ಆನೇಕಲ್ ಮಾಯಸಂದ್ರ ಬಳಿ ಬೆಳ್ಳಂಬೆಳಗ್ಗೆ ಪೊಲೀಸ್ ಶೂಟ್‌ ಔಟ್, ರೌಡಿಶೀಟರ್ ಬೆಸ್ತಮಾನಹಳ್ಳಿ ಲೋಕೇಶ್‌ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  ಆನೇಕಲ್ ಮಾಯಸಂದ್ರ ಬಳಿ ಬೆಳ್ಳಂಬೆಳಗ್ಗೆ ಪೊಲೀಸ್ ಶೂಟ್‌ ಔಟ್, ರೌಡಿಶೀಟರ್ ಬೆಸ್ತಮಾನಹಳ್ಳಿ ಲೋಕೇಶ್‌ ಬಂಧನ

ಆನೇಕಲ್ ಮಾಯಸಂದ್ರ ಬಳಿ ಬೆಳ್ಳಂಬೆಳಗ್ಗೆ ಪೊಲೀಸ್ ಶೂಟ್‌ ಔಟ್, ರೌಡಿಶೀಟರ್ ಬೆಸ್ತಮಾನಹಳ್ಳಿ ಲೋಕೇಶ್‌ ಬಂಧನ

ಬೆಂಗಳೂರು ಹೊರವಲಯದ ಆನೇಕಲ್‌ ಮಾಯಸಂದ್ರದಲ್ಲಿ ಇಂದು (ಡಿಸೆಂಬರ್ 16) ಬೆಳ್ಳಂಬೆಳಗ್ಗೆ ಪೊಲೀಸರ ಗುಂಡಿನ ಸದ್ದು ಮೊಳಗಿದೆ. ಪೊಲೀಸ್ ಶೂಟ್‌ ಔಟ್‌ನಲ್ಲಿ ರೌಡಿಶೀಟರ್ ಬೆಸ್ತಮಾನಹಳ್ಳಿ ಲೋಕೇಶ್ ಗಾಯಗೊಂಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಆನೇಕಲ್ ಮಾಯಸಂದ್ರ ಬಳಿ ಬೆಳ್ಳಂಬೆಳಗ್ಗೆ ಪೊಲೀಸ್ ಶೂಟ್‌ ಔಟ್ ನಡೆದಿದೆ. ಆರೋಪಿ ರೌಡಿಶೀಟರ್ ಬೆಸ್ತಮಾನಹಳ್ಳಿ ಲೋಕೇಶ್‌ ಬಂಧನಕ್ಕೆ ಹೋದಾಗ ಈ ಫೈರಿಂಗ್ ನಡೆಸಿದ್ದು, ಆರೋಪಿ ಕಾಲಿಗೆ ಪೊಲೀಸರು ಗುಂಡುಹಾರಿಸಿದ್ದಾರೆ. (ಸಾಂಕೇತಿಕ ಚಿತ್ರ)
ಆನೇಕಲ್ ಮಾಯಸಂದ್ರ ಬಳಿ ಬೆಳ್ಳಂಬೆಳಗ್ಗೆ ಪೊಲೀಸ್ ಶೂಟ್‌ ಔಟ್ ನಡೆದಿದೆ. ಆರೋಪಿ ರೌಡಿಶೀಟರ್ ಬೆಸ್ತಮಾನಹಳ್ಳಿ ಲೋಕೇಶ್‌ ಬಂಧನಕ್ಕೆ ಹೋದಾಗ ಈ ಫೈರಿಂಗ್ ನಡೆಸಿದ್ದು, ಆರೋಪಿ ಕಾಲಿಗೆ ಪೊಲೀಸರು ಗುಂಡುಹಾರಿಸಿದ್ದಾರೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಹೊರವಲಯದ ಆನೇಕಲ್ ತಾಲೂಕು ಮಾಯಸಂದ್ರ ಬಳಿ ಇಂದು (ಡಿಸೆಂಬರ್ 16) ಬೆಳ್ಳಂಬೆಳಗ್ಗೆ ಪೊಲೀಸರು ಶೂಟ್‌ ಔಟ್‌ ನಡೆಸಿದ್ದು, ರೌಡಿ ಶೀಟರ್‌ ಬೆಸ್ತಮಾನಹಳ್ಳಿ ಲೋಕೇಶ್ ಅಲಿಯಾಸ್ ಲೋಕಿಯನ್ನು ಬಂಧಿಸಿದ್ದಾರೆ. ಆರೋಪಿ ಲೋಕಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತ ಪೊಲೀಸರ ಮೇಲೆ ದಾಳಿ ನಡೆಸಿದ ಕಾರಣ, ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡು ಬಿದ್ದ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಕೂಡಲೇ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆನೇಕಲ್ ಮಾಯಸಂದ್ರ ಬಳಿ ಪೊಲೀಸ್ ಶೂಟ್‌ಔಟ್ ಏನಿದು ಪ್ರಕರಣ

