‘ಮ್ಯಾಕ್ಸ್’ ಚಿತ್ರ late ಆದರೂ latest ಆಗಿ ಬರ್ತಿದೆ, ಎರಡೂವರೆ ವರ್ಷ ತಡವಾಗಿದ್ದಕ್ಕೆ ಕ್ಷಮೆ ಇರಲಿ; ಕಿಚ್ಚ ಸುದೀಪ್
Kiccha Sudeep about Max: ಮ್ಯಾಕ್ಸ್ ಸಿನಿಮಾ ಡಿಸೆಂಬರ್ 25ರಂದು ಬಿಡುಗಡೆ ಆಗುತ್ತಿದೆ. ವಿಕ್ರಾಂತ್ ರೋಣ ಸಿನಿಮಾ ಬಳಿಕ ಸುದೀಪ್ ಮತ್ತೆ ಆಗಮಿಸುತ್ತಿದ್ದಾರೆ. ಕೊಂಚ ತಡವಾದರೂ, ಲೇಟೆಸ್ಟ್ ಆಗಿಯೇ ಬರುತ್ತಿದ್ದೇವೆ ಎಂದಿದ್ದಾರೆ ಸುದೀಪ್.
Max Movie: ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರವು ಡಿ. 25ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸುದೀಪ್ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ ಎರಡೂವರೆ ವರ್ಷಗಳೇ ಆಗಿದ್ದವು. ಅವರು ಪೂರ್ಣಪ್ರಮಾಣದಲ್ಲಿ ನಾಯಕನಾಗಿ ಅಭಿನಯಿಸಿದ ಕೊನೆಯ ಚಿತ್ರವೆಂದರೆ ಅದು ‘ವಿಕ್ರಾಂತ್ ರೋಣ’. ಅದರ ನಂತರ ಸುದೀಪ್ ಯಾವಾಗ ಹೊಸ ಚಿತ್ರದೊಂದಿಗೆ ಬರುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಸುದೀಪ್ ಕೊನೆಗೂ ಉತ್ತರ ಕೊಟ್ಟಿದ್ದಾರೆ. ಚಿತ್ರವು ಸ್ವಲ್ಪ late ಆದರೂ latest ಆಗಿ ಬರುತ್ತಿದೆ ಎಂದು ಸುದೀಪ್ ಹೇಳಿಕೊಂಡಿದ್ದಾರೆ.
‘ಮ್ಯಾಕ್ಸ್’ ಚಿತ್ರದ ‘ಸಿಂಹ ಮೆರೆವ ಕಾಡಿನಲ್ಲಿ …’ ಎಂಬ ಹಾಡೊಂದು ಭಾನುವಾರ ರಾತ್ರಿ ಬಿಡುಗಡೆಯಾಗಿದೆ. ಬೆಂಗಳೂರಿನ ಒರಾಯನ್ ಮಾಲ್‍ನ ಲೇಕ್‍ಸೈಡ್‍ನಲ್ಲಿ ಈ ಹಾಡು ಬಿಡುಗಡೆಯಾಗಿದೆ. ಅನೂಪ್ ಭಂಡಾರಿ ಸಾಹಿತ್ಯ ರಚಿಸಿರುವ ಈ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದು, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಹಾಡು ಸಾರೆಗಮ ಕನ್ನಡ ಯೂಟ್ಯೂಬ್ ಚಾನಲ್‍ನಲ್ಲಿ ಲಭ್ಯವಿದೆ. ಈ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಸುದೀಪ್ ಒಂದಿಷ್ಟು ವಿಷಯಗಳನ್ನು ಮಾಡನಾಡಿದ್ದಾರೆ.
ತಡವಾಗಿದ್ದಕ್ಕೆ ಕ್ಷಮೆ ಇರಲಿ..
‘ಮ್ಯಾಕ್ಸ್’ ಕುರಿತು ಮಾತನಾಡಿರುವ ಸುದೀಪ್, ‘ಎರಡೂವರೆ ವರ್ಷಗಳ ನಂತರ ನನ್ನ ಚಿತ್ರವೊಂದು ಬಿಡುಗಡೆಯಾಗುತ್ತಿದೆ. ನಿಧಾನವಾಗಿದ್ದಕ್ಕೆ ಕ್ಷಮೆ ಕೇಳುತ್ತೇನೆ. ಎರಡೂವರೆ ವರ್ಷ ಸಿನಿಮಾ ಬಿಡುಗಡೆ ಆಗದಿರುವುದು ದೊಡ್ಡ ವಿಷಯವಲ್ಲ. ನೀವು ತೋರಿಸುವ ಪ್ರೀತಿಯನ್ನು ಕಿತ್ತುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಲೇಟ್ ಆಗಿ ಬಂದರೂ, ಲೇಟೆಸ್ಟ್ ಆಗಿ ಬರ್ತೀವಿ ನಾವು. ಚಿತ್ರದಲ್ಲಿ ತುಂಬಾ ಜನ ಹೊಸ ಕಲಾವಿದರಿದ್ದಾರೆ. ಅವರಿಗೆ ನಿಮ್ಮ ಪ್ರೋತ್ಸಾಹ ಬೇಕು’ ಎಂದು ಹೇಳಿದರು.
