ಬ್ಯಾಂಕು ವ್ಯವಹಾರ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೂ ಆದ್ಯತೆ ಬೇಕು; ಕೇಂದ್ರ ಸರ್ಕಾರಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗ
ಬ್ಯಾಂಕು ವ್ಯವಹಾರ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೂ ಆದ್ಯತೆ ಬೇಕು ಎಂದು ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವುದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗ ದೆಹಲಿಗೆ ತೆರಳಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಕನ್ನಡದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಗಣ್ಯರ ನಿಯೋಗ ಕೇಂದ್ರ ಸರ್ಕಾರವನ್ನು ಆಗ್ರಹಿಸಲಿದೆ. ಬ್ಯಾಂಕು ವ್ಯವಹಾರ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೂ ಆದ್ಯತೆ ಬೇಕು ಎಂಬ ವಿಚಾರಗಳೂ ಸೇರಿ ವಿವಿಧ ವಿಷಯಗಳನ್ನು ಈಡೇರಿಸುವಂತೆ ನಿಯೋಗವು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಗಣ್ಯರ ನಿಯೋಗ ನಾಳೆಯಿಂದ ಮೂರು ದಿನ (ಡಿ.17 ರಿಂದ 19) ದೆಹಲಿ ಪ್ರವಾಸ ಮಾಡಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಗಣ್ಯರ ನಿಯೋಗವು ಕರ್ನಾಟಕದ ಸಂಸದರನ್ನು ಸಹ ಭೇಟಿ ಮಾಡಿ ಕನ್ನಡ ಭಾಷೆ-ಸಂಸ್ಕೃತಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅವರಿಗೂ ಮನವರಿಕೆ ಮಾಡಿಕೊಡಲಿದೆ ಎಂದು ಬಿಳಿಲೆ ತಿಳಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಗಣ್ಯರ ನಿಯೋಗದ ಮನವಿಯ ಅಂಶಗಳಿವು
1) ಗ್ರಾಮೀಣ ಬ್ಯಾಂಕುಗಳ ವಿಲೀನದ ನೆಪದಲ್ಲಿ ಕನ್ನಡ ಅಸ್ಮಿತೆಯ ಕಡೆಗಣನೆ ನಿಲ್ಲಿಸಬೇಕು.
2) ಸ್ಥಳೀಯರಿಗೆ ಉದ್ಯೋಗಾವಕಾಶಗಳಲ್ಲಿ ವಂಚನೆ ಆಗದಂತೆ ಖಾತರಿ ನೀಡಬೇಕು.
3) ರಾಷ್ಟ್ರೀಕೃತ ಬ್ಯಾಂಕ್ ಆಡಳಿತದಲ್ಲಿ ಕನ್ನಡ ಭಾಷೆಯ ಸೇವೆ ಗ್ರಾಮೀಣರಿಗೆ ಲಭ್ಯವಾಗಬೇಕು. ಗ್ರಾಮೀಣರು ಆಂಗ್ಲ ಭಾಷೆ ಅಥವಾ ಹಿಂದಿ ಭಾಷೆಯಲ್ಲಿ ವ್ಯವಹರಿಸಲಾಗದು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಒದಗಿಸಬೇಕು.
4) ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ, ಜೆ.ಎನ್.ಯು ಕನ್ನಡ ಪೀಠದ ಬಲವರ್ಧನೆ, ಕನ್ನಡ ಶಾಸ್ತ್ರೀಯ ಭಾಷಾ ಕೇಂದ್ರದ ಕಾರ್ಯ ನಿರ್ವಹಣೆ ನಡೆಸುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು.
5) ಕೇಂದ್ರ ಸರ್ಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೂ ಆದ್ಯತೆ ನೀಡಬೇಕು. ನ್ಯಾಯಾಲಯಗಳಲ್ಲಿ ಪ್ರಾದೇಶಿಕ ಭಾಷೆಗಳ ತೀರ್ಪುಗಳ ಪ್ರಾಮುಖ್ಯ ಎಂಬುದನ್ನು ಮನಗಂಡು ಅನುಷ್ಠಾನಕ್ಕೆ ಕ್ರಮ ಜರುಗಿಸಬೇಕು.
