ಜೈಲಿನಲ್ಲಿ ನಟ ದರ್ಶನ್‌ ಜತೆ ನಟೋರಿಯಸ್‌ ರೌಡಿಗಳ ಉಭಯ ಕುಶಲೋಪರಿ ಸಾಂಪ್ರತ; ವಿಲ್ಸನ್‌ ಗಾರ್ಡನ್ ನಾಗ, ಕುಳ್ಳ ಸೀನ ಯಾರು?-sandalwood news actor darshan vip treatment in bengaluru jail who is wilson garden naga kulla seena dharma pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಜೈಲಿನಲ್ಲಿ ನಟ ದರ್ಶನ್‌ ಜತೆ ನಟೋರಿಯಸ್‌ ರೌಡಿಗಳ ಉಭಯ ಕುಶಲೋಪರಿ ಸಾಂಪ್ರತ; ವಿಲ್ಸನ್‌ ಗಾರ್ಡನ್ ನಾಗ, ಕುಳ್ಳ ಸೀನ ಯಾರು?

ಜೈಲಿನಲ್ಲಿ ನಟ ದರ್ಶನ್‌ ಜತೆ ನಟೋರಿಯಸ್‌ ರೌಡಿಗಳ ಉಭಯ ಕುಶಲೋಪರಿ ಸಾಂಪ್ರತ; ವಿಲ್ಸನ್‌ ಗಾರ್ಡನ್ ನಾಗ, ಕುಳ್ಳ ಸೀನ ಯಾರು?

Actor Darshan vip treatment in Jail: ಕಾಟೇರ ನಟ ದರ್ಶನ್‌ಗೆ ಬೆಂಗಳೂರಿನ ಪರಪ್ಪನ ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿದ್ದಾರೆ. ವೈರಲ್‌ ಆಗಿರುವ ಫೋಟೋದಲ್ಲಿರುವ ವಿಲ್ಸನ್‌ ಗಾರ್ಡನ್ ನಾಗ, ಕುಳ್ಳ ಸೀನ ಮುಂತಾದವರು ನಟೋರಿಯಸ್‌ ರೌಡಿಗಳಾಗಿ ಕುಖ್ಯಾತಿ ಪಡೆದವರು. ಈ ರೌಡಿಗಳ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ಬೆಂಗಳೂರು ಜೈಲಿನಲ್ಲಿರುವ ನಟ ದರ್ಶನ್‌, ವಿಲ್ಸನ್‌ ಗಾರ್ಡನ್‌ ಸೀನ, ಕಳ್ಳಸೀನ
ಬೆಂಗಳೂರು ಜೈಲಿನಲ್ಲಿರುವ ನಟ ದರ್ಶನ್‌, ವಿಲ್ಸನ್‌ ಗಾರ್ಡನ್‌ ಸೀನ, ಕಳ್ಳಸೀನ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿರುವ ಕನ್ನಡ ನಟ ದರ್ಶನ್‌ ತೂಗುದೀಪ "ಜೈಲಿನಲ್ಲಿ ಇತರೆ ಅಪರಾಧಿಗಳ ಜತೆ ಕುಳಿತು ಉಭಯ ಕುಶಲೋಪರಿ ನಡೆಸುತ್ತಿರುವ ಫೋಟೋ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ. ಪರಪ್ಪನ ಅಗ್ರಹಾರ ಜೈಲು ಎನ್ನುವುದು ಬೇರೆಯದ್ದೇ ಲೋಕ, ಅದರ ಒಳಗೆ ಬೇರೆಯದ್ದೇ ಜಗತ್ತು ಇರುತ್ತದೆ, ಅಲ್ಲಿ ಎಲ್ಲಾ ವ್ಯವಹಾರಗಳೂ ನಡೆಯುತ್ತವೆ ಎಂದು ಈ ಹಿಂದೆಯೇ ಸಾಕಷ್ಟು ಜನರು ಹೇಳಿದ್ದರು. ಆದರೆ, ನಟ ದರ್ಶನ್‌ ಮಾತ್ರ ಪ್ರತ್ಯೇಕ ಬ್ಯಾರಕ್‌ನಲ್ಲಿ ಒಂಟಿಯಾಗಿ ಅಧ್ಯಾತ್ಮ ಪುಸ್ತಕ ಓದುತ್ತ, ತನ್ನ ತಪ್ಪುಗಳ ಕುರಿತು ಆತ್ಮಾವಲೋಕನ ಮಾಡುತ್ತಾ ಇರಬಹುದು ಎಂದುಕೊಂಡವರಿಗೆ "ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ದೊರಕುತ್ತಿರುವ ಫೋಟೋ" ಅಚ್ಚರಿ ತಂದಿರಬಹುದು. ಡಿ ಬಾಸ್‌ ಅಭಿಮಾನಿಗಳಿಗೆ "ಡಿಬಾಸ್‌ ಒಳಗೆ ಆರಾಮಾವಾಗಿದ್ದಾರೆ" ಎಂಬ ಖುಷಿಯನ್ನೂ ತರಬಹುದು. ಆದರೆ, ವೈರಲ್‌ ಆದ ಫೋಟೋ ಕರ್ನಾಟಕದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಮಟ್ಟದಲ್ಲಿಯೇ ಸುದ್ದಿ ಮಾಡುತ್ತಿದೆ. ಇದೀಗ ಈ ಪ್ರಕರಣವನ್ನು ಗೃಹಸಚಿವ ಜಿ ಪರಮೇಶ್ವರ್‌ ಗಂಭೀರವಾಗಿಯೇ ತೆಗೆದುಕೊಂಡಿದ್ದು, ಜೈಲು ಅಧಿಕಾರಿಗಳ ಅಮಾನತಿಗೆ ಸೂಚಿಸಿದ್ದಾರೆ. ಇದೇ ಸಂದರ್ಭದಲ್ಲಿ ದರ್ಶನ್‌ ಜತೆ ಕುಳಿತು ಮಾತನಾಡುತ್ತ ಇರುವ ನಟೋರಿಯಸ್‌ ರೌಡಿಗಳ ಕುರಿತೂ ಹೆಚ್ಚಿನ ವಿವರಗಳು ಹೊರಬೀಳುತ್ತಿವೆ.

