Bheema Movie Review: ವ್ಯಸನಿಗಳಿಗೆ ಅಮಲು ಇಳಿಸೋ ಭೀಮ; ಗಾಂಜಾ ಘಾಟು, ಲೋಕಲ್‌ ಫ್ಲೇವರ್‌, ಬೆಂಗಳೂರಿನ ಇನ್ನೊಂದು ದುನಿಯಾ ಬಿಚ್ಚಿಟ್ಟ ವಿಜಯ್‌
ಕನ್ನಡ ಸುದ್ದಿ  /  ಮನರಂಜನೆ  /  Bheema Movie Review: ವ್ಯಸನಿಗಳಿಗೆ ಅಮಲು ಇಳಿಸೋ ಭೀಮ; ಗಾಂಜಾ ಘಾಟು, ಲೋಕಲ್‌ ಫ್ಲೇವರ್‌, ಬೆಂಗಳೂರಿನ ಇನ್ನೊಂದು ದುನಿಯಾ ಬಿಚ್ಚಿಟ್ಟ ವಿಜಯ್‌

Bheema Movie Review: ವ್ಯಸನಿಗಳಿಗೆ ಅಮಲು ಇಳಿಸೋ ಭೀಮ; ಗಾಂಜಾ ಘಾಟು, ಲೋಕಲ್‌ ಫ್ಲೇವರ್‌, ಬೆಂಗಳೂರಿನ ಇನ್ನೊಂದು ದುನಿಯಾ ಬಿಚ್ಚಿಟ್ಟ ವಿಜಯ್‌

Bheema Kannada Movie movie review: ಮಾದಕ ವ್ಯಸನ ಯುವ ಜನಾಂಗಕ್ಕೆ ಶಾಪ. ಡ್ರಗ್ಸ್‌ನ ಕರಾಳ ರೂಪ, ವಿರಾಟ ಲೋಕದ ಅಂದಾಜು ಸಾಮಾನ್ಯವಾಗಿ ಎಲ್ಲರಿಗೂ ಇರದು. ದುನಿಯಾ ವಿಜಯ್‌ ನಟನೆಯ ಭೀಮ ನಮ್ಮನ್ನು ಬೇರೆಯದ್ದೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಇಲ್ಲಿ ಗಾಂಜಾ ಘಾಟು ಇದೆ, ಲೋಕಲ್‌ ಫ್ಲೇವರ್‌ ಇದೆ. ವಾಸ್ತವ ಕಥೆಗೆ ಭೀಭತ್ಸ ಸನ್ನಿವೇಶಗಳೂ ಜತೆಯಾಗಿವೆ.

ಭೀಮ ಸಿನಿಮಾ ವಿಮರ್ಶೆ: ವ್ಯಸನಿಗಳಿಗೆ ಅಮಲು ಇಳಿಸೋ ಭೀಮ; ಗಾಂಜಾ ಘಾಟು, ಲೋಕಲ್‌ ಫ್ಲೇವರ್‌
ಭೀಮ ಸಿನಿಮಾ ವಿಮರ್ಶೆ: ವ್ಯಸನಿಗಳಿಗೆ ಅಮಲು ಇಳಿಸೋ ಭೀಮ; ಗಾಂಜಾ ಘಾಟು, ಲೋಕಲ್‌ ಫ್ಲೇವರ್‌

