Sudeep to Join BJP: ಇಂದು ಬಿಜೆಪಿಗೆ ಕಿಚ್ಚ ಸುದೀಪ್, ದರ್ಶನ್ ತೂಗುದೀಪ್ ಸೇರ್ಪಡೆ ಸಾಧ್ಯತೆ: ಬೊಮ್ಮಾಯಿಗೆ ಸಿನಿ ತಾರೆಗಳ ಬಲ
ಇಂದು ( ಏಪ್ರಿಲ್ 5) ಮಧ್ಯಾಹ್ನ 1.30ಕ್ಕೆ ಪಕ್ಷದ ಹಿರಿಯ ಮುಖಂಡರ ಸಮ್ಮುಖದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುದೀಪ್ ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದೆ. ಸುದೀಪ್ ಬಿಜೆಪಿ ಸೇರ್ಪಡೆ ಬಳಿಕ ಒಂದು ಗಂಟೆ ನಂತರ, ಅಂದರೆ ಮಧ್ಯಾಹ್ನ 2.30ಕ್ಕೆ ದರ್ಶನ್ ಕೂಡಾ ಭಾರತೀಯ ಜನತಾ ಪಕ್ಷ ಸೇರಲಿದ್ಧಾರೆ.
ಸಿನಿಮಾ ಮಂದಿ ರಾಜಕೀಯಕ್ಕೆ ಸೇರಿ ಶಾಸಕ, ಸಂಸದ, ಸಚಿವರಾಗಿ ಗುರುತಿಸಿಕೊಂಡಿರುವ ಅನೇಕ ಉದಾಹರಣೆಗಳಿವೆ. ವಿಧಾನಸಭೆ ಚುನಾವಣೆ ದಿನಾಂಕ ನಿಗದಿ ಆಗಿದೆ. ಈ ವೇಳೆ ರಾಜಕೀಯ ಪಕ್ಷಗಳು ಸಿನಿಮಾ ತಾರೆಯರನ್ನು ಪಕ್ಷಕ್ಕೆ ಸೆಳೆಯಲು ಕಸರತ್ತು ಮಾಡುತ್ತಿವೆ. ಈ ಹಿನ್ನೆಲೆ ಇಂದು ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಕೂಡಾ ರಾಜಕೀಯಕ್ಕೆ ಸೇರಲಿದ್ಧಾರೆ ಎನ್ನಲಾಗುತ್ತಿದೆ. ಮತ್ತೊಂದು ಮೂಲಗಳ ಪ್ರಕಾರ ಸುದೀಪ್ ಮಾತ್ರವಲ್ಲ ದರ್ಶನ್ ಕೂಡಾ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
'ತಾಯವ್ವ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಸುದೀಪ್, ಈಗ ಬಹುಭಾಷಾ ನಟನಾಗಿ ಹೆಸರು ಮಾಡಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲ ಕಿಚ್ಚನಿಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಕೂಡಾ ಅಭಿಮಾನಿಗಳಿದ್ದಾರೆ. ಕಿಚ್ಚ ನಟನಾಗಿ ಮಾತ್ರವಲ್ಲದೆ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಬಿಗ್‌ಬಾಸ್ ಮೂಲಕ ನಿರೂಪಕನಾಗಿ ಕೂಡಾ ಅವರು ಹೆಸರು ಮಾಡಿದ್ದಾರೆ. ಚಿತ್ರರಂಗದಲ್ಲಿ ಇಷ್ಟೆಲಾ ಹೆಸರು ಮಾಡಿರುವ ಸುದೀಪ್ ಅವರನ್ನು ರಾಜಕೀಯಕ್ಕೆ ಕರೆ ತರುವ ಪ್ರಯತ್ನ ಬಹಳ ದಿನಗಳಿಂದ ನಡೆಯುತ್ತಲೇ ಇದೆ. ಸುದೀಪ್ ಕೂಡಾ ರಾಜಕೀಯ ಸೇರಲು ಒಪ್ಪಿಗೆ ನೀಡಿದ್ದು ಇಂದು ಅವರು ಬಿಜೆಪಿ ಸೇರಲಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸುದೀಪ್ ಬಹಳ ಆಪ್ತರು. ಸುದೀಪ್ ನನ್ನನ್ನು ಮಾಮ ಎಂದು ಕರೆಯುತ್ತಾರೆ, ನಾನು ಅವರನ್ನು ದೀಪು ಎಂದೇ ಕರೆಯುವುದು ಎಂದು ಬೊಮ್ಮಾಯಿ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಹಾಗೇ ಸುದೀಪ್ ತಂದೆ ಸಂಜೀವ್ ಹಾಗೂ ಬಸವರಾಜ ಬೊಮ್ಮಾಯಿ ಬಹಳ ಆತ್ಮೀಯರು. ಬಾಲ್ಯದಿಂದಲೂ ಸುದೀಪ್ ಹಾಗೂ ಬೊಮ್ಮಾಯಿ ಇಬ್ಬರಿಗೂ ಪರಿಚಯ. ಇಬ್ಬರ ನಡುವೆ ಉತ್ತಮ ಒಡನಾಟವಿದೆ. ಹಾಗಾಗಿ ಸುದೀಪ್ ಬಿಜೆಪಿ ಸೇರುವುದು ಖಚಿತ ಎನ್ನಲಾಗುತ್ತಿದೆ.
