ದ್ವಾಪರ ಬಳಿಕ ಮತ್ತೊಂದು ಹಾಡಿಗೆ ಜಸ್‌ಕರಣ್ ಸಿಂಗ್ ಧ್ವನಿ; ಕನ್ನಡದಲ್ಲಿ ಪಂಜಾಬಿ ಗಾಯಕನಿಗೆ ಹೆಚ್ಚಿದ ಡಿಮಾಂಡ್
ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿರುವ, ಸದ್ಯ ಅಣ್ಣಯ್ಯ ಸೀರಿಯಲ್‌ನಲ್ಲಿ ನಟಿಸುತ್ತಿರುವ ನಿಶಾ ರವಿಕೃಷ್ಣನ್ ನಾಯಕಿಯಾಗಿ ನಟಿಸಿರುವ ಚಿತ್ರ ಅಂಶು. ಈ ಸಿನಿಮಾದ ಹಾಡಿಗೆ ಇದೀಗ ಸರಿಗಮಪ ಖ್ಯಾತಿಯ ಜಸ್‌ಕರಣ್ ಸಿಂಗ್ ಧ್ವನಿ ನೀಡಿದ್ದಾರೆ.
Jaskaran Singh: ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿದ ಕೃಷ್ಣಂ ಪ್ರಣಯ ಸಖಿ ಸಿನಿಮಾ ಸದ್ಯ ಶತದಿನೋತ್ಸವದ ಸನಿಹದಲ್ಲಿದೆ. ಈ ಚಿತ್ರ ಬಿಡುಗಡೆಗೂ ಮುನ್ನ ದೊಡ್ಡ ಸುದ್ದಿಯಾಗಿದ್ದು, ದ್ವಾಪರ ಅನ್ನೋ ಹಾಡಿನ ಮೂಲಕ. ಸೋಷಿಯಲ್ ಮೀಡಿಯಾದಲ್ಲಿಯೂ ಟ್ರೆಂಡ್ ಆಗಿದ್ದ ಆ ಹಾಡಿಗೆ ಧ್ವನಿ ನೀಡಿದವರು ಸರಿಗಮಪ ಶೋ ಖ್ಯಾತಿಯ ಜಸ್‌ಕರಣ್ ಸಿಂಗ್. ಈಗ ಇದೇ ಗಾಯಕ ಇನ್ನೊಂದು ಕನ್ನಡದ ಹಾಡಿಗೆ ಧ್ವನಿ ನೀಡಿದ್ದಾರೆ. ಈ ಮೂಲಕ ಬ್ಯಾಕ್ ಟು ಬ್ಯಾಕ್ ಸಿನಿಮಾ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈಗ ಅಂಶು ಮೂಲಕ ಅವರ ಆಗಮನವಾಗಿದೆ.
ನವೆಂಬರ್ 21ಕ್ಕೆ ಅಂಶು ಬಿಡುಗಡೆ
ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿರುವ, ಸದ್ಯ ಅಣ್ಣಯ್ಯ ಸೀರಿಯಲ್‌ನಲ್ಲಿ ನಟಿಸುತ್ತಿರುವ ನಿಶಾ ರವಿಕೃಷ್ಣನ್ ನಾಯಕಿಯಾಗಿ ನಟಿಸಿರುವ ಚಿತ್ರ ಅಂಶು. ಇದುವರೆಗೂ ತನ್ನದೇ ಆದ ಗಟ್ಟಿತನದ ಸುಳಿವಿನೊಂದಿಗೆ ಸೆಳೆಯುತ್ತಾ ಬಂದಿರುವ ಈ ಚಿತ್ರದ ಅರ್ಥಪೂರ್ಣ ಹಾಡೊಂದು ಇದೀಗ ಬಿಡುಗಡೆಗೊಂಡಿದೆ. ಕೇಳಿದಾಕ್ಷಣವೇ ನೇರವಾಗಿ ಎದೆಗಿಳಿದು ಬಿಡುವ ಈ ಹಾಡಿಗೀಗ ಕೇಳುಗರಿಂದ ಭರಪೂರ ಮೆಚ್ಚುಗೆ ಹರಿದು ಬರಲಾರಂಭಿಸಿದೆ. ಇದೇ ನವೆಂಬರ್ 21ರಂದು ಅಂಶು ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಅದಕ್ಕೂ ಮೊದಲು ಹಾಡಿನ ಮೂಲಕ ಗಮನ ಸೆಳೆಯುತ್ತಿದೆ.