Dunia Vijay Bheema Kannada Movie Review: ಭೀಮ ಸಿನಿಮಾದ ಟ್ರೇಲರ್‌ ನೋಡಿದಾಗ ಅಬ್ಬಾ ಇದೇನು ಕ್ರೌರ್ಯದ ಸಿನಿಮಾ, ಮಾಂಸದಂಗಡಿಯಲ್ಲಿ ಕೋಳಿಯನ್ನು ಕಚಕಚನೆ ಕತ್ತರಿಸುವಂತೆ ನೆತ್ತರಧಾರೆ ಹರಿಸುತ್ತಿದ್ದಾರಲ್ವ ಎಂದೆನಿಸಬಹುದು. ಕೆಲವೊಂದು ದೃಶ್ಯಗಳಲ್ಲಿ ಭೀಮನ ಭೀಭತ್ಸ ಅವತಾರ, ರಕ್ತಸಿಕ್ತ ಅಧ್ಯಾಯ ಇರುವುದು ಸುಳ್ಳಲ್ಲ. ಆದರೆ, ಇದು ಸಾಮಾನ್ಯ ಹೊಡಿ ಬಡಿ ಕಡಿ ಸಿನಿಮಾ ಎಂದು ಪಕ್ಕಕೆ ಇಡಲು ಆಗದು. ಏಕೆಂದರೆ, ಭೀಮ ಎಂದರೆ ಅಷ್ಟೇ ಅಲ್ಲ. ಬೆಂಗಳೂರಿನ ಮಾದಕ ಜಗತ್ತಿನ ಕರಾಳ ರೂಪವನ್ನು ನಮ್ಮ ಮುಂದಿಡುತ್ತ ಒಂದೊಳ್ಳೆಯ ಸಂದೇಶ ಸಾರುತ್ತಾನೆ ಭೀಮ. ಹಿನ್ನೆಲೆ ಸಂಗೀತ, ಕ್ಯಾಮೆರಾ ವರ್ಕ್‌, ಸಂಭಾಷಣೆ, ಪಕ್ಕಾ ಲೋಕಲ್‌ ಟಚ್‌ ಇತ್ಯಾದಿಗಳಿಂದ ಭೀಮನ ತೂಕ ಇನ್ನಷ್ಟು ಹೆಚ್ಚಾಗಿದೆ.

ಭೀಮ ಸಿನಿಮಾದಲ್ಲಿ ಇಷ್ಟವಾಗುವುದೇನು?

ನನಗೆ ಮೊದಲು ಗಮನ ಸೆಳೆದದ್ದು ಆರಂಭದಲ್ಲಿ ಕಥೆ ಹೇಳುವ ಶೈಲಿ. ಭೀಮನ ಲೋಕಕ್ಕೆ ನಮ್ಮನ್ನು ಕರೆದೊಯ್ಯುವ ಪರಿ ಇಷ್ಟವಾಯ್ತು. ರಾಮಣ್ಣನ (ಅಚ್ಯುತ್‌ ಕುಮಾರ್‌) ಗ್ಯಾರೆಜ್‌ನಲ್ಲಿ ರಾಮಣ್ಣನಿಗೆ ಗೊತ್ತಾಗದಂತೆ ಈ ಡ್ರಗ್ಸ್‌ ಬೀಜ ಮೊಳಕೆಯೊಡೆಯುತ್ತದೆ. ಗ್ಯಾರೆಜ್‌ನಲ್ಲಿ ಕೆಲಸ ಮಾಡುತ್ತಿದ್ದ ಡ್ರ್ಯಾಗನ್‌ ಮಂಜನ ಮೂಲಕ ಈ ಡ್ರಗ್ಸ್‌ ಜಾಲ ದೊಡ್ಡ ಹೆಮ್ಮರವಾಗುತ್ತದೆ. ರಾಮಣ್ಣನ ಸಾಕುಮಗ ಭೀಮ (ವಿಜಯ್‌ ಕುಮಾರ್‌ ಅಥವಾ ದುನಿಯಾ ವಿಜಯ್‌). ಭೀಮ ವರ್ಸಸ್‌ ಬ್ಲ್ಯಾಕ್‌ ಡ್ರಾಗನ್‌ ನಡುವೆ ವೈರತ್ವ, ಸ್ಥಳೀಯ ರಾಜಕೀಯ, ಲೋಕಲ್‌ ಹುಡುಗರ ವ್ಯಸನದ ಜಗತ್ತು... ಹೀಗೆ ಬಹುತೇಕರಿಗೆ ತಿಳಿಯದೆ ಇರಬಹುದಾದ ಬೇರೆಯದ್ದೇ ಲೋಕದ ಕಥೆಯನ್ನು ಭೀಮ ಸಿನಿಮಾ ಹೊಂದಿದೆ. ಮೈಸೂರಲ್ಲಿ ಯುವತಿಯೊಬ್ಬಳ ರೇಪ್‌ ನಡೆದ ಘಟನೆ ನಿಮಗೆ ನೆನಪಿಗೆ ಇರಬಹುದು. ಗಾಂಜಾ ಅಮಲಿನಲ್ಲಿ ಇಂತಹದ್ದೇ ಕೃತ್ಯ ಎಸಗಿದವರಿಗೆ ತನ್ನದೇ ಶೈಲಿಯಲ್ಲಿ ಶಿಕ್ಷೆ ನೀಡುವ ಪೊಲೀಸ್‌ ಅಧಿಕಾರಿ ಗಿರಿಜಾ ಇದೇ ಕಲಾಸಿಪಾಳ್ಯ ಪೊಲೀಸ್‌ ಸ್ಟೇಷನ್‌ಗೆ ವರ್ಗಾವಣೆಯಾಗುತ್ತಾರೆ. ಒಂದು ಬೆಂಕಿ ಕಿಡಿ ಇಡೀ ನಗರವನ್ನೇ ಸುಡಬಹುದು, ಈ ಡ್ರಗ್ಸ್‌ ಜಾಲ ಕೂಡ ಅದೇ ರೀತಿ ಎಲ್ಲೆಡೆ ಆವರಿಸಿಕೊಳ್ಳುತ್ತದೆ. ಸಿನಿಮಾ ನೋಡುತ್ತ ನೋಡುತ್ತ ಆ ಸತ್ಯ ಪ್ರೇಕ್ಷಕನನ್ನೂ ಅವರಿಸುತ್ತದೆ.