ಇಂದು ( ಏಪ್ರಿಲ್ 5) ಮಧ್ಯಾಹ್ನ 1.30ಕ್ಕೆ ಪಕ್ಷದ ಹಿರಿಯ ಮುಖಂಡರ ಸಮ್ಮುಖದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುದೀಪ್ ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದೆ. ಸುದೀಪ್ ಬಿಜೆಪಿ ಸೇರ್ಪಡೆ ಬಳಿಕ ಒಂದು ಗಂಟೆ ನಂತರ, ಅಂದರೆ ಮಧ್ಯಾಹ್ನ 2.30ಕ್ಕೆ ದರ್ಶನ್ ಕೂಡಾ ಭಾರತೀಯ ಜನತಾ ಪಕ್ಷ ಸೇರಲಿದ್ಧಾರೆ. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಬಹಿರಂಗ ಬೆಂಬಲ ಘೋಷಣೆ ಮಾಡಿರುವುದರಿಂದ ದರ್ಶನ್ ಬಿಜೆಪಿ ಸೇರಿದರೆ ಪಕ್ಷ ಬಲವರ್ಧನೆಗೆ ಸಹಕಾರಿ ಆಗಲಿದೆ ಎಂಬ ಲೆಕ್ಕಾಚಾರದಿಂದ ಬಿಜೆಪಿ ದರ್ಶನ್ ಅವರನ್ನು ಬಿಜೆಪಿ ಸೇರುವಲ್ಲಿ ಮನ ಒಲಿಸಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಈ ಚುನಾವಣೆಯಲ್ಲಿ ಸುದೀಪ್ ಸ್ಪರ್ಧಿಸಲಿದ್ದಾರಾ ಎಂಬ ಪ್ರಶ್ನೆ ಎದುರಾಗಿದೆ. ಆದರೆ ಮುಂದಿನ ಎಲೆಕ್ಷನ್‌ನಲ್ಲಿ ತಮ್ಮ ಬದಲಿಗೆ ತಮ್ಮ ಆಪ್ತ ನಿರ್ಮಾಪಕ ಜ್ಯಾಕ್ ಮಂಜು ಅವರಿಗೆ ಟಿಕೆಟ್ ನೀಡಿ ಎಂದು ಸುದೀಪ್ ಮನವಿ ಮಾಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಒಟ್ಟಿನಲ್ಲಿ ಸುದೀಪ್ ನಿಜವಾಗಲೂ ರಾಜಕೀಯ ಸೇರಲಿದ್ದಾರಾ? ಅಥವಾ ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡಲಿದ್ದಾರಾ ಅನ್ನೋದು ಶೀಘ್ರದಲ್ಲೇ ತಿಳಿಯಲಿದೆ.
ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆ
ಮಾರ್ಚ್ 29ರಂದು ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ಏಪ್ರಿಲ್ 13ಕ್ಕೆ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಲಿದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20 ಕೊನೆಯ ದಿನ, 21ಕ್ಕೆ ನಾಮಪತ್ರ ಪರಿಶೀಲನೆ, 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಕರ್ನಾಟಕ ವಿಧಾನಸಭೆಯು ಒಟ್ಟು 225 ಸ್ಥಾನಗಳನ್ನು ಹೊಂದಿದೆ. ನಾಮ ನಿರ್ದೇಶನ ಸದಸ್ಯರ ಸ್ಥಾನ ಹೊರತುಪಡಿಸಿ ಉಳಿದ 224 ಸ್ಥಾನಗಳಿಗೆ ಮೇ 10 ರಂದು ಚುನಾವಣೆ ನಡೆಯಲಿದೆ. ಕರ್ನಾಟಕ ವಿಧಾನಸಭೆಯಲ್ಲಿ 113 ಮ್ಯಾಜಿಕ್ ನಂಬರ್ ಎನಿಸಿದೆ. ಅಷ್ಟು ಸದಸ್ಯ ಬಲ ಹೊಂದಿರುವ ಪಕ್ಷಕ್ಕೆ ಸರ್ಕಾರ ರಚಿಸುವ ಅವಕಾಶ ಸಿಗುತ್ತದೆ.
2018ರ ಚುನಾವಣೆಯಲ್ಲಿ 104 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ
2018ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳಲ್ಲಿ ಜಯ ಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಕಾಂಗ್ರೆಸ್ 80, ಜೆಡಿಎಸ್ 37 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ಬಹುಮತ ಸಾಬೀತುಪಡಿಸಲು ಬೇಕಿದ್ದ ಮ್ಯಾಜಿಕ್ ನಂಬರ್ ಗಳಿಸಲು ಬಿಜೆಪಿ ವಿಫಲವಾಗಿದ್ದ ಹಿನ್ನೆಲೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ರಚಿಸಿ, ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ನಂತರದ ರಾಜಕೀಯ ಬೆಳವಣಿಗೆಗಳಲ್ಲಿ ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಂಡು ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಕೆಲವು ದಿನಗಳ ನಂತರ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಗಾದಿ ಬಿಟ್ಟುಕೊಟ್ಟಿದ್ದರು.