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕು ಮಾಯಸಂದ್ರ ಸಮೀಪ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ಫೈರಿಂಗ್ ನಡೆಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ರೌಡಿ ಶೀಟರ್ ಮನೋಜ್ ಮೇಲೆ ಲೋಕಿ ಮತ್ತು ಗ್ಯಾಂಗ್ ದಾಳಿ ನಡೆಸಿತ್ತು. ಇದಾದ ಬಳಿಕ ಲೋಕಿ ಗ್ಯಾಂಗ್ ಸದಸ್ಯರೆಲ್ಲರೂ ತಲೆಮರೆಸಿಕೊಂಡಿದ್ದರು. ಈ ದಾಳಿಗೆ ಸಂಬಂಧಿಸಿ ಪೊಲೀಸ್ ಕೇಸ್ ದಾಖಲಿಸಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ನಡೆಸಿದ್ದರು.

ಆರೋಪಿ ರೌಡಿಶೀಟರ್ ಬೆಸ್ತಮಾನಹಳ್ಳಿ ಲೋಕೇಶ್ ಅಲಿಯಾಸ್ ಲೋಕಿ ಇರುವಿಕೆಯನ್ನು ಖಚಿತಪಡಿಸಿಕೊಂಡು ಮಾಯಸಂದ್ರಕ್ಕೆ ಜಿಗಣಿ ಇನ್‌ಸ್ಪೆಕ್ಟರ್ ಮಂಜುನಾಥ್ ಮತ್ತು ತಂಡ ತೆರಳಿತ್ತು. ಅಲ್ಲಿ ಪೊಲೀಸರ ಮೇಲೆ ದಾಳಿ ಮಾಡಿದ ಲೋಕಿ, ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದ್ದ. ಆಗ ಜಿಗಣಿ ಇನ್ಸ್‌ಪೆಕ್ಟರ್ ಮಂಜುನಾಥ್ ಅವರು ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಲೋಕಿ ಸ್ಥಳದಲ್ಲೇ ಬಿದ್ದಿದ್ದ. ಕೂಡಲೇ ಆತನನ್ನು ಬಂಧಿಸಿದ ಪೊಲೀಸರು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಆತನಿಗೆ ಚಿಕಿತ್ಸೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾಗಿ ನ್ಯೂಸ್ 18 ಕನ್ನಡ ವರದಿ ಮಾಡಿದೆ.