ಸಿನಿಮಾಕ್ಕಾಗಿ ಆಯ್ಕೆ ಮಾಡಿಕೊಂಡ ವಿಷಯ ಮತ್ತು ಅದನ್ನು ಪ್ರಸ್ತುತಪಡಿಸಿದ ರೀತಿ ಇಷ್ಟವಾಗುತ್ತದೆ. ಡ್ರಗ್ಸ್‌ ಜಾಲದ ಕುರಿತು ಸಾಕಷ್ಟು ಹೋಂವರ್ಕ್‌ ಮಾಡಿರುವುದು ಕಾಣಿಸುತ್ತದೆ. ಇಂತಹ ವ್ಯಸನಗಳಿಗೆ ಬಲಿಬೀಳುವ ಜನತೆಗೆ ಯಾವ ರೀತಿಯಲ್ಲಿ ಬುದ್ಧಿ ಹೇಳಿದರೆ ಸರಿಯಾಗುತ್ತೋ ಅದೇ ದಾಟಿಯಲ್ಲಿ ಬುದ್ಧಿ ಹೇಳಿದ್ದಾರೆ. ಈ ಸಿನಿಮಾ ನೋಡಿದ ಯುವಜನತೆ ಇಂತಹ ವ್ಯಸನಗಳಿಂದ ದೂರವಾದರೆ ಸಿನಿಮಾದ ಪರಿಶ್ರಮ ಸಾರ್ಥಕವಾಗಬಹುದು.

ಭೀಮ ಸಿನಿಮಾ ಪಕ್ಕಾ ಲೋಕಲ್‌ ಸೊಗಡಿನ ಸಿನಿಮಾ. ಬೆಂಗಳೂರಿನ ಸೌಂದರ್ಯದ ಮುಖ ನೋಡಿದವರಿಗೆ ಇನ್ನೊಂದು ನಿಗೂಢ ಜಗತ್ತನ್ನು ಇದು ಪರಿಚಯಿಸುತ್ತದೆ. ಈ ಸಿನಿಮಾದಲ್ಲಿ ಶುಂಠಿ, ಸೈಕು, ಜುಟ್ಟು, ಮೀಟರ್‌, ಫೀಲ್ಡು ಇತ್ಯಾದಿ ಲೋಕಲ್‌ ಹುಡುಗರ ಪದಗಳೇ ಇವೆ. ಸಿನಿಮಾದಲ್ಲಿ ಇರಲಿ ಎಂದು ಎಲ್ಲೂ ಥಳಕುಬಳಕು ಬಳಸಿಲ್ಲ. ಇದು ಕೂಡ ಇಷ್ಟವಾಗುವಂತಹ ಇನ್ನೊಂದು ಅಂಶ.

