ಬಾಕ್ಸಾಫೀಸ್ನಲ್ಲಿ 250 ಕೋಟಿ ಗಳಿಸಿದ ಅಮರನ್ ಚಿತ್ರಕ್ಕೆ ಇದೆಂಥಾ ಸಂಕಷ್ಟ; ಸಿಡಿದೆದ್ದ ಮುಸ್ಲಿಂ ಸಂಘಟನೆಗಳು
Amaran Movie: ಶಿವಕಾರ್ತಿಕೇಯನ್-ಸಾಯಿ ಪಲ್ಲವಿ ಅಭಿನಯದ ಅಮರನ್ ಚಿತ್ರದ ಸುತ್ತ ವಿವಾದಗಳು ಮುಂದುವರೆದಿದೆ. ಮುಸ್ಲಿಮರ ವಿರುದ್ಧ ದ್ವೇಷ ಬಿತ್ತಲು ಸಿನಿಮಾ ಮಾಡಲಾಗಿದೆ ಎಂದು ಮುಸ್ಲಿಂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಕ್ಸಾಫೀಸ್ನಲ್ಲಿ 250 ಕೋಟಿ ರೂಪಾಯಿಗೂ ಹೆಚ್ಚು ಸಂಗ್ರಹಿಸಿ ಧೂಳೆಬ್ಬಿಸುತ್ತಿರುವ ಶಿವಕಾರ್ತಿಕೇಯನ್-ಸಾಯಿ ಪಲ್ಲವಿ (Sivakarthikeyan-Sai Pallavi) ಅಭಿನಯದ 'ಅಮರನ್' ಚಿತ್ರವು ಹೊಸ ವಿವಾದಕ್ಕೆ ಸಿಲುಕಿದೆ. ಅನೇಕ ಮುಸ್ಲಿಂ ಮುಖಂಡರು ಈ ಚಿತ್ರವು 'ಇಸ್ಲಾಮೋಫೋಬಿಯಾ'ವನ್ನು (Islamophobia) ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಅಮರನ್ ಚಿತ್ರವು ತಮಿಳುನಾಡಿನ ಮೇಜರ್ ಮುಕುಂದ್ ವರದರಾಜನ್ ಜೀವನವನ್ನು ಆಧರಿಸಿದೆ. ಅವರು 2014ರಲ್ಲಿ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಮುಕುಂದ್ ವರದರಾಜನ್ ಕೊಲ್ಲಲ್ಪಟ್ಟರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)ನ 150 ಕ್ಕೂ ಹೆಚ್ಚು ಸದಸ್ಯರು ಇತ್ತೀಚೆಗೆ ಚೆನ್ನೈನ ಅಲ್ವಾರ್‌ಪೇಟ್‌ನಲ್ಲಿರುವ ಕಮಲ್ ಹಾಸನ್ ಅವರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಂಘಟನೆಯ ಕಾರ್ಯದರ್ಶಿ ಕೆ ಕರೀಮ್ ಮಾತನಾಡಿ, ಅಮರನ್ ಚಿತ್ರವು ಜನರಲ್ಲಿ ಅಲ್ಪಸಂಖ್ಯಾತ ವಿರೋಧಿ ಭಾವನೆಗಳನ್ನು ಹೇರುತ್ತಿದೆ. ಇದು ಸಂಪೂರ್ಣ ಜೀವನ ಚರಿತ್ರೆಯಲ್ಲ. ಮುಸ್ಲಿಮರ ವಿರುದ್ಧ ದ್ವೇಷ ಬಿತ್ತಲು ಸಿನಿಮಾ ಮಾಡಲಾಗಿದೆ. ಹಾಗಾಗಿ ಬಲವಾಗಿ ಖಂಡಿಸುತ್ತೇವೆ ಎಂದಿದ್ದಾರೆ.