ಜೈಲು ಲೋಟ ಬದಲು ಕಪ್‌ನಲ್ಲಿ ಟೀ ಸೇವನೆ?

ಈ ಫೋಟೋದಲ್ಲಿ ದರ್ಶನ್‌ ಕಪ್‌ನಲ್ಲಿ ಪಾನೀಯ (ನೀರೋ, ಕಾಫಿಯೋ, ಚಹಾವೋ ಯಾರಿಗೆ ಗೊತ್ತು?) ಕುಡಿಯುತ್ತಿರುವ ದೃಶ್ಯವಿದೆ. ಚೇರ್‌ಗಳಲ್ಲಿ ಎಲ್ಲರೂ ಕುಳಿತಿದ್ದಾರೆ. ಇದೇ ಸಮಯದಲ್ಲಿ ಒಂದು ಕೈಯಲ್ಲಿ ಸಿಗರೇಟು ಕೂಡ ಇದೆ. ಜೈಲಿನ ಅಂಗಳದಲ್ಲಿ ಆರಾಮವಾಗಿ ಕುಳಿತು ಮಾತನಾಡುತ್ತಿದ್ದಾರೆ. ಒಟ್ಟಾರೆ, ಈ ನಾಲ್ಕು ಜನರು ಜತೆಗೆ ಕುಳಿತಿರುವ ಫೋಟೋ ಜೈಲಿನ ವ್ಯವಸ್ಥೆಯ ಕುರಿತು ನಾನಾ ಪ್ರಶ್ನೆಗಳನ್ನು ಮೂಡಿಸಿದೆ. ಇದೇ ಸಂದರ್ಭದಲ್ಲಿ ಜೈಲಿನಲ್ಲಿ ದರ್ಶನ್‌ ಜತೆಗೆ ಕುಳಿತಿರುವವರು ಯಾರು? ಎಂಬ ಪ್ರಶ್ನೆಗೂ ಉತ್ತರ ದೊರಕಿದೆ.

ವಿಲ್ಸನ್‌ ಗಾರ್ಡನ್‌ ನಾಗ ಯಾರು?