ಅಲೆಮಾರಿ ಹಾಡಿಗೆ ಜಸ್‌ಕರಣ್ ಸಿಂಗ್ ಕಂಠ
ಮೂಲತಃ ಪಂಜಾಬಿನವರಾಗಿದ್ದರೂ ಮ್ಯೂಸಿಕ್ ರಿಯಾಲಿಟಿ ಶೋ ಮೂಲಕ ಕನ್ನಡದವರೇ ಎಂಬಂತಾಗಿರುವಾತ ಗಾಯಕ ಜಸ್ ಕರಣ್ ಸಿಂಗ್. ಕನ್ನಡದಲ್ಲಿ ಬಹು ಬೇಡಿಕೆ ಹೊಂದಿರುವ ಜಸ್ ಕರಣ್ ಈ ಹಾಡಿಗೆ ಧ್ವನಿಯಾಗಿದ್ದಾರೆ. "ನೀರ ಮೇಲೆ ಗುಳ್ಳೆ ಬಿಂಬ ಕಾಣೋ ವೇಳೆ, ನಿಜವು ಒಂದು ಸುಳ್ಳೇ ಅಲೆಮಾರಿ.." ಎಂಬ ಸಮ್ಮೋಹಕ ಸಾಲುಗಳನ್ನು ಬರೆದಿರುವವರು ಮಹೇಂದ್ರ ಗೌಡ. ಕೆ.ಸಿ ಬಾಲಸಾರಂಗನ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಹಾಡಿಗೆ ಕೇಳುಗರ ಮೆಚ್ಚುಗೆ ಸಿಕ್ಕಿದೆ. ಇದರ ದೃಶ್ಯಗಳ ಮೂಲಕ ನಿಶಾ ರವಿಕೃಷ್ಣನ್ ಪಾತ್ರದ ಒಂದಷ್ಟು ಚಹರೆಗಳನ್ನೂ ಕೂಡಾ ಚಿತ್ರತಂಡ ರಿವೀಲ್ ಮಾಡಿದೆ.
ಚನ್ನಕೇಶವ ನಿರ್ದೇಶನದ ಚಿತ್ರ
ಇದು ಎಂ.ಸಿ ಚನ್ನಕೇಶವ ನಿರ್ದೇಶನದ ಚೊಚ್ಚಲ ಚಿತ್ರ. ಗ್ರಹಣ ಎಲ್‌ಎಲ್‌ಪಿ ಬ್ಯಾನರ್ ಅಡಿಯಲ್ಲಿ ರತನ್ ಗಂಗಾಧರ್, ಸಂಪತ್ ಶಿವಶಂಕರ್, ಕೃತಿ ನಾಣಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚೆಲುವರಾಜ್, ಜಯಚಂದ್ರ ಯಲ್ಲಪ್ಪ, ಪ್ರಮೋದ್ ಚಿನ್ನಸ್ವಾಮಿ, ಡಾ.ಮಧುರಾಜ್, ವೀರನ್ ಗೌಡ ಸಹ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ಸುನೀಲ್ ನರಸಿಂಹಮೂರ್ತಿ ಛಾಯಾಗ್ರಾಹಣ, ಆಶಾ ಎಂ ಥಾಮಸ್ ವಸ್ತ್ರವಿನ್ಯಾಸದ ಮೂಲಕ ಈ ಚಿತ್ರ ಕಳೆಗಟ್ಟಿಕೊಂಡಿದೆ. ನವ ಪ್ರತಿಭೆ ವಿಘ್ನೇಶ್ ಶಂಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.