ಕಾಶ್ಮೀರಿ ಫೈಲ್ಸ್, ದಿ ಕೇರಳ ಸ್ಟೋರಿಗೆ ಹೋಲಿಸಿದ ಜವಾಹಿರುಲ್ಲಾ
ಅಮರನ್ ಚಿತ್ರಕ್ಕೆ ಕಮಲ್ ಹಾಸನ್ ಬಂಡವಾಳ ಹೂಡಿರುವ ಕಾರಣ ಅವರ ಕಚೇರಿಯ ಹೊರಭಾಗ ಪ್ರತಿಭಟನೆ ನಡೆದಿದೆ. ಈ ಹಿಂದೆ ಕಮಲ್ ಹಾಸನ್ ಅವರು ವಿಶ್ವರೂಪಂ (2013) ಚಿತ್ರವನ್ನು ನಿರ್ಮಿಸಿದ್ದರು. ಇದರಲ್ಲೂ ಮುಸ್ಲಿಮರ ವಿರುದ್ಧ ದ್ವೇಷ ಸಾರುವ ಅಂಶಗಳನ್ನು ಎತ್ತಿ ತೋರಿಸಲಾಗಿತ್ತು ಎಂದು ಕಿಡಿಕಾರಿದ್ದಾರೆ. ಮನಿತಾನೇಯ ಮಕ್ಕಳ್ ಕಚ್ಚಿ ಸಂಸ್ಥಾಪಕ-ಅಧ್ಯಕ್ಷ ಎಂಎಚ್ ಜವಾಹಿರುಲ್ಲಾ ಅವರು ಅಮರನ್ ಅನ್ನು ದಿ ಕಾಶ್ಮೀರ್ ಫೈಲ್ಸ್ (2022) ಮತ್ತು ದಿ ಕೇರಳ ಸ್ಟೋರಿ (2023) ಅಂತಹ ವಿವಾದಾತ್ಮಕ ಮುಸ್ಲಿಂ ವಿರೋಧಿ ಚಿತ್ರಗಳಿಗೆ ಹೋಲಿಸಿದ್ದಾರೆ.
ಅಲ್ಲದೆ, ಕಾಶ್ಮೀರದಲ್ಲಿ ಆಜಾದಿ (ಸ್ವಾತಂತ್ರ್ಯ) ಘೋಷಣೆ ಚಲನಚಿತ್ರವು ಸ್ವಾಧೀನ ಮಾಡಿಕೊಂಡಿದ್ದನ್ನು ಹಲವರು ಟೀಕಿಸಿದ್ದಾರೆ. ಕಾಶ್ಮೀರಿ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ ಒತ್ತಾಯಿಸುವವರಿಂದ ರಚಿಸಲ್ಪಟ್ಟ ಈ ಘೋಷಣೆಯು ಪೌರತ್ವ ತಿದ್ದುಪಡಿ ಕಾಯಿದೆ (CAA) ಯಂತಹ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಕಿಡಿಕಾರಿದ್ದಾರೆ. ಈ ಚಿತ್ರದಲ್ಲಿರುವ ಆಜಾದಿ ಹಾಡನ್ನು ಸ್ಥಳೀಯ ರಾಜಕೀಯ ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳದೆ ಭಾರತೀಯ ಸೇನೆಗೆ ಅರ್ಪಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಜಿವಿ ಪ್ರಕಾಶ್ ಸಂಗೀತ ಸಂಯೋಜಿಸಿದ್ದಾರೆ.
ದೀಪಾವಳಿ ಹಬ್ಬಕ್ಕೆ ಚಿತ್ರ ಬಿಡುಗಡೆ
ಅಕ್ಟೋಬರ್ 31 ರಂದು ತೆರೆ ಕಂಡ ಅಮರನ್, ಪಾಸಿಟಿವ್ ಟಾಕ್ ಪಡೆದುಕೊಂಡಿತು. ಚಿತ್ರ ಮತ್ತು ಶಿವಕಾರ್ತಿಕೇಯನ್ ದೇಶಭಕ್ತಿಯನ್ನು ಪ್ರಚಾರ ಮಾಡಿದ್ದಕ್ಕಾಗಿ ರಾಜ್ಯ ಬಿಜೆಪಿ ನಾಯಕರು ಶ್ಲಾಘಿಸಿದ್ದಾರೆ. ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್‌ಸಿಸಿ) ಅಧ್ಯಕ್ಷ ಕೆ ಸೆಲ್ವಪೆರುಂತಗೈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರಿ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಉಪಮುಖ್ಯಮಂತ್ರಿ ಉದಯನಿಧಿ ಅವರು ಅಕ್ಟೋಬರ್ 30ರಂದು ಪ್ರೀಮಿಯರ್ ಶೋಗೆ ಹಾಜರಾಗಿದ್ದರು.