ಟೀವಿಗಳಲ್ಲಿ ಕ್ರೈಂ ಸ್ಟೋರಿಗಳನ್ನು ನೋಡುತ್ತಿರುವವರಿಗೆ, ಸುದ್ದಿಪತ್ರಿಕೆಗಳಲ್ಲಿ, ಟ್ಯಾಬ್ಲಾಯ್ಡ್‌ಗಳಲ್ಲಿ ಕ್ರೈಮ್‌ ಸುದ್ದಿಗಳನ್ನು ಓದುತ್ತ ಇರುವವರಿಗೆ ವಿಲ್ಸನ್‌ ಗಾರ್ಡನ್‌ ನಾಗನ ಹೆಸರು ಕೇಳಿರಬಹುದು. ಆತ ನಟೋರಿಯಸ್‌ ರೌಡಿ. ಬೆಂಗಳೂರಿನ ವಿಲ್ಸನ್‌ ಗಾರ್ಡನ್‌ನ ಈತ ಸದ್ಯ ಸಿದ್ದಾಪುರ ಮಹೇಶನ ಮರ್ಡರ್‌ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಕೊಲೆ ಪ್ರಕರಣದ ಬಳಿಕ ಕೋರ್ಟ್‌ ಮುಂದೆ ಶರಣಾಗಿದ್ದ. ಕೋಕಾ ಕಾಯ್ದೆಯಡಿ ಪೊಲೀಸರು ವಿಲ್ಸನ್‌ ಗಾರ್ಡನ್‌ ನಾಗನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಜೈಲಿನಲ್ಲಿದ್ದ ಸಿದ್ದಾಪುರ ಮಹೇಶ್‌ ಹೊರಬರುತ್ತಿದ್ದಾಂತೆ ನಾಗನ ಸಹಚರರರು ಜೈಲಿನ ಮುಂಭಾಗದಲ್ಲಿಯೇ ಮಹೇಶನ ಹತ್ಯೆ ಮಾಡಿದ್ದರು. ಈ ಹಿಂದೆ ಶಾಂತಿನಗರದ ಲಿಂಗನ ಕೇಸ್‌ನಲ್ಲೂ ಈತನ ಮೇಲೆ ಪ್ರಕರಣ ದಾಖಲಾಗಿತ್ತು. ಸದ್ಯ ಈ ಪ್ರಕರಣ ಖುಲಾಸೆಯಾಗಿದೆ. ಅನ್ನಪೂರ್ಣೇಶ್ವರಿ ನಗರದ ಜಿಮ್‌ ಸುಬ್ಬು ಕೊಲೆ ಪ್ರಕರಣವೂ ವಿಚಾರಣೆಯಲ್ಲಿದೆ. ಕಡಬಗೆರೆ ಶ್ರೀನಿವಾಸ್‌ ಮೇಲೆ ಶೂಟೌಟ್‌, ವೈಟ್‌ಫೀಲ್ಡ್‌ನಲ್ಲಿ ಸಹೇಲ್‌ ಕೊಲೆ ಪ್ರಕರಣ, ಮಡಿವಾಳದ ನಗರಬಾಬು ಕೊಲೆ ಪ್ರಕರಣ, ವಿಲ್ಸನ್‌ ಗಾರ್ಡನ್‌ನ ಶ್ರೀನಿವಾಸ್‌ ಕೊಲೆ, ರೌಡಿಶೀಟರ್‌ ಗುಪ್ಪನ ಕೊಲೆ ಸೇರಿಂತೆ ಹಲವು ಪ್ರಕರಣಗಳು ನಟೋರಿಯಸ್‌ ವಿಲನ್‌ ಗಾರ್ಡನ್‌ ಕ್ರೈಮ್‌ ಹಿಸ್ಟರಿಯಲಿವೆ.

ರೌಡಿಶೀಟರ್‌ ಕುಳ್ಳ ಸೀನ ಯಾರು?

ಬೆಂಗಳೂರು ದಕ್ಷಿಣದಲ್ಲಿ ಕುಳ್ಳಶೀಟರ್‌ ರೌಡಿಶೀಟರ್‌, ಕಾರ್ಪೊರೇಟರ್‌ ಕೊಲೆ ಪ್ರಕರಣದಲ್ಲಿ ಸಜಾ ಕೈದಿಯಾಗಿರುವ ಈತ ದೊಡ್ಡಕಲ್ಲಸಂದ್ರದ ಕುಳ್ಳಸೀನ ಎಂದೇ ಫೇಮಸ್‌.

ಇವರಿಬ್ಬರು ಮಾತ್ರವಲ್ಲದೆ ದರ್ಶನ್‌ ರೌಡಿ ಧರ್ಮನ ಮೊಬೈಲ್‌ನಿಂದ ವಿಡಿಯೋ ಕಾಲ್‌ ಮಾಡಿರುವ ವಿಚಾರವೂ ಬಹಿರಂಗವಾಗಿದೆ. ಕಾರ್ತಿಕೇಯನ ಕೊಲೆ ಪ್ರಕರಣದಲ್ಲಿ ಧರ್ಮ ಆರೋಪಿಯಾಗಿ ಜೈಲಿನಲ್ಲಿದ್ದಾನೆ. ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದು ರೌಡಿ ಸತ್ಯ ಎಂಬ ವಿಷಯವೂ ಬಯಲಾಗಿದೆ. ಒಟ್ಟಾರೆ, ಜೈಲಿನೊಳಗೆ ಇರುವ ದರ್ಶನ್‌ ಸದ್ಯ ರೌಡಿಗಳ ಸಹವಾಸದಲ್ಲಿದ್ದಾರೆ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಈಡುಮಾಡಿದೆ. ಜತೆಗೆ, ಇವರೆಲ್ಲ ಹಳೆಯ ಪರಿಚಯವೇ? ಎಂಬ ಪ್ರಶ್ನೆಯೂ ಎದ್ದಿದೆ.