Pavithra Gowda: ಪರಪ್ಪನ ಅಗ್ರಹಾರ ಜೈಲಿನಿಂದ ಕೊನೆಗೂ ಹೊರಬಂದ ಪವಿತ್ರಾ ಗೌಡ, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು
Pavithra Gowda Released: ಪವಿತ್ರಾ ಗೌಡ ಜೈಲಿನಿಂದ ಹೊರ ಬಂದಿದ್ದಾರೆ. ಬೇಲ್ ಸಿಕ್ಕಿದ್ದರೂ ಅವರು ಜೈಲಿನಿಂದ ಹೊರಬರಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಜೈಲಿನಿಂದ ಬಿಡುಗಡೆಯಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆಗಿದ್ದ ಪವಿತ್ರಾ ಗೌಡ ಈಗ ಜೈಲಿನಿಂದ ಹೊರಬಂದಿದ್ದಾರೆ. ಬೇಲ್ ಈ ಮೊದಲೇ ಸಿಕ್ಕಿದ್ದರೂ ಅವರು ಜೈಲಿನಿಂದ ಹೊರ ಬಂದಿರಲಿಲ್ಲ, ಅವರ ಬಿಡುಗಡೆಯಾಗಿರಲಿಲ್ಲ. ಆದರೆ ಕೊನೆಗೂ ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆಹೊಂದಿದ್ದಾರೆ. ಡಿಸೆಂಬರ್ 13ರಂದೇ ಬೇಲ್ ಮಂಜೂರು ಮಾಡಲಾಗಿತ್ತು. ಮನೀಶ್ ಎಂಬುವವರು ಶ್ಯೂರಿಟಿ ನೀಡಿದ್ದಾರೆ ನಂತರ ಪವಿತ್ರ ಗೌಡ ಅವರನ್ನು ಬಿಡುಗಡೆ ಮಾಡಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಹಾಗೂ ಅವರ ಗೆಳತಿ ಪವಿತ್ರಾ ಗೌಡ ಇಬ್ಬರೂ ಜೈಲು ಸೇರಿರುವ ಸಂಗತಿ ತಿಳಿದೇ ಇದೆ. ಹೀಗಿರುವಾಗ ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳಿಗೂ ಬೇಲ್ ಮಂಜೂರಾಗಿತ್ತು. ತದನಂತರದಲ್ಲಿ ಬಿಡುಗಡೆಯಾಗಿದೆ. ದರ್ಶನ್ ಅವರಿಗೆ ಈ ಹಿಂದೆಯೇ ಆರೋಗ್ಯ ಸಮಸ್ಯೆಯ ಕಾರಣ ಮಧ್ಯಂತರ ಬೇಲ್ ಲಭಿಸಿತ್ತು.
ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಎಂಬಾತ ಅಶ್ಲೀಲ ಮೆಸೆಜ್ ಮಾಡುತ್ತಿದ್ದ ಕಾರಣ ಅವನನ್ನು ಥಳಿಸಿ ಕೊಲೆ ಮಾಡಲಾಗಿದೆ ಎಂಬ ಆರೋಪದಿಂದ ಜೈಲಿನಲ್ಲಿ ಬಂಧಿಯಾಗಿದ್ದರು. ಸುಮಾರು ಕಳೆದ ಆರು ತಿಂಗಳಿನಿಂದ ಕೋರ್ಟ್‌ನಲ್ಲಿ ಈ ಬಗ್ಗೆ ವಾದ ವಿವಾದಗಳು ಆಗುತ್ತಲೇ ಇದ್ದವು ಆದರೂ ಬಿಡುಗಡೆಯ ಭಾಗ್ಯ ಪಡೆಯುವಲ್ಲಿ ವಿಫಲರಾಗಿದ್ದರು.
ಆದರೆ ಡಿಸೆಂಬರ್ 13ರಂದು ಬೇಲ್ ಸಿಕ್ಕಿತ್ತು. ಬೇಲ್ ಸಿಕ್ಕಿದ ಕಾರಣ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಗೌಡ, ನಾಗರಾಜ್, ಲಕ್ಷ್ಮಣ್, ಅನುಕುಮಾರ್, ಜಗದೀಶ್, ಪ್ರದೋಷ್ ಎಲ್ಲರೂ ಸಂತಸದಲ್ಲಿದ್ದರು. ಇದೀಗ ಪವಿತ್ರಾ ಗೌಡ ಜೈಲಿನಿಂದ ಹೊರಬರುತ್ತಿರುವ ದೃಶ್ಯ ವೈರಲ್ ಆಗುತ್ತಿದೆ.
ಈ ಹಿಂದೆ ಏನಾಗಿತ್ತು?
ಜೂನ್ 8ರಂದು ರೇಣುಕಾಸ್ವಾಮಿ ಕೊಲೆ ನಡೆದಿತ್ತು. ಜೂನ್ 11ರಂದು ದರ್ಶನ್ ಮತ್ತಿತರ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಹತ್ಯೆ ಪ್ರಕರಣದಲ್ಲಿ ದರ್ಶನ್ ಆರೋಪಿ ನಂ2 ಆಗಿದ್ದರೆ ಇವರ ಸ್ನೇಹಿತೆ ಪವಿತ್ರಾ ಗೌಡ ಮೊದಲ ಆರೋಪಿಯಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪವಿತ್ರಾಗೆ ಅಶ್ಲೀಲ ಸಂದೇಶಗಳು ಮತ್ತು ಫೋಟೋಗಳನ್ನು ಕಳುಹಿಸಿದ್ದಕ್ಕಾಗಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ದರ್ಶನ್ ಆಪ್ತ ಸ್ನೇಹಿತೆ ಪವಿತ್ರಾ ಗೌಡ. ತನ್ನ ಆಪ್ತೆಗೆ ಸಂದೇಶ ಕಳುಹಿಸುತ್ತಿದ್ದ ಎಂಬ ಸಿಟ್ಟು ದರ್ಶನ್‌ಗಿತ್ತು. ಇದರಿಂದ ಕೆರಳಿದ ಅವರು ಚಿತ್ರದುರ್ಗದ ತನ್ನ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ ಮೂಲಕ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಹತ್ಯೆ ಮಾಡಲಾಗಿದೆ ಎನ್ನುವುದು ಆರೋಪದ ಹೂರಣ. ಕೊಲೆ ಪ್ರಕರಣದಲ್ಲಿ ಇದುವರೆಗೆ 17 ಮಂದಿಯನ್ನು ಬಂಧಿಸಲಾಗಿತ್ತು. ಈಗ ಜಾಮೀನು ನೀಡಿ ಬಿಡುಗಡೆ ಮಾಡಲಾಗಿದೆ.
ವಿಭಾಗ