ಸ್ಲಂ ಹುಡುಗರ ಕಥೆಯಿರುವ ಸಿನಿಮಾ ಎಂದಾಕ್ಷಣ ಡಾಂ ಡೂಂ ಹಿನ್ನೆಲೆ ಸೌಂಡ್‌ ಹಾಕಿ ವೀಕ್ಷಕರಿಗೆ ಅಸಹನೀಯವಾಗಿಸುವ ಸಿನಿಮಾಗಳು ಸಾಕಷ್ಟು ಇವೆ. ಆದರೆ, ಭೀಮ ಸಿನಿಮಾದಲ್ಲಿ ಹಿನ್ನೆಲೆ ಸಂಗೀತ ಗಮನ ಸೆಳೆಯುವ ಪ್ರಮುಖಾಂಶ. ಆಡಿ ಬಾ ಮಗನೇ, ಆಡು ಬಾ ಭೀಮ ಇತ್ಯಾದಿ ಹಿನ್ನೆಲೆ ಸಂಗೀತ ಸಿನಿಮಾದ ಲವಲವಿಕೆ ಹೆಚ್ಚಿಸುತ್ತದೆ. ಆಯಾ ದೃಶ್ಯಗಳ ಸಂತೋಷ, ಭಾವನಾತ್ಮಕ ಅಂಶಗಳನ್ನು ಪ್ರೇಕ್ಷಕರಿಗೆ ದಾಟಿಸಲು ಈ ಬಿಜಿಎಂ ನೆರವಾಗುತ್ತದೆ. ಹುಡುಗರು ವೀಲ್ಹೀಂಗ್‌ ಮಾಡುವಂತಹ ಒಂದು ಕೆಲವು ಸೆಕೆಂಡ್‌ಗಳ ದೃಶ್ಯ ಮತ್ತು ಆ ಸಮಯದ ಬಿಜಿಎಂ ಗೂಸ್‌ಬಂಪ್ಸ್‌ ನೀಡುತ್ತದೆ.

ಭೀಮ ಚಿತ್ರದಲ್ಲಿ ಇಷ್ಟವಾಗುವ ಇನ್ನೊಂದು ವಿಷಯ. ಚಿತ್ರದ ಸಂಭಾಷಣೆ ಮತ್ತು ಡೈಲಾಗ್‌. ಸಂಭಾಷಣೆ ಪಕ್ಕಾ ಲೋಕಲ್‌. "ಒಂದು ಸಲ ಹೊಡೆದರೆ (ಗಾಂಜಾ) ಜಾಲಿ, ಇನ್ನೊಂದು ಸಲಹ ಹೊಡೆದರೆ ಶ್ರದ್ದಾಂಜಲಿ" "ಹುಡುಗರು ಬೆಂಕಿಪಟ್ಟಣದಲ್ಲಿರೋ ಬೆಂಕಿಕಡ್ಡಿಗಳ ತರ ಒಂದು ಕಡ್ಡಿಗೆ ಬೆಂಕಿ ಅಂಟುಕೊಂಡ್ರು ಸಾಕು ಇಡೀ ಪಟ್ಟಣ ಭಗ್‌ ಅಂತ ಉರಿಯುತ್ತದೆ" "ನೂರಾರು ಜನ ಕೌರವನ ಎದುರಿಸಿದವನು ಭೀಮ.. ಅಂತವ್ನು ಅವನ ಸೈನ್ಯ ಉಳಿಸ್ಕೊಳಲ್ವಾ" ಹೀಗೆ ಸಾಕಷ್ಟು ಡೈಲಾಗ್‌ಗಳು ಪ್ರೇಕ್ಷಕರ ಸಿಳ್ಳೆ ಗಿಟ್ಟಿಸಿಕೊಳ್ಳುತ್ತವೆ.

ಈ ಚಿತ್ರದ ಕ್ಯಾಮೆರಾವರ್ಕ್‌ ಕೂಡ ಉತ್ತಮವಾಗಿದೆ. ಲೋಕಲ್‌ ವಿಷಯಗಳನ್ನು ಕ್ಯಾಮೆರಾ ಮೂಲಕ ತೋರಿಸುವುದು ಸುಲಭವಲ್ಲ. ಆದರೆ, ಭೀಮ ಈ ವಿಷಯದಲ್ಲೂ ಗೆದ್ದಿದೆ.

ಇಷ್ಟವಾಗದ ಅಂಶಗಳೇನು?

