿ ಹಬ್ಬದ ಸಡಗರ ಶುರುವಾಗಿದೆ. ಇತ್ತ ಒಟಿಟಿಯಲ್ಲಿ ಮನರಂಜನೆಯ ಉತ್ಸವ ಆರಂಭವಾಗಿದೆ. ಸಾಲು ಸಾಲು ಸಿನಿಮಾಗಳು, ವೆಬ್‌ಸಿರೀಸ್‌ಗಳು ಒಟಿಟಿಗೆ ಆಗಮಿಸಿವೆ. ಈಗಾಗಲೇ ಒಟಿಟಿಗೆ ಬಂದು ವಾರ ಕಳೆದರೂ ಇಂದಿಗೂ ಹೆಚ್ಚೆಚ್ಚು ನೋಡುಗರನ್ನು ಸೆಳೆಯುತ್ತಿವೆ ಹತ್ತು ಹಲವು ಸಿನಿಮಾಗಳು. ಆ ಪೈಕಿ ಈ ಹಬ್ಬದ ಸಮಯದಲ್ಲಿ ಮನೆ ಮಂದಿ ಜತೆಗೆ ಯಾವ ಸಿನಿಮಾ ನೋಡಬೇಕು ಎಂಬ ಗೊಂದಲವಿದೆಯೇ? ಹಾಗಾದರೆ ಆಯ್ದ ಒಂದಷ್ಟು ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.
ಗೋಟ್
ತಮಿಳು ಸ್ಟಾರ್ ಹೀರೋ ದಳಪತಿ ವಿಜಯ್ ಅಭಿನಯದ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (The GOAT) ಸಿನಿಮಾ ಈಗಾಗಲೇ ಒಟಿಟಿಗೆ ಆಗಮಿಸಿದೆ. ಸೆಪ್ಟೆಂಬರ್ 2 ರಂದು ಚಿತ್ರಮಂದಿರಕ್ಕೆ ಬಂದಿದ್ದ ಈ ಸಿನಿಮಾ, ಕಲೆಕ್ಷನ್ ವಿಚಾರದಲ್ಲಿಯೂ ಸದ್ದು ಮಾಡಿತ್ತು. ವೆಂಕಟ್ ಪ್ರಭು ನಿರ್ದೇಶನದ ಈ ಚಿತ್ರ ಅಕ್ಟೋಬರ್ 3 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ತಮಿಳು, ತೆಲುಗು, ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಈ ಸಿನಿಮಾವನ್ನು ವೀಕ್ಷಿಸಬಹುದು.
ಸ್ತ್ರೀ 2 ಸಿನಿಮಾ
ಹಾರರ್ ಕಾಮಿಡಿ ಶೈಲಿಯ ಸ್ತ್ರೀ 2 ಸಿನಿಮಾ ಆಗಸ್ಟ್ 15 ರಂದು ಬಿಡುಗಡೆಯಾಗಿ ಹೊಸ ದಾಖಲೆ ಬರೆದಿತ್ತು. ನಿರ್ದೇಶಕ ಅಮರ್ ಕೌಶಿಕ್ ನಿರ್ದೇಶನದ ಈ ಚಿತ್ರದಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಲೆಕ್ಷನ್ ವಿಚಾರದಲ್ಲಿ ದಾಖಲೆ ಬರೆದ ಈ ಸಿನಿಮಾ ಈಗಾಗಲೇ ಒಟಿಟಿ ಅಂಗಳ ಪ್ರವೇಶಿಸಿದೆ. ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸ್ತ್ರೀ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಪ್ರಸ್ತುತ ಈ ಸಿನಿಮಾವನ್ನು ಬಾಡಿಗೆ ಆಧಾರದ ಮೇಲೆ ವೀಕ್ಷಿಸಬಹುದು. ಬರೋಬ್ಬರಿ 349 ರೂಪಾಯಿ ಪೇ ಮಾಡಿ ಈ ಸಿನಿಮಾವನ್ನು ನೋಡಬಹುದಾಗಿದೆ.
ಕಂಟ್ರೋಲ್
ಬಾಲಿವುಡ್ ನಟಿ ಅನನ್ಯಾ ಪಾಂಡೆ ಮತ್ತು ವಿಹಾನ್ ಸಾಮ್ರಾಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಕಂಟ್ರೋಲ್ (CTRL) ಸಿನಿಮಾ ನೇರವಾಗಿ ಒಟಿಟಿ ಅಂಗಳ ಪ್ರವೇಶಿಸಿದೆ. ವಿಕ್ರಮಾದಿತ್ಯ ಮೋಟ್ವಾನೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. AI ಟೆಕ್ನಾಲಜಿ ಮತ್ತು ಸೋಷಿಯಲ್ ಮೀಡಿಯಾಗಳ ಬಳಕೆಯನ್ನೇ ಆಧಾರವಾಗಿಟ್ಟುಕೊಂಡು ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾ ಮೂಡಿಬಂದಿದೆ. ಕಂಟ್ರೋಲ್ ಸಿನಿಮಾ ಅಕ್ಟೋಬರ್ 4ರಿಂದ ನೆಟ್‌ಫ್ಲಿಕ್ಸ್ OTT ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.