ಮಂಡ್ಯದಲ್ಲಿ ಜೈಲಲ್ಲಿ ಇದ್ದ ಮಗನ ನೋಡಲು ಹೋದ ತಂದೆಯೂ ಜೈಲುಪಾಲು

ಮಂಡ್ಯದಲ್ಲಿ ಜೈಲಿನಲ್ಲಿದ್ದ ಮಗನನ್ನು ನೋಡಲು ಹೋದ ತಂದೆಯೂ ಜೈಲುಪಾಲಾದ ಘಟನೆ ಬೆಳಕಿಗೆ ಬಂದಿದೆ. ತಂದೆಯ ಬ್ಯಾಗ್‌ನಲ್ಲಿ ಗಾಂಜಾ ಪತ್ತೆಯಾದ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಬಂಧಿಸಿರುವ ಘಟನೆ ನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದ ಮಧುಸೂದನ್ ಜೈಲಿನಲ್ಲಿದ್ದ. ಆತನಿಗೆ ಬಟ್ಟೆ ಕೊಡುವುದಕ್ಕೆ ತಂದೆ ಶಿವಣ್ಣ ಹೋಗಿದ್ದಾಗ ಈ ಘಟನೆ ನಡೆದಿದೆ.

ಮಧುಸೂದನ್ ತನ್ನ ಸ್ನೇಹಿತನಿಂದ ಬಟ್ಟೆ ಪಡೆದುಕೊಂಡು ಜೈಲಿ ತಂದು ಕೊಡಿ ಎಂದು ತಂದೆ ಶಿವಣ್ಣ ಅವರಿಗೆ ತಿಳಿಸಿದ್ದ. ಅದರಂತೆ, ಅಪರಿಚಿತ ವ್ಯಕ್ತಿಯಿಂದ ಬಟ್ಟೆಯನ್ನು ಪಡೆದುಕೊಂಡ ಶಿವಣ್ಣ ಅದನ್ನು ಜೈಲಿಗೆ ತಂದಿದ್ದಾರೆ. ಅಲ್ಲಿ ಪೊಲೀಸರು ಬ್ಯಾಗ್ ತಪಾಸಣೆ ಮಾಡಿದಾಗ ಅದರಲ್ಲಿ 20 ಗ್ರಾಂ ಗಾಂಜಾ ಪತ್ತೆಯಾಗಿದೆ. ಹೀಗಾಗಿ ಶಿವಣ್ಣ ಅವರನ್ನು ಪೊಲೀಸರು ಬಂಧಿಸಿದರು. ಶಿವಣ್ಣ ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಮಗ ಮಧಸೂದನ್ ನೀಡಿದ ಸೂಚನೆ ಪ್ರಕಾರ ಬಟ್ಟೆ ಬ್ಯಾಗ್‌ ಅನ್ನು ಅಪರಿಚಿತನಿಂದ ಪಡೆದು ತಂದುಕೊಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲಸದ ಒತ್ತಡಕ್ಕೆ ಬೇಸತ್ತು ಆತ್ಮಹತ್ಯೆ: ಕೆಲಸದ ಒತ್ತಡದಿಂದ ಬೇಸತ್ತ ಇಂಜಿನಿಯರ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯದ ಮದ್ದೂರು ತಾಲೂಕಿನ ಕುರುಬರ ದೊಡ್ಡಿ ಗ್ರಾಮದಿಂದ ಶನಿವಾರ ವರದಿಯಾಗಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹೆಮ್ಮತಿ ಗ್ರಾಮದ ಜ್ಞಾನೇಶ್ (30) ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರ್‌. ಹೆಬ್ಬರಳು ಗ್ರಾಮ ಸಮೀಪದಲ್ಲಿ ಶಿಂಷಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿಗೆ ಗುತ್ತಿಗೆ ಪಡೆದಿರುವ ಮೈಸೂರಿನ ಬಾಪೂಜಿ ಕನ್‌ಸ್ಟ್ರಕ್ಷನ್‌ ಕಂಪನಿಯಲ್ಲಿ ಗುತ್ತಿಗೆ ನೌಕರರಾಗಿ ಜ್ಞಾನೇಶ್ ಕೆಲಸ ಮಾಡುತ್ತಿದ್ದರು. ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

Whats_app_banner