ಸಿನಿಮಾದಲ್ಲಿ ಕೆಲವೊಂದು ಕಡೆ ಕ್ರೌರ್ಯ ತಾಂಡವವಾಡಿದೆ. ಇಷ್ಟೊಂದು ರಕ್ತಸಿಕ್ತವಾಗಿ ಸಿನಿಮಾ ಪ್ರಸ್ತುತ ಪಡಿಸುವ ಅಗತ್ಯವಿತ್ತಾ? ಎಂಬ ಪ್ರಶ್ನೆ ಮೂಡಿಸಬಹುದು. ಚಿತ್ರದ ಕೊನೆಯ ಕೆಲವು ದೃಶ್ಯಗಳಲ್ಲಿ ಆಕ್ಷನ್‌ ಇಷ್ಟವಾಗುವಂತೆ ಇದ್ದರೂ ಕೆಲವು ಕ್ರೌರ್ಯದ ಸೀನ್‌ ಬಂದಾಗ ಕಣ್ಣು ಮುಚ್ಚಿಕೊಳ್ಳಬೇಕಾಗಬಹುದು.

ಮೊದಲಿಗೆ ದುನಿಯಾ ವಿಜಯ್‌ಗೆ ಚೆನ್ನಾಗಿ ಹೊಡೆಯುವುದು. ಭೀಮಕಾಯದ ಡ್ರ್ಯಾಗನ್‌ ಕಡೆಯಿಂದ ಅಪ್ಪಚ್ಚಿಯಾಗುವಂತೆ ಹೊಡೆಸಿಕೊಳ್ಳುವುದು ಬಳಿಕ ಎದ್ದು ಬಂದು ವಿಲನ್‌ನನ್ನು ಹೊಡೆಯುವುದು... ಇಂತಹ ದೃಶ್ಯಗಳು ಅಸಹಜ ಎನಿಸುತ್ತವೆ. ಬ್ಲ್ಯಾಕ್‌ ಮಂಜ ಹೊಡೆದ ಪೆಟ್ಟು ನೋಡಿದರೆ ಎದ್ದೇಳುವುದು ಕಷ್ಟ. ರಕ್ತದ ಮುದ್ದೆಯೇ ಎದ್ದುನಿಂತು ಫೈಟ್‌ ಮಾಡಿದಂತೆ ನನಗೆ ಕಾಣಿಸಿತು.

ದುನಿಯಾ ವಿಜಯ್‌ ನಟನೆ ಮತ್ತು ನಿರ್ದೇಶನ

ಈ ಚಿತ್ರದ ಕೆಲವು ಪಾತ್ರಗಳಿಗೆ ಸೂಕ್ತ ಕಲಾವಿದರನ್ನು ನಿರ್ದೇಶಕರಾಗಿ ವಿಜಯ್‌ ಕುಮಾರ್‌ ಆಯ್ಕೆ ಮಾಡಿಕೊಂಡಿರುವುದು ಇಷ್ಟವಾಗುತ್ತದೆ. ಸಾಕಷ್ಟು ಹೊಸ ಮುಖಗಳಿಗೆ ಅವಕಾಶ ನೀಡಿದ್ದಾರೆ. ಈ ಸಿನಿಮಾದಲ್ಲಿರುವ ಹುಡುಗರನ್ನೆಲ್ಲ ಕಲಾಸಿಪಾಳ್ಯ, ಕೆಆರ್‌ ಮಾರ್ಕೆಟ್‌ ಅಥವಾ ಇತರೆ ಕಡೆಗಳಿಂದಲೇ ಆಯ್ಕೆ ಮಾಡಿಕೊಂಡಿರಬಹುದು. ವಿಲನ್‌ ಪಾತ್ರಕ್ಕೆ ನಿಜಕ್ಕೂ ಭೀಮಕಾಯನನ್ನೇ (ಬ್ಲ್ಯಾಕ್ ಡ್ರ್ಯಾಗನ್ ಮಂಜು) ಆಯ್ಕೆ ಮಾಡಿದ್ದಾರೆ. ಲೇಡಿ ಸಿಂಗಂ ಆಗಿ ಗಿರಿಜಾರಿಂದಲೂ ಅತ್ಯುತ್ತಮ ನಟನೆ ತೆಗೆಸಿಕೊಂಡಿದ್ದಾರೆ. ಚಿತ್ರದ ಕಲಾವಿದರಿಂದ ಹಿಡಿದು ಸಂಗೀತ, ಕ್ಯಾಮೆರಾ ವರ್ಕ್‌ ಎಲ್ಲದರಲ್ಲೂ ತುಂಬಾ ಅಚ್ಚುಕಟ್ಟುತನ ಕಾಣಿಸುತ್ತದೆ. ದುನಿಯಾ ವಿಜಯ್‌ ಒಳ್ಳೆಯ ನಿರ್ದೇಶಕ ಎನ್ನುವುದನ್ನು ಸಲಗದ ಬಳಿಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎನ್ನಬಹುದು. ದುನಿಯಾ ವಿಜಯ್‌ ನಟನೆ ಎಂದಿನಂತೆ ಅತ್ಯುತ್ತಮ. ಈ ಸಿನಿಮಾದಲ್ಲಿ ವಿಜಯ್‌ ನಟನೆ ಇನ್ನಷ್ಟು ಮಾಗಿದಂತೆ ಕಾಣಿಸುತ್ತದೆ.

