Naga Chaitanya New Movie: ರಾಜ್ಯದ ಖ್ಯಾತ ದೇವಸ್ಥಾನದ ಬಳಿ ಬಾರ್ ಸೆಟ್...ನಾಗಚೈತನ್ಯ ಹಾಗೂ ತಂಡದ ವಿರುದ್ಧ ಗ್ರಾಮಸ್ಥರ ಆಕ್ರೋಶ
ಐತಿಹಾಸಿಕ ಸ್ಥಳವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿದೆ. ಬಾರ್ ಸೆಟ್ ಹಾಕಿರುವುದು ಅಲ್ಲದೆ ಚಿತ್ರೀಕರಣದ ಸ್ಥಳದಲ್ಲಿ ದೊಡ್ಡ ಕಬ್ಬಿಣದ ಕಂಬ ಬಳಸಿ ಸುತ್ತಮುತ್ತಲಿನ ಸ್ಥಳಕ್ಕೆ ಹಾನಿಯುಂಟು ಮಾಡಲಾಗಿದೆ ಕೂಡಲೇ ಚಿತ್ರೀಕರಣ ಬಂದ್ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬಹುತೇಕ ಕನ್ನಡ ಸಿನಿಮಾಗಳು ಹೊರ ರಾಜ್ಯಗಳಲ್ಲಿ ತಯಾರಾಗಿವೆ. ಹಾಗೇ ಪರಭಾಷೆಯ ಸಿನಿಮಾ ಚಿತ್ರೀಕರಣ ಕೂಡಾ ರಾಜ್ಯದೊಳಗೆ ನಡೆದಿವೆ. ಇತ್ತೀಚೆಗೆ ತಮಿಳಿನ 'ಚಂದ್ರಮುಖಿ -2' ಸಿನಿಮಾದ ಮೊದಲ ಶೆಡ್ಯೂಲ್ ಮೈಸೂರಿನಲ್ಲಿ ನಡೆದಿತ್ತು. ಇದೀಗ ನಾಗಚೈತನ್ಯ ಅಭಿನಯದ ಸಿನಿಮಾವೊಂದು ಕರ್ನಾಟಕದ ಮಂಡ್ಯ ಜಿಲೆಯಲ್ಲಿ ನಡೆಯುತ್ತಿದೆ.
ನಾಗಚೈತನ್ಯ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ನಂತರ ಮತ್ತೊಂದು ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ನಡೆಯುತ್ತಿದೆ. ಆದರೆ ದೃಶ್ಯವೊಂದರ ಚಿತ್ರೀಕರಣಕ್ಕಾಗಿ ಮೇಲುಕೋಟೆಯ ರಾಯಗೋಪುರದಲ್ಲಿ ಡ್ರಿಂಕ್ಸ್ ಪಾರ್ಟಿ ಸೆಟ್ ಹಾಕಿದ್ದು ಚಿತ್ರತಂಡದ ವಿರುದ್ಧ ಮೇಲುಕೋಟೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇಲುಕೋಟೆಯಂತಹ ಪವಿತ್ರ ಸ್ಥಳದಲ್ಲಿ ಇಂತಹ ಸೆಟ್ ಹಾಕುವ ಮೂಲಕ ಜನರ ಧಾರ್ಮಿಕ ಭಾವನೆಗಳಿಗೆ ಚಿತ್ರತಂಡ ಧಕ್ಕೆಯುಂಟು ಮಾಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಚಿತ್ರ ತಂಡವು ಮೇಲುಕೋಟೆಯಲ್ಲಿ ಶೂಟಿಂಗ್ ಮಾಡಲು ಮಂಡ್ಯ ಡಿಸಿ ಅಶ್ವಥಿ ಅವರಿಂದ ಷರತ್ತುಬದ್ಧ ಅನುಮತಿ ಪಡೆದಿದೆ. ಇಷ್ಟಾದರೂ ಚಿತ್ರತಂಡ ನಿಯಮ ಮೀರಿ ನಡೆದುಕೊಂಡಿದೆ. ಐತಿಹಾಸಿಕ ಸ್ಥಳವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿದೆ. ಬಾರ್ ಸೆಟ್ ಹಾಕಿರುವುದು ಅಲ್ಲದೆ ಚಿತ್ರೀಕರಣದ ಸ್ಥಳದಲ್ಲಿ ದೊಡ್ಡ ಕಬ್ಬಿಣದ ಕಂಬ ಬಳಸಿ ಸುತ್ತಮುತ್ತಲಿನ ಸ್ಥಳಕ್ಕೆ ಹಾನಿಯುಂಟು ಮಾಡಲಾಗಿದೆ ಕೂಡಲೇ ಚಿತ್ರೀಕರಣ ಬಂದ್ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ನಾಗಚೈತನ್ಯ ಅಭಿನಯದ 'ಬಂಗಾರ್ರಾಜು' ಚಿತ್ರೀಕರಣದ ವೇಳೆ ಕೂಡಾ ಚಿತ್ರತಂಡ ಇದೇ ರೀತಿ ವರ್ತಿಸಿತ್ತು. ಅಕ್ಕ ತಂಗಿ ಕೊಳದ ಸುತ್ತಮುತ್ತ ಬುಲ್ಡೋಜರ್ ಮೂಲಕ ನೆಲ ಅಗೆಸಿದ್ದು ಅಲ್ಲದೆ, ಕೊಳದ ನೀರನ್ನು ಕಲುಷಿತ ಮಾಡಲಾಗಿತ್ತು. ಚಿತ್ರೀಕರಣದ ನಂತರ ಸ್ಥಳವನ್ನು ಸ್ವಚ್ಛಗೊಳಿಸದೆ ಹಾಗೇ ಬಿಡಲಾಗಿತ್ತು. ಈಗ ನಾಗಚೈತನ್ಯ ಅಭಿನಯದ ಮತ್ತೊಂದು ಸಿನಿಮಾದ ತಂಡ ಹೀಗೆ ವರ್ತಿಸುತ್ತಿರುವುದರಿಂದ ಗ್ರಾಮಸ್ಥರ ಕೋಪ ಮತ್ತಷ್ಟು ಹೆಚ್ಚಾಗಿದೆ. ಮೇಲುಕೋಟೆಯಲ್ಲಿ ಇನ್ಮುಂದೆ ಯಾವುದೇ ಚಿತ್ರೀಕರಣಕ್ಕೆ ಅನುಮತಿ ನೀಡಬಾರದು ಎಂದು ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.