SaReGaMaPa19: ಸರಿಗಮಪ ಲಿಟ್ಲ್ ಚಾಂಪ್ಸ್ ಸೀಸನ್ 19 ಟ್ರೋಫಿ ಗೆದ್ದ ಗ್ರಾಮೀಣ ಪ್ರತಿಭೆ ಪ್ರಗತಿ
ಸರಿಗಮಪ ಲಿಟ್ಲ್ಸ್ ಚಾಂಪ್ಸ್ ಸೀಸನ್ 19 ಗ್ರ್ಯಾಂಡ್ ಫಿನಾಲೆ ವಿಜೇತೆ ಪ್ರಗತಿಗೆ 21 ಲಕ್ಷ ರೂಪಾಯಿ ಬೆಲೆ ಬಾಳುವ 30x40 ಸೈಟ್, 4 ಲಕ್ಷ ರೂಪಾಯಿ ಕ್ಯಾಶ್ ಹಾಗೂ ಟ್ರೋಫಿ ದೊರೆತಿದೆ. ಸಂಗೀತಾಭಿಮಾನಿಗಳು, ಕಾರ್ಯಕ್ರಮದ ವೀಕ್ಷಕರು ಪ್ರಗತಿಗೆ ಶುಭಾಶಯ ಕೋರುತ್ತಿದ್ದಾರೆ.
ಜೀ ಕನ್ನಡದ ಖ್ಯಾತ ಕಾರ್ಯಕ್ರಮ ಸರಿಗಮಪ ಲಿಟ್ಲ್ ಚಾಂಪ್ಸ್ ಸೀಸನ್ 19 ಗ್ರ್ಯಾಂಡ್ ಫಿನಾಲೆ ಮುಗಿದಿದೆ. ಈ ಬಾರಿ ಕೂಡಾ ಕಾರ್ಯಕ್ರಮದಲ್ಲಿ ಜೀ ವಾಹಿನಿಯು ಕರ್ನಾಟಕದ ಮೂಲೆ ಮೂಲೆಯಿಂದ ವಿವಿಧ ಪ್ರತಿಭೆಗಳನ್ನು ಕರೆ ತಂದು ಕನ್ನಡಿಗರಿಗೆ ಪರಿಚಯಿಸಿತ್ತು. ಶನಿವಾರ ಹಾಗೂ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರತಿಭೆ ಪ್ರಗತಿ ಬಡಿಗೇರ್ ಈ ಬಾರಿ ಚಾಂಪ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾಳೆ.
ಪ್ರಗತಿ ಗ್ರಾಮೀಣ ಪ್ರತಿಭೆ, ಹಾಡುಗಾರರ ಕುಟುಂಬದಿಂದ ಬಂದ ಗಾಯಕಿ. ಫಿನಾಲೆ ವೇದಿಕೆಯಲ್ಲಿ ಪ್ರಗತಿ ವಿನ್ನರ್ ಆಗಿ ಘೋಷಣೆ ಆಗುತ್ತಿದ್ದಂತೆ ಆಕೆಯನ್ನು ಹೆತ್ತವರ ಕಣ್ಣಿಂದ ಆನಂದಭಾಷ್ಪ ಹರಿಯಿತು. ಬೃಹತ್ ವೇದಿಕೆಯಲ್ಲಿ, ಸಾವಿರಾರು ಜನರ ಮುಂದೆ ಪ್ರಗತಿ ಟ್ರೋಫಿ ಸ್ವೀಕರಿಸಿದ್ದಾಳೆ. ಈ ಸೀಸನ್‌ನ ಮೊದಲ ಎಪಿಸೋಡ್‌ನಲ್ಲಿ ಪ್ರಗತಿ ತಂದೆ ಹಾಗೂ ತಂಗಿ ಕೂಡಾ ಹಾಡಿದ್ದರು. ಅಷ್ಟು ಗಾನ ಕೋಗಿಲೆಗಳ ಪೈಕಿ ಪ್ರಗತಿ ಈ ಸೀಸನ್ ವಿನ್ನರ್ ಆಗಿದ್ದು ನಿಜಕ್ಕೂ ಆಕೆ ಮಾಡಿದ ಸಾಧನೆ ಎಂದೇ ಹೇಳಬಹುದು. ಮಹಾಗುರುಗಳಾದ ಹಂಸಲೇಖ ತಮ್ಮ ಎರಡೂ ಬದಿಗೆ ಪ್ರಗತಿ ಹಾಗೂ ಶಿವಾನಿ ಇಬ್ಬರ ಕೈ ಹಿಡಿದು ನಿಂತಾಗ ಎಲ್ಲರಲ್ಲೂ ಮೌನ್ ಆವರಿಸಿತ್ತು. ಕೊನೆಗೆ ಸಂಗಿತ ನಿರ್ದೇಶಕ ಹಂಸಲೇಖ ಪ್ರಗತಿ ಕೈಯ್ಯನ್ನು ಎತ್ತಿ ಹಿಡಿದಾಗ ಕಾರ್ಯಕ್ರಮದ ಅಭಿಮಾನಿಗಳ ಚಪ್ಪಾಳೆ ಇಡೀ ವೇದಿಕೆ ತುಂಬಾ ಮಾರ್ದನಿಸಿತ್ತು.