ಡಿಮೊಂಟೆ ಕಾಲೋನಿ 2
ಅಜಯ್ ಜ್ಞಾನಮುತ್ತು ನಿರ್ದೇಶನದಲ್ಲಿ 2015 ರಲ್ಲಿ ತಮಿಳಿನಲ್ಲಿ ಮೂಡಿಬಂದಿತ್ತು ಡಿಮಾಂಟಿ ಕಾಲೋನಿ. ಅದೇ ಚಿತ್ರದ ಸೀಕ್ವೆಲ್ ಇದೀಗ ಒಟಿಟಿಗೆ ಆಗಮಿಸಿದೆ. ವೆಂಕಿ ವೇಣುಗೋಪಾಲ್ ನಿರ್ದೇಶನದ ಈ ಸಿನಿಮಾ, ಆಗಸ್ಟ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಚಿತ್ರವು ಥಿಯೇಟರ್‌ಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಕಲೆಕ್ಷನ್ ವಿಚಾರದಲ್ಲಿಯೂ ಒಳ್ಳೆಯ ಕಮಾಯಿ ಮಾಡಿತ್ತು. ಅದಾದ ಬಳಿಕ ಸೆಪ್ಟೆಂಬರ್ 27ರಂದೇ Zee5 ಒಟಿಟಿಗೆ ಆಗಮಿಸಿತ್ತು. ಒಟಿಟಿ ವೀಕ್ಷಣೆ ವಿಚಾರದಲ್ಲಿಯೂ ಈ ಸಿನಿಮಾ 100 ಮಿಲಿಯನ್ ನಿಮಿಷಗಳ ವೀಕ್ಷಣೆ ಕಂಡಿದೆ.
ಕಳಿಂಗ
ಅಕ್ಟೋಬರ್ 2 ರಂದು ಆಹಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ ಕಳಿಂದ ಸಿನಿಮಾ. ಧ್ರುವವಾಯು ನಿರ್ದೇಶನದ ಹಾರರ್ ಥ್ರಿಲ್ಲರ್ ಸಿನಿಮಾ, ಸೆಪ್ಟೆಂಬರ್ 13 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ಈಗ ಈ ಸಿನಿಮಾ ಇಟುಟು ಅಂಗಳಕ್ಕೆ ಕಾಲಿರಿಸಿದೆ.
ತಂಗಲಾನ್
ಪಾ. ರಂಜಿತ್ ನಿರ್ದೇಶನದ ಮತ್ತು ಸ್ಟುಡಿಯೋ ಗ್ರೀನ್ ಮತ್ತು ನೀಲಂ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಜ್ಞಾನವೇಲ್ ರಾಜ ನಿರ್ಮಿಸಿದ ಸಿನಿಮಾ ತಂಗಲಾನ್. ಚಿಯಾನ್ ವಿಕ್ರಮ್ ಅವರ 61ನೇ ಚಿತ್ರವಿದು. ಚಿತ್ರದಲ್ಲಿ ಪಾರ್ವತಿ ತಿರುವೋತ್ತು, ಮಾಳವಿಕಾ ಮೋಹನ್, ಪಶುಪತಿ ಮುಂತಾದವರು ನಟಿಸಿದ್ದಾರೆ. ಜಿ. ವಿ. ಪ್ರಕಾಶ್ ಸಂಗೀತ ಈ ಚಿತ್ರಕ್ಕಿದೆ. ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಚಿನ್ನದ ಗಣಿಗಾರಿಕೆಗಾಗಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದ ಬ್ರಿಟಿಷರ ವಿರುದ್ಧ ಆದಿವಾಸಿಗಳು ನಡೆಸಿದ ಕೆಚ್ಚೆದೆಯ ಹೋರಾಟವೇ ಚಿತ್ರದ ಕಥಾವಸ್ತು. ಈ ಸಿನಿಮಾ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಇನ್ನೇನು ಶೀಘ್ರದಲ್ಲಿ ನೆಟ್‌ಫ್ಲಿಕ್ಸ್ ಒಟಿಟಿಗೆ ಆಗಮಿಸಲಿದೆ.