ಒಂದು ರಾತ್ರಿಯಲ್ಲಿ ನಡೆಯುವ ಕಥೆ..
‘ಮ್ಯಾಕ್ಸ್’ ಒಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಒಂದು ರಾತ್ರಿಯಲ್ಲಿ ನಡೆಯುವ ಕಥೆಯಾಗಿದೆ. ಈ ಚಿತ್ರದಲ್ಲಿ ಸುದೀಪ್, ಅರ್ಜುನ್ ಮಹಾಕ್ಷಯ್ ಎಂಬ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಅವರನ್ನು ಎಲ್ಲರೂ ‘ಮ್ಯಾಕ್ಸ್’ ಎಂದು ಕರೆಯುತ್ತಿರುತ್ತಾರಂತೆ. ಈ ಚಿತ್ರದಲ್ಲಿ ಅವರಿಗೆ ನಾಯಕಿ ಇರುವುದಿಲ್ಲ. ಈ ಕುರಿತು ಕೆಲವು ದಿನಗಳ ಹಿಂದೆ ಮಾತನಾಡಿದ್ದ ಸುದೀಪ್, ‘ಇಲ್ಲಿ ಅವಕಾಶ ಮಾತ್ರ ಮುಖ್ಯ. ಯಾವುದೇ ಪಾತ್ರ ಅಥವಾ ವಿಷಯವನ್ನು ಸುಮ್ಮನೆ ತುರುಕಬಾರದು. ಇದೊಂದು ಥ್ರಿಲ್ಲರ್. ಕಥೆ ವೇಗವಾಗಿ ಸಾಗುತ್ತಿರಬೇಕು. ಇಲ್ಲಿ ನಾಯಕಿ ಪಾತ್ರಕ್ಕೆ ಅವಕಾಶವಿಲ್ಲದಿದ್ದರಿಂದ ಸುಮ್ಮನೆ ಸೇರಿಸಿಲ್ಲ’ ಎಂದರು.
ಮೂರು ಭಾಷೆಗಳ ಬಿಡುಗಡೆ ಅಧಿಕೃತ
ವಿ ಕ್ರಿಯೇಷನ್ಸ್ ಬ್ಯಾನರ್ ಅಡಿ ಕಲೈಪುಲಿ ಎಸ್ ಧನು ಮತ್ತು ಕಿಚ್ಚ ಕ್ರಿಯೇಷನ್ಸ್ ಸಂಸ್ಥೆಯಡಿ ಸುದೀಪ್ ನಿರ್ಮಿಸಿರುವ ಈ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ಕಥೆ- ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಮೊದಲು ಪ್ಯಾನ್ ಇಂಡಿಯಾದ ಚಿತ್ರವಾಗಿ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಹೇಳಲಾಗಿತ್ತು. ಆದರೆ, ಚಿತ್ರ ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ಮಾತ್ರ ಬಿಡುಗಡೆಯಾಗುತ್ತಿದೆ. ಈ ಪೈಕಿ, ಡಿ. 25ರಂದು ಚಿತ್ರದ ಕನ್ನಡ ಅವತರಣಿಕೆ ಬಿಡುಗಡೆಯಾದರೆ, ಡಿ. 27ರಂದು ಚಿತ್ರದ ತೆಲುಗು ಮತ್ತು ತಮಿಳಿನ ಅವತರಣಿಕೆಗಳು ಬಿಡುಗಡೆಯಾಗಲಿವೆ.
‘ಮ್ಯಾಕ್ಸ್’ ಚಿತ್ರದಲ್ಲಿ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಮತ್ತು ಶೇಖರ್ ಚಂದ್ರ ಛಾಯಾಗ್ರಹಣವಿದೆ.
ಬರಹ: ಚೇತನ್ ನಾಡಿಗೇರ್