ಕುಶಾಲನಗರದ ಪ್ರಗತಿ ಬಡಿಗೇರ್‌ಗೆ ಗಾಯಕಿ ಇಂದು ನಾಗರಾಜ್ ಮೆಂಟರ್ ಆಗಿದ್ದರು. ವಿಜಯ್ ಪ್ರಕಾಶ್, ಅರ್ಜುನ್ ಜನ್ಯಾ ಹಾಗೂ ಇನ್ನಿತರರರು ಆಕೆಯ ಪ್ರತಿಭೆಯನ್ನು ಹೊಗಳಿದರು. ಸರಿಗಮಪ ಲಿಟ್ಲ್ಸ್ ಚಾಂಪ್ಸ್ ಸೀಸನ್ 19 ಗ್ರ್ಯಾಂಡ್ ಫಿನಾಲೆ ವಿಜೇತೆ ಪ್ರಗತಿಗೆ 21 ಲಕ್ಷ ರೂಪಾಯಿ ಬೆಲೆ ಬಾಳುವ 30x40 ಸೈಟ್, 4 ಲಕ್ಷ ರೂಪಾಯಿ ಕ್ಯಾಶ್ ಹಾಗೂ ಟ್ರೋಫಿ ದೊರೆತಿದೆ. ಸಂಗೀತಾಭಿಮಾನಿಗಳು, ಕಾರ್ಯಕ್ರಮದ ವೀಕ್ಷಕರು ಪ್ರಗತಿಗೆ ಶುಭಾಶಯ ಕೋರುತ್ತಿದ್ದಾರೆ.
ಇನ್ನು ಈ ಕಾರ್ಯಕ್ರಮಕ್ಕೆ ರಮೇಶ್ ಅರವಿಂದ್ ಆಗಮಿಸಿದ್ದು ವಿಶೇಷವಾಗಿತ್ತು. ಈಗಷ್ಟೇ ಬಿಡುಗಡೆ ಆಗಿರುವ ಶಿವಾಜಿ ಸುರತ್ಕಲ್ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಇರುವ ಚಿತ್ರದ ನಾಯಕ ರಮೇಶ್ ಅರವಿಂದ್, ಶಿವಾಜಿ ಸುರತ್ಕಲ್-2 ಸಿನಿಮಾ ತಂಡದ ಜೊತೆ ಈ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಆಗಮಿಸಿ ವೇದಿಕೆಯ ಮೆರುಗು ಹೆಚ್ಚಿಸಿದ್ದಾರೆ. ಮಂಗಳೂರಿನ ತನುಶ್ರೀ, ಬೆಂಗಳೂರಿನ ಕುಷಿಕ್, ಮೈಸೂರಿನ ಗುರುಪ್ರಸಾದ್, ಉಡುಪಿಯ ಶಿವಾನಿ ನವೀನ್ ಕೊಪ್ಪ, ಸೊಲ್ಲಾಪುರದ ರೇವಣಸಿದ್ಧ ಮತ್ತು ಕುಶಾಲನಗರದ ಪ್ರಗತಿ ಬಡಿಗೇರ್ ಫಿನಾಲೆಯಲ್ಲಿ ಟಾಪ್ 6 ಸ್ಪರ್ಧಿಗಳಾಗಿದ್ದರು.