ಹೀಗೆ ಹಲವು ವಿಷಯಗಳನ್ನು ನಿಯೋಗವು ಕೇಂದ್ರ ಸಚಿವರ ಗಮನಕ್ಕೆ ತಂದು ಪರಿಹಾರಕ್ಕೆ ಆಗ್ರಹಿಸಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ವಿವರಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗದಲ್ಲಿ ಯಾರಿದ್ದಾರೆ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗದಲ್ಲಿ ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿ ಟಿಬಿ ಜಯಚಂದ್ರ, ಮಾಜಿ ಸಚಿವ ಪ್ರೊ. ಬಿ. ಕೆ. ಚಂದ್ರಶೇಖರ್, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಸಂಸದ ಡಾ. ಎಲ್. ಹನುಮಂತಯ್ಯ, ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ. ಹಿ. ಚಿ. ಬೋರಲಿಂಗಯ್ಯ, ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ. ವಿ. ಪಿ. ನಿರಂಜನಾರಾಧ್ಯ, ಡಾ. ಎ. ಬಿ. ರಾಮಚಂದ್ರಪ್ಪ ಮತ್ತು ದಾಕ್ಷಾಯಿಣಿ ಹುಡೇದ ಅವರು ಇರಲಿದ್ದಾರೆ ಎಂದು ಡಾ. ಬಿಳಿಮಲೆ ವಿವರಿಸಿದ್ದಾರೆ.
ಕನ್ನಡದಲ್ಲಿ ತೀರ್ಪು ನೀಡಿದ್ದ ಕರ್ನಾಟಕ ಉಚ್ಚ ನ್ಯಾಯಾಲಯ
ಭಾರತ ಭಾಷಾ ದಿನ (ಡಿಸೆಂಬರ್ 11) ದ ಹಿನ್ನೆಲೆಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಸಿ ಎಂ ಜೋಶಿ ಅವರಿದ್ದ ವಿಭಾಗೀಯ ಪೀಠ ಡಿಸೆಂಬರ್ 12ರಂದು ಕನ್ನಡದಲ್ಲಿ ತೀರ್ಪು ಪ್ರಕಟಿಸಿ ಗಮನಸೆಳೆಯಿತು. ಇದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸ್ವಾಗತಿಸಿ, ಪ್ರಶಂಸೆ ವ್ಯಕ್ತಪಡಿಸಿತ್ತು. ತೀರ್ಪಿನ ಅನುಷ್ಠಾನದ ಭಾಗವನ್ನು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು ಕನ್ನಡದಲ್ಲಿ ಓದಿದರು. ಕನ್ನಡ ಭಾಷೆಯ ಅವಸಾನ ಆಗಬಾರದು ಎನ್ನುವುದಾದರೆ ಕನ್ನಡಕ್ಕೆ ಮಾನ್ಯತೆ ಸಿಗಬೇಕು. ಸಾಂವಿಧಾನಿಕ ಸಂಸ್ಥೆಗಳಲ್ಲೂ ಕನ್ನಡದಲ್ಲಿ ವ್ಯವಹಾರ ನಡೆಯಬೇಕು. ನಿನ್ನೆ (ಡಿ.11) ಭಾರತ ಭಾಷಾ ದಿನ ಎಂಬ ಕಾರಣಕ್ಕೆ ಇಂದು ಕನ್ನಡದಲ್ಲ ತೀರ್ಪು ನೀಡುತ್ತಿದ್ದೇವೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ತೀರ್ಪನ್ನು ನಾವೇ ಬರೆದಿದ್ದೇವೆ ಎಂದು ಹೇಳಿದರು.
ಇದಕ್ಕೂ ಮೊದಲು 1996ರಲ್ಲಿ ನ್ಯಾಯಮೂರ್ತಿ ಎಜೆ ಸದಾಶಿವ ಅವರು, ಅದಾಗಿ 2008ರಲ್ಲಿ ಅರಳಿ ನಾಗರಾಜ್ ಕನ್ನಡದಲ್ಲಿ ತೀರ್ಪು ನೀಡಿ ಗಮನಸೆಳೆದಿದ್ದರು.