ಅಚ್ಯುತ್‌ ಕುಮಾರ್‌, ಡ್ರ್ಯಾಗನ್‌ ಮಂಜ, ಗಿಲಿಗಿಲಿ ಚಂದ್ರು, ಅಶ್ವಿನಿ, ಕಲ್ಯಾಣಿ ರಾಜು ಸೇರಿದಂತೆ ಎಲ್ಲರ ನಟನೆಯೂ ಇಷ್ಟವಾಗುತ್ತದೆ. ಈ ಸಿನಿಮಾದಲ್ಲಿ ರಂಗಾಯಣ ರಘು ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು ಪ್ರೇಕ್ಷಕರನ್ನು ಸ್ವಲ್ಪವೂ ನಗಿಸದೆ ಗಂಭೀರವಾಗಿ ನಟಿಸಿದ ಸಿನಿಮಾ ಇದೇ ಇರಬೇಕು.

ಒಟ್ಟಾರೆ ಈ ಸಿನಿಮಾ ಹೇಗಿದೆ?

ಭೀಮ- ದುನಿಯಾ ವಿಜಯ್‌ ಕರಿಯರ್‌ನಲ್ಲಿ ಅತ್ಯುತ್ತಮ ಸಿನಿಮಾ ಎನ್ನಬಹುದು. ಅಮಲು ಹಿಡಿಸಿ ಅಮಲು ಬಿಡಿಸೋ ಭೀಮ ಇದು ಎಂದರೂ ತಪ್ಪಾಗದು. ರಕ್ತಪಾತ ತುಸು ಕಡಿಮೆ ಇದ್ದರೆ ಫ್ಯಾಮಿಲಿ ಸಮೇತ ಹೋಗಿ ನೋಡಿಬನ್ನಿ ಎನ್ನಬಹುದಿತ್ತು. ಹದಿಹರೆಯದವರೂ ನೋಡಬೇಕಾದ ಸಿನಿಮಾವಿದು. ಆದರೆ, ಎ ಸರ್ಟಿಫಿಕೇಟ್‌ ದೊರಕದಂತೆ ಚಿತ್ರತಂಡ ಎಚ್ಚರಿಕೆ ವಹಿಸಬೇಕಿತ್ತು.

ಚಿತ್ರ: ಭೀಮ

ನಿರ್ಮಾಣ: ಕೃಷ್ಣ ಸಾರ್ಥಕ್‌, ಜಗದೀಶ್‌ ಗೌಡ

ನಿರ್ದೇಶನ: ದುನಿಯಾ ವಿಜಯ್‌

ಪಾತ್ರವರ್ಗ: ದುನಿಯಾ ವಿಜಯ್‌, ಅಶ್ವಿನಿ, ಕಲ್ಯಾಣಿ ರಾಜು, ಬ್ಲ್ಯಾಕ್‌ ಡ್ರ್ಯಾಗನ್‌ ಮಂಜು, ರಘು ಶಿವಮೊಗ್ಗ, ಗಿಲಿಗಿಲಿ ಚಂದ್ರು ಮುಂತಾದವರು

ಸಂಗೀತ: ಚರಣ್‌ ರಾಜ್‌

ಕ್ಯಾಮೆರಾ: ಶಿವ ಸೇನಾ

ರೇಟಿಂಗ್‌: 3.5 /5

Whats_app_banner